ಮಾನವ ಪ್ರೀತಿಯ ಮುಂದೆ ದೇವರು ಮತ್ತು ಧರ್ಮದ ನಂಬಿಕೆ ಶಿಥಿಲ !

ಮಾನವ ಪ್ರೀತಿಯ ಮುಂದೆ ದೇವರು ಮತ್ತು ಧರ್ಮದ ನಂಬಿಕೆ ಶಿಥಿಲ !

ಸಿರಿಯಾ - ಟರ್ಕಿ ದೇಶಗಳ ಭೂಕಂಪದ ದಾರುಣ ಘಟನೆಗಳಲ್ಲಿ ಇದು ಮತ್ತೊಮ್ಮೆ ಸಾಬೀತಾಗುತ್ತಿದೆ. ತಂದೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಂಕ್ರೀಟ್ ಚಪ್ಪಡಿ ಕುಸಿತದಿಂದ ಸತ್ತಿರುವಾಗ ಆ ಮಗುವಿನ ಕೈ ಹಿಡಿದು ಅಲ್ಲಿಯೇ ಕುಳಿತಿದ್ದಾರೆ. ಯಾರು ಏನೇ ಹೇಳಿದರು ಸತ್ತಿರುವ ಮಗುವಿನ ಕೈ ಬಿಡದೆ ಅಲ್ಲಿಯೇ ಕುಳಿತಿದ್ದಾರಂತೆ. ಆ ಹೆಣ್ಣು ಮಗುವನ್ನು ತಂದೆ ಅದೆಷ್ಟು ಪ್ರೀತಿಸುತ್ತಿದ್ದರೋ?

ಸುಮಾರು 5 ವರ್ಷದ ಹೆಣ್ಣು ಮಗು ಸುಮಾರು 2 ವರ್ಷದ ತನ್ನ ತಮ್ಮನ ತಲೆಯ ಮೇಲೆ ಕುಸಿದ ಕಟ್ಟಡದ ಕಲ್ಲಿನ ಚಪ್ಪಡಿಯ ಒತ್ತಡ ಬೀಳಬಾರದೆಂದು ಸುಮಾರು 17 ಗಂಟೆಗಳ ಕಾಲ ತಮ್ಮನ ತಲೆಯನ್ನು ಕೈ ಅಡ್ಡ ಹಿಡಿದು ರಕ್ಷಿಸುತ್ತಿರುವ ದೃಶ್ಯ ವಿಶ್ವಸಂಸ್ಥೆಯ ಟ್ವಿಟರ್ ನಲ್ಲಿ ಪ್ರಕಟವಾಗಿದೆ. ತಮ್ಮನ ಮೇಲೆ ಆ ಪುಟ್ಟ ಮಗುವಿಗೆ ಅದೆಷ್ಟು ಪ್ರೀತಿಯೋ? ಈ ರೀತಿಯ ಹೃದಯ ವಿದ್ರಾವಕ ಘಟನೆಗಳು ಇನ್ನೆಷ್ಟು ಸುದ್ದಿಯಾಗದೇ ಉಳಿದಿದೆಯೋ?

ನವಜಾತ ಶಿಶುಗಳು ಸೇರಿ ಎಲ್ಲಾ ಗಾಯಗಳನ್ನು ಉಳಿಸಿಕೊಳ್ಳಲು ಅಲ್ಲಿ ನೆರವಿಗೆ ಧಾವಿಸಿ ಸಹಾಯ ಮಾಡುತ್ತಿರುವುದು ಮತ್ತದೇ ಮನುಷ್ಯರು. ಯಾವ ದೇವರೂ ಈ ಪ್ರಾಕೃತಿಕ ಅನಾಹುತವನ್ನು ತಡೆಯಲಿಲ್ಲ, ಯಾವ ದೇವರೂ ಅಲ್ಲಿನ ಜನರ ನೋವಿಗೆ ಸ್ಪಂದಿಸಲಿಲ್ಲ.

