ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ

ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ

ಬರಹ

[ ಫೀಲ್ಡ್ ಮಾರ್ಷಲ್ ಜನರಲ್ ಮಾನೆಕ್ ಷಾರವರ ಪುತ್ರಿ ಮಾಜ ದಾರುವಾಲಾರವರು "ದ ಹಿಂದು" ಪತ್ರಿಕೆಯಲ್ಲಿ ಬರೆದ ಲೇಖನದ ಅನುವಾದ. ]

ಅಹ್ಮದಾಬಾದ್ ಬಾಂಬಿನ ದಾಳಿ ಮಾಡಿದವರು ದಕ್ಷಿಣದಲ್ಲಿ, ಮುಖ್ಯವಾಗಿ ಕೇರಳದಲ್ಲಿ ತರಬೇತು ಪಡೆದವರೆಂದು ಗುಜರಾತ್ ಸರ್ಕಾರ ದೂರಿತು. ಆಗ ಕೇರಳ ಸರ್ಕಾರ ಹಿಂದುಮುಂದು ನೋಡದೆ ಆತಂಕವಾದವನ್ನು ಹತ್ತಿಕ್ಕುವ ತನ್ನ ಪ್ರಯತ್ನಕ್ಕೆ ಮಾನವಹಕ್ಕು ಹೋರಾಟಗಾರರು ಹುಯಿಲಿಡುವ ಮೂಲಕ ಹೇಗೋ ತಡೆಯೊಡುತ್ತಿದ್ದಾರೆಂದು ಪ್ರತಿಕ್ರಿಯಿಸಿತು. ಸರ್ಕಾರ ಕಾನೂನನ್ನು ಎತ್ತಿಹಿಡಿದು, ಕ್ರಮಪೂರ್ವಕವಾಗಿ ಕೆಲಸಮಾಡಲಿ ಎಂದಷ್ಟೆ ಕೇಳುವ ಮಾನವಹಕ್ಕು ಗುಂಪುಗಳನ್ನು ಈ ಬಗೆಯ ಸಾರಾಸಗಟಾದ ಹೇಳಿಕೆಗಳು ಅನುಮಾನಿಸುವಂತೆ, ಅವರ ಮುಖಕ್ಕೆ ಮಸಿ ಬಳಿಯುವಂತೆ ಮಾಡುತ್ತದೆ. ಹೋರಾಟಗಾರರ ವಿರುದ್ಧದ ಇಂತಹ ಹೇಳಿಕೆಗಳು ನಮ್ಮ ದೇಶದಲ್ಲಿ ಆತಂಕವಾದ ಏಕೆ ಹುಲುಸಾಗಿದೆ ಎಂಬುದರಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ. ಆ ಹೇಳಿಕೆಗಳ ಉದ್ದೇಶವೂ ಅದೇ ಅಗಿರುತ್ತದೆ. ಅಷ್ಟಲ್ಲದೆ, ಲಗಾಮಿಲ್ಲದ ಪ್ರಭುತ್ವವನ್ನು ಮತ್ತು ಸಾಮಾಜಿಕ ಪೂರ್ವಾಗ್ರಹದಿಂದ ನಮ್ಮನು ಕಾಪಾಡಲು ಶ್ರಮಿಸುತ್ತಿರುವ ಇವರ ಕೆಲಸಕ್ಕೆ ಇತಿಶ್ರೀ ಹಾಡಲು ಬೇಕಂತಲೇ ಸಹಾಯ ಮಾಡುತ್ತದೆ.

ಮಾನವಹಕ್ಕು ಹೋರಾಟಗಾರರು, ಹಿಂಸೆ ಅಥವಾ ಆತಂಕವಾದವನ್ನು ಬೆಂಬಲಿಸುವುದಾಗಲೀ, ಪರವಹಿಸುವುದಾಗಲೀ ಖಂಡಿತವಾಗಿಯೂ ಮಾಡುವುದಿಲ್ಲ. ಬದಲಾಗಿ ಅದಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ರೂಪಿಸಲು ಹೊರಡುತ್ತಾರೆ. ಕಾನೂನಿನ ಅನ್ವಯ ನಡೆದುಕೊಳ್ಳುವುದು ರಾಜ್ಯಪ್ರಭುತ್ವದ ಮೂಲ ಲಕ್ಷಣ. ಕಾನೂನಿಗೆ ಅನುಗುಣವಾದ ನಡವಳಿಕೆಯನ್ನು ಅದು ಪ್ರಜೆಗಳಿಂದ ಡಿಮಾಂಡ್ ಮಾಡುತ್ತದೆ. ಮತ್ತು ತಾನೇ ಹಾಗೆ ನಡೆದುಕೊಂಡು ಮಾನವಹಕ್ಕನ್ನು ಕಾಪಾಡಲು ಅಪೇಕ್ಷಿಸುತ್ತದೆ. ಇದು ರಾಜ್ಯದ ನಡವಳಿಕೆ ಮತ್ತು ಆತಂಕವಾದಿಗಳ ನಡವಳಿಕೆಯ ನಡುವಿನ ಒಂದು ಮೂಲಭೂತ ವ್ಯತ್ಯಾಸ.

