ಮಾನವೀಯತೆಯ ಮಾನಹರಣ

ಮಾನವೀಯತೆಯ ಮಾನಹರಣ

ಬರಹ

ನಾನು ಒಂದು ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಧ್ಯಾಹ್ನದ ಊಟದ ಸಮಯ ೧ ಗಂಟೆಯಿಂದ ೨ ಗಂಟೆಯವರೆಗೆ. ಊಟ ಮುಗಿಸಿ ಒಂದು ಸಣ್ಣ ವಾಕ್ ಮಾಡುವ ಅಭ್ಯಾಸ. ವೈಯಕ್ತಿಕ ಕೆಲಸ ಏನಾದರೂ ಇತ್ತೆಂದರೆ ಅದನ್ನು ಬೇಗ ಮುಗಿಸಿ ಕೆಲಸಕ್ಕೆ ಹಾಜರ್. ನಿನ್ನೆ ಹೀಗೆ ವೈಯಕ್ತಿಕ ಕೆಲಸ ಇತ್ತೆಂದು ಹೋಗಿ ಕೆಲಸ ಮುಗಿಸಿ ವಾಪಸ್ ಕಚೇರಿಗೆ ತೆರಳುತ್ತಿದ್ದೆ. ದಾರಿಯ ಮಧ್ಯದಲ್ಲಿ ಭಾರಿ ಜನ ಸೇರಿದ್ದರು. ನಾನು ಕೂಡ ನನ್ನ ವಾಹನದಲ್ಲಿದ್ದೆ. ಅಲ್ಲೇನೋ ಅಪಘಾತವಾಗಿರಬೇಕೆಂದು ನನ್ನ ವಾಹನವನ್ನು ಸ್ವಲ್ಪ ನಿಧಾನಿಸಿ ಏನಾಗಿರಬಹುದೆಂದು ನೋಡುತ್ತಿದ್ದಂತೆ ಅಲ್ಲಿ ಸೇರಿದ್ದ ಜನರೆಲ್ಲ ಒಬ್ಬ ಹುಡುಗನನ್ನು ಥಳಿಸುತ್ತಿದ್ದರು. ಅಲ್ಲಿ ಸೇರಿದ್ದ ಜನರಲ್ಲಿ ಆಟೋ ಚಾಲಕರೇ ತುಂಬಿದ್ದರು. ಈ ಘಟನೆ ನಡೆಯುತ್ತಿದ್ದ ಜಾಗದಲ್ಲಿ ಒಂದು ಆಟೋ ನಿಲ್ದಾಣ ಹಾಗೂ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣ ಕೂಡ ಇದೆ.

