ಮಾತೊಂದ ಹೇಳುವೆ
“ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ. ಚಿಂತನೆಗೆ ಹಚ್ಚುವ ಅಸಾಮಾನ್ಯ ಸಾಮರ್ಥ್ಯ ಈ ಬರಹಗಳಿಗಿದೆ. ಪ್ರಪಂಚದ ಅನೇಕಾನೇಕ ವೈವಿಧ್ಯಗಳನ್ನು ಹಲವು ಮೂಲಗಳಿಂದ ಆಯ್ದು ತಂದು ಜ್ಞಾನದ ತೃಷೆಯನ್ನು ತಣಿಸುವ ಪ್ರಯತ್ನವಿದು. ಕೆಲವು ಬರಹಗಳು ಜಗತ್ತಿನ ಒಳಮುಖದರ್ಶನ ಮಾಡಿಸಿ ವ್ಯಾವಹಾರಿಕವಾಗಿ ನಮ್ಮ ಕಣ್ಣೆರೆಸುತ್ತವೆ. ವೈಜ್ಞಾನಿಕ ಸಿದ್ಧಾಂತಗಳ ಪರಿಚಯವಿದೆ. ವಿಸ್ತಾರವಾಗಿದ್ದುದನ್ನು ಸಂಕ್ಷೇಪಗೊಳಿಸಿ ಹೇಳುವ ಕಲೆ ಲೇಖಕರಿಗೆ ಕರಗತವಾಗಿದೆ. ಎಲ್ಲಿಯೂ ಯಾವುದೂ ಲೋಪವಾಗದೆ ಚೌಕದ್ದೊಂದರಲ್ಲಿ ಹಿಡಿದಿಡುವ ಸಾಹಸ ಈ ಬರವಣಿಗೆಯಲ್ಲಿ ಹಾಸುಹೊಕ್ಕಾಗಿದೆ.
ಲೇಖಕರಾದ ಗುರುಪಾದ ಬೇಲೂರು ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ… “ವಾರದ ಮಾತುಕತೆ ಎಂಬ ಯೂಟ್ಯೂಬ್ ಅಂಕಣವನ್ನು ಪ್ರಾರಂಭ ಮಾಡಿದ್ದು ಆಕಸ್ಮಿಕವಾಗಿಯೇ. ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳು ಕಾಲಹರಣದ ವ್ಯಸನಗಳೆಂದು ಭಾವಿಸುತ್ತಿದ್ದವನು ನಾನು. ಸರಿಯಾಗಿ ಬಳಸದಿದ್ದಲ್ಲಿ ಈ ಮಾಧ್ಯಮಗಳು ಸೃಜನಶೀಲನೆಯನ್ನು ಹುಟ್ಟುಹಾಕುವಷ್ಟೇ ಸುಲಭವಾಗಿ ನಾಶ ಕೂಡ ಮಾಡಬಲ್ಲವು. ಈ ಮಾಧ್ಯಮಗಳ ಒಂದು ಅತ್ಯದ್ಭುತ ಅನುಕೂಲತೆಯೆಂದರೆ ಅದು ಜನರನ್ನು ತಲುಪುವ ವೇಗ. ಜನರಿಗೆ ನೀವು ನೀಡುವ ಕಂಟೆಂಟ್ ಇಷ್ಟವಾದರೆ ಯಾವುದೇ ಪೋಸ್ಟ್ ನಿಮ್ಮನ್ನು ರಾತ್ರೋರಾತ್ರಿ ಪ್ರಸಿದ್ಧಿಗೆ ತರಬಹುದು.
