*ಮಾದಕ ಪೇಯ*

*ಮಾದಕ ಪೇಯ*

ಕವನ

ಬಾಳಬನದಲಿ ಹೂವರಳಬಹುದು

ಸುಗಂಧವನು ಸುತ್ತಲೂ ಚೆಲ್ಲುತ್ತ

ಮಕರಂದ ತುಂಬಿ ತುಳುಕಬಹುದು

ನ್ಯಾಯವೆಂಬ ಸಿಹಿನೀರ ಚೆಲ್ಲಿದರೆ

 

ಮೋಹವು ಆಳವರಿಯದ ಕಂದರ

ಮಮತೆಯೆಂಬ ಪದ ಗಾಳಿಗಿಟ್ಟ ಸೊಡರು

ಮನಬಂದೆಡೆ ಬೆಳಕ ಬೀರಬಹುದು

ಪ್ರಾಣದಂತೆ ನೆಚ್ಚಿಕೊಂಡರೆ ಗತಿ ಕಣ್ಣೀರೆ

 

ರವಿಯು ಅಪ್ಪಣೆ ಪಡೆದು ಅಸ್ತಮಿಸಲಾರ

ಪವನನ ಪಯಣಕೆ ನಿರ್ಬಂಧವಿಲ್ಲ

ಸ್ನೇಹ ಹಂಚುವ ಹಕ್ಕಿದೆ ಕೇಳುವುದಲ್ಲ

ನಿರಾಸೆಯ ಕತ್ತಲೇ ಮರಳಿ ಬಯಸಿದರೆ

 

ಹುಟ್ಟಿಗೊಂದು ಕೊನೆಯಿದೆ ಖಚಿತ

ಸಾವು ತನಗಿಲ್ಲವೆಂಬ ನಂಬಿಕೆ ವಿಸ್ಮಯ

ಜೀವಿತ ಸೆಳೆತವು ಮಾದಕ ಪೇಯದಂತೆ

ವಿನಾಶ ತಪ್ಪದು ಅತಿ ಮೋಹವಿದ್ದರೆ

 

ಬಿರುಕುಬಿಟ್ಟ ನೆಲವು ನೀರು ಹೀರಿದಂತೆ

ಸುಖಭೋಗಕೆ ಮನ ವಶವಾಗುವುದು

ಅಂತಿಮ ಯಾನಕೆ ತಡೆಗೋಡೆಯಿರದು

ಎದೆಗೂಡಿನ ಆತ್ಮನು ತೃಪ್ತನಾದರೆ.

 

-*ಶಾಂತಾ ಜೆ ಅಳದಂಗಡಿ*

 

ಚಿತ್ರ್