ಮಾನವತಾವಾದಿಯ ಹೆಜ್ಜೆಗಳು.... (ಭಾಗ 1)

ಮಾನವತಾವಾದಿಯ ಹೆಜ್ಜೆಗಳು.... (ಭಾಗ 1)

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ.

ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ ದೇವರಿಗಿಂತ  ಅತಿ ಹೆಚ್ಚು ಆರಾಧಿಸಲ್ಪಡುವ ವ್ಯಕ್ತಿತ್ವ. ಅವರನ್ನು ಪ್ರತಿ ಕ್ಷಣ ನೆನೆಯುತ್ತಲೇ ಇರುತ್ತಾರೆ. ಇನ್ನು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಸ್ವಲ್ಪ ಮಟ್ಟಿಗೆ ಗೌರವ ಪೂರ್ವಕ ಅಭಿಮಾನ ಬೆಳೆಸಿಕೊಂಡಿದ್ದಾರೆ. ಇಲ್ಲಿಯೂ ಅವರನ್ನು ಅರ್ಥಮಾಡಿಕೊಂಡವರು ಕೆಲವರು ಮಾತ್ರ. ಉಳಿದವರು ಬೇರೆ ಪ್ರಭಾವಕ್ಕೆ ಒಳಗಾಗಿ ಮೀಸಲಾತಿಯ ಕಾರಣದಿಂದಾಗಿ ಒಂದಷ್ಟು ಅಸಮಾಧಾನ ಹೊಂದಿದ್ದಾರೆ. ಮತ್ತೆ ಮೇಲ್ವರ್ಗದವರು ಸಮಾನತೆಯ ಸಂವಿಧಾನದ ಕಾರಣಕ್ಕಾಗಿ, ಅವರ ಮನು ಧರ್ಮ ಶಾಸ್ತ್ರದ ಅನೇಕ ಆಚರಣೆಗಳಿಗೆ ಮಹತ್ವ ದೊರೆಯದ ಕಾರಣದಿಂದಾಗಿ ಒಂದಷ್ಟು ಅತೃಪ್ತಿ ವ್ಯಕ್ತಪಡಿಸುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೆ ನೀಡುವುದಿಲ್ಲ.

2023 ರ ಈ ಸಮಯದಲ್ಲಿ, ಬಲಪಂಥೀಯ ಚಿಂತನೆಯ ಪಕ್ಷ ಬಹುಮತದಿಂದ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ, ದೇಶದ ಸಾಮಾಜಿಕ ಸಾಮರಸ್ಯ ಪ್ರಕ್ಷುಬ್ಧ ವಾತಾವರಣದಲ್ಲಿ  ದಲಿತ ಸಮುದಾಯಗಳಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸುವ ಅವಶ್ಯಕತೆ ಇಲ್ಲ.  ಹಿಂದುಳಿದ, ಅಲ್ಪಸಂಖ್ಯಾತ, ಮೇಲ್ವರ್ಗದ ಅದರಲ್ಲೂ ಮುಖ್ಯವಾಗಿ ಸಾಮಾನ್ಯ ಯುವ ಸಮುದಾಯಕ್ಕೆ ಅವರ ಮನಸ್ಸಿನಾಳಕ್ಕೆ ಅವರಿಗೆ ಅರ್ಥವಾಗುವಂತೆ ಅಂಬೇಡ್ಕರ್ ಅವರನ್ನು ಪರಿಚಯಿಸುವುದು ಬಹಳ ಮುಖ್ಯವಾಗಿದೆ. ಅಂಬೇಡ್ಕರ್ ಅವರ ಬಗ್ಗೆ ನಮಗೆ ತಿಳಿದಿದೆ ಎಂದು ಬುದ್ದಿ ಪ್ರದರ್ಶನ ಮಾಡುವುದಕ್ಕಿಂತ ಎಲ್ಲಾ ಆಯಾಮಗಳಲ್ಲಿ ಅಂಬೇಡ್ಕರ್ ಎಷ್ಟು ಪ್ರಸ್ತುತರಾಗುತ್ತಾರೆ ಅವರಿಂದ ನಾವು ಅಳವಡಿಸಿಕೊಳ್ಳಬಹುದಾದದ್ದು ಏನು ಎಂಬುದನ್ನು ಗಮನಿಸೋಣ.

