ಮಾನವೀಯತೆಯ ಶಿಖರ ಮದರ್ ತೆರೆಸಾ...

ಮಾನವೀಯತೆಯ ಶಿಖರ ಮದರ್ ತೆರೆಸಾ...

ಮದರ್‌ ತೆರೇಸಾ - ಆಗಸ್ಟ್ 26 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ ಕೈಯ್ಯಾರೆ ಉಪಚರಿಸಿ ಅವರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟ ಮಾನವೀಯತೆಯ ಶಿಖರ ಮದರ್ ತೆರೆಸಾ...

ಬಿಲ್ ಗೇಟ್ಸ್, ಅಜೀಂ ಪ್ರೇಮ್ಜಿ, ಅಂಬಾನಿ, ಮಾರ್ಕ್ ಜುಕರ್ ಬರ್ಗ್ ಮುಂತಾದವರು ತಮ್ಮ ಸಂಸತ್ತಿನ ಸ್ವಲ್ಪ ಭಾಗವನ್ನು ದಾನ ಮಾಡಿದ್ದಾರೆ. ಅದೂ ಸಹ ಅತ್ಯುತ್ತಮ ಸೇವೆಯೇ ನಿಜ. ಆದರೆ ತಾವೇ ಖುದ್ದು ಮುಂದೆ ನಿಂತು ಇಡೀ ವ್ಯವಸ್ಥೆಯೇ ಅಸಹ್ಯಪಟ್ಟುಕೊಳ್ಳುವ ಜನರನ್ನು ತಮ್ಮ ಜೊತೆಗೇ ಇಟ್ಟುಕೊಂಡು ಅವರ ಸೇವೆ ಮಾಡುತ್ತಾ ತಮ್ಮ ಜೀವನ ಸವೆಸಿದ ಆ ಮಹಾತಾಯಿಯ ತೂಕವೇ ಬೇರೆ. ಎಷ್ಟೋ ಜನ ತಮ್ಮ ಕಲೆಗಾಗಿ, ಸಾಹಿತ್ಯಕ್ಕಾಗಿ, ಕ್ರೀಡೆಗಾಗಿ, ಸೇವೆಗಾಗಿ ಭಾರತ ರತ್ನ ಪಡೆದಿದ್ದಾರೆ. ಅದು ಕೂಡ ಮಹಾನ್ ಸಾಧನೆಯೇ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ರೀತಿಯ ಸಮಾಜದ ಕಟ್ಟ ಕಡೆಯ ಜನರಿಗಾಗಿ ಬದುಕನ್ನೇ ಮೀಸಲಿರಿಸಿದ ಆ ಅಮ್ಮ ನಿಜವಾದ ಭಾರತ ರತ್ನ.

ಒಂದು ಹಂತಕ್ಕೆ ಆಕೆ ಬೆಳೆದು ನೊಬೆಲ್ ಪ್ರಶಸ್ತಿಯ ನಂತರ ಆಕೆಯ ಪರಿಸ್ಥಿತಿ ಸಹಜವಾಗಿಯೇ ಉತ್ತಮವಾಗಿರುತ್ತದೆ. ಆದರೆ ಪ್ರಾರಂಭದ ಹಂತದಲ್ಲಿ ಅನಾಗರಿಕ ಸಾಮಾಜಿಕ, ಆರ್ಥಿಕ ವ್ಯವಸ್ಥೆಯೇ ಇದ್ದು ಬಡತನವೆಂಬುದು ದಟ್ಟ ದರಿದ್ರ ಎಂಬ ಸಂದರ್ಭದಲ್ಲಿ ಆಕೆ ಈ ಸೇವೆಯನ್ನು ತನ್ನ ಕರ್ತವ್ಯ ಎಂದು ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡು ಮಾಡಿದ ರೀತಿ ಇದೆಯಲ್ಲಾ ಅದು ಊಹಿಸಲೂ ಅಸಾಧ್ಯ. ಪ್ರವಚನ, ಕಲೆ, ಸಾಹಿತ್ಯ, ಸಂಗೀತ, ಬುದ್ದಿಮಾತು ಇವೆಲ್ಲಾ ನಮ್ಮ  ನಿಮ್ಮ ಆಂತರಿಕ ಪ್ರತಿಭೆಯನ್ನು ಅವಲಂಬಿಸಿರುತ್ತದೆ. ಆದರೆ ನತದೃಷ್ಟ ರೋಗಿಗಳ ಉಚಿತ ಸೇವೆ ಇದೆಯಲ್ಲ ಆದು ಎಲ್ಲವನ್ನು ಮೀರಿದ್ದು.

