ಮಾನವನ ಬೆವರು ಸೊಳ್ಳೆಗಳನ್ನು ಆಕರ್ಷಿಸುತ್ತದೆಯೇ?

ಮಾನವನ ಬೆವರು ಸೊಳ್ಳೆಗಳನ್ನು ಆಕರ್ಷಿಸುತ್ತದೆಯೇ?

ಭೂಮಿಯ ಮೇಲೆ ಅತ್ಯಂತ ಉಪಟಳ ನೀಡುವ ಕೀಟಕ್ಕೆ ಬಹುಮಾನ ನೀಡುವುದೇ ಆದರೆ ಮೊದಲ ಬಹುಮಾನ ನಿಸ್ಸಂದೇಹವಾಗಿ ಸೊಳ್ಳೆಗೇ ಹೋಗುತ್ತದೆ. ಅತ್ಯಂತ ಪುಟ್ಟದಾದ ಈ ಜೀವಿ ಮಾನವನಿಗೆ ನೀಡುವ ಉಪಟಳ ಅಷ್ಟಿಷ್ಟಲ್ಲ. ತನ್ನ ಸಣ್ಣಗಿನ ಸೂಜಿಯಂತಹ ಸಾಧನದಿಂದ ಅದು ನಮ್ಮ ಚರ್ಮಕ್ಕೆ ತೂತು ಮಾಡಿ ರಕ್ರವನ್ನು ಹೀರುತ್ತದೆ. ಮಳೆಗಾಲದ ಸಮಯದಲ್ಲಿ ಇದರ ಕಾಟ ವಿಪರೀತ. ಸೊಳ್ಳೆಗಳು ಹೊತ್ತುಕೊಂಡು ಬರುವ ಕಾಯಿಲೆಗಳೂ ಅನೇಕ. ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಹೀಗೆ ಅನೇಕ ರೋಗಗಳು ತಗುಲಿ ಸರಿಯಾದ ಸಮಯಕ್ಕೆ ಸೂಕ್ತವಾದ ಚಿಕಿತ್ಸೆ ಲಭಿಸದೇ ಹೋದರೆ ಜೀವಹಾನಿಯಾಗುವ ಸಾಧ್ಯತೆಯೂ ಇದೆ.

ನೀವು ಬೇಕಾದರೆ ಗಮನಿಸಿ. ನೀವು ನಿಮ್ಮ ಪರಿಚಿತರೊಂದಿಗಿರುವಾಗ ನಿಮಗೆ ಜಾಸ್ತಿ ಸೊಳ್ಳೆ ಕಡಿಯಬಹುದು, ಅದೇ ಸಮಯದಲ್ಲಿ ನಿಮ್ಮ ಪರಿಚಿತರಿಗೆ ಕಡಿಯುವ ಸೊಳ್ಳೆಯ ಪ್ರಮಾಣ ಕಡಿಮೆ ಇರಬಹುದು. ಇದು ಏಕಿರಬಹುದು? ಎಂದು ಆಲೋಚನೆ ಮಾಡಿರುವಿರಾ? ಇದಕ್ಕೆ ಕಾರಣ ನಿಮ್ಮ ಚರ್ಮದಿಂದ ಒಸರುವ ಬೆವರು. ಯಾರ ಮೈಯಿಂದ ಜಾಸ್ತಿ ಪ್ರಮಾಣದ ಬೆವರು ಹೊರ ಬರುತ್ತದೆಯೋ ಅವರಿಗೆ ಸೊಳ್ಳೆಗಳು ಕಡಿಯುವ ಸಾಧ್ಯತೆ ಅಧಿಕ. ಏಕೆಂದರೆ ನಮ್ಮ ಬೆವರಿನಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ವಾಸನೆಗೆ (ದುರ್ಗಂಧ) ಸೊಳ್ಳೆಗಳು ಆಕರ್ಷಿತವಾಗುತ್ತವೆ ಎನ್ನುತ್ತವೆ ಒಂದು ಅಧ್ಯಯನ. 

