ಮಾನವ ಸಹಾಯ ನೆನೆಯೋದೇ ಇಲ್ಲ!

ಮಾನವ ಸಹಾಯ ನೆನೆಯೋದೇ ಇಲ್ಲ!

"ನಮ್ಮ ಹುಟ್ಟಿನಿಂದ ಪಾಲಿಸಿ, ಪೋಷಿಸಿ, ಬೆಳೆಸಿ, ಮುದ್ದಾಡಿ, ಕಾಯಿಲೆ ಬಂದಾಗ ಔಷದಿ ನೀಡಿ, ನಾವು ಬೆಳೆದು ನಿಂತು ವಯಸ್ಸಿಗೆ ಬಂದಾಗ, ಆನಂದದ ಕಣ್ಣೀರು ಹಾಕಿ ಯಾರ ಮನೆಗೋ ತಲುಪಿಸುತ್ತಾರೆ. ಅಲ್ಲಿಗೆ ನಮ್ಮ ಸ್ವಾತಂತ್ರ್ಯದ ಕೊನೆ. ಸ್ವಚ್ಚ ಗಾಳಿ, ನೀರು, ಪ್ರಕೃತಿ ಸೌಂದರ್ಯದಲ್ಲೇ ಬೆಳೆದ ನಾವು ಈಗ ಹೊಸಮನೆಯಲ್ಲಿ ಬಂದಿಗಳು. ಒಪ್ಪ ಓರಣವಾಗಿ ಅಲಂಕರಿಸಿಕೊಂಡು ಒಂದೆಡೆ ಕೂತಿರಬೇಕು. ವೈಭವೋಪೇತ ಮನೆಗಳಲ್ಲಿ ನಮ್ಮ ಅಳಲು ಇನ್ನೂ ಹೆಚ್ಚು. ಸೂರ್ಯದೇವನ ಮುಖ ನಾವು ನೋಡುವುದೇ ಇಲ್ಲ. ಈಗ ನಾ ಹೇಳಲಿರುವುದು, ಹಲವಾರು ದಿನಗಳಿಂದ ಅಂತಹದೊಂದು ಕೂಪದಲ್ಲೇ ಕೊಳೆತ ನಾನು ಮುಕ್ತಿ ಪಡೆದುಕೊಂಡ ಕಥೆ, ವ್ಯಥೆ. ಒಂದು ಮಾತನ್ನು ಈಗಲೇ ಹೇಳಿಬಿಡುತ್ತೇನೆ. ಇದೊಂದು ಕಠೋರವಾದ ಸತ್ಯ ಕಥೆ."

"ನನ್ನಂತೆಯೇ ಈ ಮನೆಗೆ ಬಂದು ಸೇರಿದವರೊಂದಿಗೆ ಹರಟುತ್ತ ಕೂತಿದ್ದೆ. ನನ್ನನ್ನು ಆತ ಎಳೆದೊಯ್ದ. ಏನು ನೆಡೆಯುತ್ತಿದೆ ಎಂಬ ಅರಿವು ಮೂಡಿ, ನನ್ನವರಿಗೆ ಹೋಗಿ ಬರುತ್ತೇನೆ ಎಂದು ಹೇಳುವಷ್ಟರಲ್ಲಿ ಕಸಾಯಿಖಾನೆಯಲ್ಲಿ ನಿಂತಿದ್ದೆ. ಒಂದಿನಿತೂ ಮಮಕಾರವಿಲ್ಲದೆ ನನ್ನ ಚರ್ಮವನ್ನು ತರಿದು ತಿಪ್ಪೆಗೆ ಎಸೆದ ಕಣ್ರೀ. ನಿಮ್ಮದು ಹೆಂಗರುಳಾಗಿದ್ದರೆ, ಓದುವುದನ್ನು ಇಲ್ಲಿಗೆ ನಿಲ್ಲಿಸಬಹುದು. ಆದರೆ ಅದರಿಂದ ನನ್ನ ವ್ಯಥೆ ಹೆಚ್ಚೂ ಆಗುವುದಿಲ್ಲ, ಕಡಿಮೆಯೂ ಆಗುವುದಿಲ್ಲ. ಇರಲಿ, ಮುಂದುವರೆಸುತ್ತೇನೆ"

