ಮಾಧವ ನೆಲೆ...
ಮಾಧವ ನೆಲೆ. ಇದು ಮಾಧವನ ನೆಲೆಯೇ. ಶಿವಮೊಗ್ಗದ ಸೋಮಯ್ಯ ಬಂಗ್ಲೆಯಲ್ಲಿರುವ ಈ ‘ನೆಲೆ’ ಚಿಂದಿ ಆಯುವ ಮಕ್ಕಳ ಆಶ್ರಯ ತಾಣ. ಈಗ ಇದಕ್ಕೆ ಒಂದು ವರ್ಷದ ಸಂಭ್ರಮ.
ಚಿಂದಿ ಆಯುತ್ತಾ ಮಕ್ಕಳು ಕ್ರಮೇಣ ದುಶ್ಚಟಗಳ ದಾಸರಾಗಿ, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಕಂಟಕರಾಗಿ ಬೆಳೆಯುವ ಸಂಭವವೇ ಹೆಚ್ಚು. ಇದು ಚಿಂತಾಜನಕ ಸಂಗತಿ. ಇದಲ್ಲದೇ ಅನಾಥ ಮಕ್ಕಳು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಮಾದರಿಯಾಗಿ ಹಿಂದುಸೇವಾ ಪ್ರತಿಷ್ಠಾನ ಕಂಡುಕೊಂಡ ಉತ್ತರ ‘ನೆಲೆ’.
‘ನೆಲೆ’ಯ ಕತೃ ಶಿವಮೊಗ್ಗದ ವಿಕಾಸ ಟ್ರಸ್ಟ್. ಅಲ್ಲದೇ ಇದು ಹಿಂದೂಸೇವಾ ಪ್ರತಿಷ್ಠಾನದ ಪ್ರಕಲ್ಪ.
‘ನೆಲೆ’ಯೇ ಇಲ್ಲದ ಮಕ್ಕಳಿಗೆ ನೆಲೆಯನ್ನೊದಗಿಸುವುದು, ಶಿಕ್ಷಣ ಸಂಸ್ಕಾರ ನೀಡುವುದು ಈ ಪ್ರಕಲ್ಪದ ಉದ್ದೇಶ. ಸುಮಾರು ೨೦ ಮಕ್ಕಳು ಇಲ್ಲಿದ್ದು, ಅವರಲ್ಲಿ ಬಹುತೇಕರು ಚಿಂದಿ ಆಯುತ್ತಿದ್ದ ಪುಟ್ಟ ಕಂದಮ್ಮಗಳು. ಈಗ ಪರಿವರ್ತನೆಯ ಅಲೆಯಲ್ಲಿ ತೇಲಲು ಪ್ರಾರಂಭಿಸಿದ್ದಾರೆ.
ತಂದೆ ತಾಯಿಯವರ ವಾತ್ಸಲ್ಯ, ಅಣ್ಣ- ತಮ್ಮ, ಅಕ್ಕ ತಂಗಿಯರ ಪ್ರೀತಿ, ಶಾಲೆಯ ಶಿಕ್ಷಣ, ಸಹ ಪಾಠಿಗಳೊಂದಿಗೆ ಆಟ, ಸಜ್ಜನರ ಸಹವಾಸ ಈ ಎಲ್ಲವುಗಳಿಂದಲೂ ದೂರವಾದ ಸುಮಾರು ೬ರಿಂದ ೧೪ ವಯಸ್ಸಿನವರೆಗಿನ ಮಕ್ಕಳಿಗೆ ಇಲ್ಲಿ ಅವಶ್ಯಕ ವಿದ್ಯಾಭ್ಯಾಸ, ಸತ್ಸಂಸ್ಕಾರ ಹಾಗೂ ಅವರ ಭೌತಿಕ ಮಾನಸಿಕ ಬೆಳವಣಿಗೆಗೆ ಅವಶ್ಯಕವಾದ ಸವಲತ್ತನ್ನು ನೀಡಲಾಗುತ್ತಿದೆ.
ಶಿವಮೊಗ್ಗ, ಶಿಕಾರಿಪುರ, ಶೃಂಗೇರಿ, ಭದ್ರಾವತಿ ಮತ್ತಿತರ ಊರುಗಳ ಅರುಣ, ದೀಪಕ್, ಪುಷ್ಪರಾಜ್, ವೆಂಕಟೇಶ್, ಪಾವನ, ಪ್ರದೀಪ, ಹಾಲೇಶ್, ಕಾರ್ತಿಕ್ ಹೀಗೆ ೨೦ ಮಕ್ಕಳು ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ. ೧೦-೧೨ ಮಕ್ಕಳು ದಿನನಿತ್ಯ ಬೆಳಿಗ್ಗೆ ಬಂದು ಊಟ, ಶಿಕ್ಷಣ ಪಡೆದು ಸಂಜೆ ಮನೆಗೆ ತೆರಳುವವರು ಇದ್ದಾರೆ.
ಶಾಲೆಗೆ ಕಳಿಸಲಾಗದ ಪರಿಸ್ಥಿತಿಯಲ್ಲಿರುವ ಕೆಲ ಪೋಷಕರ ಒಂದೆರಡು ಮಕ್ಕಳು ಈ ನೆಲೆಯಲ್ಲಿದ್ದಾರೆ.
