ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ


ಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್‌ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ ಪ್ರಯತ್ನಕ್ಕೆ ಕೈಹಾಕಿದೆ.ಮಾನವ ಮಿದುಳು ಒಂದು ಅದ್ಭುತ ರಚನೆ ಎನ್ನುವುದು ಓದುಗರಿಗೆ ಗೊತ್ತಿರುವ ವಿಚಾರ.ಅತ್ಯಂತ ಕಡಿಮೆ ಶಕ್ತಿ ಬಳಸಿ ಕೆಲಸ ಮಾಡುವುದು,ಬೇಕಾದ ಭಾಗವನ್ನು ಮಾತ್ರಾ ಎಚ್ಚರವಾಗಿಟ್ಟು.ಉಳಿದ ಭಾಗಗಳನ್ನು ಬಂದ್ ಮಾಡಿಡುವುದು ಮಿದುಳಿನ ವೈಶಿಷ್ಟ್ಯ.ಐದು ಗಿಗಾಹರ್ಟ್ಸ್ ಕಂಪ್ಯೂಟರಿನಷ್ಟೇ ವೇಗವಾಗಿ ಕಾರ್ಯಾಚರಿಸುವ ಮಿದುಳು,ಪ್ಯಾರಲಲ್ ಪ್ರಾಸೆಸಿಂಗ್ ಮಾಡುವ ಪರಿಯಲ್ಲಿ ಮಾತ್ರಾ ಕಂಪ್ಯೂಟರನ್ನು ಹಿಂದಿಕ್ಕುತ್ತದೆ.ಯೋಚನೆ,ಸಂವೇದನೆ,ಸಂವಹನೆ ಮತ್ತು ಗುರುತಿಸುವಿಕೆ ಇವೆಲ್ಲಾ ಮಿದುಳಿಗೆ ಸಾಧ್ಯ,ಕಂಪ್ಯೂಟರಾದರೋ ಕ್ಯಾಲ್ಕ್ಯುಲೇಟರ್ ಪರಿ ಕೆಲಸ ಮಾಡುವಷ್ಟಕ್ಕೆ ಸೀಮಿತವಾಗಿದೆ.ಈಗ ಐಬಿಎಂ ಕಂಪೆನಿ ಮಾಡುತ್ತಿರುವುದು ಕಂಪ್ಯೂಟರಿನಲ್ಲಿ ನ್ಯಾನೋತಂತ್ರಜ್ಞಾನ,ನ್ಯೂರೋವಿಜ್ಞಾನ ಮತ್ತು ಸೂಪರ್‌ಕಂಪ್ಯೂಟರನ್ನು ಸಮ್ಮಿಳಿತಗೊಳಿಸುವ ಯತ್ನವಾಗಿದೆ.ಮಿದುಳಿನಲ್ಲಿ ನ್ಯೂರಾನ್ ಎನ್ನುವ ಕೇಂದ್ರಗಳು ಯೋಚನೆಯ ಕೇಂದ್ರಗಳಾಗಿವೆ.ಸಿನಾಪ್ಸ್ ಎನ್ನುವ ಭಾಗ ನೆನಪು ಶಕ್ತಿ ಮತ್ತು ಕಲಿಕೆಯ ಕೇಂದ್ರಗಳು.ಏಕ್ಸಾನ್ ಎನ್ನುವುದು ಮಿದುಳಿನ ಅಂಗಾಂಶಗಳನ್ನು ಬೆಸೆಯುವ ಭಾಗಗಳು.ಐಬಿಎಂನಲ್ಲೂ ಇದೇ ಆಧಾರದಲ್ಲಿ ಅಭಿವೃದ್ಧಿ ಪಡಿಸುವ ಯತ್ನಗಳಾಗುತ್ತಿವೆ.ಮಿದುಳಿನಂತೆ ಸ್ಮರಣಶಕ್ತಿಯುಳ್ಳ,ಕಲಿಯಬಲ್ಲ,ಸಂವೇದನೆಗಳನ್ನು ಹೊಂದಿದ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸುವ ಕನಸಿನೊಂದಿಗೆ ಐಬಿಎಂ ಮುನ್ನಡೆಯಲಿದೆ.ಆದರಿದು ಬಹಳ ಸಮಯ ತೆಗೆದುಕೊಳ್ಳಲಿದೆ.ಈಗೇನಿದ್ದರೂ ಅತಿ ಚಿಕ್ಕ ಹೆಜ್ಜೆಗಳನ್ನಿಡಲಷ್ಟೇ ಸಾಧ್ಯವಾಗಿದೆ.

