ಮಾಧ್ಯಮ ಕೊರೋನ ಮತ್ತು ಹಲವು ಮುಖಗಳು
ಅದೇನು ನಡೆಯುತ್ತಿದೆಯೋ ಗೊತ್ತಿಲ್ಲ. ಕೊರೋನ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸುವ ಮಟ್ಟಕ್ಕೆ ಬಂದು ಬಿಟ್ಟಿದೆ. ಆದರೆ ಇದನ್ನು ನಿಭಾಯಿಸಿಕೊಂಡು ಹೋಗುವಲ್ಲಿ ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಾ ಬಂದಿರುವುದು ಮತ್ತು ಜನರಿಗೆ ಬೇಕಾದಂತಹ ಅನುಕೂಲವನ್ನು ಮಾಡಿಕೊಟ್ಟು ಜೀವನ ವ್ಯವಸ್ಥೆಯ ಅಗತ್ಯತೆಗಳನ್ನು ಪೂರೈಸಲು ಸತತ ಪ್ರಯತ್ನ ಪಡುತ್ತಿದೆ. ನಿಜಕ್ಕೂ ಈ ರಾಷ್ಟ್ರಗಳ ಕಾರ್ಯ ವೈಖರಿಗೆ ಸೆಲ್ಯೂಟ್ ಹೊಡೆಯಲೇ ಬೇಕು. ಆದರೆ ಭಾರತದ ಕಥೆ ಕೇಳಿದರೆ ನೀವು ತೀರಾ ಮುಜುಗರ ಪಡುತ್ತೀರಾ.
ಮಾನವೀಯತೆಯಿಂದ ಎಲ್ಲಾ ರಾಷ್ಟ್ರಗಳು ಈ ಮಹಾಮಾರಿಯ ವಿರುದ್ದ ಹೋರಾಡಿತ್ತಿದ್ದರೆ ಭಾರತ ಮಾತ್ರ ಇಲ್ಲೂ ಕೋಮು ರಾಜಕೀಯದ ಲಾಭ ಪಡೆಯಲು ಯತ್ನಿಸುತ್ತಿರುವುದು ತೀರಾ ನಾಚಿಗೆಗೇಡು. ಕೊರೋನಾ ಇಡೀ ರಾಷ್ಟ್ರಕ್ಕೆ ಒಂದು ಜಾತಿಯೇ ಇಲ್ಲದ ಸಾಂಕ್ರಾಮಿಕ ರೋಗವಾಗಿ ಬಂದಿದ್ದರೆ ಭಾರತಕ್ಕೆ ಮಾತ್ರ ಮುಸ್ಲಿಂ ನಾಮಧೇಯವಾಗಿ ಈ ವೈರಸ್ ಬಂದಿದೆಯೋ ಅನಿಸುತ್ತದೆ. ದಿನವಿಡೀ ಬೇಕಾಬಿಟ್ಟಿ ಹೈಲೈಟ್ ಗಳನ್ನೂ, ಬ್ರೇಕಿಂಗ್ ನ್ಯೂಸ್ ಗಳನ್ನೋ, ತಾಜಾ ಸುದ್ದಿಗಳನ್ನೋ ಹಾಕುತ್ತಾ ಯಾವ ನ್ಯೂಸ್ ಸಿಗುತ್ತದೋ ಎಂದು ಬೀದಿನಾಯಿಗಳ ಹಾಗೆ ಕಚ್ಚಲು ಆರಂಭಿಸುವ ಈ ಮಾಧ್ಯಮಗಳಿಗೆ ಸುದ್ದಿಯೊಂದು ಸಿಕ್ಕಿದರೆ ಹಾಲು ಕುಡಿದಂತಾಗುತ್ತದೆ. ಸುದ್ದಿಗಾಗಿ ಹೊಂಚುಹಾಕುತ್ತಿದ್ದ ಈ ಮಾಧ್ಯಮಗಳಿಗೆ ನಿಜಾಮುದ್ದೀನ್ ಮರ್ಕಝ್ ನಲ್ಲಿ ತಬ್ಲೀಗಿ ಜಮಾತ್ ಆಯೋಜಿಸಿದ್ದ ಕಾರ್ಯಕ್ರಮದ ಸುದ್ದಿ ಸಿಕ್ಕಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ನಮಗೆ ಜನರ ಸುಖವೋ, ದಃಖವೋ ಡೋಂಟ್ ಕೇರ್, ಕೆಲವು ದಿನಗಳ ಮಟ್ಟಿಗೆ ಹೈಲೈಟ್ ಸುದ್ದಿಗಳಾಗಿ, ದಿನವಿಡೀ ಚರ್ಚೆ ನಡೆಸುವ ಡಿಬೇಟ್ ಗಳಾಗಿ ಪ್ರಸಾರ ಮಾಡಬಹುದೆಂಬ ಹೊಸತೊಂದು ಆವೇಶ ಜನರ ಮನಸ್ಸಿನಲ್ಲಿ ವಿಭಿನ್ನ ಮನೋಸ್ಥಿತಿಯನ್ನು ಸೃಷ್ಟಿಸಿತು.
