ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ

ರಾಜ್ಯದಲ್ಲಿ ಕಳೆದು ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ ಸಿಲುಕಿ ೨೫೪ ಮಂದಿ ಸಾವನ್ನಪ್ಪಿರುವುದು ತೀರಾ ಕಳವಳದಾಯಕ ವಿಷಯ. ವ್ಯಾಪಕವಾಗು ತ್ತಿರುವ ಅರಣ್ಯ ನಾಶ, ವನ್ಯಪ್ರಾಣಿಗಳ ಆವಾಸ ಸ್ಥಾನದಲ್ಲಿ ಆಗಿರುವ ಕುಸಿತ, ಮಾನವ ವಸಾಹತು ವಿಸ್ತರಣೆ ಮತ್ತಿತರ ಕಾರಣಗಳಿಂದ ಮಾನವ-ವನ್ಯಜೀವಿ ಸಂಘರ್ಷ ದಿನಗಳೆದಂತೆ ಹೆಚ್ಚುತ್ತಿದೆ. ಇದರಿಂದ ಬೆಳೆಹಾನಿ, ಆಸ್ತಿ ನಷ್ಟ ಇತ್ಯಾದಿಗಳ ಜತೆಗೆ ಜನರು ಕೂಡ ಸಾವನ್ನಪ್ಪುತ್ತಿರುವುದು ಆತಂಕಕಾರಿ. ವರ್ಷ ಕಳೆದಂತೆ ಇದು ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ದೂರಗಾಮಿ ಯೋಜನೆಗಳು, ಉಪಕ್ರಮಗಳು ಅಗತ್ಯ ಎಂಬುದನ್ನು ಮನಗಂಡು ಸರಕಾರ, ಅರಣ್ಯ ಇಲಾಖೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.
ರಾಜ್ಯದಲ್ಲಿ ಕಳೆದ ೫ ವರ್ಷಗಳಲ್ಲಿ ವನ್ಯಜೀವಿಗಳಿಂದ ಸಾವುಗಳು, ಬೆಳೆ ಹಾನಿ, ಆಸ್ತಿ ನಾಶಕ್ಕೆ ಸುಮಾರು ೧೬೫ ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ೨೦೨೩-೨೪ರಲ್ಲಿ ವನ್ಯಜೀವಿಗಳ ದಾಳಿಯಿಂದ ೬೫ ಮಂದಿ ಮೃತಪಟ್ಟಿದ್ದರೆ ೨೦೨೪-೨೫ರಲ್ಲಿ ೪೨ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅತ್ಯಧಿಕ ಮಂದಿ ಕಾಡಾನೆ, ಹುಲಿ, ಚಿರತೆಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಕರಡಿ, ಕಾಡೆಮ್ಮೆ ಹಂದಿಗಳಂತಹ ಪ್ರಾಣಿಗಳ ದಾಳಿಯಲ್ಲೂ ಪ್ರಾಣ ಕಳೆದುಕೊಂಡಿದ್ದಾರೆ.
ವನ್ಯಜೀವಿಗಳ ಹಾವಳಿ ಮನುಷ್ಯರು ಬಹಳ ಹಿಂದಿನ ಕಾಲದಿಂದ ಎದುರಿಸುತ್ತ ಬಂದಿರುವ ಸಮಸ್ಯೆ. ವಾಸ್ತವವಾಗಿ ಜನಸಂಖ್ಯೆ, ಜನವಸತಿ ಹೆಚ್ಚಿದಂತೆ ಹೆಚ್ಚುತ್ತಿರುವ ಈ ಮಾನವ- ವನ್ಯಜೀವಿ ಸಂಘರ್ಷಕ್ಕೆ ನಾವೇ ಕಾರಣ ಎಂಬುದು ನಿಜ. ಕೆಲವೆಡೆ ವನ್ಯಜೀವಿ ಕಾರಿಡಾರ್ಗಳು ಛಿದ್ರಗೊಂಡಿರುವುದು, ಕಾಡಿನ ಅಂಚಿನಲ್ಲಿ ಪಾದಚಾರಿ ಮಾರ್ಗಗಳಿಂದ ವಸತಿ ಪ್ರದೇಶಗಳಿಗೆ ಸಂಪರ್ಕ, ವನ್ಯ ಮೃಗಗಳ ನೈಸರ್ಗಿಕ ಆಹಾರ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಅಡ್ಡಿ ಅರಣ್ಯ ಅವಲಂಬಿತ ಸಮುದಾಯಗಳಿಗೆ ಕಾಡುಪ್ರಾಣಿಗಳ ಬೇಟೆ ಜೀವನೋಪಾಯದ ಆಯ್ಕೆಯಾಗಿರುವುದು ಮೊದಲಾದ ಕಾರಣಗಳನ್ನು ವನ್ಯಜೀವಿ - ಮನುಷ್ಯ ಸಂಘರ್ಷ ಹೆಚ್ಚುತ್ತಿರುವುದಕ್ಕೆ ನೀಡಲಾಗುತ್ತದೆ. ಇದರಿಂದ ಜೀವಹಾನಿ ಒಂದೆಡೆ ಯಾದರೆ ಬೆಳೆಹಾನಿ, ಆಸ್ತಿಗಳಿಗೆ ಹಾನಿಗಳು ಕೂಡ ಸಂಭವಿಸುತ್ತಿವೆ. ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಅರಣ್ಯದಂಚಿನ ಗ್ರಾಮಗಳು ಹೆಚ್ಚು ಇರುವ ಕೊಡಗು, ಚಾಮರಾಜನಗರದಂತಹ ಜಿಲ್ಲೆಗಳಲ್ಲಿಯೇ ಪ್ರಾಣಹಾನಿ ಹೆಚ್ಚಿರುವುದು ತಿಳಿದುಬರುತ್ತದೆ. ಪ್ರಾಣಿಗಳ ಸಹಜ ಬದುಕಿಗೆ ಅಡ್ಡಿಯಾಗುವಂತೆ ಮಾನವ ಹಸ್ತಕ್ಷೇಪವಾದಾಗ ಈ ಸಂಘರ್ಷ ಉಂಟಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಈ ಹಸ್ತಕ್ಷೇಪವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿದರೆ ಮಾನವ-ವನ್ಯಜೀವಿ ಸಂಘರ್ಷವೂ ತಗ್ಗಲು ಸಾಧ್ಯ. ಮುಖ್ಯವಾಗಿ ಆನೆಗಳ ದಾಳಿಯಿಂದ ಇತ್ತೀಚೆಗೆ ಸಾವುಗಳು ಹೆಚ್ಚು ಸಂಭವಿಸುತ್ತಿವೆ. ಆನೆಗಳಿಗೆ ಕಾಡಿನಲ್ಲಿ ಸರಿಯಾಗಿ ಆಹಾರ ಸಿಗದೆ ಇರುವುದರಿಂದ ಅವುಗಳು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು, ಇಲ್ಲಿ ಎದುರಾದ ಜನರು ಅವುಗಳಿಗೆ ಬಲಿಯಾಗುತ್ತಿದ್ದಾರೆ. ಕಾಡಿನಲ್ಲಿ ಹಣ್ಣಿನ ಮರಗಳನ್ನು ನೆಡುವುದು ಮತ್ತು ಆನೆಗಳು ನಾಡಿಗೆ ಬಾರದಂತೆ ತಡೆದರೆ ಸಾವಿನ ಸಂಖ್ಯೆಯಲ್ಲಿ ಎಷ್ಟೋ ಕಡಿಮೆಯಾಗಲು ಸಾಧ್ಯವಿದೆ.
ಸರಕಾರ ಮತ್ತು ಅರಣ್ಯ ಇಲಾಖೆ ಮಾನವ ವನ್ಯಜೀವಿ ಸಂಘರ್ಷವನ್ನು ತಡೆಯಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಇದರ ನಿಯಂತ್ರಣ ಒಂದೆರಡು ವರ್ಷಗಳಲ್ಲಿ ಆಗುವಂಥದ್ದಲ್ಲ ಮತ್ತು ಇದಕ್ಕೆ ದೂರ ದೃಷ್ಟಿಯ, ದೂರಗಾಮಿ ಉಪಕ್ರಮಗಳು, ಯೋಜನೆಗಳು ಅಗತ್ಯವಾಗಿವೆ. ಈಗಾಗಲೇ ಇರುವ ಕ್ರಮಗಳ ಜತೆಯಲ್ಲಿ ಅರಣ್ಯದಂಚಿನಲ್ಲಿ, ಅರಣ್ಯದೊಳಗೆ ವಾಸವಿರುವವರಿಗೆ ಪುನರ್ವಸತಿ ಕಲ್ಪಿಸುವುದು, ಅರಣ್ಯ ಸಂರಕ್ಷಿಸಿ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನ ವೃದ್ಧಿಯಂತಹ ಕ್ರಮಗಳನ್ನು ಕೈಗೊಳ್ಳಬೇಕು. ಮಾನವ -ವನ್ಯಮೃಗ ಸಂಘರ್ಷವನ್ನು ನೂರಕ್ಕೆ ನೂರು ತಪ್ಪಿಸುವುದು ಕಷ್ಟಸಾಧ್ಯವಾದರೂ ಅದರಿಂದ ಜೀವಹಾನಿಯನ್ನು ತಡಗಟ್ಟಲು ಕ್ರಮ ಕೈಗೊಳ್ಳಲೇ ಬೇಕಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೫-೦೭-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