ಮಾನವತೆಯ ಬೆಳೆಗಾರ ಫುಕುವೋಕಾ

ಮಾನವತೆಯ ಬೆಳೆಗಾರ ಫುಕುವೋಕಾ

ಬರಹ

ಮಾನವತೆಯ ಬೆಳೆಗಾರ ಫುಕುವೋಕಾ

ನಮ್ಮ ಬಹು ಪ್ರಾಚೀನ 'ಪ್ರಗತಿಪರ' ರೈತರಾದ ಶಿವಮೊಗ್ಗದ ಪ್ರಫುಲ್ಲಚಂದ್ರ ಕೊನೆಗೂ ತಮ್ಮ ಗದ್ದೆಯ ಕೂಳೆಯನ್ನು ಕಡಿದು ಹಾಕಿದ ದಿನವೇ, ಕೃಷಿಋಷಿ ಮಸನೊಬು ಫುಕುವೊಕಾ ನಿಧರಾದ ಸುದ್ದಿ ಬಂದಿದೆ! ಪ್ರಫುಲ್ಲಚಂದ್ರ 28 ವರ್ಷಗಳ ಕಾಲ ಕಬ್ಬಿನ ಕೂಳೆ ಕಡಿಯದೆ, ಅದರ ಮೇಲೇ ಕಬ್ಬು ಬೆಳೆಯುತ್ತಾ, ಹೆಚ್ಚಿನ ಇಳುವರಿಯ ಸಾಧನೆಯನ್ನೂ ಮಾಡಿ ನಮ್ಮೆಲ್ಲರ ಗಮನ ಸೆಳೆದಿದ್ದವರು. ನಮಗೆ ಅವರೇ 90ರ ದಶಕದಲ್ಲಿ ಫುಕುವೊಕಾರ ಕೃಷಿ 'ದರ್ಶನ'ವಾಗುವ ಮುನ್ನ ಪ್ರಾಕೃತಿಕ ಬೇಸಾಯದ ಮರ್ಮವನ್ನು ತಮ್ಮ 'ಪ್ರಯೋಗಶೀಲತೆ'ಯ ಮೂಲಕ ಪರಿಚಯ ಮಾಡಿಕೊಟ್ಟಿದ್ದವರು.

ಆದರೆ ಫುಕೊವೊಕಾ ತಮ್ಮ 'ಒಂದು ಹುಲ್ಲಿನ ಕ್ರಾಂತಿ'ಯ ಮೂಲಕ (ಕನ್ನಡ ಅನುವಾದ: ಸಂತೋಷ ಕೌಲಗಿ ಪ್ರ: ಜನಪದ ಸೇವಾಟ್ರಸ್ಟ್, ಮೇಲುಕೋಟೆ) ನಮಗೆ ಪರಿಚಯವಾದ ಮೇಲೆ, 'ಪ್ರಗತಿಪರತೆ' ಮತ್ತು 'ಪ್ರಯೋಗಶೀಲತೆ' ಎಂಬ ಶಬ್ದಗಳ ಅರ್ಥಗಳೇ ಸಂಪೂರ್ಣ ಪಲ್ಲಟಗೊಂಡಿವೆ. ಹಾಗೆ ನೋಡಿದರೆ, ಫುಕುವೊಕಾರನ್ನು ಕೃಷಿಋಷಿ ಅಥವಾ ಅವರ ವಿಚಾರಗಳನ್ನು ಕೃಷಿದರ್ಶನ ಎಂದು ಕರೆಯುವುದು ಫುಕುವೊಕಾರಿಗೆ ಅನ್ಯಾಯ ಮಾಡಿದಂತೆ. ಏಕೆಂದರೆ, ನಾನೇನೂ ರೈತನಲ್ಲ. ಆದರೆ ಅವರ 'ಒಂದು ಹುಲ್ಲಿನ ಕ್ರಾಂತಿ' ಓದಿದ ನಂತರ ಬದುಕನ್ನು ಕುರಿತ ನನ್ನ ನೋಟವೇ ನಿರ್ಣಾಯಕ ರೀತಿಯಲ್ಲಿ ಬದಲಾಯಿತು. ನನ್ನ ಗ್ರಂಥ ಭಂಡಾರದಲ್ಲಿ ನೂರಾರು ಪುಸ್ತಕಗಳಿವೆ. ಅದರಲ್ಲಿನ ಅತಿ ಶ್ರೇಷ್ಠ ಪುಸ್ತಕ ಯಾವುದು ಎಂದು ಯಾರಾದರೂ ಕೇಳಿದರೆ, ನನ್ನ ಸರಳ ಉತ್ತರ: 'ಒಂದು ಹುಲ್ಲಿನ ಕ್ರಾಂತಿ'. ಭತ್ತದ ಬೆಳೆಯ ಪ್ರಾಕೃತಿಕ ಕೃಷಿಯ ತತ್ವಗಳನ್ನು ಪರಿಚಯಿಸುತ್ತಾ ಹೊರಡುವ ಈ ಪುಟ್ಟ ಪುಸ್ತಕ ಸಹಜ ಕಾವ್ಯದಂತೆ ನಮ್ಮನ್ನು ಸೆಳೆಯುತ್ತಾ, ಬುದ್ಧದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ನಾನು ಒಂದಲ್ಲ ಒಂದು ನೆಪದಲ್ಲಿ ವರ್ಷಕ್ಕೆರಡು ಬಾರಿ ಕಡ್ಡಾಯವಾಗಿ ಓದುತ್ತೇನೆ. ದಿನನಿತ್ಯದ ವ್ಯವಹಾರಗಳಲ್ಲಿ ಮನಸ್ಸಿನ ಮೇಲೆ ಬೀಳುವ ಧೂಳು ಮತ್ತು ಕಟ್ಟಿಕೊಳ್ಳುವ ಕಿಟ್ಟವನ್ನು ಸ್ವಚ್ಛಗೊಳಿಸಿಕೊಳ್ಳಲು!