ನಿಜವಾಗಿ ಹೇಳಬೇಕೆಂದರೆ ನಿಜಾಮುದ್ದೀನ್ ಮರ್ಕಝ್, ಪ್ರಧಾನಿಗಳು ಜನತಾ ಕರ್ಫೂ ಘೋಷಣೆಯಾದಾಗಲೇ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು, ಆದರೆ ಅದಾಗಲೇ ದೇಶ-ವಿದೇಶದಿಂದ ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕಾಗಿ ಆಗಮಿಸಿ ಕೆಲವು ದಿನಗಳು ಕಳೆದಿತ್ತು, ಆಗಮಿಸಿದ ಜನರನ್ನು ಅವರ ಮೂಲ ಸ್ಥಳಗಳಿಗೆ ಕಳುಹಿಸುವ ಜವಾಬ್ದಾರಿಯನ್ನು ಮನಗಂಡ ಕಾರ್ಯಕ್ರಮದ ಆಯೋಜಕರು ಸ್ಥಳೀಯ ಕಾರ್ಯಾಲಯಕ್ಕೆ ಆಗಲೇ ಪತ್ರವನ್ನು ನೀಡಿ ಅವರ ಸ್ಥಳಗಳಿಗೆ ಹಿಂದಿರುಗಳು ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡರು, ಎಲ್ಲಾ ಸಂಚಾರಿ ಬಸ್ಸು,ರೈಲು,ವಿಮಾನಗಳ ತುರ್ತು ರದ್ದತಿಯಿಂದಾಗಿ ಸದ್ಯಕ್ಕೆ ಅವರನ್ನು ತಾವು ತಂಗಿದ ಜಾಗದಲ್ಲಿಯೇ ಇರುವಂತೆಯೂ, ಪ್ರತ್ಯೇಕವಾಗಿ ಸಂಚಾರದ ವ್ಯವಸ್ಥೆ ಮಾಡುವಂತೆಯೂ ಭರವಸೆ ನೀಡಿದಾಗ ಅದರಂತೆಯೇ ಒಪ್ಪಿಕೊಂಡು ತಾವು ತಂಗಿದ ಸ್ಥಳದಲ್ಲೇ ಇರುವಂತೆ ಸೂಚಿನೆಯನ್ನು ನೀಡಲಾಯಿತು. ಆದರೆ ಸ್ಥಳೀಯ ಕಾರ್ಯಾಲಯ ಅವರಿಗೆ ಸಂಚಾರ ವ್ಯವಸ್ಥೆಯನ್ನು ಮಾಡವಲ್ಲಿ ವಿಫಲರಾಗಿರುವುದೇ ಪರಿಸ್ಥಿತಿಯು ಬಿಗಡಾಯಿಸಲು ಕಾರಣ. ಒಂದು ವೇಳೆ ಸರ್ಕಾರ ಸಮರ್ಥವಾಗಿ ಸಂಚಾರ ವ್ಯವಸ್ಥೆಯನ್ನು ಮಾಡಿದ್ದಿದ್ದರೆ ಮಾಧ್ಯಮ ಕೊರೋನ ಕ್ಕೆ ತಬ್ಲೀಗಿ ಜಮಾಅತ್ ತುತ್ತಾಗುತ್ತಿರಲಿಲ್ಲ. ಅದರೊಂದಿಗೆ ಇಸ್ಲಾಮೀ ಫೋಬಿಯಾ ಕೊರೋನಾದ ಬರ್ಬರತೆಗೂ ತುತ್ತಾಗುತ್ತಿರಲಿಲ್ಲ.