ಆ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಈ ಲೇಖನದಲ್ಲಿ. ಕಾರಣವೇನೇ ಇರಲಿ, ಸಂದರ್ಭ ಏನೇ ಇರಲಿ, ಸಮರ್ಥನೆ ಏನೇ ಇರಲಿ, ಭಾರತೀಯ ಸಮಾಜದಲ್ಲಿ ವರ್ಣಾಶ್ರಮ ವ್ಯವಸ್ಥೆಯೊಂದಿಗೆ ಜಾತಿ ಎಂಬ ಭಯಂಕರ ಭೂತವೊಂದು ಸೃಷ್ಟಿಯಾಯಿತು. ಅದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಅತಿಮುಖ್ಯ ಭಾಗವಾಯಿತು. ಕೊನೆಗೆ ಮನುಷ್ಯನ ನರನಾಡಿ ರಕ್ತ ಉಸಿರು ಹೃದಯ ಮೆದುಳು ಎಲ್ಲದರಲ್ಲೂ ಆಕ್ರಮಿಸಿಕೊಂಡಿತು. ಈ ಕ್ಷಣಕ್ಕೂ ಅದು ಬೆಳೆಯುತ್ತಲೇ ಹೋಗುತ್ತಿದೆ.

ಪ್ರಜಾಪ್ರಭುತ್ವ, ಸಂವಿಧಾನ, ಮಹಾನ್ ಸಮಾಜ ಸುಧಾರಕರು ಯಾರಿಂದಲೂ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಜಾತಿ ವ್ಯವಸ್ಥೆಯ ಅತ್ಯಂತ ಕೆಳಸ್ತರದ ಒಂದು ವರ್ಗವೇ ದಲಿತ ಸಮುದಾಯ. ಕೇವಲ ಕೆಳ ಸ್ತರ ಮಾತ್ರವಲ್ಲ ಕಾಡು ಮೃಗಗಳು ವಾಸಿಸುವ ಅಥವಾ ಪಶುಗಳು ವಾಸಿಸುವ  ಸ್ಥಳಕ್ಕಿಂತ ಕಡೆಯದಾದ ಊರ ಹೊರಗಿನ ಅತ್ಯಂತ ಕೆಟ್ಟ ಜಾಗಕ್ಕೆ ಇವರನ್ನು  ಅಟ್ಟಲಾಯಿತು ಮತ್ತು ಮುಟ್ಟಿಸಿಕೊಳ್ಳದ ಅಸ್ಪೃಶ್ಯರು ಎಂದು ಕರೆಯಲಾಯಿತು. ಅದಕ್ಕೆ ತಕ್ಕಂತೆ ಬಡತನ ಅಜ್ಞಾನ ಮುಂತಾದ ಕಾರಣಗಳಿಂದ ಈ ಜನರೂ ಸಹ ಅತ್ಯಂತ ಅಸಹ್ಯ ಕೀಳು ಮಟ್ಟದ ಬೇರಾರು ಊಹಿಸದ ಇತರರ ಮಲಮೂತ್ರಗಳ ಶುದ್ದೀಕರಣ, ಚಪ್ಪಲಿ ಹೊಲೆಯುವುದು, ಕಲ್ಲು ಹೊಡೆಯುವುದು, ಮೋರಿ ಸ್ವಚ್ಛಗೊಳಿಸುವುದು ಮುಂತಾದ ನಿಕೃಷ್ಟ ಮತ್ತು ಶ್ರಮದಾಯಕ ಕೆಲಸಗಳನ್ನು ಹೊಟ್ಟೆ ಪಾಡಿಗಾಗಿ ಮಾಡಬೇಕಾಯಿತು. ಆಯ್ಕೆಗಳೇ ಇಲ್ಲದೆ ಸತ್ತ ಪ್ರಾಣಿಗಳನ್ನು ತಿಂದು ಬದುಕಬೇಕಾಯಿತು.

