ಮಾನವರಾಗೋಣ...!

ಮಾನವರಾಗೋಣ...!

ವಿದ್ಯಾರ್ಥಿಗಳ ಜೊತೆ ನಾನು ಯಾವುದೋ ವಿಷಯದ ಚರ್ಚೆಯಲ್ಲಿ ತೊಡಗಿದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಬ್ಬ ಹುಡುಗ ಬಂದು "ಟೀಚರ್, ನಿಮಗೊಂದು ಸರ್ಪ್ರೈಸ್ ಇದೆ" ಎಂಬ ಮುಗ್ಧ ಧ್ವನಿಯಲ್ಲಿ ಮಾತನಾಡಿಸಿದಾಗ ನಾನು ಪಕ್ಕನೆ ಹಿಂತಿರುಗಿ ನೋಡಿದೆ. ನನಗೆ ನಿಜವಾಗಿಯೂ ಆಶ್ಚರ್ಯವಾಗಿತ್ತು. ಹೌದು!  ಅದೇ ಹುಡುಗ. ತರಗತಿಯಲ್ಲಿ ನನ್ನ ಸಮಯ ವ್ಯರ್ಥ ಮಾಡಿದ ಹುಡುಗ. "ಏನೋ? ಸಾಕು ನಿನ್ನ ನಾಟಕ. ನಿನ್ನಂತಹ ಉದ್ದಟತನದ ಹುಡುಗನನ್ನು ನಾನು ಇದುವರೆಗೂ ನೋಡಿಲ್ಲ" ಎಂದು ಏರು ಧ್ವನಿಯಲ್ಲಿ ನಾನು ಗದರಿದೆ.  ಯಾಕೆಂದರೆ ಆಗಷ್ಟೇ ನಾನು ಎಂಟನೇ ತರಗತಿಯಲ್ಲಿ ಗಣಿತ ಪಾಠವನ್ನು ಮುಗಿಸಿ ಇನ್ನೊಂದು ತರಗತಿಗೆ ಹೋಗುವ ಆತುರದಲ್ಲಿದ್ದೆ. ಅದೇ ಹುಡುಗನಿಗೆ ಬಹಳ ತುಂಟಾಟ ಮಾಡುತ್ತಿದ್ದ ಕಾರಣಕ್ಕೆ ತರಗತಿಯಲ್ಲಿ ಗದರಿಸಿದ್ದೆ. ಹೇಳಿ ಕೇಳಿ ಗಣಿತ ಪಾಠ. ಒಂದು ಕಡೆ ಪಠ್ಯ ಮುಗಿಸಬೇಕೆನ್ನುವ ಆತುರ. ಇನ್ನೊಂದೆಡೆ, ಪ್ರತಿಯೊಂದು ವಿದ್ಯಾರ್ಥಿಗಳಿಗೂ ಗಣಿತವನ್ನು ಸರಿಯಾಗಿ ಅರ್ಥ ಮಾಡಿಸುವ ಹಂಬಲ. ಕಿವಿ ಹಿಂಡಿ ತುಂಬಾ ಬುದ್ಧಿ ಹೇಳಿದೆ. ಕೊನೆಗೆ ಕೋಪ ನೆತ್ತಿಗೇರಿ "ನಿಮ್ಮಂತವರಿಗೆ ಬುದ್ಧಿ ಮಾತುಗಳು ವ್ಯರ್ಥ,  ನೀವುಗಳು ಸರಿಯಾಗುವ ಜಾತಿ ಅಲ್ಲ" ಎಂದು ಗೊಣಗುತ್ತಾ ಹೊರ ನಡೆದಿದ್ದೆ. ನನ್ನ  ಕೋಪ ಇನ್ನೂ ತಣಿದಿರಲಿಲ್ಲ. 