ಆತಂಕವಾದಿಗಳು, ತಮ್ಮ ಲಕ್ಷಣಕ್ಕನುಗುಣವಾಗಿ ಬೇಕೆಂತಲೇ ಕಾನೂನುಬಾಹಿರವಾಗಿ ಆತಂಕ ಹಬ್ಬಿಸುತ್ತಾರೆ. ಆದರೆ ಒಂದು ರಾಜ್ಯ ಅದನ್ನು ಮಾಡುವುದು ಸಲ್ಲ. ಮಾನವಹಕ್ಕು ಕಾಪಾಡಲು ರಾಜ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ, ಹಾಗಿರುವಾಗ ತಾನು ಸಮಾಜಕ್ಕೆ ಅಪೇಕ್ಷಿತ ಮಟ್ಟದ ರಕ್ಷಣೆ ಮತ್ತು ಭದ್ರತೆ ಒದಗಿಸಲಾರದ್ದಕ್ಕೆ ಮಾನವಹಕ್ಕು ಹೋರಾಟಗಾರರನ್ನು ದೂರುವುದು ವಿಪರ್ಯಾಸವೇ ಸರಿ. ಆಡಳಿತ ತನಗಾಗುವ ಕಿರಿಕಿರಿಯಲ್ಲಿ ಈ ಹೋರಾಟಗಾರರನ್ನು ವೈರಿಗಳ ಪರ ಎಂದು ನೋಡುವುದಕ್ಕೆ ಕಾರಣ - ರಾಜ್ಯದ ವಕ್ತಾರರು ಸಕ್ರಮವಾಗಿ ಕೆಲಸಮಾಡಬೇಕು, ಒಳದಾರಿಗಳನ್ನು ಹಿಡಿಯಬಾರದು, ಅಥವಾ ಅಕ್ರಮ ಆಚರಣೆಗಳಲ್ಲಿ ತೊಡಗಬಾರದು, ಅಥವಾ ಸಾರ್ವಜನಿಕ ಪೂರ್ವಾಗ್ರಹ ಮತ್ತು ರೂಢಿಗತ ದೃಷ್ಟಿಗಳನ್ನು ಬಳಸಿ ತಮ್ಮ ಪ್ರತಿಕ್ರಿಯೆಯನ್ನು ರೂಪಿಸಕೂಡದು ಎಂದು ಇವರು ಸದಾ ಒತ್ತಾಯಿಸುವುದೇ ಇರಬೇಕು.

ರಾಜ್ಯಪ್ರಭುತ್ವ ತನಗೆ ಶಾಂತಿಯುತ ಬದುಕನ್ನು ಒದಗಿಸಲು ಸೋತಾಗ ಜನತೆ ಹತಾಶರಾಗುತ್ತಾರೆ. ಆ ಹತಾಶೆಯಲ್ಲಿ ಸರ್ಕಾರ ಕಾನೂನಿನ ಚಂದಗಳನ್ನು ಮರೆತು, ಹೋಗಿ ಆ ದರಿದ್ರ ಜನರನ್ನು ಧೂಳಿಪಟಗೊಳಿಸಿ ವಿನಾಶ ಮಾಡಬೇಕೆಂದು ಹಲ ಬಾರಿ ಆಸೆಪಟ್ಟುಬಿಡುತ್ತದೆ. ದುಷ್ಕೃತ್ಯಗಳಿಂದ ತಪ್ತರಾದ ಜನ - ಆತಂಕವಾದಿಗಳಿಗೇಕೆ ಸಕ್ರಮ ವಿಚಾರಣೆ, ಸುಮ್ಮನೆ ಅವರನ್ನು ಕೊಲ್ಲುವುದೋ ಅಥವಾ ಎಂದೆಂದಿಗೂ ಹೊರಬರದಂತೆ ಸೆರೆಗೆ ತಳ್ಳುವುದೋ ಸೂಕ್ತ ತಾನೆ ಎಂದು ಕೇಳುವುದನ್ನು ಅರ್ಥಮಾಡಿಕೊಳ್ಳಬಹುದು.

ಆದರೆ ಅದಕ್ಕೆ ಉತ್ತರ - ನಮ್ಮ ಮೇಲೆ ದೂರುವವರಿಂದ ನಮ್ಮನ್ನು ಕಾಪಾಡಿಕೊಳ್ಳುವ ಹಕ್ಕು ನಮಗಿರುವುದೇ ಆಗಿದೆ. ಸಕ್ರಮವಾಗಿ ಅಲ್ಲದೆ, ಆತಂಕವಾದಿಗಳಂತೆ ನಾವೂ ಕೂಡ ಕೊಲ್ಲುವುದು ಅಥವಾ ಜನತೆಯ ಸ್ವಾತಂತ್ಯ್ರವನ್ನು ಕಸಿದುಕೊಳ್ಳುವುದರಲ್ಲಿ ತೊಡಗಬಾರದು ಎಂದು ನಮ್ಮ ಸಂವಿಧಾನ ಒತ್ತಾಯಿಸುತ್ತದೆ. ಆದ್ದರಿಂದ "ಆತಂಕವಾದಿ" ಎಂದು ಕರೆಸಿಕೊಳ್ಳುವವರೂ ಕೂಡ, ಆತಂಕವಾದಿಗಳು ಹೌದೆಂದು ಸಾಬೀತಾದ ಮೇಲಷ್ಟೇ ಅವರು ತಮ್ಮ ಪಾಲಿನ ಶಿಕ್ಷೆಗೆ ಅರ್ಹರು - ಅದೂ ರಾಜ್ಯದ ಕೈಯಲ್ಲಿ.

