ಮಾಧ್ಯಮ ಮಾರ್ಗ

ಮಾಧ್ಯಮ ಮಾರ್ಗ

ಪುಸ್ತಕದ ಲೇಖಕ/ಕವಿಯ ಹೆಸರು
ಪದ್ಮರಾಜ ದಂಡಾವತಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ಜುಲೈ ೨೦೧೮

ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ ಬಿರುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ಮಾಧ್ಯಮ ಸಂಸ್ಥೆಗಳ ಒಡೆಯರಾಗುತ್ತಿದ್ದಾರೆ. ಈ ವಿದ್ಯಮಾನಗಳು ಮಾಧ್ಯಮ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮುಡಿಸುತ್ತದೆ. ಇಂದಿನ ಮಾಧ್ಯಮ ಪೀಳಿಗೆಗೆ ಭಾಷಾ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳ ಮೂಲಕ ಕಿರಿಯ ಮಾಧ್ಯಮ ಮಿತ್ರರಿಗೆ ಮತ್ತು ಈ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿರುವ ಪತ್ರಕರ್ತರಿಗೆ ತಮ್ಮ ಅನುಭವನ್ನು ವಿವರಿಸಿದ್ದಾರೆ.

ಪತ್ರಕರ್ತರಾಗಿರುವ ಪದ್ಮರಾಜ ದಂಡಾವತಿಯವರು ತಮ್ಮ ಹಲವು ವರ್ಷಗಳ ಅನುಭವದ ಸಾರವನ್ನು ಒಟ್ಟುಗೂಡಿಸಿ ‘ಮಾಧ್ಯಮ ಮಾರ್ಗ’ ಎನ್ನುವ ಸೊಗಸಾದ ಪತ್ರಕರ್ತರ ಕೈಪಿಡಿಯನ್ನು ಹೊರತಂದಿದ್ದಾರೆ. ಪತ್ರಿಕೋದ್ಯಮ ಅತ್ಯಂತ ಶ್ರೇಷ್ಟ ವೃತ್ತಿ ಅಥವಾ ಶ್ರೇಷ್ಟ ವೃತ್ತಿಗಳಲ್ಲಿ ಒಂದು. ಜನರಿಗೆ ಒಳ್ಳೆಯದನ್ನು ಮಾಡಲು, ಅವರ ಕಷ್ಟಗಳಿಗೆ, ಸಂತೋಷಗಳಿಗೆ ಸ್ಪಂದಿಸಲು ಮತ್ತು ಪ್ರಭುತ್ವ ನಿರಂಕುಶವಾಗದಂತೆ ತಡೆಯಲು ಈ ವೃತ್ತಿಯಲ್ಲಿ ಇರುವಷ್ಟು ಅವಕಾಶಗಳು ಬೇರೆ ಯಾವ ವೃತ್ತಿಯಲ್ಲಿಯಾದರೂ ಇವೆ ಎಂದು ಅನಿಸುವುದಿಲ್ಲ. ಆದರೆ, ಎಲ್ಲ ವೃತ್ತಿಗಳ ಹಾಗೆ ಈ ವೃತ್ತಿಯೂ ಈಗ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಸುದ್ದಿ ಮತ್ತು ಜಾಹೀರಾತಿನ ನಡುವಿನ ಉಕ್ಕಿನ ಗೋಡೆ ತತ್ತರಿಸುತ್ತಿರುದಕ್ಕಿಂತ ಸುದ್ದಿ ಮತ್ತು ಸಂಪಾದಕೀಯದ ನಡುವಿನ ಗೋಡೆ ಕುಸಿಯುತ್ತಿರುವುದು ಹೆಚ್ಚು ಆತಂಕಕಾರಿಯಾದ ವಿದ್ಯಮಾನ. ಮಾಧ್ಯಮದ ವಿರುದ್ಧ ಪ್ರಭುತ್ವವು ಪಕ್ಷ-ಸ್ಥಳ ಭೇದವಿಲ್ಲದೇ ನಿತ್ಯವೂ ಹಲ್ಲು ಮಸಿಯುತ್ತಿದೆ ; ಪತ್ರಕರ್ತರನ್ನು ಹದ್ದುಬಸ್ತಿನಲ್ಲಿಡುವ , ಜೈಲಿಗೆ ಅಟ್ಟುವ ಬೆದರಿಕೆ ಹಾಕುತ್ತಿದೆ. ಮಾನಹಾನಿಯಂತಹ ಶಿಕ್ಷೆಯ ಖಡ್ಗ ಮಾಧ್ಯಮದ ತಲೆಯ ಮೇಲೆ ನಿತ್ಯವೂ ತೂಗುತ್ತಿರುವಂತೆ ನ್ಯಾಯಾಂಗ ನೋಡಿಕೊಂಡಿದೆ. ಇದರ ನಡುವೆ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರ ವಿಶ್ವಾಸಾರ್ಹತೆ ಕುಂದುತ್ತಿರುವ, ಸಂವೇದನೆ ಮೊಂಡಾಗುತ್ತಿರುವ ಹಾಗೂ ಅಬ್ಬರದ ರೋಚಕತೆಯೇ ಪತ್ರಿಕೋದ್ಯಮ ಎನಿಸುತ್ತಿರುವ ಈಗಿನ ಕಾಲಘಟ್ಟದಲ್ಲಿ ಅದನ್ನು ಸರಿದಾರಿಗೆ ತರುವ ವಿನಮ್ರ ಹಾಗೂ ನೈತಿಕ ಒಂಟಿ ಧ್ವನಿಯಂತೆ ಇಲ್ಲಿನ ಲೇಖನಗಳು ಇವೆ. ಇಲ್ಲಿ, ಮಾಧ್ಯಮ ವೃತ್ತಿ ಕುರಿತು ಆತ್ಮಶೋಧನೆಯ ನಿಷ್ಟುರ ಲೇಖನಗಳ ಜೊತೆಗೆ ಉದ್ಧಟವಲ್ಲದ ಆದರೆ ದಿಟ್ಟವಾದ, ಪ್ರಭುತ್ವವನ್ನು ಪ್ರಶ್ನಿಸುವ ಹಾಗೂ ಹೆಮ್ಮೆ ಮೂಡಿಸುವ ಕಥನಗಳೂ ಇರುವುದು ಈ ಕೃತಿಯ ಹೆಚ್ಚುಗಾರಿಕೆ.