ನೆದರ್ ಲ್ಯಾಂಡಿನ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಯಾದ ವಿಲಿಯಮ್ ಟ್ಯಾಕನ್ ಎಂಬವರು ೨೧ನೇ ಶತಮಾನದ ಆರಂಭದಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ಸೊಳ್ಳೆಗಳು ತಾಜಾ ಬೆವರಿಗಿಂತಲೂ ಹಳೆಯ ಬೆವರಿನಿಂದ ಹೆಚ್ಚು ಆಕರ್ಷಿತವಾಗುತ್ತವೆಯಂತೆ. ಇದನ್ನು ತಿಳಿಯೋದಕ್ಕೆ ಆತ ಹಲವಾರು ಜನರ ಬೆವರನ್ನು ಸಂಗ್ರಹಿಸಿ, ಸೊಳ್ಳೆಗಳನ್ನು ಬಂಧಿಸಲು ವಿಶೇಷವಾಗಿ ತಯಾರಿಸಿದ ಬಲೆಗಳಿಗೆ ಲೇಪಿಸಿದರು. ಹೊಸದಾದ, ತಾಜಾ ಬೆವರಿಗೆ ಕಡಿಮೆ ಸೊಳ್ಳೆಗಳು ಆಕರ್ಷಿತವಾಗುತ್ತಿದ್ದರೆ, ಮೂರು ದಿನಗಳಷ್ಟು ಹಳೆಯ ಬೆವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳು ಆಕರ್ಷಿತವಾದುವು. ಕ್ರಿಮಿನಾಶಕಗಳನ್ನು ಬಳಸಿದ (Sterilization) ಬೆವರಿಗೆ ಯಾವುದೇ ಸೊಳ್ಳೆಗಳು ಆಕರ್ಷಿತವಾಗಲಿಲ್ಲ. ಈ ಪ್ರಯೋಗದಿಂದ ಆತ ಕಂಡುಕೊಂಡ ಸತ್ಯವೇನೆಂದರೆ, ತಾಜಾ ಬೆವರಿನಲ್ಲಿ ಕಡಿಮೆ ಪ್ರಮಾಣದ ಬ್ಯಾಕ್ಟೀರಿಯಾಗಳು ಬೆಳೆದಿರುತ್ತವೆ. ಇದು ಸೂಸುವ ಬೆವರಿನ ದುರ್ಗಂಧವು ಕಡಿಮೆ ಪ್ರಮಾಣದಲ್ಲಿರುತ್ತವೆ, ಈ ಕಾರಣದಿಂದ ಸೊಳ್ಳೆಗಳೂ ಕಡಿಮೆ ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಅದೇ ಮೂರು ದಿನಗಳ ಹಳೆಯ ಬೆವರಿನಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡಿದ್ದು ಇದರಿಂದ ಹೊರಹೊಮ್ಮುವ ದುರ್ಗಂಧದ ಪ್ರಮಾಣ ಅಧಿಕವಾಗಿರುವುದರಿಂದ ಸೊಳ್ಳೆಗಳೂ ಅಧಿಕ ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಅದೇ ಕ್ರಿಮಿನಾಶಕಗಳನ್ನು ಬಳಸಿದ ಬೆವರಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ ಅಥವಾ ಅತೀ ಕನಿಷ್ಟ ಪ್ರಮಾಣದಲ್ಲಿ ಇರುವುದರಿಂದ ದುರ್ಗಂಧದ ಪ್ರಮಾಣ ಅತ್ಯಂತ ಕನಿಷ್ಟವಾಗಿರುತ್ತದೆ. ಆದುದರಿಂದ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆಗಳಿಲ್ಲ. 