ನಾನು ಯಾವುದೇ ಪೂರ್ವಾಗ್ರಹಗಳನ್ನು ಇಟ್ಟುಕೊಂಡು 'ಯೂಟ್ಯೂಬರ್ ಆಗಲಿಲ್ಲ. ಕೋವಿಡ್ ಸಮಯದಲ್ಲಿ ಜನಜೀವನವು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾದಾಗ ಈ ಸಾಮಾಜಿಕ ಮಾಧ್ಯಮಗಳೇ ಒಬ್ಬರಿಗೊಬ್ಬರ ಸಂಪರ್ಕ ಸಾಧನಗಳಾಗಿದ್ದವು. ಇಡೀ ಜಗತ್ತು ಜೀವ ಭಯದಿಂದ ತತ್ತರಿಸುತ್ತಿದ್ದ ಕಾಲ ಅದು. ಮನೆಯ ಒಳಗೆ ಕಡ್ಡಾಯವಾಗಿ ಇರಲೇ ಬೇಕಾದ ಪ್ರಸಂಗವಿದ್ದುದರಿಂದ ಮನದ ಒಳಗೆ ಇಳಿಯಲು ಅದು ಅನುವು ಮಾಡಿಕೊಟ್ಟಿತು. ಮಕ್ಕಳ ಒತ್ತಾಸೆಯೊಂದಿಗೆ ಯೂಟ್ಯೂಬ್ ಅಂಕಣ 'ವಾರದ ಮಾತುಕತೆ' ಪ್ರಾರಂಭವಾಯಿತು. ಬರುಬರುತ್ತಾ ಈ ವಾರದ ಮಾತುಕತೆಯ ಎಪಿಸೋಡ್‌ಗಳನ್ನು ಮಾಡುವುದು ನನಗೆ ಬಿಡಲಾರದ ಅಭ್ಯಾಸವಾಗಿ ಬೆಳೆದುಬಂದಿತು. ಕೋವಿಡ್ ಮತ್ತು ಲಾಕ್‌ಡೌನ್ ಪರಿಸ್ಥಿತಿಯೂ ಕೂಡ ಅದಕ್ಕೆ ಕಾರಣವೆನ್ನಬಹುದು. ಅದರಿಂದಲೇ ಪ್ರಾರಂಭದ ಕೆಲವು ಸಂಚಿಕೆಗಳಲ್ಲಿ ಕೋವಿಡ್‌ನಿಂದ ಪಾರಾಗುವ, ಆಸ್ಪತ್ರೆ ಸೇರಿದವರ ಮನಸ್ಥೆರ್ಯ ಹೆಚ್ಚಿಸುವ ಉಲ್ಲೇಖಗಳು ಪದೇ ಪದೇ ಬಂದಿವೆ.
ವಾರದ ಮಾತುಕತೆಯ ಮೂಲ ಉದ್ದೇಶ, ಇಷ್ಟವೆನಿಸಿದ ಪುಸ್ತಕಗಳನ್ನು ಓದಿ, ಅವುಗಳ ಸಾರಾಂಶವನ್ನು ಲೇಖಕರ ಹಾಗೂ ಪುಸ್ತಕಗಳ ಪರಿಚಯದೊಂದಿಗೆ ಐದು ನಿಮಿಷಗಳಲ್ಲಿ ಹೇಳುವುದು ಎಂದಿತ್ತು. ಇದರಿಂದ ಲೇಖಕರ ಪರಿಚಯದ ಜೊತೆಗೆ, ಪುಸ್ತಕದ ಸಾರಾಂಶ ಮತ್ತು ಆ ಪುಸ್ತಕವನ್ನು ಓದುವ ಕುತೂಹಲ ಬೆಳೆಸಿದಂತಾಗುತ್ತದೆ ಎಂದುಕೊಂಡು ಪ್ರಾರಂಭಿಸಿದೆ. ನಂತರ ವೈವಿಧ್ಯಮಯ ವಿಷಯಗಳು ಓದಿಗೆ ಸಿಕ್ಕಾಗ, ಕಿವಿಗೆ ಬಿದ್ದಾಗ ಅವುಗಳು ಎಪಿಸೋಡ್‌ಗಳಾದವು. ನೋಡಿದ ಜಾಗಗಳು ಟ್ರಾವಲಾಗ್ ರೂಪದಲ್ಲಿ ಬಂದವು ಕುತೂಹಲಕ್ಕೆಂದು ಆರಂಭವಾದ ಈ ಹವ್ಯಾಸ ನೂರು ಸಂಚಿಕೆಗಳನ್ನು ದಾಟುತ್ತದೆ ಎಂದು ಭಾವಿಸಿರಲಿಲ್ಲ.