ವಿಷಯ ಹೀಗಿರುವಾಗ ನನ್ನ ಕೋಪಕ್ಕೆ ಗುರಿಯಾದ ಆ ಹುಡುಗ ಏನೂ ಆಗಿಲ್ಲ ಎಂಬಂತೆ ಅರಳಿದ ಕಣ್ಢುಗಳಿಂದ ಮಂದಹಾಸ ಬೀರುತ್ತಾ ಬಹಳ ತಾಳ್ಮೆಯಿಂದ  "ಟೀಚರ್ ನಿಮ್ಮ ಅಮೂಲ್ಯ ವಸ್ತುವೊಂದನ್ನು ತರಗತಿಯಲ್ಲಿ ಬಿಟ್ಟುಹೋಗಿದ್ರಿ. ನೆನಪು ಮಾಡಿ ಟೀಚರ್." ಅಂದ. ಇವನೇನೋ ತಮಾಷೆ ಮಾಡುತ್ತಿರಬೇಕೆಂದು ಮತ್ತೂ ಕೋಪ ಜಾಸ್ತಿಯಾಯಿತು. ಆದರೆ ಆ ಹುಡುಗ ಕೈ ತೆರೆದು ತೋರಿಸಿದಾಗ ನನಗೆ ನಿಜವಾಗಿಯು ಹೃದಯ ತುಂಬಿ ಬಂತು. ಕಾರಣ, ನನ್ನ ಅಮೂಲ್ಯ ವಾಚ್ ನ್ನು ನಾನು ತರಗತಿಯಲ್ಲೇ ಮೇಜಿನ ಮೇಲೆ ಮರೆತು ಬಿಟ್ಟಿದ್ದೆ. ಇನ್ನೊಂದು ಆಶ್ಚರ್ಯ ಸಂಗತಿ ಎಂದರೆ ಪಾಠದ ಸಮಯದಲ್ಲಿ ಅದೇ ಹುಡುಗನ ವಾಚ್ ನ್ನು ನಾನು ಸೀಜ್ ಮಾಡಿದ್ದೆ. ಆದರೆ ಅರೆಕ್ಷಣದಲ್ಲಿ ಆದ ಬದಲಾವಣೆ ಮತ್ತು ಅವನ ಇಂತಹ ಪ್ರಾಮಾಣಿಕತೆ ಹಾಗೂ ಮುಗ್ಧತೆಗೆ ನಾನು ಸೋತು ಹೋದೆ. ನಾನು ಆ ಹುಡುಗನಿಗೆ ಬೈದು ಐದು ನಿಮಿಷ ಕೂಡ ಆಗಿರಲಿಕ್ಕಿಲ್ಲ. ನನ್ನ ಮನಸ್ಸಿನ್ನೂ ಅದೇ ವಿಷಯದಲ್ಲಿ ಕುದಿಯುತ್ತಿದ್ದರೂ ಆ ಹುಡುಗ ಎಲ್ಲವನ್ನೂ ಮರೆತು ಬದಲಾದಾಗ  ಒಂದು ಕ್ಷಣ ನಾನು ಮೌನವಾದೆ. ಒಬ್ಬ ವಿದ್ಯಾರ್ಥಿಯೆದುರು ನಾನು ತುಂಬಾ ಚಿಕ್ಕವಳಾಗಿ ಮನಸ್ಸಲ್ಲೇ ಮುಜುಗರಗೊಂಡೆ. ಪುಟ್ಟ ಮಕ್ಕಳಿಂದಲೂ ಕೂಡ ಕಲಿಯುವಂತದ್ದು ಎಷ್ಟೋ ಇದೆ ಅಂತ ಅಂದುಕೊಂಡು ಭೇಷ್ ಎಂದು ಅವನ ಬೆನ್ನು ತಟ್ಟಿದೆ. 

ಈ ಘಟನೆ ತುಂಬಾ ಚಿಕ್ಕದಾದರೂ ಇದರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಸಹವಾಸ ದೋಷದಿಂದಲೋ, ಬೆಳೆದ ವಾತಾವರಣದಿಂದಲೋ ಅದೆಷ್ಟೋ ಮಕ್ಕಳು ದುರ್ಮಾರ್ಗದಲ್ಲಿ ಸಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ಇಂತಹ ಘಟನೆಗಳು ಮನಸ್ಸಿಗೆ ಬಹಳವಾಗಿ ತಟ್ಟುತ್ತವೆ. ನಮ್ಮ ಜೀವನದ ಪ್ರತಿ ನಡೆ, ನುಡಿಯಲ್ಲೂ ನಾವು ಪ್ರಾಮಾಣಿಕರಾಗಿ, ಪ್ರತಿಯೊಬ್ಬರ ಹೃದಯದಲ್ಲೂ ಗೌರವ ಮತ್ತು ಪ್ರೀತಿಯ ಹಣತೆಯನ್ನು ಬೆಳಗಿ ಜೀವನದ ಪ್ರತಿ ಕ್ಷಣವನ್ನೂ ಕೂಡ ಸಂಭ್ರಮಿಸೋಣ, ಮನುಷ್ಯರಿಂದ ಮಾನವರಾಗೋಣ. ಶ್ರೀಮಂತಿಕೆಯ ಬದುಕನ್ನು ಬೇರೆಲ್ಲೋ ಹುಡುಕುವುದಕ್ಕಿಂತ, ನಮ್ಮ ಒಳ್ಳೆಯ ವ್ಯಕ್ತಿತ್ವವೇ ನಮ್ಮ ಆಸ್ತಿ ಎಂದು ಬಾಳೋಣ. ಹೌದಲ್ವಾ?

- ರೂಪಶ್ರೀ ಮೋಂತಿಮಾರು ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೇಟ್ ತಾಣ