ಕರ್ನಾಟಕದ ಮಾಧ್ಯಮದಲ್ಲಿ ದೆಹಲಿಯ ಮರ್ಕಝ್ ನ ಈ ಸುದ್ದಿ ಇಡೀ ದಿನದ ಚರ್ಚೆಯ ಸುದ್ದಿ. ಯಾವ ನ್ಯಾಯಾಲಯಗಳೂ ತೀರ್ಪನ್ನು ಕೈಗೆ ತೆಗೆಯುವ ಮುನ್ನವೇ ಈ ಮಾಧ್ಯಮಗಳು ತಮ್ಮದೇ ತೀರ್ಪು ನೀಡಿ ಬಿಡುತ್ತದೆ. ಇನ್ನೊಂದು ವಿಷಯವೆಂದರೆ ಮರ್ಕಝ್ ನಲ್ಲಿ ಘಟನೆ ನಡೆದ ದಿನ ಮಾತ್ರವಲ್ಲ, ನಂತರದ ದಿನದಲ್ಲೂ ದೇಶದ ಹಲವು ಪ್ರಸಿದ್ದ ಹಿಂದೂ ದೇವಾಲಯದಲ್ಲಿ ಸಾಮೂಹಿಕ ಪೂಜೆಯನ್ನು ನಿಲ್ಲಿಸಿರಲಿಲ್ಲ, ಸಾವಿರಾರು ಭಕ್ತರ ಸಾಲು ಸಾಲೇ ಮುಗಿಬಿದ್ದು ಪೂಜಿಸುವಾಗ ಮಾತ್ರ ಕೊರೋನ ವ್ಯಾಪಿಸುವುದಿಲ್ಲ, ಆದರೆ ಮುಸ್ಲಿಮ್ ಅನುಯಾಯಿಗಳನ್ನು ಹೊಂದಿರುವ ತಬ್ಲೀಗಿ ಜಮಾಅತ್ ನಿಂದಾಗಿ ಮಾತ್ರ ಕೊರೋನ ವ್ಯಾಪಿಸಿದೆ ಎಂಬ ಅವಿವೇಕಿತನದ ವಿಚಾರಗಳನ್ನು ಬಿತ್ತರಿಸಿಕೊಂಡು ಜನರನ್ನು ಧರ್ಮಾಧಾರಿತ ವಿಷಯಗಳಲ್ಲಿ ವಿಭಜಿಸಲು ಕುಮ್ಮಕ್ಕು ನೀಡುತ್ತಿದೆ. ದೇಶದ ವಿವಿಧೆಡೆಯಲ್ಲಿ ಆಹಾರ,ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಜನರು ಜಾತಿ-ಭೇದವನ್ನು ಲೆಕ್ಕಿಸದೇ ಕೊರೋನ ಮಹಾಮಾರಿಯ ವಿರುದ್ದ ಹೋರಾಡುತ್ತಿರುವಾಗ ಮಾಧ್ಯಮಗಳು ಮಾತ್ರ ಇವರ ಭಾವನೆಗಳನ್ನು ಧ್ರುವೀಕರಿಸಿ ಪರಸ್ಪರ ದ್ವೇಷವನ್ನು ಬಿತ್ತರಿಸುವ ಚಾಳಿಯನ್ನೇ ಮುಂದುವರಿಸಿದೆ.
ತಮ್ಮ ಸ್ವ ಇಚ್ಚೆಯಂತೆ ಏನನ್ನು ಬೇಕಾದರೂ ಬಿತ್ತರಿಸಬಹುದೆಂಬ ಮಾಧ್ಯಮದ ಈ ಜಂಭತನ ದೇಶವನ್ನೇ ಬೀದಿಗಳಲ್ಲಿ ಬಂದು ನಿಲ್ಲಿಸುವ ಕಾಲವು ತುಂಬಾ ದೂರವಿಲ್ಲ. ಈ ಮಾಧ್ಯಮ ಕೊರೋನ ಉತ್ತಮ ಮನಸ್ಕರಿಗೆ ಸೋಂಕನ್ನು ತಗಲಿಸದೇ ಇದ್ದರೆ ಸಾಕು ಎಂಬುವುದು ನೈಜ ಭಾರತೀಯರ ಆಶಯ..