ಮಾನವತಾವಾದಿಯ ಹೆಜ್ಜೆಗಳು.... (ಭಾಗ 2)
ಇದಕ್ಕೆ ಕೆಲವು ಐತಿಹಾಸಿಕ ಕಾರಣಗಳು ಸಹ ಇವೆ. ಕೆಲವು ಜನರ ಮನಸ್ಸಿಗೆ ಬೇಸರವಾಗಬಹುದು ಅಥವಾ ಕೋಪ ಬರಬಹುದು. ಆದರೂ ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತೇನೆ. ಹಿಂದಿನಿಂದಲೂ ಹಿಂದೂ ಧರ್ಮದ ಮೂಲಭೂತವಾದದ ಒಂದು ವರ್ಗ ಸಂವಿಧಾನದ ಜಾತಿಯ ಮೀಸಲಾತಿ, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಸ್ವಾತಂತ್ರ್ಯವನ್ನು ವಿರೋಧಿಸುತ್ತಿತ್ತು. ಅದಕ್ಕೆ ಕಾರಣರಾದ ಅಂಬೇಡ್ಕರ್ ಬಗ್ಗೆ ಅಸಮಾಧಾನವಿತ್ತು. ಆದರೆ ಸಾಮಾನ್ಯ ವರ್ಗದವರಿಗೆ ಅಂಬೇಡ್ಕರ್ ಬಗ್ಗೆ ಅಭಿಮಾನವಿತ್ತು. ಆದರೆ ಕಾಂಶಿರಾಂ ಮತ್ತು ನಂತರದಲ್ಲಿ ಮಾಯಾವತಿಯವರ ಅಂಬೇಡ್ಕರ್ ವಾದಿಗಳ ಸಂಘಟನೆ, ರಾಜಕೀಯ ಪ್ರವೇಶ, ಚುನಾವಣಾ ತಂತ್ರಗಾರಿಕೆ, ಅಧಿಕಾರಕ್ಕೇರುವ ಪ್ರಯತ್ನ ಎಲ್ಲವೂ ಸೇರಿ ಎಂಬತ್ತರ ದಶಕದಲ್ಲಿ ಒಂದು ಆಕ್ರಮಣಕಾರಿ ನೀತಿಯನ್ನು ಅಳವಡಿಸಿಕೊಂಡಿತು. ಆಗ ಇಡೀ ದೇಶದಲ್ಲಿ ಪ್ರಬಲವಾಗಿದ್ದ ಕಾಂಗ್ರೇಸ್ ಮತ್ತು ಮಹಾತ್ಮ ಗಾಂಧಿಯವರ ವಿರುದ್ಧದ ದ್ವೇಷದ ಭಾಷಣಗಳನ್ನು ತನ್ನ ತಂತ್ರವಾಗಿಸಿತು. ಅಲ್ಲಿಂದ ಅಂಬೇಡ್ಕರ್ ಒಂದು ವರ್ಗದ ಸ್ವತ್ತಾಗತೊಡಗಿದರು.
ಆಗಿನ ಸನ್ನಿವೇಶದಲ್ಲಿ ಅಂಬೇಡ್ಕರ್ ಅವರು ಗಾಂಧಿಯನ್ನು ಕಟುವಾಗಿ ಟೀಕಿಸುತ್ತಿದ್ದರು. ಅದನ್ನೇ ಉದಾಹರಣೆಗೆ ಇಟ್ಟುಕೊಂಡು ಗಾಂಧಿಯನ್ನು ಅತ್ಯಂತ ದುಷ್ಟರಂತೆ ಚಿತ್ರಿಸಿ ದ್ವೇಷಿಸಲಾಯಿತು. ಅದು ಚಿಂತನೆಗಳ ವಿರೋಧಕ್ಕಿಂತ ಹಿಂಸೆಯ ರೂಪ ಪಡೆಯಿತು. ಇದೇ ಸಮಯದಲ್ಲಿ ಹಿಂದುತ್ವದ ಮೂಲಭೂತವಾದ ಅಯೋಧ್ಯೆ ವಿವಾದವನ್ನು ಉಪಯೋಗಿಸಿಕೊಂಡು ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಪ್ರಾರಂಭಿಸಿತು. ಎಡ ಬಲ ಪಂಥಗಳ ನಡುವೆ ಅಂಬೇಡ್ಕರ್ ವಾದವೂ ಪ್ರತ್ಯೇಕ ಅಸ್ತಿತ್ವ ಪಡೆಯಿತು. ಇದು ಅಂಬೇಡ್ಕರ್ ನಾನಾ ಕಾರಣದಿಂದಾಗಿ ಒಂದು ವರ್ಗದ ನಾಯಕರಾಗಿ ಸಾಮಾನ್ಯ ಜನರಲ್ಲಿ ಮೂಡಲು ಕಾರಣವಾಯಿತು.