"ಕರ್ಣನು ಹುಟ್ಟಿನಿಂದ ಬಂದ ಕವಚವನ್ನು ಕೆತ್ತಿ, ಕಿತ್ತು ಕೊಟ್ಟಾಗ ಹೇಗೆ ಮೈಯೆಲ್ಲ ರಕ್ತಭರಿತನಾಗಿ ನಿಂತಿದ್ದೆನೋ ಹಾಗೆ ನಾನೂ ನಿಸ್ಸಹಾಯಕನಾಗಿ ನಿಂತಿದ್ದೆ. ಶವಕ್ಕೆ ಶೃಂಗಾರ ಎನ್ನುವಂತೆ ಜಿನುಗುತ್ತಿದ್ದ ದೇಹಕ್ಕೆ ತಣ್ಣೀರ ಸ್ನಾನ ಬೇರೆ ! ಅಲ್ಲಿಗೆ ನನ್ನ ಉಸಿರು ನಿಲ್ಲೋ ಸಮಯ ಹತ್ತಿರಕ್ಕೆ ಬಂದಿತ್ತು. ಮುಂದಿನ ವಿಷಯ ಹೇಳಲಾಗದು. ತುಂಡರಿಸಿದ ದೇಹದ ತುಂಡುಗಳಿಗೆ ಚೆಂದನ ಲೇಪ. ಲೇಪನ ಹೊತ್ತ ನನ್ನನ್ನು .... ಅಯ್ಯೋ! "

ಈಗ ನನ್ನ ಆತ್ಮ ಮಾತ್ರ ಮನೆಯಲ್ಲಿ ಓಡಾಡುತ್ತಿದೆ. ಅಲ್ಲೊಂದು ಟೇಬಲ್. ನನ್ನನ್ನು ಕೊಚ್ಚಿಕೊಂದಾತ ತನ್ನ ಪ್ರಿಯತಮೆಯೊಡನೆ ಕುಳಿತಿದ್ದಾನೆ. ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಆಕೆ ನುಡಿಯುತ್ತಿದ್ದಾಳೆ "ಹ್ಯಾಪಿ ನ್ಯೂ ಇಯರ್ ಡಿಯರ್ .... ನೀವು ಮಾಡಿರೋ ಆಲೂಗಡ್ಡೆ ಬೋಂಡ ಸಕತ್ತಾಗಿದೆ"

ನಾನೇ ಇಲ್ಲದಿದ್ದರೆ ಆ ಬೋಂಡಾ ಹೇಗ್ರೀ ಚೆನ್ನಾಗಿರ್ತಿತ್ತು? 

ಮಾನವ ಇನ್ನೊಬ್ಬರ ಸಹಾಯ ನೆನೆಯೋದೇ ಇಲ್ಲ ಕಣ್ರೀ ! ನೆನೆಯೋದೇ ಇಲ್ಲ !!

Comments

Submitted by lpitnal Thu, 01/02/2014 - 09:11

ಆತ್ಮೀಯ ಭಲ್ಲೇಜಿ, ನ್ಯಾಯದೊಳಗಿನ ಅನ್ಯಾಯ ಸರಿಯಾಗಿ ಗುರುತಿಸಿರುವಿರಿ, ಈ ರೀತಿ ಪ್ರಕೃತಿ ಅನೇಕ ಅಸಂಗತ, ಹೇಳಲಾಗದ, ಹಾಡಲಾಗದ ಹಾಡುಗಳನ್ನೂ ಸೃಷ್ಟಿಸಿರುವಳು. ಒಳ್ಳೆಯ ಲೇಖನ. ಧನ್ಯವಾದಗಳು ಭಲ್ಲೇಜಿ.

Submitted by bhalle Thu, 01/02/2014 - 09:20

In reply to by lpitnal

ಅನಂತ ಧನ್ಯವಾದಗಳು ಇಟ್ನಾಳರೇ. ನಿಮಗೂ ನಿಮ್ಮ ಕುಟುಂಬವರ್ಗದವರಿಗೂ ಹೊಸವರ್ಷದ ಶುಭಾಶಯಗಳು.

