ಮಾನಸಿಕ ಒತ್ತಡ ನಿರ್ವಹಣೆ ಮತ್ತು ಮನಸ್ಸಿನ ಮ್ಯಾಜಿಕ್
ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇನ್ನಷ್ಟು “ಜನಸ್ನೇಹಿ"ಯಾಗಿಸುವ ಮತ್ತು ಕೊರೋನಾ ವೈರಸ್ ಹಾವಳಿಯ ಈ ಸಮಯದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯ ವಿಧಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ೯ ನವಂಬರ್ ೨೦೨೦ರಂದು ಆಯೋಜಿಸಲಾಗಿತ್ತು.
ಮಂಗಳೂರಿನ ಪಾಂಡೇಶ್ವರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರೇರಣಾ ತರಬೇತಿದಾರರೂ “ಮನಸ್ಸಿನ ಮ್ಯಾಜಿಕ್” ಪುಸ್ತಕದ ಲೇಖಕರೂ ಆದ ಅಡ್ಡೂರು ಕೃಷ್ಣ ರಾವ್ ಮಾನಸಿಕ ಒತ್ತಡ ನಿರ್ವಹಣೆ ಮತ್ತು ವೃತ್ತಿ ಜೀವನದ ಸಾಧನೆಗಾಗಿ "ಮನಸ್ಸಿನ ಮ್ಯಾಜಿಕ್" ಹೇಗೆ ಮಾಡಬಹುದೆಂದು ಮನಮುಟ್ಟುವಂತೆ ವಿವರಿಸಿದರು. ಅವರು ತಿಳಿಸಿದ ಸರಳ ಹಾಗೂ ಪರಿಣಾಮಕಾರಿ ವಿಧಾನಗಳ ಕಿರು ಪರಿಚಯ ಈ ಲೇಖನದಲ್ಲಿದೆ.
"ಕೆಲವು ದಿನ ನಮ್ಮಲ್ಲಿ ಇವತ್ತು ಏನು ಬೇಕಾದರೂ ಮಾಡಿಯೇನು ಎಂಬ ಉತ್ಸಾಹ; ಇನ್ನು ಕೆಲವು ದಿನ ಇವತ್ತು ನನ್ನಿಂದ ಏನೂ ಮಾಡಲಿಕ್ಕಾಗದು ಎಂಬ ನಿರುತ್ಸಾಹ. ಹಾಗೆಯೇ, ಕೆಲವು ದಿನ ಎಲ್ಲವೂ ಕಿರಿಕಿರಿ ಎನಿಸಿದರೆ ಇನ್ನು ಕೆಲವು ದಿನ ಸಣ್ಣಪುಟ್ಟ ವಿಷಯಗಳಿಗೂ ಸಿಡಿಮಿಡಿ. ಜೋಗ ಜಲಪಾತ ನೋಡಬೇಕು, ಶಿವರಾಮ ಕಾರಂತರ ಕಾದಂಬರಿ ಓದಬೇಕು ಎಂಬಂತಹ ಸಣ್ಣಸಣ್ಣ ಕೆಲಸಗಳನ್ನು ಐದಾರು ವರುಷ ಮಾಡಲಾಗದವರು ಇದ್ದಾರೆ. ಹಾಗೆಯೇ ಭಜನೆ, ಭಾವಗೀತೆ ಹಾಡುಗಾರಿಕೆ ಇತ್ಯಾದಿ ಕಲಿಯಲು ಆರಂಭಿಸಿ, ಒಂದೇ ತಿಂಗಳಿನಲ್ಲಿ ಅದನ್ನು ಕೈಬಿಟ್ಟವರೂ ಹಲವರಿದ್ದಾರೆ.