ಈ ಕೃತಿಯನ್ನು ತಮ್ಮ 'ಸಹಜ ಕೃಷಿ' ಎಂಬ ಪುಟ್ಟ ಪುಸ್ತಕದಲ್ಲಿ ಕೆಲವು ಟಿಪ್ಪಣಿಗಳೊಂದಿಗೆ ಪರಿಚಯಿಸಿರುವ ಪೂರ್ಣಚಂದ್ರ ತೇಜಸ್ವಿ, ಸದ್ಯಕ್ಕೆ ಇದರ ತಾತ್ವಿಕ ದರ್ಶನವೆಲ್ಲ ಬೇಡ; ಖರ್ಚುಗಳಿಲ್ಲದ ಅವರ ಕೃಷಿ ತಂತ್ರಗಳ ಪ್ರಯೋಗ ತುರ್ತಾಗಿ ಆಗಬೇಕಾಗಿದೆ ಎನ್ನುತ್ತಾರೆ. ಆದರೆ ಹೀಗೆ ತಮಗೇ ವಿಶಿಷ್ಟವಾದ ಉಡಾಫೆಯಿಂದ ಈ ಮಾತನ್ನು ಹೇಳುವಾಗ ತೇಜಸ್ವಿ, ಫುಕುವೋಕಾರ ಈ ಮಾತನ್ನು ಮರೆತಿದ್ದಾರೆಂದೆನಿಸುತ್ತದೆ: 'ನಿಜ ಹೇಳಬೇಕೆಂದರೆ, ಈ ವ್ಯವಸಾಯ ಪದ್ಧತಿಯಲ್ಲಿ ಹೆಚ್ಚು ಪರಿಣಾಮ ಬೀರುವುದು ರೈತ ಅನುಸರಿಸುವ ತಂತ್ರಗಳಿಗಿಂತ ಹೆಚ್ಚಾಗಿ ಅವನ ಮನೋಭೂಮಿಕೆ'. ಸ್ಥೂಲವಾಗಿ ಹೇಳುವುದಾದರೆ, ಫುಕುವೊಕಾರ ಪ್ರಕಾರ ಈ ಸರಿಯಾದ ಮನೋಭೂಮಿಕೆ ಎಂದರೆ; ಇಂದಿನ ವಿಜ್ಞಾನದ ಹಮ್ಮನ್ನು ಧಿಕ್ಕರಿಸಿ ನಿಲ್ಲಬಲ್ಲ, ಯಾವುದೇ ಆವರಣದ ದಾಕ್ಷಿಣ್ಯಕ್ಕೆ ಸಿಕ್ಕದ ಪ್ರಾಕೃತಿಕ ಮನಸ್ಸು. ಇದೇ ಪುಸ್ತಕದಲ್ಲಿ ತೇಜಸ್ವಿ, ತಾವೂ ಹಲವಾರು ವರ್ಷಗಳ ಕಾಲ ಪ್ರಕೃತಿಯ ಮಧ್ಯೆಯೇ ಇದ್ದು ಅದರ ಚಲನಶೀಲತೆಯನ್ನು ಇವರಂತೆಯೇ ಗಮನಿಸುತ್ತಿದ್ದರೂ, ಪ್ರಕೃತಿ ಮನುಷ್ಯನ ಬುದ್ಧಿಯ ಹಸ್ತಕ್ಷೇಪವಿಲ್ಲದೇ ಹೆಚ್ಚು ಫಲವೀಯಬಲ್ಲುದು ಎಂಬುದೇಕೆ ತಮಗೆ ಹೊಳೆಯಲಿಲ್ಲ ಎಂದು ಆಶ್ಚರ್ಯಪಡುತ್ತಾರೆ. ಇದಕ್ಕೆ ಕಾರಣ, ಅವರಿನ್ನೂ ನಮ್ಮ ಕಾಲದ ಬಹು ಜನರಂತೆಯೇ 'ಆಧುನಿಕತೆ'ಯ ಅವಿಭಾಜ್ಯ ಅಂಗವಾದ ವಿಚಾರವಾದದ ಭಾರದಿಂದ ಇನ್ನೂ ಕಳಚಿಕೊಳ್ಳದೇ ಇದ್ದುದು.

