ಮಾನವನ ಸಾಕು ಪ್ರಾಣಿಯಾದ ಮೊದಲ ಜೀವಿ ಯಾವುದು?

ಮಾನವನ ಸಾಕು ಪ್ರಾಣಿಯಾದ ಮೊದಲ ಜೀವಿ ಯಾವುದು?

ಪ್ರಾಣಿಗಳನ್ನು ತಮ್ಮ ಸಾಕು ಜೀವಿಗಳಾಗಿ ಬಳಸಿಕೊಳ್ಳಬಹುದು ಎಂದು ತಿಳಿದು ಕೊಂಡ ಮೊದಲ ಮಾನವ ಯಾರು ಎಂದು ತಿಳಿಯದೇ ಇದ್ದರೂ, ಮಾನವ ಸಾಕಿದ ಮೊದಲ ಪ್ರಾಣಿ ನಾಯಿ ಎಂಬುದು ಬಹುತೇಕ ಸಾಬೀತಾಗಿದೆ. ಬಹಳಷ್ಟು ವರ್ಷಗಳ ಹಿಂದೆ ಅಂದರೆ ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಮಾನವ ನಾಯಿಯನ್ನು ಪಳಗಿಸಿ ತನ್ನ ಸಾಕು ಪ್ರಾಣಿಯನ್ನಾಗಿ ಮಾಡಿಕೊಂಡಿರಬಹುದು ಎಂಬ ದಾಖಲಾತಿಗಳು ಸಿಗುತ್ತವೆ. ಆ ಸಮಯದಲ್ಲಿ ಮಾನವ ನ ದೈನಂದಿನ ಆಹಾರದ ಅಗತ್ಯತೆಗೆ ಬೇಟೆಗಾರನಾಗಿದ್ದ. ತನ್ನ ಬೇಟೆಯನ್ನು ಹಿಡಿಯಲು ಸುಲಭವಾಗಲು ಆತ ನಾಯಿಯನ್ನು ಪಳಗಿಸಿಕೊಂಡಿರಬಹುದು ಎನ್ನುವುದು ವಾದ. ಹೀಗಾಗಿ ಆತ ನಾಯಿಗಳನ್ನು ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳಲು ಆರಂಭಿಸಿದ. ನಾಯಿಗಳೂ ಮಾನವನ ಸಂಪರ್ಕವನ್ನು ಒಪ್ಪಿ ಅಪ್ಪಿಕೊಂಡವು. ನಾಯಿಗಳಿಗೆ ಮಾನವನ ಸಂಪರ್ಕದಿಂದ ಸುಲಭದಲ್ಲಿ ಆಹಾರ, ವಾಸಕ್ಕೆ ಜಾಗ, ಭದ್ರತೆ ದೊರೆಯಿತು. ಅದೇ ರೀತಿ ಮಾನವನಿಗೂ ನಾಯಿಗಳಿಂದ ಆಹಾರ ಹುಡುಕಲು ಸಹಾಯ, ಭದ್ರತೆ, ಪ್ರೀತಿ, ವಿಶ್ವಾಸ ದೊರೆಯಿತು. 