ನಾವು ಪ್ರತೀ ನಿತ್ಯ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧವನ್ನು ನಿವಾರಿಸಿಕೊಳ್ಳಬಹುದಲ್ಲವೇ ಎಂದರೆ ಈ ಮಾತು ಪೂರ್ಣ ಸತ್ಯವಾಗುವುದಿಲ್ಲ. ಏಕೆಂದರೆ ನೀವು ಎಷ್ಟೇ ಬಾರಿ ಸ್ನಾನ ಮಾಡಿದರೂ ಸ್ವಲ್ಪವಾದರೂ ಬ್ಯಾಕ್ಟೀರಿಯಾ ನಿಮ್ಮ ಚರ್ಮದಲ್ಲಿ ಉಳಿದುಕೊಂಡು ಬೆವರಿನಲ್ಲಿ ದುರ್ಗಂಧವನ್ನು ಉತ್ಪಾದಿಸುತ್ತದೆ. ಇದಕ್ಕೆ ಕಾರಣ ಬ್ಯಾಕ್ಟೀರಿಯಾಗಳು ನಡೆಸುವ ರಾಸಾಯನಿಕ ಪ್ರಕ್ರಿಯೆ. ಈ ಕಾರಣದಿಂದ ಸೊಳ್ಳೆಗಳನ್ನು ಸಂಪೂರ್ಣವಾಗಿ ಮೋಸ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ವಿಲಿಯಮ್ ಟ್ಯಾಕನ್. ನಾವು ಸೊಳ್ಳೆಗಳನ್ನು ಓಡಿಸಲು ಬಳಸುವ ಕ್ರೀಮ್ ಅನ್ನು ನಾವು ಹಚ್ಚಿಕೊಂಡಾಗ ಚರ್ಮದಿಂದ ಬೆವರಿನ ವಾಸನೆ ಹೊರ ಬರುವುದಿಲ್ಲ. ಈ ಕಾರಣದಿಂದ ಸೊಳ್ಳೆಗಳು ನಮ್ಮನ್ನು ಕಡಿಯುವುದಿಲ್ಲ. ಮತ್ತೆ ಕೆಲವು ಸೊಳ್ಳೆ ನಿವಾರಕ ಕಾಯಿಲ್ ಗಳು ಮತ್ತು ವಿಕರ್ಷಕಗಳು ಹೊಸ ಸೂಸುವ ರಾಸಾಯನಿಕಗಳಿಂದ ಸೊಳ್ಳೆಗಳು ಸಾಯುತ್ತವೆ ಅಥವಾ ಪ್ರಜ್ಞೆ ತಪ್ಪುತ್ತವೆ. 

ನಿಮಗೆ ಒಂದು ವಿಷಯ ಗೊತ್ತೇ? ಮಾನವನನ್ನು ಕಚ್ಚುವ ಸೊಳ್ಳೆಗಳು ಯಾವತ್ತಿಗೂ ಹೆಣ್ಣೇ ಆಗಿರುತ್ತದೆ. ಗಂಡು ಸೊಳ್ಳೆ ಯಾವತ್ತೂ ಮನುಷ್ಯರ ರಕ್ತ ಹೀರುವುದಿಲ್ಲ. ಈ ಕಾರಣದಿಂದಲೇ ಮಲೇರಿಯಾ, ಡೆಂಗ್ಯೂವಿನ ವಾಹಕಗಳಾದ ಸೊಳ್ಳೆಗಳು ಹೆಣ್ಣು ಸೊಳ್ಳೆಗಳೇ ಆಗಿರುತ್ತದೆ. ಸೊಳ್ಳೆಗಳಿಗೆ ಮಾನವನ ರಕ್ತ ಆಹಾರವಲ್ಲ. ಆಹಾರವಾಗಿರುತ್ತಿದ್ದರೆ, ಗಂಡು ಸೊಳ್ಳೆಗಳೂ ಕಚ್ಚಬೇಕಿತ್ತಲ್ಲವೇ? ಸೊಳ್ಳೆಗಳ ಆಹಾರ ಹೂವಿನಲ್ಲಿರುವ ಮಕರಂದ. ಹಾಗಾದರೆ ಹೆಣ್ಣು ಸೊಳ್ಳೆಗಳು ಮಾನವನ್ನು ಕಚ್ಚಿ ರಕ್ತ ಹೀರುವುದು ಏಕೆ? ಇದಕ್ಕೆ ಉತ್ತರವೆಂದರೆ ಹೆಣ್ಣು ಸೊಳ್ಳೆಗಳು ಇಡುವ ಮೊಟ್ಟೆಯೊಳಗಿನ ಭ್ರೂಣದ ಬೆಳವಣಿಗೆಗೆ ಮಾನವ ರಕ್ತದಲ್ಲಿರುವ ಪ್ರೋಟೀನ್ ಅತ್ಯಗತ್ಯ. ಈ ಕಾರಣಕ್ಕಾಗಿಯೇ ಹೆಣ್ಣು ಸೊಳ್ಳೆಗಳು ಮಾನವನ ರಕ್ತ ಹೀರಿ ಜೀವ ತಿನ್ನುತ್ತವೆ. 

(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