ಇದು ದಲಿತ ಜಾಗೃತಿಯ ದೃಷ್ಟಿಯಿಂದ ಉತ್ತಮ ನಡೆಯೂ, ಅಂಬೇಡ್ಕರ್ ಚಿಂತನೆಯ ಪ್ರಚಾರದ ವಿಚಾರದಲ್ಲಿ ಸ್ವಲ್ಪ ತಪ್ಪು ನಡೆ ಎಂದೂ ಭಾವಿಸಬಹುದು. ವಾಸ್ತವವಾಗಿ ಈಗ ಬಹುಜನ ಪಕ್ಷ ಅಥವಾ ದಲಿತ ಸಂಘಟನೆಗಳು ಬಿಂಬಿಸುವಷ್ಟು ಆಕ್ರಮಣಕಾರಿ ಮನೋಭಾವ ಅಂಬೇಡ್ಕರ್ ಹೊಂದಿರಲಿಲ್ಲ ಎಂದು ಅವರ ಬರಹಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ.
ಹಿಂದೂ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸುವಾಗಲೂ ಅಂಬೇಡ್ಕರ್ ವಿವೇಚನೆ, ವಿಮರ್ಶೆ, ಸಂಯಮ ಮರೆಯುತ್ತಿರಲಿಲ್ಲ. ಓದುಗ ಅಥವಾ ಕೇಳುಗ ಹೌದು ಹೌದು ಎನ್ನುವಷ್ಟು ಪ್ರಬುದ್ದತೆ ಅವರಲ್ಲಿತ್ತು. ಈಗಿನ ಕೆಲವು ಭಾಷಣಕಾರರಂತೆ ಬೆಂಕಿ ಉಗುಳುತ್ತಿರಲಿಲ್ಲ. ಆಗಿನ ಕಾಲದಲ್ಲೇ ಹಿಂದುತ್ವದ ಕೆಲವು ಆಚರಣೆಗಳ ವಿರುದ್ಧ ಮಾತನಾಡಿಯೂ ಅವರು ಜೀವಂತ ಉಳಿದರು ಎಂಬುದು ಇಲ್ಲಿ ಬಹುಮುಖ್ಯವಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಈಗಲೂ ಮೂಲಭೂತವಾದಿಗಳ ವಿರುದ್ಧ ಮಾತನಾಡಿ ಬದುಕುಳಿಯುವುದು ತುಂಬಾ ಕಷ್ಟವಾಗಿದೆ.
ಆ ಸಂಯಮ, ಸಭ್ಯತೆ, ಸಂಸ್ಕಾರ, ಪಾಂಡಿತ್ಯವನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ. ಇಂದಿನ ಆಧುನಿಕ ಯುವ ಸಮುದಾಯ ಆಕ್ರೋಶದ ಮೊರೆ ಹೋಗುತ್ತಿದೆ. ಅದರ ನೆರಳಿನಲ್ಲಿ ಅಂಬೇಡ್ಕರ್ ಒಂದು ಮಿತಿಗೆ ಒಳಪಡುತ್ತಿದ್ದಾರೆ. ಮೀಸಲಾತಿಯೂ ಸೇರಿ ಅಂಬೇಡ್ಕರ್ ಚಿಂತನೆಗಳನ್ನು ದಲಿತರ ಹೊರತಾಗಿ ಇತರರಿಗೆ ಮುಖ್ಯವಾಗಿ ಯುವ ಸಮುದಾಯಕ್ಕೆ ತಿಳಿಸಿಕೊಡುವಾಗ ಅತ್ಯಂತ ತಾಳ್ಮೆಯಿಂದ ವಿವರಿಸಬೇಕಾಗುತ್ತದೆ. ನಾವು ಈಗ ವಾಸಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಸೂಕ್ಷ್ಮಗಳನ್ನು ಗಮನಿಸಿ ಅವರ ಮಾನಸಿಕ ಹಂತ ಗುರುತಿಸಿ ಮಾತನಾಡಬೇಕಾಗುತ್ತದೆ. ನಮ್ಮ ಪಾಂಡಿತ್ಯವನ್ನು ಅವರ ಮುಂದೆ ಪ್ರದರ್ಶಿಸಿದರೆ ಅದು ಜೀವ ಇಲ್ಲದ ಪ್ರವಚನದಂತೆ ಆಗುತ್ತದೆ. ಯಾವುದೇ ರೀತಿಯ ಪ್ರಚೋದನೆಗೂ ಒಳಗಾಗಾಬಾರದು.