ಇದೆಲ್ಲ ಯಾಕೆ ಹೀಗಾಗುತ್ತದೆ? ಇದಕ್ಕೆ ಕಾರಣವೇನು? ಎಂದು ಕೇಳಿದರೆ, ಇವೆಲ್ಲದರ ಕಾರಣ ನಮ್ಮ ಹೊರಗಿಲ್ಲ. ಬದಲಾಗಿ ಕಾರಣ ನಮ್ಮೊಳಗಿದೆ. ಅಂದರೆ ನಮ್ಮ ಮನಸ್ಸಿನಲ್ಲಿದೆ. ಹಾಗಾದರೆ ಇದಕ್ಕೇನು ಪರಿಹಾರ? ಎಂದು ಕೇಳಿದರೆ, ನಮ್ಮ ಮನಸ್ಸಿನೊಂದಿಗೆ ಮ್ಯಾಜಿಕ್ ಮಾಡುವುದೇ ಪರಿಹಾರ” ಎಂದು ಅಡ್ಡೂರು ಕೃಷ್ಣ ರಾಯರು ತಮ್ಮ ಉಪನ್ಯಾಸ ಶುರುವಿಟ್ಟರು.
ಮನಸ್ಸಿನ ವಿಚಿತ್ರಗಳು
ತಮ್ಮ ಮಾತನ್ನು ಮುಂದುವರಿಸುತ್ತಾ ಅವರು ಮನಸ್ಸಿನ ಕೆಲವು ವಿಚಿತ್ರಗಳನ್ನು ವಿವರಿಸಿದರು. ನಮ್ಮೆಲ್ಲರ ಮನಸ್ಸು ನಿರಂತರವಾಗಿ, ವಿಪರೀತ ವೇಗದಿಂದ ಏನಾದರೂ ಯೋಚನೆ ಮಾಡುತ್ತಲೇ ಇರುತ್ತದೆ. ಇದರಿಂದಾಗಿ ನಮ್ಮ ಆಂತರಿಕ ಶಕ್ತಿ ವಿವಿಧ ದಿಕ್ಕುಗಳಲ್ಲಿ ಚೆಲ್ಲಾಪಿಲ್ಲಿ. ಆದ್ದರಿಂದ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ, ನಮ್ಮ ಮನಸ್ಸಿನ ಯೋಚನೆಗಳಿಗೆ ಒಂದು ಗುರಿ ನೀಡಬೇಕು. ಆಗ, ಮಹಾನ್ ಸಂಗೀತಗಾರ ಭೀಮಸೇನ ಜೋಷಿ ಅಥವಾ ಅದ್ವಿತೀಯ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ಅವರಂತೆ ಒಂದೇ ಗುರಿಯ ಬಗ್ಗೆ ಯೋಚಿಸುತ್ತಾ, ಜೀವನದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವೆಂದರು.
ಮನಸ್ಸಿನ ಇನ್ನೊಂದು ವಿಚಿತ್ರ ಏನೆಂದರೆ ಬೇಡವಾದದ್ದನ್ನೇ ಮತ್ತೆಮತ್ತೆ ನೆನಪು ಮಾಡಿಕೊಳ್ಳುವುದು. ಜೀವ ನಡುಗಿಸುವಂತಹ ಭಯಾನಕ ಅನುಭವ ಆದವರಿಗಂತೂ ಅದನ್ನು ಮರೆಯಲು ಸಾಧ್ಯವಾಗೋದೇ ಇಲ್ಲ. ಉದಾಹರಣೆಗೆ, ಅಪಘಾತದಲ್ಲಿ ಕುಟುಂಬದವರ ಸಾವು, ಬಿರುಗಾಳಿ ಅಥವಾ ಭೂಕಂಪದಿಂದಾಗಿ ಮನೆಯ ನಾಶ, ಕಣ್ಣೆದುರಿನಲ್ಲೇ ಆತ್ಮೀಯರ ಕೊಲೆ - ಇಂತಹ ದಾರುಣ ಅನುಭವಗಳ ನೆನಪಿನ ಬಿರುಸು ಕಡಿಮೆಯಾಗದು. ಆದರೆ, ಇವುಗಳ ನೆನಪಿನಲ್ಲೇ ನಾವು ಮುಳುಗುತ್ತಿದ್ದರೆ, ಜೀವನದಲ್ಲಿ ಮುಂದೆ ಸಾಗುವುದೆಂತು? ಅದಕ್ಕಾಗಿ, ಪ್ರತಿದಿನ ಭಜನೆ ಅಥವಾ ಧ್ಯಾನದಲ್ಲಿ ಒಂದಷ್ಟು ಹೊತ್ತು ತನ್ಮಯರಾಗಿ, ಇಂತಹ ನೆನಪುಗಳ ಭಾರ ತಗ್ಗಿಸಿಕೊಳ್ಳಬಹುದು. ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದೊಡನೆ "ಆ ನೆನಪನ್ನು ಮರೆಯುತ್ತೇನೆ” ಎಂದು ನಮಗೆ ನಾವೇ ಆದೇಶ ನೀಡುವುದರಿಂದಲೂ ಅದರಿಂದ ಪಾರಾಗಬಹುದು.