ಈ ಎಪಿಸೋಡ್‌ಗಳಿಗೆ ಬರುತ್ತಿದ್ದ ಪ್ರತಿಕ್ರಿಯೆಗಳಿಂದಾಗಿ ಮತ್ತು ವೈಯಕ್ತಿಕವಾಗಿ ಸಂದೇಶಗಳನ್ನು ಕಳುಹಿಸಿ ನೋಡುಗರು ಈ ಎಲ್ಲಾ ಸಂಚಿಕೆಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಸಂಕಲನವನ್ನು ಹೊರತರುವ ಪ್ರಯತ್ನ ಮಾಡಿದ್ದೇನೆ. ದೃಶ್ಯ ಮಾಧ್ಯಮದಲ್ಲಿ ಮೂಡಿ ಬಂದ ಸಂಚಿಕೆಗಳನ್ನು ವಾಚ್ಯರೂಪಕ್ಕೆ ಇಳಿಸುವ ಈ ಪ್ರಯತ್ನ ಹೊಸದು. ಏಕೆಂದರೆ ಸಾಮಾನ್ಯವಾಗಿ ಕತೆ, ಕಾದಂಬರಿಗಳು ಮೊದಲು ಪುಸ್ತಕ ರೂಪದಲ್ಲಿ ಬಂದು ನಂತರ ದೃಶ್ಯ ರೂಪದಲ್ಲಿ ಚಲನಚಿತ್ರಗಳಾಗಿ ಬರುತ್ತವೆ. ಇಲ್ಲಿ ಅದು ತಿರುವು ಮುರುವಾಗಿದೆ. ಇವೆಲ್ಲಾ ಹೆಕ್ಕಿತಂದ ಮುತ್ತಿನ ಹನಿಗಳು, ಹಲವಾರು ಲೇಖಕರು ಮುತ್ಸದ್ದಿಗಳು ನುಡಿದ ಮುತ್ತಿನ ಹಾರಗಳು.
ಈ ಸಂಕಲನದ ಮುಖ್ಯ ಅನುಕೂಲತೆ ಎಂದರೆ ಎಲ್ಲಾ ವಿಷಯಗಳ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದುಕೊಳ್ಳುವುದು. ಭರ್ಜರಿ ಔತಣ ಕೂಟದಲ್ಲಿ ಯಾವುದೇ ಒಂದು ಭಕ್ಷ್ಯವನ್ನು ಮಾತ್ರವೇ ಸವಿಯುವುದಿಲ್ಲ. ವೈವಿಧ್ಯಮಯ ಭಕ್ಷ್ಯಗಳ ರುಚಿಯನ್ನು ಇಲ್ಲಿ ನೋಡಬಹುದು ಅಥವಾ ನಿಮಗಿಷ್ಟವಾದ ಭಕ್ಷ್ಯವನ್ನು ಸವಿಯಬಹುದು. ಈ ಪುಸ್ತಕವನ್ನು ನೀವು ಹೇಗೆ ಬೇಕಾದರೂ ಓದಬಹುದು. ಮಧ್ಯೆ ಮಧ್ಯೆ ಪುಟ ತಿರುಗಿಸಿ ಓದಿದರೂ ಯಾವುದೇ ಮಾಹಿತಿಯು ನಷ್ಟವಾಗುವುದಿಲ್ಲ. ಎಲ್ಲಿ ಬೇಕಾದರೂ ನಿಲ್ಲಿಸಬಹುದು. ಪುಸ್ತಕದ ಓದಿನ ಮುಂದುವರಿಕೆಗೆ ಯಾವುದೇ ಭಂಗ ಬರುವುದಿಲ್ಲ. ಪ್ರತಿಯೊಂದು ಸಂಚಿಕೆಯು