ಫುಕುವೋಕೋ ಮೂಲತಃ ಸೂಕ್ಷ್ಮ ಜೀವಶಾಸ್ತ್ರ ವಿಜ್ಞಾನಿ. ಅದರೆ ತಮ್ಮ ತಾರುಣ್ಯದಲ್ಲೇ ನಿರಂತರ ಪ್ರಯೋಗಶೀಲತೆಯ ಮೂಲಕ ಬಹು ಬೇಗ ವಿಜ್ಞಾನಾನುಭವದ ಅತಿಗಳನ್ನು ಮುಟ್ಟಿದರು. ಹಾಗಿರುವಾಗ ಒಂದು ಮಂಜು ಮುಸುಕಿದ ಬೆಳಿಗ್ಗೆ ಕಡಲ ತೀರದಲ್ಲಿ ಕಡಲು ಕೋಳಿಗಳು ಗಗನಕ್ಕೆ ನೆಗೆದುದನ್ನು ನೋಡ ನೋಡುತ್ತಾ ಫುಕುವೋಕಾ-ನಮ್ಮ ಗದಾಧರ ಗದ್ದೆ ಬಯಲಲ್ಲಿ ಹಂಸಗಳು ಹಾರಿ ಹೋಗುತ್ತಿದ್ದುದನ್ನು ನೋಡುತ್ತಾ ಪರಮಹಂಸರಾದಂತೆಯೇ-ಮಾನವ ಅನುಭವದ ಇನ್ನೊಂದು ತುದಿಗೆ ತೆರೆದುಕೊಂಡರು. ಆ ಕ್ಷಣದಲ್ಲಿ ತಮಗೆ ಪಂಚೇಂದ್ರಿಯಗಳ ಲೋಕ ಕೇವಲ ಕ್ಷಣಭಂಗುರವೆನಿಸಿ, 'ಸತ್ಯವಾದ ಪ್ರಕೃತಿ'ಯ ಗಾಢ ಅರಿವುಂಟಾಯಿತೆಂದು ಅವರು ಹೇಳುತ್ತಾರೆ. ಈ ಅರಿವಿನ ಸ್ಫೂರ್ತಿಯಲ್ಲೇ 'ಆಕಾರ, ನಿರಾಕಾರ ಎರಡೂ ಒಂದೇ' ಎಂಬ ಬುದ್ಧನ ಮೂಲಸತ್ಯವೊಂದರ ಆಧಾರದ ಮೇಲೆ ತಮ್ಮ ದರ್ಶನವನ್ನು ಕಟ್ಟಿಕೊಂಡ ಫುಕುವೊಕಾ, ಪ್ರಕೃತಿ ಕೂಡಾ ಮನಸ್ಸಿನ ಸೃಷ್ಟಿಯೇ ಎಂದು ಇದನ್ನು ಅರ್ಥೈಸುತ್ತಾರೆ. ಹೀಗೆ ಅರ್ಥೈಸಿಕೊಂಡಾಗಲೇ ಪ್ರಕೃತಿಯನ್ನು ಅರಿಯುವ, ಗೆಲ್ಲುವ ಪ್ರಯತ್ನ ವ್ಯರ್ಥವೆಂದು ಗೊತ್ತಾಗುತ್ತದೆ ಮತ್ತು ಹೀಗೆ ಅರಿಯುವ ಯತ್ನದಲ್ಲಿಯೇ ವಿಜ್ಞಾನ ಆಧುನಿಕ ಮನುಷ್ಯನ ಮನಸ್ಸಿನ ಮೇಲೆ ಎಳೆದಿರುವ ಮಾಯೆಯ ಮುಸುಕಿನ ಅರಿವು ಆಗುತ್ತದೆ ಎನ್ನುತ್ತಾರೆ.