----------------------------------------------
ಮೊಟೊರೊಲಾ ಮೊಬಿಲಿಟಿ:ಗೂಗಲ್ ಖರೀದಿ
ಮೊಟೊರೊಲಾ ಕಂಪೆನಿಯು ಸೆಲ್‌ಫೋನನ್ನು ಮೊದಲಾಗಿ ಒದಗಿಸಿದ ಕಂಪೆನಿಯಾಗಿದೆ.ಈಗದರ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಘಟಕವನ್ನು ಗೂಗಲ್ ಕಂಪೆನಿ ಖರೀದಿಸಲಿದೆ.ಮೊಟೊರೊಲಾ ಮೊಬಿಲಿಟಿಯನ್ನು ಖರೀದಿಸಲು ಹನ್ನೆರಡೂವರೆ ಬಿಲಿಯನ್ ದಾಲರುಗಳನ್ನು ಗೂಗಲ್ ಖರ್ಚು ಮಾಡಬೇಕಾಗಬಹುದು.ಎಚ್‌ಟಿಸಿಯಂತಹ ಕಂಪೆನಿಗಳು ಆಂಡ್ರಾಯಿಡ್ ಮಾರುಕಟ್ಟೆಯಲ್ಲಿ ಮಿಂಚಲು ಗೂಗಲ್ ಜತೆಗಿನ ಭಾಗೀದಾರಿಕೆ ನೆರವಾಗಿತ್ತು.ಮೊಟೊರೊಲಾ ಮೊಬೈಲಿಟಿ ಖರೀದಿ ಸುದ್ದಿ ಅವುಗಳಿಗೆ ಕಹಿಯೆನಿಸುವುದು ಸಹಜ.ಈ ಮೂಲಕ ಗೂಗಲ್ ಸ್ವಂತವಾಗಿ ಮೊಬೈಲ್ ಹ್ಯಾಂಡ್‌ಸೆಟ್ಟುಗಳನ್ನು ಮಾರುಕಟ್ಟೆಗೆ ಬಿಡಬಹುದು.ಇದುವರೆಗೆ ಗೂಗಲ್ ಎಚ್‌ಟಿಸಿಯಂತಹ ಬಾಹ್ಯ ಕಂಪೆನಿಗಳ ಮೂಲಕ ತನ್ನ ಆಂಡ್ರಾಯಿಡ್ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಒದಗಿಸಬೇಕಿದ್ದ ಗೂಗಲ್ ಈಗ ಸ್ವಂತವಾಗಿಯೂ ಹೀಗೆ ಮಾಡಲು ಸಾಧ್ಯ.ಆದರೆ ಮೊಟೊರೊಲಾ ಮೊಬಿಲಿಟಿ ಗೂಗಲ್ ಒಂದಿಗೆ ಸೇರ್ಪಡೆಯಾಗದೆ,ಪ್ರತ್ಯೇಕ ಆಸ್ತಿತ್ವ ಉಳಿಸಿಕೊಳ್ಳಲಿದೆ.ಇದು ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿತ್ತು.