ಸರಾಸರಿ ಐದು ನಿಮಿಷಗಳ ಅವಧಿಗೆ ಸೀಮಿತವಾಗಿರುವ ಕಾರಣ ಅದು ಬರವಣಿಗೆಯಲ್ಲಿ ಎರಡು ಮೂರು ಪುಟಗಳಲ್ಲಿ ಮುಗಿಯುತ್ತದೆ. ವೀಕ್ಷಕರ ಕುತೂಹಲವನ್ನು ಐದು ನಿಮಿಷಗಳಿಗಿಂತ ಹೆಚ್ಚಿಗೆ ಹಿಡಿದಿಡುವುದು ಕಷ್ಟ. ಅದರಲ್ಲಿಯೂ ಗಂಭೀರ ವಿಷಯಗಳಿದ್ದಲ್ಲಿ ಆ ಅವಧಿ ಮತ್ತೂ ಮೊಟಕಾಗುತ್ತದೆ. ವೈರಲ್ ಆಗುವ ವಿಡಿಯೋಗಳನ್ನು ನೀವು ಗಮನಿಸಿ. ಯಾವುದಾದರೂ ಗಂಭೀರ ವಿಷಯ, ಸಮಾಜಕ್ಕೆ ತಿಳಿಹೇಳುವ ವಿಷಯಗಳು ವೈರಲ್ ಆಗಿವೆಯೇ? ಸಾಧ್ಯವೇ ಇಲ್ಲ !
ವಾರದ ಮಾತುಕತೆಯ ಟ್ರಾವಲಾಗ್ ಸಂಚಿಕೆಗಳನ್ನು ಹೊರತುಪಡಿಸಿ ಉಳಿದ ಆಯ್ದ ಸಂಚಿಕೆಗಳು ಈ ಪುಸ್ತಕದಲ್ಲಿವೆ. ಹಿರಿಯರಾದ ಶ್ರೀ ಚಿಕ್ಕನಾಗಯ್ಯನವರು ಪ್ರತಿಯೊಂದು ಸಂಚಿಕೆ ಬಿಡುಗಡೆ ಆದಾಗಲೂ ತಪ್ಪದೇ ತಮ್ಮ ಅಭಿಪ್ರಾಯವನ್ನು ಫೋನ್ ಮೂಲಕ ಹೇಳುತ್ತಿದ್ದರು. 82ರ ಹರೆಯದ ಶ್ರೀಯುತರ ಒತ್ತಾಸೆಯಿಂದ ಈ ಪುಸ್ತಕ ಹೊರಬರುತ್ತಿದೆ. ಈ ಪುಸ್ತಕವನ್ನು ಶ್ರೀಯುತರಿಗೆ ಅರ್ಪಿಸಲು ಅದೂ ಒಂದು ಕಾರಣ. ಇನ್ನು ದೃಶ್ಯ ಮಾಧ್ಯಮದಲ್ಲಿ ಪೂರಕವಾಗಿ ನೀಡಿದ್ದ ದೃಶ್ಯಗಳಿಗೆ ಬದಲಾಗಿ ಎಲ್ಲೆಲ್ಲಿ ಅಗತ್ಯವೋ ಅಂತಹ ಕಡೆ ಚಿತ್ರಗಳನ್ನು ಬಳಸಿದ್ದೇನೆ. ಒಟ್ಟಿನಲ್ಲಿ ಈ ಪುಸ್ತಕ ಓದಿ ಮುಗಿಸುವುದರ ಒಳಗಾಗಿ ಸಾಕಷ್ಟು ವಿಷಯಗಳ ಮೇಲುರುಚಿ ನಾಲಿಗೆಗೆ ಸಿಗಬಹುದು ಎಂದು ಭಾವಿಸಿದ್ದೇನೆ. ಪೂರ್ಣ ವಿಷಯಗಳು ಅರಿತು ಅರೆದು ಕುಡಿಯಬೇಕು ಅನ್ನುವುದಾದರೆ ಓದಿನ ಪ್ರಪಂಚಕ್ಕೆ ಧುಮುಕಬಹುದು. ವಿವರವಾದ ಓದಿಗೆ ಇದೊಂದು ಬಾಗಿಲು ಅಷ್ಟೆ.