ನಗರದ ಖ್ಯಾತ ಶಿಕ್ಷಣ ಸಂಸ್ಥೆಗಳಾದ ವಿಕಾಸ ವಿದ್ಯಾಸಮಿತಿ ಹಾಗೂ ದೇಶೀಯ ವಿದ್ಯಾಶಾಲಾ ಸಮಿತಿ, ತುಂಗಾ ಪ್ರೌಢಶಾಲೆ ಈ ಸೇವೆಗೆ ಕೈ ಜೋಡಿಸಿದ್ದು ಇಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ವಿಕಾಸ ವಿದ್ಯಾಸಮಿತಿ ಇಲ್ಲಿನ ಮಕ್ಕಳನ್ನು ತನ್ನದೇ ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗಿ ತಂದು ಬಿಡುವ ವ್ಯವಸ್ಥೆ ಮಾಡಿದೆ.
ಚಟುವಟಿಕೆ ಹೀಗೆ ನಡೆಯುತ್ತದೆ...
ಬೆಳಿಗ್ಗೆ ೫.೩೦ಕ್ಕೆ ಮಾಧವನ ಮಕ್ಕಳ ಚಟುವಟಿಕೆ ಪ್ರಾರಂಭವಾಗುತ್ತದೆ. ಪ್ರಾತಃಸ್ಮರಣೆ, ವ್ಯಾಯಾಮ, ಯೋಗಾಭ್ಯಾಸ, ಸ್ನಾನ, ಉಪಾಹರ ಮುಗಿಸಿ ನಂತರ ಶಾಲೆಗೆ ತೆರಳುತ್ತಾರೆ. ನಂತರ ಸಂಜೆ ಶಾಲೆಯಿಂದ ಬಂದು ಕ್ರೀಡೆ, ಭಜನೆಯಲ್ಲಿ ಪಾಲ್ಗೊಂದು ಪಠ್ಯ ಅಭ್ಯಾಸಿಸುತ್ತಾರೆ.
ಹಾಗೆಯೇ ಮಕ್ಕಳಲ್ಲಿ ಹುದುಗಿರುವ ಕಲಾತ್ಮಕ ಚಟುವಟಿಕೆಗಳನ್ನು ಹೊರತರುವ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ.
ಮಕ್ಕಳಿಗೆ ಸಂಸ್ಕಾರ ನೀಡುವ ದೃಷ್ಟಿಯಿಂದ ಬಾಲ ಗೋಕುಲ, ಚಿತ್ರಕಲೆ, ಸಂಗೀತ, ಭರತ ನಾಟ್ಯ, ಯಕ್ಷಗಾನ, ಕೋಲಾಟ, ಕೈಕುಸುಬುಗಳ ತರಬೇತಿಯನ್ನೂ ಪಡೆಯುತ್ತಿದ್ದಾರೆ.
ಇಂತಹ ಮಕ್ಕಳ ಮನೆಮಂದಿಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುವುದರೊಂದಿಗೆ ಆ ಕುಟುಂಬಗಳಿಗೆ ಮತ್ತು ಈ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಿ ತನ್ಮೂಲಕ ಸುಖೀ ಸಮಾಜವನ್ನು ನಿರ್ಮಿಸುವುದು ಸಂಸ್ಥೆಯ ಉದ್ದೇಶ.
ಮುದ್ದು ಕಂದಮ್ಮಗಳಿಗಾಗಿ ಮಾಧವನ ನೆಲೆಯಲ್ಲಿ ನಡೆಯುತ್ತಿರುವ ಸೇವಾ ಯಜ್ಞಕ್ಕೆ ಯಾರೊಬ್ಬರೂ ಕೈ ಜೋಡಿಸಬಹುದು. ನಿವೃತ್ತ ಶಿಕ್ಷಕರು ಇಲ್ಲಿನ ವಿದ್ಯಾರ್ಥಿಗಳಿಗೆ ಕೆಲ ಹೊತ್ತು ಪಾಠ ಹೇಳಿಕೊಡಬಹುದು, ವಿಶೇಷ ಕಲೆ ಗೊತ್ತಿರುವವರು ಮಕ್ಕಳಿಗೆ ಆ ಕಲೆಯನ್ನು ಕಲಿಸಬಹುದು, ಇಷ್ಟಲ್ಲದೇ ಊಟ ಉಪಚಾರದ ವ್ಯವಸ್ಥೆ ನೋಡಿಕೊಳ್ಳಬಹುದು. ಮನೆಯಲ್ಲಿ ಯಾರೊಬ್ಬರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮತ್ತು ಹಿರಿಯರ ನೆನಪಿನ ದಿನ, ಸಮಾರಂಭ, ಇನ್ನಿತರೆ ದಿನಗಳಂದು ನೆಲೆಗೆ ದೇಣಿಗೆ ನೀಡಿ ಮಕ್ಕಳಿಗೆ ಸಹಕಾರ ನೀಡಬಹುದು.
ಮಾಹಿತಿಗಾಗಿ: ೯೪೮೦೨ ೮೦೯೩೫, ೯೪೪೯೮ ೯೭೧೬೧