ಇದನ್ನು ಅವರು ಆಧುನಿಕ ಕೃಷಿ ಪದ್ಧತಿ ರೂಢಿಸಿರುವ ಹಲವು 'ಭ್ರಮೆ'ಗಳ ನಿದರ್ಶನಗಳೊಂದಿಗೆ ವಿಷದೀಕರಿಸುತ್ತಾರೆ. ಉದಾಹರಣೆಗೆ, ಉಳುಮೆ, ಗೊಬ್ಬರ, ಕಳೆ ಮತ್ತು ಕೀಟನಾಶಕ ರಸಾಯನಿಕಗಳನ್ನು ಕುರಿತ ಆಧುನಿಕ ಬೇಸಾಯದ ಪರಿಕಲ್ಪನೆಗಳು ಹೇಗೆ ಭೂಮಿಯ ಅದಮ್ಯ ಫಲವತ್ತತೆಯನ್ನೇ ಅನುಮಾನಾಸ್ಪದಗೊಳಿಸಿ ರೂಪುಗೊಂಡಿವೆ ಎಂದು ವಿವರಿಸುತ್ತಾರೆ. ಈ ಪರಿಕಲ್ಪನೆಗಳನ್ನು ನಂಬಿಕೊಂಡೇ ವ್ಯವಸಾಯ ಮಾಡುತ್ತಾ ನಾವು ಭೂಮಿಯನ್ನು ಅದರ ಆವರಣದೊಂದಿಗೆ ಹಾಳು ಮಾಡಿ, ನಾವೂ ಹಾಳಾಗುತ್ತಿದ್ದೇವೆ ಎನ್ನುತ್ತಾರೆ. ಅಷ್ಟೇ ಅಲ್ಲ, ಉಳುಮೆ, ಗೊಬ್ಬರ, ಕಳೆ ಅಥವಾ ಕೀಟನಾಶಕಗಳ ಅಗತ್ಯವೇ ಇಲ್ಲದೆ, ಪ್ರಕೃತಿಯ ಪಿಸುಮಾತಿಗೆ ಸರಿಯಾಗಿ ಕಿವಿಗೊಡುವುದಷ್ಟರಿಂದಲೇ ಹೇಗೆ 'ವೈಜ್ಞಾನಿಕ ಕೃಷಿ'ಯ ಪ್ರಮಾಣದಲ್ಲಿ ಬೆಳೆ ತೆಗೆಯಬಹುದು ಎಂಬುದನ್ನು ತಮ್ಮ ಗದ್ದೆ ತೋಟಗಳಲ್ಲಿ ಮಾಡಿ ತೋರಿಸಿದ್ದಾರೆ. ಇದನ್ನು 'ಏನೂ ಮಾಡದ ಕೃಷಿ' ಎಂಬ ಬೆರಗಿನ ಹೆಸರಿನಿಂದ ಕರೆದು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಇಂದು ಕರ್ನಾಟಕದಾದ್ಯಂತ ಪ್ರಚಲಿತವಾಗುತ್ತಿರುವ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಇದರಿಂದಲೇ ಸ್ಫೂರ್ತಿ ಪಡೆದದ್ದಾಗಿದೆ.

ಇಂದಿನ ರೈತನ ದುರಂತವೆಂದರೆ ಅವನು ಆಧುನಿಕತೆ ಹುಟ್ಟಿಸಿರುವ 'ಸಮೃದ್ಧಿ'ಯೆಂಬ ಹುಚ್ಚು ಕುದುರೆಯ ಹಿಂದೆ ಬಿದ್ದು; ಹೆಚ್ಚು ಬೆಳೆಯುವ ಹಪಾಹಪಿಗೆ ಅಥವಾ ಬೆಳೆ ಕಡಿಮೆಯಾಗುವ ಆತಂಕಕ್ಕೆ ಸಿಕ್ಕಿ, ಪ್ರಕೃತಿಯ ಪಿಸುಮಾತುಗಳನ್ನು ಆಲಿಸುವ ಸೂಕ್ಷ್ಮತೆಯನ್ನು ಕಳೆದುಕೊಂಡು ಏನೇನೋ ತಾಂತ್ರಿಕ ಕಸರತ್ತುಗಳನ್ನು ಮಾಡಿ ಸುಸ್ತಾಗುತ್ತಿದ್ದಾನೆ. ಅವನಿಗೆ ಕಾವ್ಯ, ನಾಟಕ, ಸಂಗೀತ ಏನೂ ಬೇಡವಾಗಿ ಬರಡಾಗಿದ್ದಾನೆ ಎನ್ನುವ ಫುಕುವೋಕಾ, ಜಪಾನ್‌ನ ತಮ್ಮ ಹಳ್ಳಿಯಲ್ಲಿ ಇಂತಹ 'ಏನೂ ಮಾಡದ' ಬೇಸಾಯ ಮತ್ತು ಜೀವನ ಕ್ರಮವನ್ನು ರೂಢಿಸಲೆಂದೇ, ಅದನ್ನು ಜನಸಾಮಾನ್ಯರ ಮಧ್ಯೆ ವಿಶ್ವಾಸಾರ್ಹಗೊಳಿಸಲೆಂದೇ ಅಂತಾರಾಷ್ಟ್ರೀಯ ಕೃಷಿ ಜೀವನ ಶಾಲೆಯೊಂದನ್ನು ಹುಟ್ಟು ಹಾಕಿದ್ದಾರೆ. ಅಲ್ಲಿನ ಅನುಭವದ ಬಗ್ಗೆ ಅವರು ಹೇಳುವುದು: "ಈ ತೋಟದಲ್ಲಿ ನಾವು ಶ್ರಮರಹಿತ ಕೃಷಿ ಮಾಡುತ್ತೇವೆ. ಪರಿಪೂರ್ಣವಾದ, ಸ್ವಾದಯುಕ್ತ ಧಾನ್ಯಗಳನ್ನು, ಹಣ್ಣುಗಳನ್ನು ತಿನ್ನುತ್ತೇವೆ. ನಮ್ಮೆಲ್ಲ ಚಟುವಟಿಕೆಗಳ ಹಿಂದಿರುವ ಜಗ ಹೃದಯಕ್ಕೆ ನಾವು ಹತ್ತಿರವಾದಷ್ಟೂ ಅದಕ್ಕೆ ಅರ್ಥವಿದೆ, ಅದರೊಂದಿಗೆ ಆತ್ಮತೃಪ್ತಿಯಿದೆ. ಇಲ್ಲಿ ಜೀವನ ಒಂದು ಕಾವ್ಯವೇ! " ಹಾಗಾಗಿ, ಫುಕುವೋಕಾ ಕರ್ನಾಟಕದ ನಮ್ಮ ಪ್ರಯೋಗಶೀಲ ರೈತ ನಾರಾಯಣ ರೆಡ್ಡಿಯವರನ್ನು ಭೇಟಿ ಮಾಡಲು ಬಂದವರು, ಅವರ ತೋಟ ಬಿಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ತೊರೆ ಮತ್ತು ಅದರ ದಡದಲ್ಲಿ ಸೊಂಪಾಗಿ ಬೆಳೆದಿದ್ದ ಮರ ನೆಳಲಿನಲ್ಲೇ ಹೆಚ್ಚು ಕಾಲ ಕಳೆದದ್ದು ಆಶ್ಚರ್ಯವೇನಲ್ಲ!