ಇಸ್ಲಾಂ ಧರ್ಮದ ಮೂಲಭೂತವಾದಿಗಳೇ, ಸನಾತನ ಧರ್ಮದ ಮೂಲಭೂತವಾದಿಗಳೇ, ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಗಳೇ, ಇತರ ಎಲ್ಲಾ ಧರ್ಮಗಳ ಮೂಲಭೂತವಾದಿಗಳೇ ಹಾಗೂ ಜನಸಾಮಾನ್ಯರೇ, ಮನುಷ್ಯ ಪ್ರೀತಿ ಮತ್ತು ಮನುಷ್ಯ ಶಕ್ತಿಯ ವಾಸ್ತವತೆಯ ಮುಂದೆ ದೈವಿಕ ಶಕ್ತಿ ಒಂದು ಕಾಲ್ಪನಿಕ ಮತ್ತು ಭ್ರಮೆ ಮಾತ್ರ. ಅಜ್ಞಾನ, ಭಯ, ದುರಾಸೆಯ ಕಾರಣದಿಂದಾಗಿ ದೈವಶಕ್ತಿ ಸ್ವಲ್ಪ ಮಾನಸಿಕ ಧೈರ್ಯ ಕೊಡಬಹುದೇ ಹೊರತು ಮನುಷ್ಯ ಶಕ್ತಿಯೇ ನಿಮಗೆ ಸ್ಪಂದಿಸುವುದು ಮತ್ತು ನಿಮ್ಮನ್ನು ರಕ್ಷಿಸುವುದು.

ಸಹಸ್ರಾರು ವರ್ಷಗಳಿಂದ ಯಾವ‌ ದೇವರು ಸಹ ಯುದ್ಧಗಳನ್ನು, ಭೂಕಂಪನಗಳನ್ನು, ಸುನಾಮಿಗಳನ್ನು, ಜ್ವಾಲಾಮುಖಿಗಳನ್ನು, ಚಂಡಮಾರುತಗಳನ್ನು, ವೈರಸ್‌ಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಮನುಷ್ಯ ಇದನ್ನು ತನ್ನ ಅನುಭವ ಮತ್ತು ಅರಿವಿನ ಮಿತಿಯಲ್ಲಿ  ಮೊದಲೇ ಊಹಿಸುವ ಮತ್ತು ಅದನ್ನು ತಡೆಯಲು ಅಸಾಧ್ಯವಾದಾಗ ಕನಿಷ್ಠ ಅನಾಹುತಗಳಿಗೆ ಸಾಧ್ಯವಾದಷ್ಟು ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾನೆ.

ನಿಮ್ಮ ತಂದೆ ಮನುಷ್ಯ,

ನಿಮ್ಮ ತಾಯಿ ಮನುಷ್ಯ,

ನಿಮ್ಮ ಮಗ ಮಗಳು ಮನುಷ್ಯ,

ನಿಮ್ಮ ಅಕ್ಕ ತಂಗಿ ಅಣ್ಣ ತಮ್ಮ ಅಜ್ಜ ಅಜ್ಜಿ ಮನುಷ್ಯರು,

ನಿಮ್ಮ ಗುರು, ನಿಮ್ಮ ಸ್ನೇಹಿತ, ನಿಮ್ಮ ವೈದ್ಯ, ನಿಮ್ಮ ವಕೀಲ, ನಿಮ್ಮ ಚಾಲಕ, ನಿಮ್ಮ ಸೈನಿಕ ಮನುಷ್ಯರೇ,

ನಿಮಗೆ ಆಹಾರ ನೀಡುವವರು ಮನುಷ್ಯರೇ,

ನಿಮ್ಮ ವಂಶಾಭಿವೃದ್ಧಿ ಮಾಡುವವರು ಮನುಷ್ಯರೇ,

ನಿಮಗೆ ಮನರಂಜನೆ ನೀಡುವವರು ಮನುಷ್ಯರೇ,

ನಿಮ್ಮ ಶವ ಸಂಸ್ಕಾರ ಮಾಡುವವರು ಮನುಷ್ಯರೇ...