-----------------------------------------------
ಮಿಂಚಂಚೆ ಮೂಲಕ ನೌಕರಿಗೆ ಅರ್ಜಿ
ನೌಕರಿಗೆ ಮಿಂಚಂಚೆ ಮೂಲಕ ಅರ್ಜಿ ಗುಜರಾಯಿಸಿದಾಗ ಸ್ವವಿವರಗಳನ್ನು ಪ್ರತ್ಯೇಕ ಕಡತವಾಗಿ ಕಳುಹಿಸಬಹುದು.ಇದನ್ನು ವರ್ಡ್ ಕಡತವಾಗಿ ಕಳುಹಿಸುವುದು ಒಳ್ಳೆಯ ಅಭ್ಯಾಸವಲ್ಲ.ಯಾಕೆಂದರೆ ವರ್ಡ್ ಕಡತವನ್ನು ಕಂಪೆನಿಯವರು ತಮ್ಮಲ್ಲಿರುವ ತಂತ್ರಾಂಶವನ್ನು ಬಳಸಿ ತೆರೆದಾಗ,ಅದು ನೀವು ಬಯಸಿದ್ದಕ್ಕಿಂತ ಬೇರೆಯ ರೀತಿ ಮೂಡುವ ಅಪಾಯವಿದೆ.ಪಿಡಿಎಫ್ ಕಡತವಾಗಿ ಸ್ವವಿವರವನ್ನು ಕಳುಹಿಸುವುದು ಯಾವಾಗಲೂ ಕ್ಷೇಮಕರ ಎನ್ನುವುದು ತಜ್ಞರ ಸಲಹೆ.ನೌಕರಿಯ ಅರ್ಜಿಯನ್ನು ಈ ಸ್ವವಿವರದ ಕಡತದಲ್ಲಿ ಸೇರಿಸುವ ಬದಲು,ಆ ಪತ್ರವನ್ನು ಮಿಂಚಂಚೆಯ ಸಾಮಾನ್ಯ ಸಂದೇಶ ಬರೆಯಲು ಒದಗಿಸುವ ಸ್ಥಳಾವಕಾಶದಲ್ಲಿ ಬರೆಯಬಹುದು.ಇನ್ನು ಯಾವ ಕೆಲಸಕ್ಕೆ ಅರ್ಜಿ ಎನ್ನುವುದನ್ನು ವಿಷಯವಾಗಿ ಸೂಚಿಸುವುದು ಒಳಿತು.ಆಗ,ಅರ್ಜಿಯ ವಿಲೇವಾರಿ ಮಾಡಲು ಕಂಪೆನಿಗಳವರಿಗೆ ಸುಲಭವಾಗುತ್ತದೆ.
-------------------------------------------------
ಐಸ್‌ಮ್ಯಾಪ್
ಅಂಟಾರ್ಕಟಿಕಾ ಖಂಡದ ಮಂಜುಗಡ್ಡೆಗಳ ನಕ್ಷೆಯನ್ನು ನಾಸಾದ ಸಂಶೋಧಕರು ತಯಾರಿಸಲು ಸಫಲರಾಗಿದ್ದಾರೆ.ದೊಡ್ದ ಹಿಮಗಡ್ಡೆಗಳು ಕೇಂದ್ರದಿಂದ ಹೊರಭಾಗಕ್ಕೆ ತೇಲುತ್ತಿರುವುದು ಈ ನಕ್ಷೆಗಳಿಂದ ವ್ಯಕ್ತವಾಗಿದೆ.ಯುರೋಪ್,ಕೆನಡಾ ಮತ್ತು ಜಪಾನೀ ಉಪಗ್ರಹಗಳ ದೂರದರ್ಶಕಗಳನ್ನು ಬಳಸಿಕೊಂಡು ನಕ್ಷೆ ಸಿದ್ಧ ಪಡಿಸಲಾಗಿದೆ.ಕೆಳಗಿನ ನೆಲದಲ್ಲಿ ಜಾರುತ್ತಾ ಮಜುಗಡ್ಡೆಗಳು ಸರಿಯುತ್ತಿರುವುದರ ಬಗ್ಗೆ ಈಗಷ್ಟೇ ಗೊತ್ತಾಗಿದೆ.ಮುಂದಿನ ದಿನಗಳಲ್ಲಿ ಈ ಮಂಜುಗಡ್ಡೆಯ ಕರಗುವಿಕೆ,ಸಮುದ್ರಮಟ್ಟದಲ್ಲಿ ಏರಿಕೆ ಉಂಟು ಮಾಡಲಿರುವ ಕಾರಣ,ಈ ನಕ್ಷೆ ಹೆಚ್ಚು ಸಹಕಾರಿ ಆಗಲಿದೆ.ಅಂದಹಾಗೆ ನಕ್ಷೆ ತಯಾರಿಸಿದ್ದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಾಗಿದೆ.