ಮನಸ್ಸಿನ ಮತ್ತೊಂದು ವಿಚಿತ್ರ ಏನೆಂದರೆ, ನಮ್ಮ ಅಸಮರ್ಥನೀಯ ವರ್ತನೆಗಳಿಗೆ ಜವಾಬ್ದಾರಿ ತೆಗೆದುಕೊಳ್ಳದೆ ಇರೋದು. ಅಂದರೆ, ಇತರರ ಮೇಲೆ ಅಥವಾ ಬೇರೊಂದರ ಮೇಲೆ ಅಪವಾದ ಹೊರಿಸಿ, "ಆ ತಪ್ಪು ನನ್ನದಲ್ಲ” ಎಂದು ಜವಾಬ್ದಾರಿಯಿಂದ ಜಾರಿಕೊಳ್ಳುವುದು. ಉದಾಹರಣೆಗೆ, "ನಾನು ಬಹಳ ಒಳ್ಳೆಯ ವ್ಯಕ್ತಿ. ಕೆಲವೊಮ್ಮೆ ಆ ಕೋಪ ಬಂದು ನನ್ನಿಂದ ಕೆಟ್ಟ ಕೆಲಸ ಮಾಡಿಸುತ್ತದೆ" ಎನ್ನುತ್ತಾ ಕೋಪದ ಮೇಲೆ ತಮ್ಮ ಕೆಟ್ಟ ವರ್ತನೆಯ ಜವಾಬ್ದಾರಿ ಹೊರಿಸುವುದು. ಇದು ನಮಗೆ ನಾವೇ ಮಾಡಿಕೊಳ್ಳುವ ಮೋಸ. ಯಾಕೆಂದರೆ, ನಮ್ಮ ದುರ್ವತನೆಗೂ ಅದರ ಬದಲಾವಣೆಗೂ ನಾವೇ ಜವಾಬ್ದಾರಿ ತಗೋಬೇಕು.
ಮನಸ್ಸಿನೊಂದಿಗೆ ಮ್ಯಾಜಿಕ್ ಮಾಡುವ ವಿಧಾನಗಳು
ಮನಸ್ಸಿನ ಇಂತಹ ವಿಚಿತ್ರಗಳನ್ನು ಅರ್ಥ ಮಾಡಿಕೊಂಡರೆ, ಮನಸ್ಸಿನೊಂದಿಗೆ ಮ್ಯಾಜಿಕ್ ಮಾಡುವುದು ಹಾಗೂ ನಮ್ಮ ವರ್ತನೆ ಬದಲಾಯಿಸುವುದು ಸುಲಭವಾಗುತ್ತದೆ ಎಂದು ಅಡ್ಡೂರು ಕೃಷ್ಣ ರಾಯರು ಸೂಚಿಸಿದರು. ಉದಾಹರಣೆಗೆ, ಅನೇಕರು ತಮ್ಮ ಜೀವನದಲ್ಲಿ ಎಂದೋ ನಡೆದ ದುರ್ಘಟನೆಗಳನ್ನು ನೆನೆಯುತ್ತಾ ಜೀವನವಿಡೀ ಕೊರಗುತ್ತಾರೆ; ಇವರು ಭೂತಕಾಲದಲ್ಲಿ ಬದುಕುವವರು. ಇನ್ನು ಕೆಲವರು ಭವಿಷ್ಯದಲ್ಲಿ, ಹತ್ತಾರು ವರುಷಗಳ ನಂತರ ನಡೆಯಬಹುದಾದ ಸಂಗತಿಯೊಂದನ್ನು ನೆನೆಯುತ್ತಾ ಯಾವಾಗಲೂ ಆತಂಕದಿಂದ ಇರುತ್ತಾರೆ; ಇವರು ಭವಿಷ್ಯದಲ್ಲಿ ಬದುಕುವವರು. ಸದಾ ಸಂತಸದಿಂದ ಇರಬೇಕಾದರೆ ಮಕ್ಕಳಂತೆ ವರ್ತಮಾನದಲ್ಲಿ ಅಂದರೆ ಈಗಿನ ಕ್ಷಣದಲ್ಲಿ ಬದುಕಲು ಕಲಿಯಬೇಕೆಂದರು.