ಸುಮಾರು ಹತ್ತು ಅಥವಾ ಹದಿನೆರಡು ಸಾವಿರ ವರ್ಷಗಳ ಹಿಂದೆ ಹೂಳಲ್ಪಟ್ಟ ಮಾನವ ಹಾಗೂ ನಾಯಿಯ ಶವಗಳು ಇಸ್ರೇಲ್ ನಲ್ಲಿ ಸಿಕ್ಕಿವೆ. ಇವುಗಳನ್ನು ಒಟ್ಟಿಗೆ ಹೂಳಲಾಯಿತೇ ಅಥವಾ ಏನಾದರೂ ದುರ್ಘಟನೆಗೆ ತುತ್ತಾಗಿ ಜೊತೆಯಲ್ಲೇ ಸತ್ತು ಹೋದರೇ ಅಥವಾ ಯಾರಾದರೂ ಕೊಂದು ಎರಡೂ ಶವಗಳನ್ನು ಜೊತೆಯಾಗಿ ಹೂತು ಹಾಕಿದರೇ ಎಂಬ ವಿಷಯಗಳು ಸ್ಪಷ್ಟವಾಗದೇ ಇದ್ದರೂ, ಅಷ್ಟೊಂದು ಹಿಂದಿನ ಸಮಯದಿಂದಲೂ ನಾಯಿಯು ಮಾನವನ ಜೊತೆಗಾರ ಪ್ರಾಣಿ ಆಗಿತ್ತು ಎಂಬುವುದನ್ನು ಅರಿತುಕೊಳ್ಳಬಹುದಾಗಿದೆ. ಆ ಸಮಯ ಮಾನವನೊಬ್ಬ ಸತ್ತಾಗ ಆತ ಸಶರೀರವಾಗಿ ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಈಜಿಪ್ಟ್ ದೇಶಗಳಲ್ಲಿ ಇತ್ತು. ಆತನಿಗೆ ಮುಂದಿನ ಜೀವನಕ್ಕೆ ಬೇಕಾದ ಇಷ್ಟದ, ಅಗತ್ಯದ ವಸ್ತುಗಳನ್ನು ಶವಪೆಟ್ಟಿಗೆಯಲ್ಲಿ ಇರಿಸಿ ಹೂಳುವುದು ಅಂದಿನ ಕ್ರಮವಾಗಿತ್ತು. ಈಜಿಪ್ಟ್ ನಲ್ಲಿ ಕಂಡು ಬರುವ ಬೃಹತ್ ಪಿರಮಿಡ್ ಗಳಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. 

ನಮ್ಮ ಪುರಾಣ ಕಥೆಗಳನ್ನು ಗಮನಿಸಿದರೆ ಪಾಂಡವರು ತಮ್ಮ ಅಂತಿಮ ದಿನಗಳಲ್ಲಿ ಸ್ವರ್ಗಾರೋಹಣಕ್ಕೆ ತೆರಳುವಾಗ ಯುದಿಷ್ಟಿರನ ಸಂಗಡ ಒಂದು ನಾಯಿಯೂ ಬರುತ್ತದೆ. ಕೊನೆಗೆ ಯುದಿಷ್ಟಿರನನ್ನು ಸ್ವರ್ಗಕ್ಕೆ ಜೀವಂತವಾಗಿಯೇ ಕರೆದುಕೊಂಡು ಹೋದಾಗ ಆತ ತನ್ನನ್ನು ನಂಬಿ ಬಂದ ನಾಯಿಯನ್ನೂ ಜೊತೆಯಲ್ಲೇ ಕರೆದುಕೊಂಡು ಹೋದನಂತೆ. ಇವೆಲ್ಲವೂ ಅವರವರ ನಂಬಿಕೆಯಂತೆ ಕಂಡುಬಂದರೂ ಅಂದೇ ನಾಯಿಯು ಮಾನವನ ಜೊತೆಗಾರ ಎನ್ನುವ ಕಲ್ಪನೆ ಇತ್ತು ಎನ್ನಬಹುದೇನೋ?