ಆಧುನಿಕ ವಿಜ್ಞಾನಿಯನ್ನು ಕ್ರಿಯಾಶೀಲಗೊಳಿಸಿರುವ 'ಪ್ರಕೃತಿ ಎಂದರೆ ಏನು?' ಎಂಬ ಪ್ರಶ್ನೆ ಪೂರ್ಣವಾಗುವುದು, ಅದರಲ್ಲಿ 'ಏನು' ಎಂಬುದು ಬರೀ ಪ್ರಕೃತಿಯನ್ನು ಉದ್ದೇಶಿಸಿದರೆ ಸಾಲದು; ಆ ಪ್ರಶ್ನೆಯ ಮಾಧ್ಯಮವಾಗಿರುವ ಮನುಷ್ಯನನ್ನೂ ಉದ್ದೇಶಿಸಿರಬೇಕು. ಹಾಗೇ, 'ಏನು' ಎಂಬ ಪದವನ್ನೂ ಉದ್ದೇಶಿಸಿರಬೇಕು (ಅಂದರೆ, ಮನುಷ್ಯ ಎಂದರೆ ಏನು ಮತ್ತು ಏನು ಎಂದರೆ ಏನು ಎಂಬ ಪ್ರಶ್ನೆಗಳನ್ನೂ ಅದು ಒಳಗೊಂಡಿರಬೇಕು!) ಎನ್ನುವ ಫುಕುವೋಕಾ, ಆ ಪೂರ್ಣ ಪ್ರಶ್ನೆಯನ್ನು ಎದುರಿಸುವಂತಾದಾಗ ಮಾತ್ರ ವಿಜ್ಞಾನ ಪೂರ್ಣಜ್ಞಾನ ಎನ್ನಿಸಿಕೊಳ್ಳುತ್ತದೆ. ಅಲ್ಲಿಯವರೆಗೆ ಈ ಅಪೂರ್ಣ ಜ್ಞಾನ ತನ್ನ ಪೂರ್ಣಜ್ಞಾನದ ಹಮ್ಮಿನಲ್ಲಿ ನಮ್ಮ ಆಲೋಚನಾ ಕ್ರಮವನ್ನು ದಾರಿ ತಪ್ಪಿಸುತ್ತಿರುತ್ತದೆ ಎಂದು ಎಚ್ಚರಿಸುತ್ತಾರೆ: ''ಒಂದು ಪುಟ್ಟ ಗಿಡದಲ್ಲಿ ತಲೆ ಎತ್ತುತ್ತಿರುವ ಒಂದು ಚಿಗುರನ್ನು ಚಿವುಟಿ ಹಾಕುವುದು ಕೂಡಾ ಭರಿಸಲಾಗದಷ್ಟು ದೊಡ್ಡ ತಪ್ಪು. ಮನುಷ್ಯನ ಚೇಷ್ಟೆಗೆ ಸಿಗದಿದ್ದ ಗಿಡದಲ್ಲಿ ಹೊರಡುವ ಕೊಂಬೆಗಳು ವ್ಯವಸ್ಥಿತವಾಗಿ ಒಂದರ ನಂತರ ಮತ್ತೊಂದು ಬಂದು, ಎಲ್ಲಾ ಕೊಂಬೆಗಳೂ ಸರಿಯಾದ ಪ್ರಮಾಣದಲ್ಲಿ ಶಾಖವನ್ನು ಪಡೆಯುತ್ತವೆ. ಆದರೆ ಒಮ್ಮೆ ಈ ವ್ಯವಸ್ಥೆಯನ್ನು ತಪ್ಪಿಸಿದರೆ ಆ ಕೊಂಬೆಗಳಲ್ಲೇ ಪೈಪೋಟಿ ಉಂಟಾಗಿ ಅವು ಒಂದರ ಮೇಲೊಂದು ಬೆಳೆದು ಸೂರ್ಯನ ಶಾಖ ಸರಿಯಾಗಿ ಹಂಚಿಕೆಯಾಗದೆ ಸಾಕಷ್ಟು ಪ್ರಮಾಣದಲ್ಲಿ ಶಾಖ ಪಡೆಯದ ಎಲೆಗಳು ಉದುರುತ್ತವೆ;ಕ್ರಿಮಿಗಳು ಹಾವಳಿ ನಡೆಸುತ್ತವೆ; ಮತ್ತೆ ಕೊಂಬೆಗಳನ್ನು ಕತ್ತರಿಸದಿದ್ದರೆ ಮುಂದಿನ ದಿನಗಳಲ್ಲಿ ಕೊಂಬೆಗಳು ಬಾಡಿ ಬೆಂಡಾಗುತ್ತವೆ.