ಅವರಿತ್ತ ಇನ್ನೊಂದು ಉದಾಹರಣೆ: ನಮ್ಮ ಸಣ್ಣಪುಟ್ಟ ಸಾಧನೆಗಳಿಗೂ ಅಭಿಮಾನ ಪಡುವುದು. ನಡೆಯಲು, ಮಾತನಾಡಲು, ಓದಲು, ಬರೆಯಲು, ಓಡಲು, ಈಜಲು, ಸೈಕಲ್ ಬಿಡಲು ಕಲಿತದ್ದು; ಎಸ್.ಎಸ್.ಎಲ್.ಸಿ. ಪಾಸಾದದ್ದು, ಪುಟ್ಟ ಭಾಷಣ ಮಾಡಿದ್ದು, ಅಡುಗೆ ಮಾಡಲು, ಟೂ-ವೀಲರ್ ಓಡಿಸಲು ಕಲಿತದ್ದು - ಇವೆಲ್ಲವೂ ದೊಡ್ಡ ಸಾಧನೆಗಳೇ ಆಗಿವೆ. ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದು ಮಾತ್ರ ದೊಡ್ಡ ಸಾಧನೆಯಲ್ಲ ಎಂದು ಮನದಟ್ಟು ಮಾಡಿದರು ಅಡ್ಡೂರು ಕೃಷ್ಣ ರಾವ್. ಇಂತಹ ಸಣ್ಣಪುಟ್ಟ ಸಾಧನೆಗಳ ಪಟ್ಟಿ ಬರೆದು, ಖಿನ್ನತೆ ಮೂಡಿದಾಗೆಲ್ಲ ಆ ಪಟ್ಟಿ ನೋಡುತ್ತಿದ್ದರೆ, ಖಿನ್ನತೆಯಿಂದ ಪಾರಾಗಲು ಸಹಾಯವೆಂದು ಸಲಹೆಯಿತ್ತರು.
ಪ್ರತಿ ದಿನ ಬೆಳಗ್ಗೆ ಎದ್ದೊಡನೆ ಆ ದಿನದ ಮುಖ್ಯ ಕೆಲಸಗಳ ಬಗ್ಗೆ ಒಂದು ನಿಮಿಷ ಯೋಜಿಸಬೇಕು ಮತ್ತು ರಾತ್ರಿ ಮಲಗುವ ಮುಂಚೆ ಆ ಕೆಲಸಗಳಲ್ಲಿ ಎಷ್ಟರ ಮಟ್ಟಿಗೆ ಗುರಿ ಸಾಧನೆಯಾಗಿದೆ ಎಂದು ಮನಸ್ಸಿನಲ್ಲೇ ಬ್ಯಾಲೆನ್ಸ್-ಷೀಟ್ ಹಾಕಿ ಪರಿಶೀಲಿಸಿದರೆ, ಜೀವನದಲ್ಲಿ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವೆಂದು ಅವರು ಕಿವಿಮಾತು ಹೇಳಿದರು.