ಇದು ಕೇವಲ ಕೆಲವು ವರ್ಷಗಳಲ್ಲ, ಶತಶತಮಾನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಿತು. ಊಟಕ್ಕೇ ಪರದಾಡುವಾಗ ಇನ್ನು ಬಟ್ಟೆ ವಸತಿ ಶಿಕ್ಷಣದ ಬಗ್ಗೆ ಯೋಚಿಸುವುದು ಎಲ್ಲಿಂದ ಬರಬೇಕು.! ಕೆಲವು ಸಣ್ಣ ಪುಟ್ಟ ಪ್ರಯತ್ನಗಳು ಮತ್ತು ಬುದ್ಧ, ಬಸವಣ್ಣ, ಪುಲೆ ಮುಂತಾದವರ ಅತ್ಯುಗ್ರ ಚಿಂತನೆ ಮತ್ತು ಹೋರಾಟಗಳ ನಡುವೆಯೂ ಈ ಸಮಾಜದ ಅಸ್ಪೃಶ್ಯತೆ ನಿವಾರಣೆಯಾಗಲೇ ಇಲ್ಲ. ಜನರಲ್ಲಿ ಜಾಗೃತಿ ಮೂಡಲೇ ಇಲ್ಲ. ಹುಟ್ಟು ಸಾವು ಕರ್ಮ ಪುನರ್ಜನ್ಮ ಪಾಪ ಪುಣ್ಯ ಮುಂತಾದ ಪರಿಕಲ್ಪನೆಯ ನೆರಳಲ್ಲಿ ಜಾತೀಯತೆಯನ್ನು ಪೋಷಿಸುತ್ತಾ ಸಮರ್ಥಿಸುತ್ತಾ ಮುಂದುವರಿಸುತ್ತಾ ಬರುತ್ತಲೇ ಇದ್ದಾರೆ. 

ಇಂತಹ ಒಂದು ಅಸ್ಪೃಶ್ಯತಾ ಸಮುದಾಯದಲ್ಲಿ ಹುಟ್ಟಿದ ಒಬ್ಬ ಹುಡುಗ ಅದು ಯಾವ ಮಾಯೆಯಿಂದ ವಿಶ್ವದ ಆಧ್ಯಾತ್ಮದ ತವರೂರು ಎಂದು ಕರೆಯಲ್ಪಡುವ ಈ ಬೃಹತ್ ವೈವಿಧ್ಯಮಯ ಭಾರತಕ್ಕೆ ನೀತಿ ನಿರೂಪಣೆ, ದಿಕ್ಕುಗಳನ್ನು ನಿರ್ಧರಿಸುವ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಲು ಹೇಗೆ ಸಾಧ್ಯವಾಯಿತು ಎಂದು ಮನಸ್ಸು ಈಗಲೂ ಚಿಂತಿಸುತ್ತಿದೆ. ಆಗಿನ್ನೂ ದಲಿತ ಸಮುದಾಯಗಳು ಜಾಗೃತವಾಗಿರಲಿಲ್ಲ, ಆದರೂ ಊಹಿಸಲಸಾಧ್ಯ ಅಧ್ಯಯನ ಮತ್ತು ಪ್ರತಿಭೆಯಿಂದ ಅಂಬೇಡ್ಕರ್ ಆ ಸ್ಥಾನ ಅಲಂಕರಿಸಿದ ಘಟನೆಗೆ ಈ ನೆಲ ‌ಸಾಕ್ಷಿಯಾಗಿದೆ. ಈಗ ಅಂಬೇಡ್ಕರ್ ವ್ಯಕ್ತಿತ್ವಕ್ಕಿಂತ ಅವರ ಚಿಂತನೆಗಳು ಹೇಗೆ ಭಾರತೀಯ ಸಮಾಜಕ್ಕೆ ಮಹತ್ವಪೂರ್ಣ ಎಂಬುದನ್ನು ಆಧುನಿಕ ಯುವಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯತೆ ಇದೆ.