ಈ ಪುಸ್ತಕವನ್ನು ಹೊರತರಲು ಪ್ರೋತ್ಸಾಹಿಸಿದ ಶ್ರೀ ಕಂನಾಡಿಗಾ ನಾರಾಯಣರವರ ಬೆಂಬಲವನ್ನು ಎಂದೂ ಮರೆಯಲಾರೆ. ಮೊದಲಿನಿಂದಲೂ ನನ್ನ ಎಲ್ಲಾ ಪುಸ್ತಕಗಳ ಪ್ರಕಟಣೆ ಬಗ್ಗೆ ಅವರು ತೋರಿದ ಒಲವು ಮತ್ತು ಮಾರ್ಗದರ್ಶನ ನನಗೆ ಈ ಕ್ಷೇತ್ರದಲ್ಲಿ ಲೇಖನಿ ಹಿಡಿಯಲು ಅನುವು ಮಾಡಿಕೊಟ್ಟಿದೆ. ವಾರದ ಮಾತುಕತೆಯ ಎಲ್ಲಾ ಸಂಚಿಕೆಗಳ ಚಿತ್ರೀಕರಣದಲ್ಲಿ, ಸಂಕಲನದಲ್ಲಿ ಅತ್ಯುತ್ಸಾಹದಿಂದ ಜೊತೆಯಾದ ನಮ್ಮ ಮಕ್ಕಳಾದ ರಶ್ಮಿ ಮತ್ತು ಸುಮಂತರವರ ಸಹಕಾರ ಹೆಚ್ಚಿಗಿದೆ.
ಯೂಟ್ಯೂಬ್‌ನಲ್ಲಿದ್ದ ವಿಡಿಯೋಗಳ ಸ್ಕ್ರಿಪ್ಟ್ ನನ್ನಲ್ಲಿ ಇರಲಿಲ್ಲ. ಪುಸ್ತಕ ರೂಪಕ್ಕೆ ಇವುಗಳನ್ನು ತರಬೇಕೆಂದರೆ ಪ್ರತಿ ವಿಡಿಯೋವನ್ನು ಕೇಳಿ ನಂತರ ಅದನ್ನು ಟೈಪಿಸಬೇಕಾಗಿತ್ತು. ಇದನ್ನು ಕಾರ್ಯರೂಪಕ್ಕೆ ತರುವುದೇ ಹರಸಾಹಸವಾಗಿತ್ತು. ಈ ಜವಾಬ್ದಾರಿಯನ್ನು ಹೊತ್ತುಕೊಂಡವರು ಶ್ರೀಮತಿ. ವಿ. ಲಕ್ಷ್ಮಿ ಮತ್ತು ಶ್ರೀ ಸಿದ್ದಾರೂಢರವರು. ಯಾವುದೇ ಬೇಸರಿಕೆ ತೋರದೆ ಎಪಿಸೋಡ್‌ಗಳನ್ನು ಕೇಳಿ ಬರೆದುಕೊಂಡು ನಂತರ ಬೆರಳಚ್ಚು ಮಾಡಿ ನೀಡಿರುತ್ತಾರೆ. ಅವರ ಸಹಕಾರವನ್ನು ನೆನಸಿಕೊಳ್ಳುತ್ತೇನೆ. ಹೀಗೆ ಮಾತನಾಡಿದ್ದನ್ನೇ ಬೆರಳಚ್ಚು ಮಾಡಿ ಕಳುಹಿಸಿದ ಕರಡು ಪ್ರತಿಗೆ ಸಮವಸ್ತ್ರ ತೊಡಿಸಿ, ಗ್ರಾಂಥಿಕ ರೂಪಕ್ಕೆ ಪರಿವರ್ತಿಸಲು ನವಕರ್ನಾಟಕ ಪಬ್ಲಿಕೇಷನ್ಸ್ ತಂಡದವರ ಶ್ರಮವನ್ನು ನಾನು ಮರೆಯಲಾರೆ. ಅದು ಸುಲಭದ ಕೆಲಸವಂತೂ ಆಗಿರಲಿಲ್ಲವೆಂಬುದನ್ನು ನಾನು ಬಲ್ಲೆ. ತೆರೆಯ ಮರೆಯಲ್ಲಿ ಕೆಲಸ ಮಾಡಿದ ಅವರಿಗೆ ನನ್ನ ಕೃತಜ್ಞತೆಗಳು.