ಅದಕ್ಕಾಗಿಯೇ ಆ ಮಾತೆ ಸರ್ವ ಶ್ರೇಷ್ಠವಾಗಿ ನಿಲ್ಲುತ್ತಾಳೆ. ಇನ್ನು ಆಕೆಯ ಹೆಸರಿನಲ್ಲಿ ನಡೆದ ಪವಾಡ, ಆಕೆಗೆ ನೀಡಿದ ಸಂತ ಪದವಿ ಎಲ್ಲವೂ ಎಂದಿನಂತೆ ಮೌಡ್ಯದ ಮತ್ತೊಂದು ರೂಪ. ಆಕೆಯು ಕೂಡ ನಮ್ಮ ನಿಮ್ಮಂತೆ ಮೂಳೆ, ಮಾಂಸ, ರಕ್ತ ಮತ್ತು ಚರ್ಮದ ಹೊದಿಕೆ. ಯಾವ ದೈವಶಕ್ತಿಯೂ ಇಲ್ಲ. ಜೀವಂತವಿದ್ದಾಗ ಮಾಡಿದ ಪರೋಪಕಾರವೇ ನಮ್ಮೆಲ್ಲರ ಪಾಲಿಗೆ ಸ್ಪೂರ್ತಿಯ ಮಹಾನ್ ಶಕ್ತಿ. ಸಮಾಜ ಸೇವಾ ಹೆಸರಿನ ಬಹಳಷ್ಟು ಆತ್ಮವಂಚಕ ಮನಸ್ಸುಗಳಿಗೆ ಪ್ರಜಾಸೇವೆಯಲ್ಲಿ ಆಕೆ ಮಾದರಿಯಾಗಲಿ. ಕಪಟ ನಾಟಕಗಳು ನಿಲ್ಲಲಿ ಎಂದು ಆಶಿಸುತ್ತಾ.......

***

ನಿನ್ನೆ ದಿನಾಂಕ 27/08/2023 ಭಾನುವಾರ ಅಸ್ಪೃಶ್ಯತೆಯ ನಿವಾರಣಾ ಕಾರ್ಯಕ್ರಮದ ಭಾಗವಾಗಿ ಅರಿವು ಭಾರತ ಸಂಘಟನೆಯ ವತಿಯಿಂದ ಸಿ ಟಿ ಗೊಲ್ಲಹಳ್ಳಿಯಲ್ಲಿ  ಏರ್ಪಡಿಸಿದ್ದ " ಸಮತೆಯ ಚಹಾ " ಎಂಬ ಸವರ್ಣೀಯರ ಮನೆಗೆ ಶೋಷಿತರ ಸ್ವಾಗತ ಮತ್ತು ಉಪಹಾರ ಸೇವೆನೆ ಆಂದೋಲನದಲ್ಲಿ ನಾವು ಗೆಳೆಯರೆಲ್ಲ ಭಾಗವಹಿಸಿ ಒಂದು ರೀತಿಯ ಸಾರ್ಥಕ ಕ್ಷಣಗಳನ್ನು ಅನುಭವಿಸಿದೆವು.  ದಯವಿಟ್ಟು ರಾಜ್ಯದ ಇತರೆ ಭಾಗಗಳಲ್ಲಿ ಸಹ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ......

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