ಮನುಷ್ಯ ತನ್ನ ಕೊಳಕು ಕೈ ಆಡಿಸಿ ಪ್ರಕೃತಿಯ ತಾಳಬದ್ಧವಾದ ಸಂಗೀತವನ್ನು ಹಾಳು ಮಾಡುತ್ತಾನೆ. ಅದನ್ನು ತಿದ್ದಲಾರದೆ ಸುಮ್ಮನಾಗಿ ಬಿಡುತ್ತಾನೆ. ಮುಂದೆ ಎಂದೋ ಒಂದು ದಿನ ಆ ತಪ್ಪು ಅವನ ಬುಡಕ್ಕೇ ಬಂದಾಗ ಅದನ್ನು ಸರಿಪಡಿಸಲು ತನ್ನ ಸರ್ವ ಸಾಮಥ್ರ್ಯವನ್ನು ಉಪಯೋಗಿಸುತ್ತಾನೆ. ಈ ಪ್ರಯತ್ನದಲ್ಲಿ ಅವನು ಸ್ವಲ್ಪ ಜಯಶಾಲಿಯಾದಂತೆ ಕಂಡರೆ ಅವನನ್ನು ಹಿಡಿದು ನಿಲ್ಲಿಸುವುದೇ ಅಸಾಧ್ಯವಾಗುತ್ತದೆ. ಮನುಷ್ಯ ಪದೇ ಪದೇ ಹೀಗೇ ಮಾಡುತ್ತಾನೆ. ಇದು ಬೇಸಿಗೆಯಲ್ಲಿ ತನ್ನ ಮನೆಯ ಹೆಂಚುಗಳನ್ನೆಲ್ಲ ಒಡೆದು ಹಾಕಿ, ಮಳೆಗಾಲದಲ್ಲಿ ಮನೆ ಸೋರಲು ಆರಂಭಿಸಿದಾಗ ಎದ್ದೆನೋ ಬಿದ್ದೆನೋ ಎನ್ನುತ್ತಾ ಹೆಂಚುಗಳನ್ನು ಸರಿಪಡಿಸಿ, ಮನೆ ಸೋರುವುದು ನಿಂತಾಗ ದೊಡ್ಡ ಸಾಧನೆ ಮಾಡಿದೆನೆಂದು ಬೆನ್ನು ತಟ್ಟಿಕೊಂಡಷ್ಟೇ ಮೂರ್ಖತನ.

ನಮ್ಮ ವಿಜ್ಞಾನಿಗಳ ಕಥೆಯೂ ಹೀಗೇ ಆಗಿದೆ. ಹಗಲಿರುಳೆನ್ನದೆ ತಮ್ಮ ಕಣ್ಣುಗಳು ಹಾಳಾಗುವಷ್ಟು ಪುಸ್ತಕಗಳನ್ನು ಓದಿ ಓದಿ ಅವರು ಸಂಶೋಧಿಸುತ್ತಿರುವುದಾದರೂ ಏನನ್ನು? ತಮ್ಮ ಸಮೀಪ ದೃಷ್ಟಿ ದೋಷ ನಿವಾರಣೆಗಾಗಿ ಹೊಸ ರೀತಿಯ ಗಾಜನ್ನು!"

