ಮಾದಕದ್ರವ್ಯ ಜಾಲದ ವಿರುದ್ಧ ಸಂಘಟಿತ ಸಮರ ಅಗತ್ಯ

ಮಾದಕದ್ರವ್ಯ ಜಾಲದ ವಿರುದ್ಧ ಸಂಘಟಿತ ಸಮರ ಅಗತ್ಯ

ಮಾದಕದ್ರವ್ಯ ಜಾಲ ವಿರುದ್ಧದ ಸಮರದಲ್ಲಿ ಭಾನುವಾರ (ಮಾ.೧೬) ಮಹತ್ವದ ಕಾರ್ಯಾಚರಣೆಗಳು ನಡೆದಿವೆ. ಮಂಗಳೂರು ಪೋಲೀಸರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿ, ೭೫ ಕೋಟಿ ರೂ. ಮೌಲ್ಯದ ೩೭.೮೭ ಕೆಜಿ ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಅನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪೋಲೀಸರು ಇಷ್ಟೊಂದು ಪ್ರಮಾಣದಲ್ಲಿ ಎಂಡಿಎಂಎ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಮಂಗಳೂರು ಪೋಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಹೇಳಿದ್ದಾರೆ. ‘ಮಂಗಳೂರು ನಗರ ಪೋಲೀಸರ ಕಾರ್ಯಾಚರಣೆ ಶ್ಲಾಘನೀಯ. ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತೊಗೆಯುವುದು ಸರ್ಕಾರದ ಗುರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಸೋಮವಾರ ವಿಧಾನಸಭೆ ಕೂಡ ಪೋಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿ, ಅಭಿನಂದಿಸಿದೆ.

ಮತ್ತೊಂದೆಡೆ, ಈಶಾನ್ಯ ರಾಜ್ಯಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳು ಯಶಸ್ವಿಯಾಗಿವೆ. ಮಣಿಪುರದ ಲಿಲಾಂಗ್ ಮತ್ತು ಅಸ್ಸಾಂ-ಮಿಜೋರಾಂ ಗಡಿಯ ಸಿಲ್ಟರ್ ನಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್ ಸಿ ಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ೮೮ ಕೋ. ರೂ ಮೌಲ್ಯದ ೧೧೦ ಕೆ ಜಿ ನಿಷೇಧಿತ ಮೆಥಾಂಫೆಟಾಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ನಾಲ್ವರು ಮಾದಕವಸ್ತು ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಈ ಮಹತ್ವದ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಶ್ಲಾಘಿಸಿದ್ದು, ‘ಡ್ರಗ್ಸ್ ಮಾಫಿಯಾದ ಬಗ್ಗೆ ಕನಿಕರದ ಪ್ರಶ್ನೆಯೇ ಇಲ್ಲ. ಮಾದಕವಸ್ತು ಮುಕ್ತ ಭಾರತ ನಿರ್ಮಾಣದ ಸಂಕಲ್ಪವನ್ನು ಮೋದಿ ನೇತೃತ್ವದ ಸರ್ಕಾರ ಹೊಂದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಭಾರತಕ್ಕೆ ದೊಡ್ದ ತಲೆನೋವಾಗಿ ಪರಿಣಮಿಸಿದ್ದು, ಹೊಸ ಬಗೆಯ ಭಯೋತ್ಪಾದನೆಯನ್ನು ಸೃಷ್ಟಿಸಿದೆ. ಡ್ರಗ್ಸ್ ಕಳ್ಳಸಾಗಣೆ ಮತ್ತು ಮಾರಾಟ ವ್ಯಾಪಕವಾಗಿ ಹೆಚ್ಚಿದ್ದು, ವಿದ್ಯಾರ್ಥಿಗಳನ್ನು ವ್ಯಸನಿಗಳಾಗಿ ಮಾಡಲಾಗುತ್ತಿದೆ. ಅಲ್ಲದೆ, ಮಾದಕ ವ್ಯಸನಿಯಾದವರು ಖಿನ್ನತೆ ಸೇರಿದಂತೆ ಇತರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಮತ್ತು ಇಂಥವರು ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗುವ ಅಪಾಯವೂ ಇದೆ. ಇತ್ತೀಚೆಗೆ ದೇಶದಲ್ಲಿ ಸಂಭವಿಸಿದ ಅಪಘಾತ ಮತ್ತು ಇತರ ಅಪರಾಧ ಪ್ರಕರಣಗಳ ಹಿನ್ನಲೆಯನ್ನು ಜಾಲಾಡಿದಾಗ, ಆರೋಪಿಗಳು ಕೃತ್ಯದ ವೇಳೆ ಮಾದಕ ದ್ರವ್ಯ ಸೇವಿಸಿದ್ದು ಧೃಢ ಪಟ್ಟಿದೆ. ಮಾದಕವಸ್ತು ಬಳಸುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಅವುಗಳ ಮೂಲ ಪತ್ತೆ ಹಚ್ಚ ಬೇಕು ಏಕೆಂದರೆ, ಬೆಂಗಳೂರಿನ ಬಾಣಸವಾಡಿ, ಕಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಫ್ರಿಕನ್ ಪ್ರಜೆಗಳು ಮನೆಯಲ್ಲೇ ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಪ್ರಕರಣಗಳು ಈ ಹಿಂದೆಯೇ ವರದಿಯಾಗಿವೆ. ಅಲ್ಲದೆ, ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ಸ್ ಮಿಶ್ರಿತ ಚಾಕಲೇಟ್, ಮಾತ್ರೆಗಳು, ಸಿಹಿ ಪದಾರ್ಥಗಳು ವ್ಯಸನಿಗಳಿಗೆ ಸುಲಭದಲ್ಲಿ ಸಿಗುತ್ತಿವೆ. ಅಂದರೆ, ಪೆಡ್ಲರ್ ಗಳು ಮತ್ತು ಇವರ ಹಿಂದಿರುವ ದುಷ್ಟಶಕ್ತಿಗಳು ಎಷ್ಟು ವ್ಯವಸ್ಥಿತವಾಗಿ ಇಂಥ ಕೃತ್ಯದಲ್ಲಿ ತೊಡಗಿವೆ ಎಂಬುದನ್ನು ಅವಲೋಕಿಸಿದರೆ ನಿಜಕ್ಕೂ ಆತಂಕವಾಗುತ್ತದೆ. ಮಾದಕದ್ರವ್ಯ ಜಾಲ ನೂರಾರು ಕೋಟಿ ರೂ ಗಳ ವಹಿವಾಟು ಹೊಂದಿದೆ. ಹಾಗಾಗಿ, ಇದರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸಿ, ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೮-೦೩-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