ಹೀಗೆ ಅಲ್ಲಿದ್ದ ಒಬ್ಬರನ್ನು ವಿಚಾರಿಸಿದೆ. ಏನಾಯಿತು ಎಂದು. "ಹುಡುಗ ತನ್ನ ಬೈಕ್ ನಲ್ಲಿ(ಸ್ಪ್ಲೆಂಡರ್) ಹೋಗುತ್ತಿದ್ದನಂತೆ, ಆಟೋದವನಿಗೆ ಹೋಗಲು ಬಿಡದೆ ಆಟವಾಡಿಸಿದನಂತೆ. ಅಷ್ಟು ಹೊತ್ತಿಗೆ ಒಂದು ಬಸ್ ಅಡ್ಡ ಬಂದು ಆ ಹುಡುಗ ರಸ್ತೆಯ ಬದಿಗೆ ಬಂದಾಗ ಅಲ್ಲಿದ್ದ ಆಟೋ ಚಾಲಕರೆಲ್ಲ ಅವನನ್ನು ತಡೆಹಿಡಿದು ರಸ್ತೆಯ ಬದಿಗೆ ಎಳೆದು, ಚೆನ್ನಾಗಿ ಒದ್ದು, ಹೊಡೆಯುತ್ತಿದ್ದಾರೆ" ಎಂದರು. ಅಲ್ಲಿದ್ದ ಜನರು ಸುಮ್ಮನೆ ನೋಡುತ್ತಿದ್ದರೆ ಹೊರತು ಯಾರು ಕೂಡ ಬಿಡಿಸಲು ಪ್ರಯತ್ನಿಸುತ್ತಿರಲಿಲ್ಲ. ಆದರೆ ಆಟೋ ಚಾಲಕರು ಹೊಡೆದ ಏಟಿಗೆ ಅವನ ಬಟ್ಟೆಯೆಲ್ಲ ಹರಿದು, ಎದೆಯ ಭಾಗದಲ್ಲಿ, ಕೆನ್ನೆಯ ಭಾಗದಲ್ಲೆಲ್ಲ ಗಾಯವಾಗಿತ್ತು. ರಕ್ತ ಹರಿಯುತ್ತಿತ್ತು. ನನಗೆ ಅಯ್ಯೋ ಅನ್ನಿಸಿತು. ಆ ಹುಡುಗ ಇಲ್ಲೆ ಇರುವ ಪೋಲೀಸರನ್ನು ಕರೆಸಿ ಅವರೆ ಇತ್ಯರ್ಥ ಮಾಡಲಿ ಎಂದು ಜೋರಾಗಿ ಕೂಗುತ್ತಿದ್ದ. ಅಷ್ಟು ಜೋರಾಗಿ ಕೂಗುತ್ತಿದ್ದ ಹುಡುಗನಿಗೆ ಯಾರು ಕೂಡ ಸ್ಪಂದಿಸಲಿಲ್ಲ. ಪೋಲೀಸರನ್ನು ಕರೆತರುವ ಪ್ರಯತ್ನ ಮಾಡಲಿಲ್ಲ. ಆಲ್ಲಿ ಸೇರಿದ್ದ ಜನರಲ್ಲಿ ಮಹಿಳೆಯರು ಯಾರು ಇರಲಿಲ್ಲ. ನನಗೆ ಒಂದು ಕಡೆ ಭಯವಾಗುತ್ತಿತ್ತು. ಇನ್ನೊಂದು ಕಡೆ ಆ ಹುಡುಗನ ಚೀರಾಟ ಕೇಳಿ ಅಯ್ಯೋ ಯಾರೂ ಪೋಲೀಸರನ್ನ ಏಕೆ ಕರೆಯುತ್ತಿಲ್ಲ ಎಂದು ಮನ ನೋಯುತ್ತಿತ್ತು. ಅವನು ಪೋಲೀಸರನ್ನ ಕರೆಸಿ ಎಂದು ಕೂಗಿದಾಗಲೆಲ್ಲ ಆ ಆಟೋ ಚಾಲಕರೂ ಅವನನ್ನ ತಳ್ಳಿ ಮತ್ತೆ ಹೊಡೆಯುತ್ತಿದ್ದರು. ಅಲ್ಲಿದ್ದವರಿಗೆ ಯಾರ ತಪ್ಪೆಂದು ಸರಿಯಾಗಿ ಗೊತ್ತಿರಲಿಲ್ಲವಾದರೂ. ಅ ಆಟೋ ಚಾಲಕರ ರೌಡಿತನಕ್ಕೆ ಜನರು ಹೆದರಿ ಆ ಹುಡುಗನ ಪರ ಯಾರು ನಿಲ್ಲಲಿಲ್ಲ. ನಾನು ಅಲ್ಲಿಂದ ಹೆದರಿ ಹೊರಟೇಬಿಟ್ಟೆ. ಆಮೇಲೆ ಏನಾಯಿತೋ ಏನೋ ಗೊತ್ತಾಗಲಿಲ್ಲ. ಮತ್ತೆ ಕಚೇರಿಗೆ ಬಂದು ಒಂದು ಹತ್ತು ನಿಮಿಷ ಸುಮ್ಮನೆ ಕುಳಿತು ಯೋಚಿಸತೊಡಗಿದೆ. ಸಂಜೆಯವರೆಗೂ ಅದೇ ದೃಷ್ಯ ಕಾಡತೊಡಗಿತು. ನಾನೇ ನನ್ನ ವಾಹನವನ್ನು ತಿರುಗಿಸಿ ಪೋಲೀಸರನ್ನು ಕರೆತರುವ ಪ್ರಯತ್ನ ಮಾಡಬಹುದಿತ್ತು. ಆದರೆ ಹಾಗೇಕೆ ನಾನು ಮಾಡಲಿಲ್ಲ. ಅಷ್ಟು ಮಾನವೀಯತೆಯು ನನಗೆ ಇಲ್ಲದೆ ಹೋಯಿತೆ ಎಂದು ಕಾಡತೊಡಗಿತು.

ಅಲ್ಲಿ ಯಾರದು ತಪ್ಪು, ಯಾರದು ಸರಿ ಎಂದು ತಿಳಿಯದ ಜನರು ಬಹಳಷ್ಟಿದ್ದರು. ಅವರಿಗಾದರು ಅಯ್ಯೋ ಅನ್ನಿಸಲಿಲ್ಲವೇ? ಆ ಹುಡುಗ ತಪ್ಪೇ ಮಾಡಿದ್ದೆ ಆದರೆ ಬುದ್ದಿ ಕಲಿಸೋದು ಹೀಗೇನಾ? ಆಟೋ ಚಾಲಕರು ತಪ್ಪೇ ಮಾಡೋದಿಲ್ವ. ಆಟೋ ಚಾಲಕರು ಎಷ್ಟು ಬಾರಿ ನಮಗೆ ಅಡ್ಡಬಂದು ಎಷ್ಟು ತೊಂದರೆಕೊಡುತ್ತಾರೆಂದು ವಾಹನ ಚಲಾಯಿಸುವವರಿಗೆ ಗೊತ್ತು.

ಆಟೋ ಚಾಲಕರಿಗಾದರೂ ಮಾನವೀಯತೆ ಇರಲಿಲ್ಲವೆ??? ಅವರ ಮಕ್ಕಳು, ಸ್ನೇಹಿತರು, ಸಂಬಂಧಿಕರು, ಅಥವಾ ಅಣ್ನ ತಮ್ಮಂದಿರಿಗೆ ಹೀಗೆ ಆಗಿದ್ದರೆ ಅವರಿಗೆ ಅಯ್ಯೋ ಅನ್ನಿಸುತ್ತಿರಲ್ಲಿಲ್ಲವೇ???? ಅಲ್ಲಿ ಸೇರಿದ್ದ ಜನರ ಗುಂಪಿಗೂ ಮಾನವೀಯತೆ ಮರೆತಿದ್ದುದ್ದು ಎದ್ದು ಕಾಣುತ್ತಿತ್ತು.

ಜನರಲ್ಲಿ ಮಾನವೀಯತೆಯೆ ಮರೆತುಹೋಗುತ್ತಿದೆಯೆ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿಯೆ ಉಳಿಯಿತು ನನ್ನಲ್ಲಿ??