ನಮ್ಮ ಮಕ್ಕಳು "ಆತಂಕವಾದಿ" ಎಂದು ಇದ್ದಕ್ಕಿದ್ದಂತೆ ಹೇಳಲ್ಪಟ್ಟರೆ ನಮಗೆಲ್ಲಾ ಇದೇ ಕ್ರಮವೇ ಬೇಕಾಗಿರುವುದು. ಪೋಲೀಸರೋ ಅಥವಾ ಪ್ಯಾರಾ-ಮಿಲಟರಿಯವರೋ ತಮ್ಮಗಷ್ಟೇ ಇರುವ ರಹಸ್ಯ ತಿಳವನ್ನು ಆಧರಿಸಿ ನನ್ನನ್ನೋ ನಿಮ್ಮನ್ನೋ ನಮ್ಮ ಹಾಸಿಗೆಗಳಲ್ಲಿ ಗುಂಡಿಟ್ಟು ಕೊಲ್ಲುವದೋ ಅಥವಾ ನಿಗೂಢ ಜಾಗಕ್ಕೆ ಕೊಂಡೊಯ್ದು ನಮ್ಮ ಕುಟುಂಬಕ್ಕೆ ಅಥವಾ ನ್ಯಾಯಾಲಕ್ಕೆ ಹೇಳದೆ ಕಡೆಮೊದಲಿಲ್ಲದಂತೆ ವಿಚಾರಣೆ ಮಾಡುವುದೋ ನಮಗೆ ಬೇಡ. ಅದೂ ಕಾನೂನು ಮತ್ತು ಸಕ್ರಮದ ಹೆಸರಿನಲ್ಲಿ! ಮಾನವಹಕ್ಕು ಹೋರಾಟಗಾರರು ನಮ್ಮ ನ್ಯಾಯ ವಿಧಾನಗಳಿಂದ ಅಪೇಕ್ಷಿಸುವುದು - ವೇಗವಾದ, ಸಮವಾದ, ಚುರುಕಾದ, ಪ್ರಾಮಾಣಿಕ ಹಾಗು ಖಚಿತ ಫಲವನ್ನು. ಆತಂಕವಾದಿಗಳೊಡನೆ ವ್ಯವಹರಿಸುವಲ್ಲಿ ನಾವೇಕೆ ಸೋಲುತ್ತಿದ್ದೇವೆ ಎಂಬುದು ನಮ್ಮ ಚರ್ಚೆಯ ವಿಷಯವಾಗಬೇಕು. ಬದಲಿಗೆ ಕಾನೂನಬದ್ಧ ಪ್ರಜೆಗಳ ವಿರುದ್ಧ ಬಾಯಿಗೆ ಬಂದಂತೆ ಬಡಬಡಿಸುವುದು ಅಲ್ಲ.

ಈ ವಿಧಾನಗಳಿಂದ ಕೆಲವು ದಿಟವಾದ ಆತಂಕವಾದಿಗಳು ತಪ್ಪಿಸಿಕೊಳ್ಳಬಹುದು. ಹಾಗಾಗಿಯೇ ಪೋಲೀಸ್ ರಕ್ಷಣೆಯ ಮಟ್ಟ ಬಲಪಡಿಸುವದಕ್ಕೆ ಮತ್ತು ಸುಲಭವಾಗಿ, ವೇಗವಾಗಿ ನ್ಯಾಯ ದಕ್ಕುವುದಕ್ಕೆ ಒತ್ತಾಯಿಸಬೇಕಾಗಿದೆ. ಆದರೆ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಮವಾಗಿ ಈ ಕ್ರಮ ಬೇಡ ಎಂದಾದರೆ ನಾವು ನ್ಯಾಯಾಲಯಗಳನ್ನು ರದ್ದುಪಡಿಸಿಬೇಕಾಗುತ್ತದೆ. ನಾವೂ ಪೋಲೀಸ್ ರಾಜ್ಯವಾಗಬೇಕಾಗುತ್ತದೆ. ಆದರೆ ಸದ್ಯಕ್ಕಂತೂ ನಾವು ರೂಪಿಸಿಕೊಂಡಿರುವುದು ಎಲ್ಲರನ್ನೂ ಸಮಾನವಾಗಿ ಕಾಪಾಡಬೇಕಾದ ಕಾನೂನು ವಿಧಾನವಲ್ಲದೆ ಬೇರೆಯಲ್ಲ.

ಮೂಲ ಇಂಗ್ಲಿಷ್ ಪಾಟ: http://www.hindu.com/op/2008/09/14/stories/2008091450031400.htm