ಕಣ್ಣು ಕುಕ್ಕುವಂತೆ  ಮೀಸಲಾತಿಯನ್ನೇ ದೊಡ್ಡದು ಮಾಡಿ ಅಂಬೇಡ್ಕರ್ ಅವರ ಚಿಂತನೆ ಕುಗ್ಗಿಸುವ ಕೆಲಸ ಕೆಲವು ವರ್ಗಗಳಿಂದ ನಿರಂತರವಾಗಿ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಆಕ್ರೋಶ ಭರಿತ ದಲಿತ ಸಮುದಾಯದ ಕೆಲವು ಯುವಕರು ಸುಲಭವಾಗಿ ಅದರ ಬಲೆಯೊಳಗೆ ಬೀಳುತ್ತಿದ್ದಾರೆ. ಶತಶತಮಾನಗಳ ಸ್ವಾಭಾವಿಕ ಮೀಸಲಾತಿ, ಜಾತಿಯ ಅಸಮಾನತೆ, ಅದೇ ನೆಪದಲ್ಲಿ ಮನುಷ್ಯರನ್ನು ಪ್ರಾಣಿಗಳಂತೆ ನಡೆಸಿಕೊಂಡದ್ದು, ಈಗಲೂ ದಲಿತ ಕೇರಿಗಳ ಪ್ರವೇಶ, ದಲಿತರೊಂದಿಗೆ ಊಟ ಮಾಡುವುದೇ ಬಹುದೊಡ್ಡ ಸುಧಾರಣೆ ಎಂಬಂತೆ ಚಿತ್ರಿಸುತ್ತಾ, ಅವರ ಕ್ಷಮಿಸಲಾಗದ ತಪ್ಪುಗಳನ್ನು ಮುಚ್ಚಿ ಹಾಕಿ ಸಾಂವಿಧಾನಿಕ ಮೀಸಲಾತಿಯೇ ದೊಡ್ಡ ಅಸಮಾನತೆ ಎಂದೇ ಬಿಂಬಿಸಲಾಗುತ್ತಿದೆ. ಆ ಆಕ್ರಮಣಕ್ಕೆ ವಿರುದ್ದವಾಗಿ ರಕ್ಷಣಾತ್ಮಕ ತಂತ್ರಗಳಿಗೇ ಮಹತ್ವ ನೀಡಿ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಾ ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿಲ್ಲ. 

ಎಲ್ಲಾ ವರ್ಗದ ಮಹಿಳೆಯರು, ಕಾರ್ಮಿಕರು, ಸಾಮಾನ್ಯ ವರ್ಗದವರ ಅಭಿವ್ಯಕ್ತಿ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಈ ಯಾವುದನ್ನೇ ಆಗಲಿ ಅಂಬೇಡ್ಕರ್ ಹೊರತುಪಡಿಸಿ ಬೇರೆ ಯಾರೇ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರೆ ಇಷ್ಟೊಂದು ಸ್ವಾತಂತ್ರ್ಯ ಸಮಾನತೆ ಪಡೆಯುತ್ತಿರಲಿಲ್ಲ. ಆ ಜಾಗೃತಿ ಮತ್ತು ಕೃತಜ್ಞತೆ ನಮ್ಮ ಜನರಿಗೆ ಇಲ್ಲದಿರುವುದು ಒಂದು ದುರಂತ.

ಇನ್ನೂ ಒಂದು ಆಶ್ಚರ್ಯಕರ ವಿಷಯವೆಂದರೆ, ಭಾರತದ ವೇದ ಉಪನಿಷತ್ತು, ಸ್ಮೃತಿಗಳು, ಪುರಾಣಗಳು, ಧಾರ್ಮಿಕ ಗ್ರಂಥಗಳು ಎಲ್ಲವನ್ನೂ ಒಂದು ಸಮಚಿತ್ತ ಮನೋಭಾವದಿಂದ ಓದಿ ಅಧ್ಯಯನ ಮಾಡಿ ಅರ್ಥಮಾಡಿಕೊಂಡು, ವಾಸ್ತವಕ್ಕೆ ಹತ್ತಿರದ ಅಭಿಪ್ರಾಯ ರೂಪಿಸಿಕೊಂಡ ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸಲು ಸಾಧ್ಯವಾದ ಏಕೈಕ ವ್ಯಕ್ತಿ ಅಂಬೇಡ್ಕರ್ ಎಂದು ಬಹುಶಃ ಖಚಿತವಾಗಿ ಹೇಳಬಹುದು. ಪಾಶ್ಚಾತ್ಯ ಸಂಸ್ಕೃತಿ ಮತ್ತು ಸಂವಿಧಾನಗಳ ಜೊತೆಗೆ ಇದನ್ನು ಸಮೀಕರಿಸಿ ಮಣ್ಣಿನ ಗುಣ ಕಾಪಾಡುವ ಸಾಮರ್ಥ್ಯ ಅಂಬೇಡ್ಕರ್ ಅವರಿಗೆ ಇತ್ತು. ಅದನ್ನು ಸಂವಿಧಾನದಲ್ಲಿ ಮಾಡಿದ್ದಾರೆ. ಆದರೆ ಯಾಕೋ ಇದು ಸಾಮಾನ್ಯ ಜನರ ತಿಳಿವಳಿಕೆ ಸಿಗುತ್ತಿಲ್ಲ.

(ಇನ್ನೂ ಇದೆ)

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು