ಮಾಧ್ಯಮ
ಕನ್ನಡ ಮಾಧ್ಯಮ ಅಥವಾ ಆಂಗ್ಲ ಮಾಧ್ಯಮ ಶಿಕ್ಷಣ ಯಾವುದು ಉತ್ತಮ? ಏಕೆ?
ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣ ಅಂದರೆ ಮಗುವಿನ ಬಾಲ್ಯಾವಸ್ಥೆಯ (೬ ರಿಂದ ೧೫ ವರ್ಷದ) ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲೇ ಆಗಬೇಕು ಎಂದು ನನ್ನ ಅಭಿಪ್ರಾಯ ಮತ್ತು ಶಿಕ್ಷಣ ತಜ್ಞರ , ಮಕ್ಕಳ ತಜ್ಞರ ಹಾಗೂ ಸಾಂಸ್ಕೃತಿಕ ಹರಿಕಾರರ ಅಭಿಪ್ರಾಯವೂ ಆಗಿದೆ.
೧) ಬಾಲ್ಯದಲ್ಲಿ ಮಗು ಶಾಲೆಗೆ ಹೋಗುವ ಮುನ್ನವೇ ಮಾತೃಭಾಷೆಯಲ್ಲಿ ಮಾತನಾಡುವುದು, ಶಬ್ಧಗಳ ಅರ್ಥ ತಿಳಿದಿರುವುದರಿಂದ ಆ ಭಾಷೆಯಲ್ಲಿಯೇ ಹೆಚ್ಚಿನ ವಿಷಯಗಳನ್ನು ಕಲಿಯಲು ಹೆಚ್ಚಿನ ಶ್ರಮ, ಸಮಯ ಅಗತ್ಯವಿರುವುದಿಲ್ಲ. ಅದ್ದರಿಂದ ಬಾಲ್ಯದ ಇತರ ಚಟುವಟಿಕೆಗಳಿಗೆ ಹೆಚ್ಚಿನ ಕಾಲಾವಕಾಶ ಸಿಗುತ್ತದೆ.
೨) ಬಾಲ್ಯದಲ್ಲಿ ಮಕ್ಕಳು ಶಾಲಾ ಕಲಿಕೆಯೊಡನೆ ತಮ್ಮ ಸಂಸ್ಕೃತಿ, ಕುಲ ಕಸುಬು,ಸಂಪ್ರದಾಯಗಳನ್ನು, ತಮ್ಮ ಪರಿಸರದ ಜೀವನ ಶೈಲಿಯನ್ನು ಕಲಿಯಬೇಕಾಗುತ್ತದೆ. ಹಾಗೆ ಕಲಿತ ಮಗು ದೊಡ್ಡವರಾದ ಮೇಲೆ ಸುಸಂಸ್ಕೃತರಾಗಿ ಆ ಪ್ರದೇಶದ ಸಾಂಸ್ಕೃತಿಕ ಹರಿಕಾರರಾಗುತ್ತಾರೆ. ಆದ್ದರಿಂದಲೇ ಹಿರಿಯರು ಹೇಳುವುದು ಅಯಾ ಭಾಷೆಯಿಂದ ಅಯಾ ಪ್ರದೇಶದ ಸಂಸ್ಕೃತಿ ಉಳಿದು ಬೆಳೆಯುತ್ತದೆಯೆಂದು.
೩) ನಮ್ಮ ದೇಶ ಬಹು ಭಾಷಾ, ಬಹು ಸಂಸ್ಕೃತಿಯ ದೇಶವಾದ್ದರಿಂದ ಮಗು ಶಾಲೆಯಲ್ಲಿ ಮಾತೃಭಾಷೆಯೊಂದಿಗೆ ಇತರ ದೇಶೀಯ ಭಾಷೆಗಳನ್ನು, ಆಂಗ್ಲ ಭಾಷೆಯನ್ನೂ ಕಲಿಯುವುದು ಕಷ್ಟವಾಗುವುದಿಲ್ಲ.
೪) ಬಾಲ್ಯಾವಸ್ಥೆಯಲ್ಲಿ ಮಾತೃಭಾಷೆಯ ಗಟ್ಟಿ ಅಡಿಪಾಯ ಹೊಂದುವುದರಿಂದ ಯೌವನಾವಸ್ಥೆಯಲ್ಲಿ ಯಾವ ವಿದ್ಯೆಯನ್ನು ಯಾವ ಭಾಷೆಯಲ್ಲದರೂ, ಯಾವ ದೇಶದಲ್ಲಾದರೂ ಕಲಿಯಲು ಆತ್ಮವಿಶ್ವಾಸ, ಧೈರ್ಯ, ಸಾಮರ್ಥ್ಯವಿರುತ್ತದೆ.
