ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪ್ರಹಾರ
ಮಲಯಾಳ ಸುದ್ದಿವಾಹಿನಿ ಮೀಡಿಯಾ ವನ್ ನ ಪ್ರಸಾರ ಹಕ್ಕುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರದ್ದು ಪಡಿಸಿದೆ. ಅದನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ. ಜತೆಗೆ, ಮಾಧ್ಯಮದ ಹಕ್ಕುಗಳನ್ನು ಇದು ಮೊಟಕು ಮಾಡುತ್ತದೆ. ಸುದ್ದಿವಾಹಿನಿಯ ಪರವಾನಗಿ ನವೀಕರಣಕ್ಕೆ ಕಳೆದ ತಿಂಗಳು ನಿರಾಕರಿಸಲಾಗಿತ್ತು. ಪರವಾನಗಿ ನವೀಕರಣಕ್ಕೆ ನಿರಾಕರಿಸುವ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರಣಗಳು ಇವೆ. ಸರ್ಕಾರದ ಸಮರ್ಥನೆಯು ಮನವರಿಕೆ ಆಗಿದೆ ಎಂದು ಕೇರಳ ಹೈಕೋರ್ಟ್ ನ ಏಕಸದಸ್ಯ ಪೀಠವು ಹೇಳಿದೆ. ಗುಪ್ತಚರ ವರದಿಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೋರ್ಟ್ ಗೆ ಸರ್ಕಾರವು ಹೇಳಿತ್ತು. ಸಹಜವಾಗಿಯೇ ಇಂತಹ ವರದಿಗಳು ಸಾರ್ವಜನಿಕವಾಗಿ ಲಭ್ಯ ಇರುವುದಿಲ್ಲ.
ಪರವಾನಗಿ ನವೀಕರಣಕ್ಕೆ ನಿರಾಕರಿಸಿದ ನಿರ್ಧಾರವು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಜಮಾತ್ -ಎ-ಇಸ್ಲಾಮಿ ಸಂಘಟನೆಯ ಬೆಂಬಲ ಈ ಸುದ್ದಿವಾಹಿನಿಗೆ ಇದೆ. ಈ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಯಾವ ಕಾರ್ಯಕ್ರಮ ಅಥವಾ ವಿಚಾರವು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಿತು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ರಾಷ್ಟೀಯ ಭದ್ರತೆಯನ್ನು ನೋಡಿಕೊಳ್ಳುವುದು ಕಾರ್ಯಾಂಗದ ಹೊಣೆಗಾರಿಕೆ, ಶಾಸಕಾಂಗ ಮತ್ತು ನ್ಯಾಯಾಂಗವು ‘ಪೂರಕವಾದ ಪಾತ್ರ'ಗಳನ್ನು ಮಾತ್ರ ನಿರ್ವಹಿಸುತ್ತವೆ ಎಂದು ಕೋರ್ಟ್ ಹೇಳಿದೆ. ಪೆಗಾಸಸ್ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವು ಪರವಾನಗಿ ರದ್ಧತಿ ಪ್ರಕರಣದಲ್ಲಿ ಪ್ರಸ್ತುತ ಅನಿಸದು ಎಂದೂ ಹೈಕೋರ್ಟ್ ಹೇಳಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರತೀ ಬಾರಿಯೂ ಸರ್ಕಾರವು ನುಣುಚಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಸುಪ್ರೀಂ ಕೋರ್ಟ್ ನ ಅಭಿಪ್ರಾಯವು ಖಾಸಗಿತನದ ಹಕ್ಕಿಗೆ ಅನ್ವಯ ಆಗುತ್ತದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಲ್ಲ ಎಂದು ಹೈಕೋರ್ಟ್ ವ್ಯಾಖ್ಯಾನಿಸಿದೆ. ಈ ವ್ಯಾಖ್ಯಾನವೂ ಪ್ರಶ್ನಾರ್ಹವೇ ಆಗಿದೆ.
ಸರ್ಕಾರ ಅನುಸರಿಸಿದ ಪ್ರಕ್ರಿಯೆ ಮತ್ತು ನ್ಯಾಯಾಲಯವು ತೆಗೆದುಕೊಂಡ ನಿಲುವು ಎಲ್ಲ ಮಾಧ್ಯಮ ಸಂಸ್ಥೆಗಳನ್ನೂ ದುರ್ಬಲಗೊಳಿಸುತ್ತದೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟು ಮಾಡಿದೆ ಎಂದು ನ್ಯಾಯಾಲಯಕ್ಕೆ ಹೇಳಿ ಯಾವುದೇ ಪತ್ರಿಕೆ ಅಥವಾ ಸುದ್ದಿವಾಹಿನಿಯನ್ನು ಸರ್ಕಾರವು ಮುಚ್ಚಬಹುದು. ಇದಕ್ಕಾಗಿ ಸರ್ಕಾರವು ಯಾವುದೇ ಪುರಾವೆಯನ್ನೂ ನೀಡಬೇಕಿಲ್ಲ. ಪೌರರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವು ಸರ್ಕಾರ ಮತ್ತು ನ್ಯಾಯಾಲಯಗಳ ನಡುವಣ ವಿಚಾರ ಮಾತ್ರ ಅಲ್ಲವೇ ಅಲ್ಲ.
ಕೃಪೆ: ಪ್ರಜಾವಾಣಿ ಪತ್ರಿಕೆ, ಸಂಪಾದಕೀಯ, ದಿ. ೧೨-೦೨-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