ಹಲವು ಅಪೂರ್ಣಗಳನ್ನು ಜೋಡಿಸಿ ಒಂದು ಪೂರ್ಣವನ್ನು ಸೃಷ್ಟಿಸಲು ಹೆಣಗುತ್ತಿರುವ ಇಂದಿನ ವಿಜ್ಞಾನಕ್ಕೆ, ಈ ವಿಧಾನದ ಮೂಲಕ ಪೂರ್ಣ ಸ್ಥಿತಿಯಲ್ಲಿರುವ ಪ್ರಕೃತಿಯನ್ನು ಅರಿಯಲು ಅಸಾಧ್ಯ. ಈ ಅರಿವು ಮೂಡಿದಾಗಲೇ 'ಏನೂ ಮಾಡದ' ಜೀವನ ದರ್ಶನ ಮತ್ತು ಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಾಣಿಗಳು ಹೀಗೆ 'ಏನೂ ಮಾಡದೆ' ಪ್ರಕೃತಿಯ ಬೆರಗುಗಳಂತೆ ಸುಮ್ಮನೆ ಬದುಕುತ್ತಿದ್ದರೆ, ಮನುಷ್ಯ ಏನೇನನ್ನೋ ಮಾಡುತ್ತಾ ತನ್ನ ಸರಳ ಪ್ರಾಕೃತಿಕ ನೆಮ್ಮದಿಯನ್ನು ಕಳೆದುಕೊಂಡು; ಮತ್ತೆ ಅದನ್ನು ಗಳಿಸಿಕೊಳ್ಳಲು ಸದಾ ಮತ್ತೇನನ್ನೋ ಮಾಡುತ್ತಲೇ ಇರುವ 'ದುಡಿಮೆ'ಯ ವಿಷವ್ಯೂಹಕ್ಕೆ ಸಿಕ್ಕಿಹಾಕಿಕೊಂಡಿದ್ದಾನೆ ಎನ್ನುತ್ತಾರೆ ಫುಕುವೋಕಾ. 'ಏನೂ ಮಾಡದ' ಜೀವನ ಎಂದರೆ ನಿಷ್ಕ್ರಿಯತೆಯ ಅಥವಾ ಆಲಸ್ಯದ ಜೀವನ ಎಂದಲ್ಲ. ಇರುವ ಪ್ರಕೃತಿಯ ಪೂರ್ಣತೆಯ ಮತ್ತು ಅದರ ರಚನೆಯಲ್ಲಿರುವ ಸಾಮರಸ್ಯದ ತಿಳುವಳಿಕೆಯಲ್ಲಿ ಹುಟ್ಟುವ; ಮಾಡಿದರೂ ಮಾಡದಂತಿರುವ ('ಮಾಡಿದರೂ ಮಾಡದಂತಿರಬೇಕು; ಮಾಡಿದ ಮಾಟದಲ್ಲಿ ತಾನಿಲ್ಲದಿರಬೇಕು': ಬಸವಣ್ಣ) ಕೌಶಲ್ಯಪೂರ್ಣ ಕ್ರಿಯಾಶೀಲ ಜೀವನ. ಹಾಗಾಗಿಯೇ ಫುಕುವೋಕಾರನ್ನು ಓದುತ್ತ ಹೋದಂತೆ, 'ಶೂನ್ಯತೆ'ಯ ಬುದ್ಧ ಮತ್ತು 'ನಾನು ಯಾರು?' ಪ್ರಶ್ನೆಯ ರಮಣರ ಜೊತೆಗೇ, ಅಹಿಂಸಾತ್ಮಕ ಸತ್ಯಾಗ್ರಹದ ಗಾಂಧೀಜಿಯೂ ನೆನಪಾಗುತ್ತಾರೆ. ಸ್ವತಃ ಫುಕುವೋಕಾ ತಮ್ಮ ಜೀವನ ದರ್ಶನದ ಭಾಗವಾಗಿ ಗಾಂಧೀಜಿಯ ಅಹಿಂಸಾ ದರ್ಶನದ-ಏಕದಶಾ ವ್ರತಗಳ-ಪ್ರಸ್ತಾಪ ಮಾಡುತ್ತಾರೆ.

