ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಭರವಸೆಯ ಮುನ್ನುಡಿ
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯು ಇಂದಿನ ದಿನಗಳಲ್ಲಿ ದೇಶವೊಂದರ ನೈಜ ಸಾಮರ್ಥ್ಯವನ್ನು ನಿರ್ಧರಿಸುವ ಮಾಪನ. ಹಿಂದಿನಿಂದಲೂ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ತಯಾರಿಕೆ ಈ ಎರಡು ವಲಯಗಳ ಮೇಲೆ ಹಿಡಿತ ಸಾಧಿಸಿದ ದೇಶಗಳು ಜಗತ್ತಿನ ಆಗುಹೋಗುಗಳನ್ನು ನಿಯಂತ್ರಿಸುವತ್ತ ಬಂದಿರುವುದು ತೆರೆದ ಸತ್ಯ. ಅಮೇರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಜಪಾನ್ ನಂತಹ ದೇಶಗಳ ಪ್ರಗತಿಯ ಗತಿ ಗಮನಿಸಿದರೆ ಇದಕ್ಕೆ ದಂಡಿಯಾದ ಪುರಾವೆಗಳು ಲಭಿಸುತ್ತವೆ. ಇದನ್ನು ಧೃಢವಾಗಿ ಅರ್ಥ ಮಾಡಿಕೊಂಡ ಭಾರತ ಈಗ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಸ್ವಾತಂತ್ರ್ಯ ನಂತರದ ದಿನಗಳಿಂದಲೂ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ದೇಶದ ಸಾಧನೆಯ ಹಂಬಲ ಪ್ರಶಂಸನೀಯ ಹಾದಿಯಲ್ಲಿಯೇ ಇದೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿಷ್ಟ ದೇಶಗಳ ಮಟ್ಟಕ್ಕೆ ತಲೆ ಎತ್ತಿನಿಲ್ಲುವ ಎದೆಗಾರಿಕೆ ತೋರುತ್ತಿದೆ. ಈ ದಿಸೆಯಲ್ಲಿ ಇಸ್ರೋ ಬಹುದೊಡ್ಡ ಸಾಧನೆಯನ್ನೇ ಮಾಡುತ್ತಿದೆ.
ಈ ಸಾಲಿನಲ್ಲಿಯೇ ಯಶಸ್ವಿ ಚಂದ್ರಯಾನ ಮುಗಿಸಿದ ಸಂಸ್ಥೆ, ಬಳಿಕ ಸೌರಯಾನದಲ್ಲೂ ಮೆಚ್ಚುಗೆಯ ಕೆಲಸ ಮಾಡಿದೆ. ಈ ಗೆಲುವುಗಳ ಬೆನ್ನ ಹಿಂದೆಯೇ ಶನಿವಾರ (೨೧ ಅಕ್ಟೋಬರ್) ಶ್ರೀಹರಿಕೋಟ ಉಡಾವಣೆ ನೆಲೆಯಿಂದ ನಡೆಸಿದ ಗಗನಯಾನ ಪ್ರಯೋಗ ಕುರಿತ ಯಶಸ್ಸು ಕಂಡಿದೆ. ೨೦೨೫ರ ವೇಳೆಗೆ ಮಾನವ ಸಹಿತ ಗಗನಯಾನ ಕೈಗೊಳ್ಳುವುದು ಭಾರತದ ಕನಸು. ಇದಕ್ಕೆ ಪೂರಕವಾಗಿ ಸರಣಿ ಪ್ರಯೋಗಗಳನ್ನು ಇಸ್ರೋ ಆರಂಭಿಸಿದೆ. ಶನಿವಾರದ ‘ಕ್ರೂ ಎಸ್ಕೇಪ್ ಸಿಸ್ಟಂ’ ಪ್ರಯೋಗ ತುಂಬಾ ನಿಖರವಾಗಿ ಪೂರ್ಣಗೊಂಡಿದೆ. ಸ್ವತಂತ್ರ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ಟೆಸ್ಟ್ ವೆಹಿಕಲ್ ದೇವಲಪ್ ಮೆಂಟ್ ಫೈಟ್-೧ (ಟಿವಿ-ಡಿ೧) ಉಡಾವಣೆ ಆರಂಭದಲ್ಲಿ ಸ್ವಲ್ಪ ಮಟ್ಟಿನ ಆತಂಕ ತಂದೊಡ್ಡಿತ್ತು. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಹಾಗೂ ಹವಾಮಾನ ಏರುಪೇರಿನ ಕಾರಣ ನಿಗದಿತ ಸಮಯಕ್ಕೆ ಉಡಾವಣೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಎರಡು ಗಂಟೆ ತಡವಾಗಿಯಾದರೂ ಅದು ಖಚಿತ ಗುರಿ ಸಾಧಿಸಿದೆ. ಪರೀಕ್ಷೆಯ ಮೂರೂ ವಿಭಾಗಗಳು ಎಳ್ಳಷ್ಟೂ ಲೋಪವಿಲ್ಲದೆ ತಮ್ಮ ಕೆಲಸ ಪೂರೈಸಿವೆ. ಇನ್ನಷ್ಟು ಪರೀಕ್ಷೆಗಳ ಬಳಿಕ ಮಾನವ ಸಹಿತ ರಾಕೆಟ್ ಅಂತಿಮ ಗಗನಯಾನಕ್ಕೆ ಕಳುಹಿಸಿಕೊಡಲಾಗುತ್ತದೆ. ಈಗಿನ ಇಸ್ರೋ ವಿಜ್ಞಾನಿಗಳ ಕಾರ್ಯದಕ್ಷತೆ ಗಮನಿಸಿದರೆ ಎರಡು ವರ್ಷಗಳ ನಂತರ ನಡೆಯುವ ಅಂತಿಮ ಸಾಹಸದಲ್ಲೂ ಗೆಲ್ಲುವುದು ಖಚಿತ ಎನ್ನುವ ವಿಶ್ವಾಸ ಮೂಡಿಸಿದೆ. ಇದು ದೇಶದ ವರ್ಚಸ್ಸನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಧಿಸುವಂತೆ ಮಾಡಿದೆ. ನೆರೆಹೊರೆಯ ದೇಶಗಳು ಇವತ್ತು ಹೆಚ್ಚು ಗೌರವದಿಂದ ಭಾರತವನ್ನು ಕಾಣುತ್ತಿವೆ ಎಂದರೆ ಇದರ ಹಿಂದೆ ನಮ್ಮ ಇಸ್ರೋ ವಿಜ್ಞಾನಿಗಳ ಕೊಡುಗೆ ಇದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಈ ಸಾಧನೆಯು ದೇಶದ ಆರ್ಥಿಕತೆಗೂ ಪುಷ್ಟಿ ನೀಡುತ್ತಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ೨೩-೧೦-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