ಮುಖ್ಯವಾಗಿ ಈ ಸಂಚಿಕೆಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದ ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಶ್ರೀಮತಿ ರತ್ನಕಲಾ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಈ ಪುಸ್ತಕಕ್ಕೆ ಅಮೂಲ್ಯವಾದ ಮುನ್ನುಡಿಯನ್ನು ಬರೆದುಕೊಟ್ಟ ಖ್ಯಾತ ಸಾಹಿತಿ ಶ್ರೀ ವಿಠಲ್ ಶೆಣೈ ಅವರಿಗೆ, ಸಂಚಿಕೆಗಳು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದಾಗ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಪ್ರೋತ್ಸಾಹಿಸಿದ ವೀಕ್ಷಕರಿಗೆ, ಅಭಿಮಾನಿಗಳಿಗೆ ಕೃತಜ್ಞತೆಗಳು.
ಈ ಸಂಚಿಕೆಗಳಲ್ಲಿ ಬಂದಿರುವ ಎಲ್ಲ ಅಭಿಪ್ರಾಯಗಳು ಮೂಲ ಲೇಖಕರ ಅಥವಾ ಸಿದ್ಧಾಂತಗಳ ಯಥಾವತ್ತಾದ ದಾಖಲೆಗಳೇನಲ್ಲ. ಈ ಲೇಖನಗಳನ್ನು ನನ್ನ ಮನವರಿಕೆಗೆ ಅನುಗುಣವಾಗಿ ರೂಪಿಸಿದ್ದೇನೆ. ಆಳ ಅಧ್ಯಯನವಿಲ್ಲದ ಕಾರಣ, ಸಂಚಿಕೆಯ ಸಮಯದ ಮಿತಿಯ ಕಾರಣಗಳಿಂದಾಗಿ, ವಿಷಯಗಳ ಪೂರ್ಣ ಪರಿಚಯವಾಗದೇ ಇರಬಹುದು ಮತ್ತು ವಿಷಯಗಳ ಅಧಿಕೃತತೆಯ ಕುರಿತಂತೆ ತಪ್ಪು ವಿಶ್ಲೇಷಣೆಯಾಗಿರಲೂಬಹುದು. ಹಾಗೆ ಎನಿಸಿದರೆ ಅದರ ಹೊಣೆ ನನ್ನದಾಗುತ್ತದೆ. ಈ ಲೇಖನಗಳನ್ನು ಆಸಕ್ತರು ಮುಂದಿನ ಓದಿಗೆ ಬಾಗಿಲು ಎಂದು ಭಾವಿಸಲು ವಿನಂತಿಸುತ್ತೇನೆ. ಪುಸ್ತಕ ನಿಮಗೆ ಬೇಸರ ತರಿಸುವುದಿಲ್ಲ ಎಂಬ ಭರವಸೆ ಇದೆ. ಇದು ಮಿದುಳಿನ ನೆನಪಿನ ಕೋಶವನ್ನು ಕೆದಕುವ ಪುಸ್ತಕ.” ೧೮೪ ಪುಟಗಳ ಈ ಕೃತಿಯನ್ನು ಓದಲು ಬಹಳ ಸಮಯವೇನೂ ಬೇಕಾಗಲಾರದು.