ಮನಸ್ಸಿನೊಂದಿಗೆ ಮ್ಯಾಜಿಕ್ ಮಾಡಲಿಕ್ಕಾಗಿ, ಅಡ್ಡೂರು ಕೃಷ್ಣ ರಾವ್ ಸೂಚಿಸಿದ ಇನ್ನಷ್ಟು ದಾರಿಗಳು: ಸಮಸ್ಯೆಗಳ ಪರಿಹಾರಕ್ಕಾಗಿ ಭಿನ್ನವಾಗಿ ಚಿಂತನೆ ಮಾಡುವುದು; ಸುಪ್ತ ಮನಸ್ಸನ್ನು ಬಡಿದೆಬ್ಬಿಸುವುದು; ಹೊಸಹೊಸ ಮಾನಸಿಕ ಕಸರತ್ತುಗಳ ಮೂಲಕ ಮನಸ್ಸನ್ನು ಮತ್ತಷ್ಟು ಚುರುಕಾಗಿಸುವುದು. ಇವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಲ್ಲುವುದು ಹೇಗೆಂಬ ಸರಳ ವಿಧಾನಗಳ ವಿವರಣೆಯೇ ಅವರ ಉಪನ್ಯಾಸದ ವಿಶೇಷತೆ.
ಹತ್ತಾರು ಭಾಷೆಗಳನ್ನು ಕಲಿತವರು, ನೂರಾರು ಪುಸ್ತಕಗಳನ್ನು ಓದಿದವರು, ಸಾವಿರಾರು ಸಾಲುಗಳ ಮಹಾಕಾವ್ಯ ಕಂಠಪಾಠ ಮಾಡಿದವರು ಆ ಸಾಧನೆಗಾಗಿ ಮನಸ್ಸನ್ನು ಪಳಗಿಸಿದ್ದು ಹೇಗೆ? ಹೇಗೆಂದರೆ, ತಮ್ಮ ಮೆದುಳಿನಲ್ಲಿ ತೆಪ್ಪಗಿರುವ ಲಕ್ಷಗಟ್ಟಲೆ ನರಕೋಶಗಳನ್ನು ವಿನೂತನ ವಿಭಿನ್ನ ಮಾನಸಿಕ ಚಟುವಟಿಕೆಗಳಿಂದ ಬಡಿದೆಬ್ಬಿಸುವ ಮೂಲಕ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿದರು. ಉತ್ತಮ ಪುಸ್ತಕಗಳನ್ನು ಓದುವುದು, ಉತ್ತಮ ಸಂಗೀತ ಕೇಳುವುದು ಇಂತಹ ಸದಭಿರುಚಿಯ ಹವ್ಯಾಸಗಳ ಮೂಲಕ ಮನಸ್ಸನ್ನು ಚೇತೋಹಾರಿಯಾಗಿ ಇಟ್ಟುಕೊಂಡು, ಹೊಸಹೊಸತನ್ನು ನಿರಂತರವಾಗಿ ಕಲಿಯುತ್ತಾ ವೈಯುಕ್ತಿಕ ಬದುಕಿನಲ್ಲಿಯೂ ವೃತ್ತಿ ಜೀವನದಲ್ಲಿಯೂ ಅಧ್ಬುತ ಸಾಧನೆ ಮಾಡಬಹುದೆಂದರು; ಈ ಮಾತಿಗೆ ಪುರಾವೆಯಾಗಿ ಜಗತ್ತಿಗೇ ಪ್ರೇರಣೆಯಾಗಿರುವ ಹಲವು ವಿಕಲಚೇತನರ ನಿದರ್ಶನಗಳನ್ನಿತ್ತು ತಮ್ಮ ಉಪನ್ಯಾಸವನ್ನು ಅಡ್ಡೂರು ಕೃಷ್ಣ ರಾವ್ ಮುಕ್ತಾಯಗೊಳಿಸಿದರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿಯವರು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಅನೇಕ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ, ಡಾ. ಅನಿರುದ್ಧ್ ಶೆಟ್ಟಿ, ಸೈಕಿಯಾಟ್ರಿಸ್ಟ್ ಅವರು ಕೊರೊನಾ ವೈರಸಿನ ಸೋಂಕು ಹರಡುತ್ತಿರುವ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ ಸಲಹೆಗಳನ್ನು ನೀಡಿದರು.