ನಾಯಿಯ ಬಳಿಕ ಬೆಕ್ಕು ಬಹುಷಃ ಮಾನವನ ಜೊತೆಗಾರನಾಗಿರಬೇಕು ಎನ್ನುತ್ತಾರೆ ಸಂಶೋಧಕರು. ಆದರೆ ಬೆಕ್ಕನ್ನು ಪೂರ್ಣವಾಗಿ ಪಳಗಿಸಲು ಮಾನವನಿಗೆ ಇನ್ನೂ ಸಾಧ್ಯವಾಗಿಲ್ಲ. ಆ ಕಾರಣದಿಂದಲೇ ಜನರು ಬೆಕ್ಕಿಗಿಂತ ಹೆಚ್ಚಾಗಿ ನಾಯಿಯನ್ನೇ ನಂಬುತಾರೆ. ಬೆಕ್ಕನ್ನು 'ಕಳ್ಳ ಬೆಕ್ಕು' ಎಂದೇ ಕರೆಯುತ್ತಾರೆ. ಬೆಕ್ಕು ಸುಮಾರು ೧೦-೧೨ ಸಾವಿರ ವರ್ಷಗಳಿಂದ ಮಾನವನ ಸಂಗಾತಿಯಾಗಿದೆ ಎನ್ನುವುದು ಒಂದು ವಾದ. ಮನವನ ಜೊತೆ ಬೆಕ್ಕು ಇರುವ ಪಳೆಯುಳಿಕೆ ಸಿಕ್ಕಿದ್ದು ಸೈಪ್ರಸ್ ಎಂದ ದ್ವೀಪದಲ್ಲಿ. ಈಜಿಪ್ಟಿನ ರಾಜರಿಗೆ ಬೆಕ್ಕು ಸಾಕುವ ಖಯಾಲಿ ಇತ್ತು. ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಬೆಕ್ಕುಗಳನ್ನು ತಮ್ಮ ಜೊತೆ ಇರಿಸಿಕೊಳ್ಳುತ್ತಿದ್ದರಂತೆ. ಅವರು ಬೆಕ್ಕಿನ ಪ್ರತಿಕೃತಿಗಳನ್ನು ಕೂಡಾ ಮರದಲ್ಲಿ ಮತ್ತು ಶಿಲೆಗಳಲ್ಲಿ ಮಾಡಿಸಿದ್ದರು. 

ಮಾನವನ ಸಂಪರ್ಕಕ್ಕೆ ಬರುವ ಮೊದಲು ಎಲ್ಲಾ ಪ್ರಾಣಿಗಳು ಕಾಡಿನಲ್ಲೇ ವಾಸ ಮಾಡುತ್ತಿದ್ದವು. ಮಾನವನ ಜೊತೆ ಹೊಂದಾಣಿಕೆ ಹುಟ್ಟಿದ ಮೇಲೆ ಅವುಗಳ ದಪ್ಪವಾದ ತೊಗಲು ಕ್ರಮೇಣ ಮೆದುವಾಗತೊಡಗಿತು ಎಂದು ಅಧ್ಯಯನಗಳು ತಿಳಿಸುತ್ತವೆ. ಮೈರೋಮ ನವಿರಾಗುತ್ತದೆ. ಕಿವಿಗಳು ಜೋಲು ಬೀಳುತ್ತವೆ. ಮುಖದಲ್ಲಿ ಸೌಮ್ಯತೆ ಕಂಡು ಬರುತ್ತದೆ. ನಾಯಿಗಳನ್ನೇ ಹೋಲುವ ತೋಳಗಳು ಮಾತ್ರ ಮಾನವನ ಜೊತೆ ಪಳಗದೇ ಇನ್ನೂ ಕಾಡಿನಲ್ಲೇ ಇವೆ. ಅವುಗಳ ಚರ್ಮ ದಪ್ಪವಾಗಿದ್ದು, ಅವುಗಳು ಕ್ರೂರ ವರ್ತನೆಯನ್ನು ತೋರಿಸುತ್ತವೆ. ಮಾನವ ಹಲವಾರು ಪ್ರಾಣಿಗಳನ್ನು ಪಳಗಿಸಿಕೊಂಡಿದ್ದಾನೆ, ಆದರೆ ಸಾಕು ಪ್ರಾಣಿಗಳಾಗಿ ಆತನ ಜೊತೆ ಇರೋದು ನಾಯಿ, ಬೆಕ್ಕುಗಳಂತಹ ಕೆಲವು ಪ್ರಾಣಿಗಳು ಮಾತ್ರ. 

ಅಂತರ್ಜಾಲ ತಾಣ ಕೃಪೆ