ಆದರೆ ಇಂದು ನಮ್ಮ ರಾಜ್ಯದಲ್ಲಿ ಮಗು ಮೂರು ವರ್ಷದಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತಹ ಒತ್ತಡ!ವಿದೆ. ಅದನ್ನು ಸರ್ಕಾರ ಕಾನೂನು ರಚಿಸಿ ಮಟ್ಟಹಾಕುವ ಬದಲು ತಾನೇ ಆರನೇ ತರಗತಿಯಿಂದ ಆಂಗ್ಲಭಾಷಾ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿರುವುದು ವಿಪರ್ಯಾಸವಲ್ಲವೇ? ಈಗಾಗಲೇ ನಗರ ಪ್ರದೇಶಗಳಲ್ಲಿ ಬಹು ಸಂಖ್ಯೆಯ ಖಾಸಾಗಿ ಆಂಗ್ಲ ಮಾಧ್ಯಮ ಶಾಲೆಗಳಿದ್ದು ಅವು ಗ್ರಾಮೀಣ ಪ್ರದೇಶಕ್ಕೂ ಹರಡಿ ಮಾಡಿದ ಅನಾಹುತಗಳೆಂದರೆ
೧) ಮಕ್ಕಳಿಗೆ ಹೊರೆಯಾಗುವಷ್ಟು ಪುಸ್ತಕಗಳು ಮತ್ತು ಪಾಲಕರಿಗೆ ಹೊರೆಯಾಗುವಷ್ಟು ಪೀಸ್, ಡೊನೇಶನ್
೨) ಪ್ರಾಥಮಿಕ ಹಂತದಲ್ಲಿ ಏಕರೂಪದ ಪಠ್ಯಪುಸ್ತಕಗಳಿಲ್ಲದೆ ಮನಸೋ ಇಚ್ಚೆ ಬೆಲೆಯ ಖಾಸಾಗಿ ಸಂಸ್ಥೆಯ ಪಠ್ಯ ಪುಸ್ತಕಗಳು.
೩) ಮಕ್ಕಳಿಗೆ ಶಾಲಾ ಕಲಿಕೆಯ ಜೊತೆ ಕಡ್ಡಾಯ ಟ್ಯೂಶನ್ ಕ್ಲಾಸ್ ಹಾವಳಿ
೪) ಮಕ್ಕಳಿಗೆ "ಶಿಕ್ಷಣ ಕಲಿಕೆ ಹಣ ಸಂಪಾದನೆಗೆ ಮತ್ತು ಉನ್ನತ ನೌಕರಿ ಪಡೆಯಲಿಕ್ಕೆ" ಎಂಬ ಬೋಧನೆ.
೫) ಮಕ್ಕಳಿಗೆ ಕುಲ ಕಸುಬು ಸಂಪ್ರದಾಯಗಳ ಬಗ್ಗೆ ಕೀಳರಿಮೆ ಬರುವಂತಹ ಶಿಕ್ಷಣ.
ಆದ್ದರಿಂದ ಪಾಲಕರೇ ಯಾವುದೋ ಭ್ರಮೆಗೊಳಗಾಗಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದೆ ಅವರಿಗೆ ಹಿತವಾಗುವಂತ, ಬಾಲ್ಯವನ್ನು ಸುಂದರವಾಗಿ ಸಂತೋಷವಾಗಿ ಕಳೆಯುವಂತ ಶಿಕ್ಷಣ ನೀಡುವುದು ಉಚಿತವಲ್ಲವೇ?
ಈಗಾಗಲೇ ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಕನ್ನಡ ಕಥೆ ಪುಸ್ತಕ,ಪತ್ರಿಕೆಗಳನ್ನು ಓದುವುದಿಲ್ಲ. ಮಾತೃಭಾಷೆಯಲ್ಲಿ ಮಾತನಾಡುವುದಿಲ್ಲ ಮಾತನಾಡಿದರೂ ಅದು ಶುದ್ಧವಾಗಿರುವುದಿಲ್ಲ. ಶಾಲೆಯಲ್ಲಿ ಮಾತೃಭಾಷೆಯನ್ನು ಒಂದು ಭಾಷೆಯಾಗಿ ಕಲಿಯುತ್ತಿದ್ದರೂ ಅದು ಅಂಕ ಗಳಿಸುವುದಕ್ಕಾಗಿಯೇ ಹೊರತು ಆಸಕ್ತಿಯಿಂದಲ್ಲ. ಅವರ ವೇಷಭೂಷಣ, ಅಹಾರ ಎಲ್ಲವೂ ಪಾಶ್ಚಾತ್ಯರ ಅನುಕರಣೆಯಾಗಿರುತ್ತದೆ. ದೇಶೀಯ ಸಂಸ್ಕೃತಿ, ಗ್ರಾಮೀಣ ಕಲೆ,ಹಾಡು ಹಸೆ ಇತ್ಯಾದಿಗಳು ಪೂರ್ವ ಕಾಲದ ಪಳೆಯುಳಿಕೆ,ಪುರಾತನ ಸಂಸ್ಕೃತಿ ಎಂದು ತಿಳಿದಿರುತ್ತಾರೆ. ಇದು ಈಗಲೂ ಪ್ರಚಲಿತದಲ್ಲಿದೆ ಇದನ್ನು ನಮ್ಮದಾಗಿಸಿಕೊಳ್ಳಬೇಕು ಇದರೊಂದಿಗೆ ಬೆರೆಯಬೇಕು ಎಂಬ ಭಾವನೆಯಿರುವುದಿಲ್ಲ. ಈ ವಿಷಯಗಳ ಬಗ್ಗೆ ನೀವೇ ಸ್ವತಹ ರಾಜ್ಯಾದ್ಯಂತ ಸಂಚರಿಸಿ ಮಾಹಿತಿ ಪಡೆದುಕೊಳ್ಳಿ. ಆಗ ನಿಮಗೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಾಗಿರಬೇಕೋ ಅಥವಾ ಆಂಗ್ಲವೋ ಎಂದು ತಿಳಿಯುತ್ತದೆ.