ಲೇಖಕರಾದ ಪದ್ಮರಾಜ ದಂಡಾವತಿಯವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ… “ಈ ವೃತ್ತಿಯಲ್ಲಿ ಸುಮಾರು ನಾಲ್ಕು ದಶಕ ಕೆಲಸ ಮಾಡಿದ ನಾನು ಇಲ್ಲಿ ಪ್ರತಿ ದಿನವನ್ನೂ ಆನಂದವಾಗಿ ಕಳೆದೆ. ಪತ್ರಿಕೋದ್ಯಮದ ಕಾಲೇಜುಗಳು ಎಲ್ಲ ಕಡೆಗಳಲ್ಲಿ ಇವೆ. ಅಲ್ಲಿ ಓದುವ ಮಕ್ಕಳು ಈ ಪುಸ್ತಕ ಓದಬೇಕು ಎಂಬುದು ನನ್ನ ಕೋರಿಕೆ. ಅವರು ಒಳ್ಳೆಯ ಪತ್ರಕರ್ತರಾಗಿ ಹೇಗೆ ರೂಪುಗೊಳ್ಳಬೇಕು, ಅವರ ಮುಂದೆ ಇರುವ ಸಮಸ್ಯೆಗಳು ಏನು, ಉದ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳು ಎಂಥವು, ಇದರ ನಡುವೆ ಅದ್ಭುತ ಮಾದರಿ ಹಾಕಿಕೊಟ್ಟ, ಕಷ್ಟಪಟ್ಟ ಪತ್ರಕರ್ತರು ಎಂಥ ಹೆಜ್ಜೆಗುರುತುಗಳನ್ನು ಬಿಟ್ಟಿದ್ದಾರೆ. ಕೀರ್ತಿ ಶಿಖರ ಮುಟ್ಟುವುದು ಎಷ್ಟು ಕಷ್ಟ. ಅಲ್ಲಿಗೆ ತಲುಪಿದ ನಂತರ ಕೊಂಚ ಮೈಮರೆತರೂ ನಾವು ಹೇಗೆ ಪ್ರಪಾತಕ್ಕೆ ಬಿದ್ದು ಬಿಡಬಹುದು ಎಂಬಿತ್ಯಾದಿ ಕಥನಗಳೆಲ್ಲ ಇಲ್ಲಿ ತೆರೆದುಕೊಂಡಿವೆ. ಇಲ್ಲಿನ ಬಹುಪಾಲು ಲೇಖನಗಳು ‘ಪ್ರಜಾವಾಣಿ’ಯಲ್ಲಿ ಅಂಕಣದ ರೂಪದಲ್ಲಿ ಪ್ರಕಟಗೊಂಡಿವೆ.