---------------------------------------
ಆಂಡ್ರಾಯಿಡ್:ಟಾಪ್‌ಟೆನ್‌‍ಗೆ ಹೆಚ್ಚು ಸಮಯ
ಆಂಡ್ರಾಯಿಡ್ ಫೋನು ಬಳಸುವವರು ತಮ್ಮ ಬಳಕೆಯಲ್ಲಿ ದಿನಕ್ಕೆ ಒಂದುಗಂಟೆ ಕಾಲ,ಆಂಡ್ರಾಯಿಡ್ ಅಪ್ಲಿಕೇಶನ್(ತಂತ್ರಾಂಶ)ಗಳನ್ನು ಬಳಸುವುದು ಕಂಡುಬಂದಿದೆ.ಇದರಲ್ಲಿ ಶೇಕಡಾ ನಲುವತ್ತು ಭಾಗ ಸಮಯದಲ್ಲಿ ಟಾಪ್ ಟೆನ್ ತಂತ್ರಾಂಶಗಳ ಬಳಕೆ ಮಾಡುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.ಟಾಪ್ ಐವತ್ತಕ್ಕೆ ಶೇಕಡಾ ಅರುವತ್ತೊಂದು ಭಾಗ ಸಮಯ ಬಳಕೆಯಾದರೆ,ಉಳಿದ ಲಕ್ಷಗಟ್ಟಲೆ ಅಪ್ಲಿಕೇಶನ್‌ಗಳಿಗೆ ಉಳಿದ ಮೂವತ್ತೊಂಭತ್ತು ಭಾಗ ಸಮಯ ಉಳಿಯುತ್ತದೆ!ಒಟ್ಟಿನಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಆಂಡ್ರಾಯಿಡ್ ತಂತ್ರಾಂಶಗಳೀಗ ಲಭ್ಯವಿವೆ.
-----------------------------------------------------
ಓದುಗರ ಪ್ರತಿಕ್ರಿಯೆ
ಓದುಗ ಪ್ರಸನ್ನ ಶಂಕರಪುರ ಅವರು ಟ್ವಿಟರಿಗೆ ಪೋಟೋ ಸೇರಿಸುವ ಸವಲತ್ತಿನ ಬಗೆಗಿನ ತುಣುಕಿಗೆ ಪ್ರತಿಕ್ರಿಯಿಸಿ,ಈ ಸೌಲಭ್ಯ ಹಿಂದೆಯೂ ಇತ್ತು ಎಂದು ಆಕ್ಷೇಪಿಸಿದ್ದಾರೆ.ಪೋಟೋಬಕೆಟ್ ಮೂಲಕ ಈ ಸೌಕರ್ಯವನ್ನು ಟ್ವಿಟರ್ ನೀಡುತ್ತಿತ್ತು ಎನ್ನುವುದನ್ನೂ ಅವರೇ ಬರೆದಿದ್ದಾರೆ.ಈಗ ಈ ಸವಲತ್ತನ್ನು ಟ್ವಿಟರ್ ಸ್ವಂತವಾಗಿಯೇ ಒದಗಿಸುತ್ತಿದೆ.ಟ್ವಿಟರ್ ತಾಣದಲ್ಲಿ ಸಂದೇಶ ಬರೆಯುವ ಪೆಟ್ಟಿಗೆಯ ತಳಭಾಗದಲ್ಲಿ ಕ್ಯಾಮರಾ ಚಿತ್ರವನ್ನು ಕಾಣಬಹುದು.ಅದನ್ನು ಕ್ಲಿಕ್ಕಿಸಿ,ಚಿತ್ರಗಳನ್ನು ಅಪ್ಲೋಡ್ ಮಾಡಿದರೆ ಅವುಗಳ ಕೊಂಡಿಯು ನಮ್ಮ ಸಂದೇಶದೊಂದಿಗೆ ಕಾಣಿಸುತ್ತದೆ.ಈಗ ಟ್ವಿಟರಿಗೆ ಲಾಗಿನ್ ಆಗುವಾಗಲೇ ಬಳಕೆದಾರರಿಗೆ ಈ ಹೊಸ್ ಸೇವೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!

ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಗಾನ.ಕಾಂ ತಾಣ ಒದಗಿಸುವ ಸೇವೆಯೇನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS45 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಗ್ಲಾಸ್‌ಡೋರ್ ತಾಣ ಕೊಡುವ ಸೇವೆಯೆಂದರೆ ಉದ್ಯೋಗದಾತರ ಬಗೆಗಿನ ವಿವರ.ಕಂಪೆನಿಗಳಲ್ಲಿ ಕೆಲಸ ಮಾಡಿದವರು ಒದಗಿಸಿದ ವಿವರಗಳನ್ನು ಇತರರೂ ಪಡೆಯಲು ಇಲ್ಲಿ ಅವಕಾಶ ಸಿಗುತ್ತದೆ.ಬಹುಮಾನ ಗೆದ್ದವರು ರಾಜೇಂದ್ರಕೃಷ್ಣ,ಬೆಳ್ತಂಗಡಿ.ಅಭಿನಂದನೆಗಳು.

*ಅಶೋಕ್‌ಕುಮಾರ್ ಎ