ಮಾನವೀಯತೆ, ಸಮಾನತೆ, ಸಂವಿಧಾನ ಇವುಗಳನ್ನು ಹೇಳುವಾಗ ನ್ಯಾಯದ ದಂಡ ಸಮಾನಾಂತರವಾಗಿ ಇರುವಂತೆ ನೋಡಿಕೊಳ್ಳಬೇಕು. ನಮಗೆ ಅನುಕೂಲಕರ ಅಂಶಗಳನ್ನು ಮಾತ್ರ ಉಲ್ಲೇಖಿಸುವ ಪಲಾಯನವಾದಿ ಸೂತ್ರ ಅಳವಡಿಸಿಕೊಳ್ಳಬಾರದು. ನಮ್ಮ ವಿರೋಧಿ ಚಿಂತನೆಯವರು ನಮ್ಮ ಮೇಲೆ ವಿಶ್ವಾಸ ಇಡುವಂತಿರಬೇಕು. ನಿಜ, ಈಗಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಇದು ತುಂಬಾ ಕಷ್ಟ. ಆದರೆ ಅಂಬೇಡ್ಕರ್ ವಾದದ ಜಾಗೃತ ಮನಸ್ಥಿತಿಯ ಜನ ಇದರ ಜವಾಬ್ದಾರಿ ಹೊರಬೇಕಿದೆ.
ಶಿಕ್ಷಣ ಸಂಘಟನೆ ಹೋರಾಟದ ಮೂಲ ಆಶಯಕ್ಕೆ ಹೊಸ ಆಯಾಮ ನೀಡಬೇಕಿದೆ. ಮೀಸಲಾತಿಯನ್ನು ಮೀರಿ ಭಾರತೀಯ ಸಮಾಜದ ಜೀವನ ಶೈಲಿಯನ್ನು ದಲಿತ ಪ್ರಜ್ಞೆಯೊಂದಿಗೆ ದಲಿತ ಪ್ರತಿಭಾ ಸಾಮರ್ಥ್ಯದ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಹೆಚ್ಚು ಚಿಂತಿಸಬೇಕಿದೆ. ಒಮ್ಮೆ ಈ ಜೀವನ ವಿಧಾನ ವೈಚಾರಿಕ ಪ್ರಜ್ಞೆ ಮುನ್ನಲೆಗೆ ಬಂದರೆ ಆಗ ಸಮ ಸಮಾಜದ ಕನಸು ತಾನೇತಾನಾಗಿ ಈಡೇರುತ್ತದೆ.
ಇಲ್ಲಿ ಮುಖ್ಯವಾಗಿ ಸಮ ಸಮಾಜ ಎಂದರೆ ಇಡೀ ಮನುಷ್ಯ ವರ್ಗ ಒಂದು ಎಂಬುದೇ ಹೊರತು ಮೇಲ್ವರ್ಗದ ಮೇಲಿನ ದ್ವೇಷ ಸಾಧನೆಯಲ್ಲ ಎಂಬುದನ್ನು ಈ ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾದ ಜವಾಬ್ದಾರಿ ಸಹ ಇದೆ. ಬರೆಯುತ್ತಾ ಹೋದಂತೆ ಅಕ್ಷರಗಳು ವಾಕ್ಯಗಳು ಅದಕ್ಕೆ ತಕ್ಕ ಭಾವನೆಗಳೂ ಮೂಡುತ್ತಲೇ ಇರುತ್ತದೆ. ಏನಾದರಾಗಲಿ ಅಂಬೇಡ್ಕರ್ ಅವರನ್ನು ಹೊಸ ರೂಪದಲ್ಲಿ ಈ ಸಮಾಜಕ್ಕೆ ಅರ್ಥ ಮಾಡಿಸುವ ಜವಾಬ್ದಾರಿ ನಮ್ಮೆಲ್ಲರದು. ಅದನ್ನು ನಿಭಾಯಿಸುವ ಆಶಯದೊಂದಿಗೆ...
ಅಂಬೇಡ್ಕರ್.....
ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದಾ ನೀನು ಅಪ್ಪಿಕೊಳ್ಳುವವನಂತಾದೆ,
ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ,
ಒಂಟಿ ಸಲಗವಾಗಿ ಬಡಿದಾಡಿದ ನೀನು ಕೋಟ್ಯಾಂತರ ಜನರು ಆರಾಧಿಸುವಂತಾದೆ,
ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ,
ಶಾಲೆಗೆ ಸೇರಲು ಒದ್ದಾಡಿದ ನೀನೇ ಪಠ್ಯವಾದೆ, ವಿಶ್ವವಿದ್ಯಾಲಯವಾದೆ,
ಸಂಕೋಲೆಗಳ ಬಂದಿಯಾಗಿದ್ದ ನೀನೇ ಸ್ವಾತಂತ್ರ್ಯ ದೇವರಂತಾದೆ,
ಅಸ್ತಿತ್ವ ಇಲ್ಲದವನಾಗಿದ್ದ ನೀನೇ ಬೃಹತ್ ದೇಶದ ಸಂವಿಧಾನ ಕರ್ತನಾದೆ,
ಶೋಷಿತರ ಧ್ವನಿಯಾಗಿದ್ದ ನೀನೇ ಮೂಕನಾಯಕನಾದೆ,
ಮಾನವೀಯತೆಯ ಪ್ರತಿರೂಪವಾದ ನೀನೇ ಅಮಾನವೀಯ ಹಿಂಸೆಗೆ ಒಳಗಾದೆ,
ಅದ್ಭುತ ಸಂಘಟಕನಾದ ನೀನೇ ಚುನಾವಣೆಯಲ್ಲಿ ಸೋತು ಹೋದೆ,
ಆದರೂ...
ನಿನ್ನ ಅಪಾರ ಓದು ನಮಗೆ ಅರ್ಥವಾಗಲಿಲ್ಲ,
ನಿನ್ನ ಸಂಘಟನಾ ಶಕ್ತಿ ನಮಗೆ ಗೊತ್ತಾಗಲಿಲ್ಲ,
ನಿನ್ನ ಹೋರಾಟ ಶ್ರಮ ನಮಗೆ ಸರಿಯಾಗಿ ದಕ್ಕಲಿಲ್ಲ,
ನಿನ್ನ ಮಾನವೀಯತೆ ನಮಗೆ ಬರಲಿಲ್ಲ,
ನಿನ್ನ ಸಮಾನತೆ ನಮಗೆ ಅರಿವಾಗಲಿಲ್ಲ,
ನಿನ್ನ ಜ್ಞಾನ ನಮಗೆ ಸಿಗಲಿಲ್ಲ,
ನಿನ್ನ ನೋವು ನಮಗೆ ತಟ್ಟಲಿಲ್ಲ,
ಎಲ್ಲರಂತೆ ನಮಗೂ ನೀನು ಗೋಡೆಯ ಪಟವಾದೆ,
ಮೇಲ್ವರ್ಗದವರು ಮನಸ್ಸಿನಲ್ಲೇ ದ್ವೇಷಿಸುತ್ತಾರೆ ನಿನ್ನನ್ನು,
ಕೆಳವರ್ಗದವರು ತೋರಿಕೆಗಾಗಿ ಪ್ರೀತಿಸುತ್ತಾರೆ ನಿನ್ನನ್ನು,
ಶೋಷಿತರು ಎಲ್ಲೆಡೆಯೂ ಪೂಜಿಸುತ್ತಾರೆ ನಿನ್ನನ್ನು,
ಆದರೆ,
ಆದರೆ,
ಆದರೆ...
ಅರ್ಥಮಾಡಿಕೊಂಡವರು ,
ಅನುಸರಿಸುವವರು ಯಾರಿಲ್ಲ,
ಇಡಿಯಾಗಿ ನೀನು ದಕ್ಕಲಿಲ್ಲ,
ವಿಶ್ವಮಾನವನಾದ ನಿನ್ನನ್ನು ಅಲ್ಪಮಾನವನನ್ನಾಗಿಸಿದೆವು,
ಅದಕ್ಕೆ ನಾವೆಲ್ಲರೂ ಸಾಕ್ಷಿಯಾದೆವು,
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದ ನೀನೇ ಅದರಲ್ಲಿ ಬಂದಿಯಾದೆ.
ಇರಲಿ, ಇನ್ನು ಮುಂದಾದರೂ ನಿನ್ನ ದೂರದೃಷ್ಟಿಯ ಅದ್ಬುತ ಚಿಂತನೆಗಳು ವಾಸ್ತವ ನೆಲೆಯಲ್ಲಿ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತಾ.... ಸಮಾನತೆಯನ್ನು, ಮಾನವೀಯತೆಯನ್ನು, ಒಂದಿಡೀ ಸಮುದಾಯದ ಸ್ವಾಭಿಮಾನವನ್ನು, ಜಾಗೃತಗೊಳಿಸಿ, ಶಕ್ತಿ ತುಂಬಿ, ತಲೆ ಎತ್ತುವಂತೆ ಮಾಡಿದ, ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಡಾಕ್ಟರ್ ಭೀಮರಾವ್ ರಾಮ್ಜಿ ಅಂಬೇಡ್ಕರ್…
(ಮುಗಿಯಿತು)
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