ಮಾನವತೆಯ ಮಹಾ ಚೇತನ ಮಹಾವೀರ
ಬದುಕು ಮತ್ತು ಇತರರು ಬದುಕಲು ಬಿಡು ಇದು ಜೈನ ಧರ್ಮ ಸಿದ್ದಾಂತ. ಜಗತ್ತಿನ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮದ ೨೪ ನೇ ತೀರ್ಥಂಕರ ಮಹಾವೀರ. ಬುದ್ಧ ಜನಿಸಿದ ಬಿಹಾರದ ನೆಲದಿಂದಲೇ ಬಂದ ಮಹಾವೀರ ಹುಟ್ಟಿನಿಂದಲೇ ವರ್ಧಮಾನನೆಂದು ಕರೆಸಿಕೊಂಡ. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅನ್ಯಾಯ, ಅಸಮಾನತೆಗಳನ್ನು ಮತ್ತು ಯಜ್ಞ ಯಾಗಗಳ ಹೆಸರಿನಲ್ಲಿ ನಡೆಯುತ್ತಿದ್ದ ಹಣದ ದುಂದು ವೆಚ್ಚ ಹಾಗೂ ವಂಚನೆಗಳನ್ನು ವಿರೋಧಿಸಿದ ಮಹಾವೀರ, ಜಾತಿ ಮತ ಭೇದಗಳನ್ನು ಖಂಡಿಸಿದ. ಸ್ತ್ರೀ ಶೋಷಣೆಯ ವಿರುದ್ಧ ಧ್ವನಿಯೆತ್ತಿದ. ಆಗ ಮಹಿಳೆಯರನ್ನು ಮಾರಾಟ ಮಾಡುತ್ತಿದ್ದ ವ್ಯವಸ್ಥೆಯನ್ನು ಧಿಕ್ಕರಿಸಿದ.
ಜೈನ, ಬೌದ್ಧ ಮತ್ತು ಲಿಂಗಾಯತ ಧರ್ಮಗಳು ವೇದವನ್ನು ಒಪ್ಪುವುದಿಲ್ಲ. ಅಹಿಂಸೆಗೆ ಜೈನ ಧರ್ಮದಲ್ಲಿ ಮೊದಲ ಸ್ಥಾನ. ಅಂತಲೆ ಸರ್ವಜ್ಞ " ಕೊಲ್ಲುವ ಧರ್ಮವನೊಯ್ದು ! ಒಲೆಯೊಳಗೆ ಇಕ್ಕುವ! ಕೊಲಲಾಗದೆಂಬ ಜೈನ ಮತವೆನ್ನ ತಲೆಯ ಮೇಲಿರಲಿ" ಎಂದು ಹೇಳಿದ.
ಅಪರಿಗ್ರಹ ಜೈನ ಧರ್ಮದ ಇನ್ನೊಂದು ಮಹತ್ವದ ತಾತ್ವಿಕ ಅಂಶ. ಇದು ಸಮತೆಯ ಸಿದ್ದಾಂತ. ನಾಳೆಗೆಂದು ಸಂಪತ್ತನ್ನು ಕೂಡಿಡುವ ಪ್ರವೃತ್ತಿಯಿಂದ ಸಮಾಜದ ಅಭಿವೃದ್ಧಿ ಕುಂಠಿತವಾಗುತ್ತದೆ. ಆದ್ದರಿಂದ ಸಂಪತ್ತಿನ ಸಂಗ್ರಹವನ್ನು ಜೈನ ಧರ್ಮ ಒಪ್ಪುವುದಿಲ್ಲ. ಮಹಾವೀರನ ಪ್ರಕಾರ ಮಾನವರೆಲ್ಲರೂ ಒಂದೇ ಜಾತಿ.ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಜೈನ ಧರ್ಮ ಒಪ್ಪುವುದಿಲ್ಲ. ಮಹಾವೀರನ ಶಿಷ್ಯ ಸಮೂಹದಲ್ಲಿ ಆಗ ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದ ಚಾಂಡಾಲರು, ದಾಸ ವರ್ಗದವರು ಇದ್ದರು.ಆರ್ಥಿಕ, ಸಾಮಾಜಿಕ ಸಮಾನತೆ ಮಹಾವೀರನ ಮುಖ್ಯ ಸಂದೇಶವಾಗಿದೆ. ಜೈನ ಧರ್ಮ ಹಿಂದು ಧರ್ಮದ ಭಾಗವಲ್ಲ ಅದು ಬಹು ಹಿಂದಿನ ಚಾರ್ವಾಕ, ಲೋಕಾಯತರ ನಂತರ ಅಸ್ತಿತ್ವಕ್ಕೆ ಬಂದ ಧರ್ಮ.ಜೈನ ಧರ್ಮ ಬರೀ ಮನುಷ್ಯ ಕೇಂದ್ರಿತ ಸಹಬಾಳ್ವೆಯನ್ನು ಬೋಧಿಸುವುದಿಲ್ಲ. ಜೀವ ಕೇಂದ್ರಿತ ಸಹ ಬಾಳ್ವೆ ಅದರ ಜೀವಸತ್ವ. ಎಲ್ಲ ಪ್ರಾಣಿ, ಪಕ್ಷಿ ಸಕಲ ಜೀವ ಜಂತುಗಳ ಕಾಳಜಿ.