ಅಂತಹ ಮನುಷ್ಯರನ್ನೇ ನಂಬಿಕೆಯ ದೇವರು ಮತ್ತು ಧರ್ಮದ ರಕ್ಷಣೆಗಾಗಿ ಕೊಲ್ಲುವುದು ಎಂತಹ ವಿಪರ್ಯಾಸ? ಭ್ರಷ್ಟಾಚಾರ ನಿರ್ಮೂಲನೆ ಮಾಡದ ದೇವರು, ಜಾತಿ ಅಸಮಾನತೆ ತೊಡೆದುಹಾಕದ ದೇವರು, ಭಯೋತ್ಪಾದನಾ ಕೃತ್ಯಗಳನ್ನು ನಿಗ್ರಹಿಸದ ದೇವರು, ಕೊಲೆ ಅತ್ಯಾಚಾರ ಅನಾರೋಗ್ಯ ಅಪಘಾತ ಆತ್ಮಹತ್ಯೆ ತಡೆಯದ ದೇವರಿಗಿಂತ ಇವುಗಳ ನಿಯಂತ್ರಣಕ್ಕೆ ಸತತವಾಗಿ ಪ್ರಯತ್ನಿಸುತ್ತಿರುವ ಮನುಷ್ಯನೇ ಉತ್ತಮವಲ್ಲವೇ? ಸುಮಾರು 20,000 ಜನರು ಈಗಾಗಲೇ ಭೂಕಂಪದ ಅನಾಹುತಕ್ಕೆ ಬಲಿಯಾಗಿದ್ದಾರೆ. ಸಿರಿಯಾದಲ್ಲಿ ಕಳೆದ 15 ವರ್ಷಗಳಲ್ಲಿ ಭಯೋತ್ಪಾದನೆಯಿಂದಾಗಿ ಲಕ್ಷಾಂತರ ಜನರ ಮಾರಣ ಹೋಮ ನಿರಂತರವಾಗಿ ನಡೆಯುತ್ತಲೇ ಇದೆ.

ದೇವರು - ಧರ್ಮದ ನಂಬಿಕೆ ಮತ್ತು ಕಟ್ಟುಪಾಡುಗಳನ್ನು ಮೀರಿ ಮನುಷ್ಯ ಪ್ರೀತಿ ಬೆಳೆಸಿಕೊಂಡಲ್ಲಿ ನಿಜಕ್ಕೂ ಬದುಕೊಂದು ಅದ್ಬುತ ಅನುಭವ ನೀಡುತ್ತದೆ. ದೇವರನ್ನೇ ನಂಬಿದರೆ ಹಿಂಸೆ ರಕ್ತಪಾತ ಸಣ್ಣತನ ಸದಾ ಗಲಭೆಗಳು ಅಜ್ಞಾನ ಅಂಧಕಾರಗಳಲ್ಲಿಯೇ ನಾವು ಕಳೆದು ಹೋಗುತ್ತೇವೆ.ಅತಿಯಾಗಿ ದೇವರು ಧರ್ಮವನ್ನು ನಂಬಿದ ದೇಶಗಳಿಗಿಂತ ಸಂವಿಧಾನದ ಮೇಲೆ ಅವಲಂಬಿತವಾದ ದೇಶಗಳು ಇರುವುದರಲ್ಲಿ ಉತ್ತಮವಾಗಿರುವುದು ವಾಸ್ತವ ಸತ್ಯ. ಮನುಷ್ಯ ಪ್ರೀತಿ ಒಂದು ಸಹಜ ಅಭಿವ್ಯಕ್ತಿ, ದೈವ ಭಕ್ತಿ ಒಂದು ಕೃತಕ ಮುಖವಾಡ.

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