ಮಾತೆ ಮಹಾದೇವಿಗೆ ನಮೊಃ

ಮಾತೆ ಮಹಾದೇವಿಗೆ ನಮೊಃ

ಬರಹ

ಇವತ್ತಿನ ಪತ್ರಿಕೆಯಲ್ಲಿ ಮಾತೆ ಮಹಾದೇವಿಯ ಮತ್ತೊಂದು ಅವಾಂತರದ ಕುರಿತು ಓದಿ ನಿಜಕ್ಕು ತುಂಬಾ ಬೇಸರವಾಯ್ತು. ಯಾಕೆ ಇವರೆಲ್ಲ ಹೀಗಾಡ್ತಾರೆ? ಮೊದಲು ಈಕೆ ಬಸವಣ್ಣನವರ ವಚನಗಳ ಅಂಕಿತನಾಮವನ್ನು ಮಾರ್ಪಡಿಸಲು ನೋಡಿದರು. ಈಗ ಅಕ್ಕ ಮಹಾದೇವಿಯ ವಚಾನಾಂಕಿತದ ಮೇಲೆ ಇವರ ಕಣ್ಣು!! ಕೂಡಲಸಂಗಮದಲ್ಲಿ ಜನ ಈಕೆಯನ್ನು ಹೇಗೆ ಸಹಿಸುತ್ತಿದ್ದಾರೊ ಆಶ್ಚರ್ಯವಾಗುತ್ತಿದೆ. ಯಾಕೆ ಈ ಮಾತು ಹೇಳುತ್ತಿದ್ದೇನೆ ಅಂದರೆ ಅಲ್ಲಿಯ ಪ್ರತಿ ಮನೆ ಮನೆಯ ಮಗುವಿಗೂ ವಚನಗಳು ಎಂದರೆ ಅಪ್ಪಾ,ಅವ್ವಾ ಎನ್ನುವಷ್ಟು ಸಹಜ. ಅಲ್ಲಿ ವಚನಗಳು ಗೊತ್ತಿಲ್ಲದವರೇ ಇಲ್ಲವೆನ್ನಬಹುದೇನೊ. ಅಂತಹ ಊರಿನಲ್ಲಿದ್ದು ಮಾತೆ ಮಹಾದೇವಿ ಇಷ್ಟೊಂದು ಭಂಡತನದಿಂದ ವರ್ತಿಸುತ್ತಿದ್ದಾರೆಂದರೆ... ಮಾತೆ ಮಹಾದೇವಿ ಕಾದಂಬರಿಗಳನ್ನು ಬರೆದಿದ್ದಾರೆ. ಅಷ್ಟೊಂದು ವಚನಗಳ ಮೋಹವಿದ್ದಲ್ಲಿ ಸ್ವತಃ ಬರೆದು ತಮ್ಮ ಅಂಕಿತನಾಮ ಹಾಕಿಕೊಳ್ಳಲಿ. ಅದು ಬಿಟ್ಟು ಇಂಥ ಹೇಸಿಗೆಯ ಕೆಲಸ ಮಾಡುವುದೇಕೊ?
ಮೊನ್ನೆ ಮೊನ್ನೆಯಷ್ಟೆ ಬಸವಣ್ಣನ ಕುಲದ ಬಗ್ಗೆ ದೊಡ್ಡ ವಿವಾದ ಆಗಿ ಮುಗಿಯಿತು ಅನ್ನುವಷ್ಟರಲ್ಲಿ ಈಕೆಯ ರಗಳೆ. ವಿಪರ್ಯಾಸ ಎಂಥದ್ದು ನೋಡಿ!ಯಾವ ಬಸವಣ್ಣ 'ಜಾತಿ ಬೇಧ ಬೇಡ,ಮಾನವರೆಲ್ಲ ಒಂದೇ' ಎಂದು ಹೋರಾಡಿ ಜನರನ್ನು ಒಗ್ಗೂಡಿಸಿದರೊ, ಅವರದ್ದೇ ಒಂದು ಜಾತಿ ಮಾಡಿಬಿಟ್ಟಿದ್ದಾರೆ! ಅವರೆಲ್ಲ ಯಾವ ಜಾತಿಯಲ್ಲಿ ಹುಟ್ಟಿದರು ಅನ್ನುವುದರ ಕುರಿತು ಸಂಶೋಧನೆ ಮಾಡುತ್ತಾರೆ!!! ಯಾವ ಶರಣರು ಆದರ್ಶಗಳನ್ನು ನಡೆ, ನುಡಿಗಳನ್ನಾಗಿಸಿ ವಚನ ಬರೆದರೊ ಅವೆ ಆದರ್ಶಕ್ಕೆ ಈಗ ಇಂಥವರು ಶರಣರ ವೇಷ ತೊಟ್ಟು ಮಸಿಬಳಿಯುವ ಕೆಲಸಕ್ಕೆ ನಿಂತಿದ್ದಾರೆ. ಧಿಕ್ಕಾರವಿರಲಿ ಇವರಿಗೆಲ್ಲ.