ಅನೇಕಾಂತವಾದ ಜೈನ ಧರ್ಮದ ಇನ್ನೊಂದು ಮೂಲ ತತ್ವ. ಸರಳವಾಗಿ ಹೇಳಬೇಕೆಂದರೆ ಇನ್ನೊಬ್ಬರ ಅಭಿಪ್ರಾಯವನ್ನು, ಬೇರೊಂದು ವಿಚಾರಧಾರೆಯನ್ನು ಗೌರವಿಸುವ ಪ್ರಜಾಪ್ರಭುತ್ವಿಯ ಆಶಯ ಈ ತತ್ವದ ಜೀವಾಳವಾಗಿದೆ. ಅನೇಕತೆಯನ್ನು ಒಪ್ಪದೇ ಏಕಧರ್ಮದ ಅಡಿಪಾಯದ ಮೇಲೆ ರಾಷ್ಟ್ರ ಕಟ್ಟುವ ದುಸ್ಸಾಹಸ ನಡೆದಿರುವ ಈ ದಿನಗಳಲ್ಲಿ ಜೈನ ಧರ್ಮದ ಅನೇಕಾಂತವಾದ ಈ ಭಾರತದ ಉಳಿವಿಗೆ ಅವಶ್ಯಕವಾದ ತತ್ವವಾಗಿದೆ. ಆದರೆ ಜೈನ ಧರ್ಮದಲ್ಲಿ ಕಾಲಕ್ರಮೇಣ ಕೆಲ ಕಂದಾಚಾರಗಳು ಬೆಳೆದು ಬಂದಿವೆ. ಅವುಗಳನ್ನು ಕೈಬಿಟ್ಟು ಅದು ತನ್ನ ಮೊದಲಿನ ಹೊಳಪನ್ನು ಪಡೆಯಬೇಕಾಗಿದೆ. ಜೈನ ಧರ್ಮ ಕೋಮುವಾದ ಮತ್ತು ಜಾತಿವಾದವನ್ನು ಒಪ್ಪದ ಜೀವಪರ ವೈಚಾರಿಕ ತಳಹದಿ ಹೊಂದಿದೆ. ಜೈನಧರ್ಮದಲ್ಲಿ ಅಸ್ಪ್ರಶ್ಯತೆ ಇಲ್ಲ. ಅದನ್ನು ಯಾರಾದರೂ ಪಾಲಿಸುತ್ತಿದ್ದರೆ ಅವರು ಜೈನರಲ್ಲ. ಜೈನ ಧರ್ಮದ ಸಿದ್ದಾಂತ ಓದಿಕೊಂಡಿದ್ದ ಕೊಸಾಂಬಿ ಆ ಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಕೂಡ ಓದಿದ್ದರು. ಆದರೆ ಅವರ ಆಯ್ಕೆ ಬೌದ್ಧ ಧರ್ಮವಾಗಿತ್ತು. ಅಹಿಂಸಾ ಪರಮೊಧರ್ಮ ಜೈನರ ಮಹತ್ವದ ನಂಬಿಕೆ. ಆದರೆ ಅದು ಆಚರಣೆಯಲ್ಲಿ ಸಾಕಾರಗೊಳ್ಳಬೇಕಾಗಿದೆ. ಬುದ್ಧ, ಬಸವಣ್ಣನವರಂತೆ ಮಹಾವೀರ ಈ ಭಾರತದ ಮಹಾಚೇತನ .
- ಸನತ್ ಕುಮಾರ ಬೆಳಗಲಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