ಗಾಂಧೀಜಿ ಭಾರತವನ್ನು ಯಾವ ಅರಿವಿನಿಂದ ಗ್ರಾಮಸ್ವರಾಜ್ಯವನ್ನಾಗಿ ರೂಪಿಸಲು ಬಯಸಿದ್ದರೋ, ಅದೇ ಅರಿವಿನಿಂದ ಫುಕುವೋಕಾ ಜಪಾನ್ ರೈತ ಸಮಾಜವಾಗಿಯೇ ಉಳಿಯಬೇಕೆಂದು ಬಯಸಿದ್ದರು. ಯೂರೋಪ್ ಮತ್ತು ಅಮೆರಿಕಾಗಳಂತೆ ಜಪಾನ್‌ನಲ್ಲಿಯೂ ರೈತರ ಸಂಖ್ಯೆಯನ್ನು ಶೇ.10ಕ್ಕೆ ಇಳಿಸುವ ನಗರೀಕರಣ ಮತ್ತು ಕೈಗಾರಿಕೀಕರಣಗಳನ್ನು, "ಹಿಂದೆ ಮನುಷ್ಯನಿಗೆ 'ಅಭಿವೃದ್ಧಿ' ಎಂಬ ಶಬ್ದದ ಪರಿಚಯವೇ ಇರಲಿಲ್ಲ. ಇಂದು 'ಅಭಿವೃದ್ಧಿ' ಶಬ್ದದ ಪರಿಚಯವೂ, ಪರಿಣಾಮಗಳೂ ನಮಗೆ ಗೊತ್ತಾಗಿದೆ. ಅದರ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಾದದ್ದು ಅನಿವಾರ್ಯವಾಗಿದೆ" ಎಂಬ ಧೀರ ಕರೆಯ ಮೂಲಕ ವಿರೋಧಿಸಿದ್ದ ಅವರು, ಜಪಾನ್ ನೂರಕ್ಕೆ ನೂರು ರೈತರ ದೇಶವಾಗಬೇಕೆಂದು ಆಶಿಸಿದ್ದರು. ಹಾಗಾದಾಗ, ಪ್ರತಿ ಸರಾಸರಿ ಜಪಾನಿ ಕುಟುಂಬಕ್ಕೂ ಒಂದೂ ಕಾಲು ಎಕರೆ ಜಮೀನು ಸಿಗಲಿದ್ದು, ಅದರ ನೈಸರ್ಗಿಕ ಕೃಷಿಯಿಂದ ವರ್ಷದ ಎಲ್ಲ ಕೌಟುಂಬಿಕ ಅಗತ್ಯಗಳನ್ನು ಪೂರೈಸಿಕೊಳ್ಳಬಹುದಲ್ಲದೆ, ಆಧುನಿಕ ನಾಗರೀಕತೆಯಲ್ಲಿ ಅಲಭ್ಯವಾಗತೊಡಗಿರುವ ಸಂತೋಷ ನೆಮ್ಮದಿಗಳನ್ನೂ ಗಳಿಸಿಕೊಳ್ಳಬಹುದು ಎಂದು ಭಾವಿಸಿದ್ದರು. ಇದು ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸಿನಂತೆಯೇ ಇಂದು ಅವಾಸ್ತವಿಕ ಎನಿಸಬಹುದು. ಆದರೆ ಫುಕುವೋಕಾ ಅವರ ಜೀವನ ದರ್ಶನದ ಪೂರ್ಣತೆಯಲ್ಲಿ ನೋಡಿದಾಗ, ಅಭಿವೃದ್ಧಿಯ ಹೆಸರಲ್ಲಿ ತನ್ನನ್ನು ತಾನೇ ತಿಂದುಕೊಳ್ಳುತ್ತಿರುವ ಜಗತ್ತಿಗೆ ಇದು, ದೂರದಲ್ಲಾದರೂ ಕಾಣುತ್ತಿರುವ ಪರ್ಯಾಯ ಮಾರ್ಗವೆನಿಸದಿರದು.

ಗಾಂಧೀಜಿಯಂತೆಯೇ ಮನುಷ್ಯನ ಅಂತಿಮ ಗುರಿ ತನ್ನಲ್ಲಿರುವ ದೈವಿಕತೆಯನ್ನು ಕಂಡುಕೊಳ್ಳುವುದು ಎಂದು ನಂಬಿದ್ದ ಫುಕುವೋಕಾ, ತಮ್ಮ 95ವರ್ಷಗಳ 'ತುಂಬು' ಜೀವನದಲ್ಲಿ ಕೃಷಿ ಸಂಸ್ಕೃತಿಯ ಮೂಲಕವೇ ಇದು ಸಾಧ್ಯ ಎಂದು ಮನಗಂಡಿದ್ದರು. ಹಾಗಾಗಿಯೇ ಅವರು ಹೇಳಿದ್ದು: 'ಹರ್ಷ ಮತ್ತು ನೆಮ್ಮದಿಯನ್ನು ಪಡೆಯಲು ಪ್ರಯತ್ನಗಳನ್ನು ನಡೆಸಿಯೇ ಮನುಷ್ಯರು ಅವುಗಳನ್ನು ಕಳೆದುಕೊಳ್ಳುತ್ತಾರೆ ಎಂಬುದರಲ್ಲಿಯೇ ನೈಸಗರ್ಿಕ ಕೃಷಿ ವಿಚಾರದ ತಿರುಳು ಅಡಗಿದೆ. ಕೃಷಿಯ ಅಂತಿಮ ಗುರಿ, ಬರೀ ಹೊಲ ಗದ್ದೆಗಳಲ್ಲಿ ಬೆಳೆ ಬೆಳೆಯುವುದಲ್ಲ, ಮಾನವತೆಯ ಬೆಳೆ ತೆಗೆಯುವುದೇ ಆಗಿದೆ ಮತ್ತು ಅದನ್ನು ಉತ್ತಮಪಡಿಸುತ್ತಾ ಹೋಗುವುದೇ ಆಗಿದೆ"

ಸಂಪದದಲ್ಲಿ (ಇದೇ ಸಂಚಿಕೆಯಲ್ಲಿ) 'ರೈತಭಾರತ: ಅವಸಾನದ ಅಂಚಿನಲ್ಲಿ' ಲೇಖನದ ಕೊನೆಯ ಭಾಗ ಪ್ರಕಟವಾಗುವ ಹೊತ್ತಿಗೇ ಫುಕುವೋಕಾರನ್ನು ಹೀಗೆ ಪರಿಚಯಿಸುವ ಸಂದರ್ಭ ಒದಗಿ ಬಂದಿರುವುದು ನನ್ನ ಪಾಲಿಗೆ ಕೇವಲ ಆಕಸ್ಮಿಕವಲ್ಲ ಎಂದು ಭಾವಿಸಿದ್ದೇನೆ.