ದೊಡ್ಡ ಮೀನು ಚಿಕ್ಕ ಮೀನನ್ನು ತಿನ್ನುವಾಗ ತಪ್ಪು ಎನಿಸುತ್ತದೆ. ಹಾಗಾಗದೆ ಇದ್ದಲ್ಲಿ ಪ್ರಕೃತಿಯಲ್ಲಿ ಸಮತೋಳನವೇ ಇರುವುದಿಲ್ಲ ಅನ್ನೋದು ನಿಜ. ನ್ಯಾಯವೋ, ಅನ್ಯಾಯವೋ, ವಿಧಿಲಿಖಿತವೋ ಅಥವಾ ಪ್ರಕೃತಿಧರ್ಮವೋ ಅರಿಯೆನು.

Submitted by bhalle Thu, 01/02/2014 - 19:31

In reply to by kavinagaraj

ಧನ್ಯವಾದಗಳು ಕವಿಗಳೇ ! ನಿಮ್ಮ ಮಾತನ್ನು 'ಅಗತ್ಯಕ್ಕಿಂತ ಹೆಚ್ಚು ಸೇವಿಸಿಸುವುದು ( ಪ್ರಾಣಿಗಳಿಗೆ ಅನ್ವಯ ) ಸಂತತಿಯ ಅವನತಿಗೆ ಮೂಲ ಕಾರಣ' ಎಂದು ಅರ್ಥೈಸಿಕೊಳ್ಳುತ್ತೇನೆ.

Submitted by ravindra n angadi Sat, 01/04/2014 - 14:48

ಶ್ರೀನಾಥವರಿಗೆ ನಮಸ್ಕಾರ

ತುಂಬಾ ಚನ್ನಾಗಿದೆ ನಿಮ್ಮಿಂದ ಮೂಡಿ ಬಂದ ಈ ಲೇಖನ.

ನಾನೇ ಇಲ್ಲದಿದ್ದರೆ ಆ ಬೋಂಡಾ ಹೇಗ್ರೀ ಚೆನ್ನಾಗಿರ್ತಿತ್ತು? ಈ ಸಾಲು ನಿಮ್ಮ ಇಡಿ ಲೇಖನದ ನೋವನು ಎತ್ತಿಹಿಡಿಯತ್ತಿದ.

ಧನ್ಯವಾದವಗಳು.

Submitted by bhalle Sat, 01/04/2014 - 19:27

In reply to by ravindra n angadi

ಧನ್ಯವಾದಗಳು ರವೀಂದ್ರ
ಮಾನವ ತಾ ಮೇಲೇರಿ ನಿಂತು, ಎಲ್ಲವೂ ತನ್ನಿಂದಲೇ ಎಂದು ಹೇಳುತ್ತ, ಹತ್ತಿದ ಏಣಿಯನ್ನೇ ಮರೆಯುತ್ತಾನೆ. ಹತ್ತಿದ ಏಣಿಯನ್ನು ಒದೆಯುತ್ತಾನೆ. ಇಳಿವ ಸಮಯ ಬಂದಾಗ ನಮ್ರತೆಯಿಂದ ಇಳಿಯಲಾಗದೆ ಧೊಪ್ಪೆಂದು ಬೀಳ್ತಾನೆ.

Submitted by ಕೀರ್ತಿರಾಜ್ ಮಧ್ವ Wed, 01/08/2014 - 20:17

ಶ್ರೀನಾಥ್‌ರವರೇ, ಇತ್ತೀಚಿಗೆ ಮರೆಯೋದು ಫ್ಯಾಶನ್ ಆಗ್ಬಿಟ್ಟಿದೆ ನಮ್ಮ ಜನಕ್ಕೆ. ಅಂದ ಹಾಗೆ ನಿಮ್ಮ ಬರಹ ಚೆನ್ನಾಗಿತ್ತು ಅಂಥ ಹೇಳೋಕ್ಕೆ ಮರೆತುಬಿಟ್ಟೆ ನೋಡಿ.!!

Submitted by ಕೀರ್ತಿರಾಜ್ ಮಧ್ವ Wed, 01/08/2014 - 20:18

ಶ್ರೀನಾಥ್‌ರವರೇ, ಇತ್ತೀಚಿಗೆ ಮರೆಯೋದು ಫ್ಯಾಶನ್ ಆಗ್ಬಿಟ್ಟಿದೆ ನಮ್ಮ ಜನಕ್ಕೆ. ಅಂದ ಹಾಗೆ ನಿಮ್ಮ ಬರಹ ಚೆನ್ನಾಗಿತ್ತು ಅಂಥ ಹೇಳೋಕ್ಕೆ ಮರೆತುಬಿಟ್ಟೆ ನೋಡಿ.!!