‘ಪತ್ರಿಕೋದ್ಯಮಕ್ಕೆ ಇದು ಕೊನೆಯ ಅವಕಾಶವೇ?’ ಎಂಬ ಅಂಕಣ ಪ್ರಕಟವಾದ ದಿನ ಬೆಳಿಗ್ಗೆ ಬೆಳಿಗ್ಗೆಯೇ ನನ್ನ ವಿದ್ಯಾಗುರುಗಳಾಗಿದ್ದ ಎಂ ಎಂ ಕಲಬುರ್ಗಿಯವರು ನನಗೆ ಕರೆ ಮಾಡಿ, ‘ಇಂಥ ಲೇಖನ ಬರೆದ ನಿನ್ನ ಧೈರ್ಯ ಮೆಚ್ಚಬೇಕು. ಅದಕ್ಕೆ ಅವಕಾಶ ಕೊಟ್ಟ ನಿನ್ನ ಸಂಪಾದಕರಿಗೂ ಭಲೇ ಅನ್ನಬೇಕು’ ಎಂದಿದ್ದರು.”

ಈ ಕೃತಿಯಲ್ಲಿ ೩೦ ಅಧ್ಯಾಯಗಳಿವೆ. ಎಲ್ಲವೂ ಪತ್ರಿಕೋದ್ಯಮಕ್ಕೆ ಸಂಬಂಧ ಪಟ್ಟದ್ದು. ಪದ್ಮರಾಜರು ತಮ್ಮ ಸ್ವ ಅನುಭವಗಳನ್ನು ಬಹಳ ಸೊಗಸಾಗಿ ಕಥೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಮೊದಲ ಅಧ್ಯಾಯವಾದ ‘ಭಾವೀ ಪತ್ರಕರ್ತರಿಗೆ ಪ್ರೀತಿಯಿಂದ..’ ಇಲ್ಲಿ ಮುಂದಿನ ದಿನಗಳಲ್ಲಿ ಪತ್ರಕರ್ತರಾಗುವ ಮಂದಿ ಹೇಗಿದ್ದಾರೆ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಪತ್ರಕರ್ತ ಹುದ್ದೆಗೆ ಸಂದರ್ಶನ ಮಾಡಿದ ಅವರಿಗೆ ನಿರಾಶೆಯೇ ಕಾದಿತ್ತಂತೆ. ಬಹುತೇಕ ಅಭ್ಯರ್ಥಿಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವೇ ಇರಲಿಲ್ಲ. ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿದ್ದ ಡಿ ವಿ ಶೈಲೇಂದ್ರ ಕುಮಾರ್, ಬಿಹಾರಕ್ಕೆ ಹೋಗಿ ಅಲ್ಲಿಂದ ರಾಜ್ಯ ಸಭೆಗೆ ಆಯ್ಕೆಯಾದ ಉದಯ ಗರುಡಾಚಾರ್ ಇವರ ಬಗ್ಗೆ ಗೊತ್ತೇ ಇರಲಿಲ್ಲ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿದವರಿಗೂ ಚೆನ್ನಾಗಿ, ತಪ್ಪಿಲ್ಲದೆ ಬರೆಯಲು ಬರುತ್ತಿರಲಿಲ್ಲ. ಇದನ್ನೆಲ್ಲಾ ಭಾರೀ ಸ್ವಾರಸ್ಯಕರವಾಗಿ ಆದರೆ ಅಷ್ಟೇ ಬೇಸರದಿಂದ ಈ ಅಧ್ಯಾಯದಲ್ಲಿ ನಮ್ಮೆದುರು ತೆರೆದಿಟ್ಟಿದ್ದಾರೆ. 

ಇಲ್ಲಿರುವ ಎಲ್ಲಾ ಅಧ್ಯಾಯಗಳನ್ನು ಭಾವೀ ಪತ್ರಕರ್ತರು ಓದಲೇ ಬೇಕು. ಹೆಚ್ಚೆಚ್ಚು ಓದಿದಷ್ಟು ಮಾಹಿತಿ ದೊರೆಯುತ್ತದೆ. ಸುಮಾರು ೨೦೦ ಪುಟಗಳ ಈ ಕೃತಿಯನ್ನು ಪದ್ಮರಾಜ ದಂಡಾವತಿಯವರು ‘ನನಗೆ ಕಲಿಸಿದ ಎಲ್ಲಾ ಗುರುಗಳಿಗೆ’ ಅರ್ಪಣೆ ಮಾಡಿದ್ದಾರೆ.