ಮಾನಸೋಲ್ಲಾಸ

ಮಾನಸೋಲ್ಲಾಸ

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು. ದೂ: ೯೬೨೦೯೧೬೯೯೬
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ:೨೦೨೧

ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್ಮ ‘ಸವಿ ಸವಿ ನೆನಪೆ, ಸಾವಿರ ನೆನಪೆ !’ ಎಂಬ ಮುನ್ನುಡಿಯಲ್ಲಿ “‘ಮಾನಸೋಲ್ಲಾಸ' ಎಂಬುವುದು ಒಂದು ಸಂಸ್ಕೃತ ಕೃತಿಯ ಹೆಸರು. ಬರೆದದ್ದು ೧೨ನೆಯ ಶತಮಾನದಲ್ಲಿ. ಬರೆದವನು ಕನ್ನಡಿಗ. ಚಾಲುಕ್ಯ ದೊರೆ ಮೂರನೇ ಸೋಮೇಶ್ವರ. ಅದು ಆ ಕಾಲದ ವಿಶ್ವಕೋಶ. ಆದರೆ ನನಗೆ ಅಂಥ ದೊಡ್ದ ಮಹತ್ವಾಕಾಂಕ್ಷೆಯೇನೂ ಇಲ್ಲ. ಈ ಕೃತಿ ಗಾತ್ರದಲ್ಲೂ, ಗುಣದಲ್ಲೂ ಅದಕ್ಕಿಂತ ಬಹುತೇಕ ಸಣ್ಣದು. ನೆನಪೇ ಇಲ್ಲಿನ ಎಲ್ಲ ಬರಹಗಳ ಸ್ಥಾಯಿಭಾವ. ಸಾವಿರ ನೆನಪುಗಳನ್ನು ಹಿಡಿದಿಡುವ ದೊಡ್ಡ ಕೆಲಸಕ್ಕೇನೂ ನಾನಿಲ್ಲಿ ಕೈ ಹಾಕಿಲ್ಲ. ಸಾವಿರದ ನೆನಪುಗಳಲ್ಲಿ ಕೆಲವನ್ನು ಹೆಕ್ಕಿ ನಿಮ್ಮ ಮುಂದೆ ಹರವಿದ್ದೇನಷ್ಟೇ. ಈ ನೆನಪುಗಳಲ್ಲಿ ನನ್ನದೆಂಬ ಖಾಸಗಿಯಾದದ್ದೇನೂ ಇಲ್ಲ. ಈ ನೆನಪುಗಳೆಲ್ಲ ನನ್ನವೆಷ್ಟೋ ಅಷ್ಟೇ ನಿಮ್ಮವು, ನಮ್ಮೆಲ್ಲರವು.” ಎಂದು ಬರೆದಿದ್ದಾರೆ.

ಪುಸ್ತಕದ ಬೆನ್ನುಡಿಯು ಈ ಕೃತಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ. ಬೆನ್ನುಡಿಯಲ್ಲಿ ಬರೆದಂತೆ “ಮನುಷ್ಯ ಭೂತಕಾಲದಲ್ಲಿ ಬದುಕಲು ಬಯಸುತ್ತಾನೆ ಎಂಬೊಂದು ಇಂಗ್ಲೀಷ್ ಜಾಣ್ನುಡಿ ಇದೆ. ಭವಭೂತಿಯ ಉತ್ತರರಾಮಚರಿತದಲ್ಲಿ ‘ತೇ ಹಿ ನೋ ದಿವಸಾಃ ಗತಾಃ ‘ಎಂದು ಸೀತಾ-ರಾಮರು ತಾವು ಕಳೆದ ಸುದಿನಗಳ ಬಗ್ಗೆ ಸ್ಮರಿಸುವ ಪ್ರಸಂಗ ಇದೆ. ನೆನಪುಗಳ ಮಾತು ಮಧುರ ಎಂಬ ಕನ್ನಡದ ಹಾಡೇ ಇದೆಯಲ್ಲ!”

“ರೋಹಿತ್ ಚಕ್ರತೀರ್ಥರ ‘ಮಾನಸೋಲ್ಲಾಸ' ಕೃತಿಯನ್ನು ಓದುವಾಗ ಕಾಲ ಎಂಬ ಟ್ರೇನಿನಲ್ಲಿ ಕೂತು ಹಿಮ್ಮುಖವಾಗಿ ಸಾಗಿದ ಅನುಭವವಾಗುತ್ತದೆ. ಕಳೆದ ಎರಡು ಮೂರು ತಲೆಮಾರುಗಳಲ್ಲಿ ನಾವು ಕಂಡುಂಡ ಅನೇಕ ಸಂಗತಿಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಮನೆಯ ಹಜಾರದಲ್ಲೋ ಪಡಸಾಲೆಯಲೋ ಗೋಡೆಗೆ ವಾಲಿಸಿದ ದೇವರ ಪಟದ ಹಿಂಭಾಗದಲ್ಲಿ ಸಂಸಾರ ಹೂಡುತ್ತಿದ್ದ ಗುಬ್ಬಚ್ಚಿ, ಅಟ್ಟ ಎಂಬ ನಿಗೂಢ ಅನೂಹ್ಯ ಪ್ರಪಂಚ, ಕಚೇರಿಗಳಲ್ಲಿ ಕೇಳಿಬರುತ್ತಿದ್ದ ಟಕ ಟಕ ಎಂಬ ಟೈಪ್ ರೈಟರ್ ಸಂಗೀತ, ವಿಸಿಆರ್, ಕಾಂಪ್ಯಾಕ್ಟ್ ಡಿಸ್ಕ್ ಗಳಲ್ಲಿ ತೆರೆದುಕೊಳ್ಳುತ್ತಿದ್ದ ಸಿನೆಮಾ ಲೋಕ, ಮೂರು ತಾಸುಗಳಷ್ಟು ಕಾಲ ಊರ ಜನರನ್ನೆಲ್ಲ ಬೆಂಚಿನ ತುದಿಯಲ್ಲಿ ಕೂರಿಸಿ ಮಂತ್ರಮುಗ್ಧಗೊಳಿಸುತ್ತಿದ್ದ ಸರ್ಕಸ್ ಎಂಬ ಮಾಯಾಲೋಕ, ಬಾಲ್ಯದ ಬೆರಗಿಗೆ ಬಣ್ಣತುಂಬಿದ ಗಾಳಿಪಟ, ಶಾಲಾರಂಭದ ಜೊತೆಗೇ ಬೆರೆತುಹೋದ ವರ್ಷವೈಭವದ ಪಡಿಪಾಟಲುಗಳು, ನಮ್ಮೆಲ್ಲರ ಮನೆಗಳಲ್ಲೂ ಭಾರತೀಯತೆಯ ಊದುಬತ್ತಿ ಹಚ್ಚಿದ್ದ ಸಿದ್ಧಾರ್ಥ್ ಕಾಕ್ ನ ಸುರಭಿ..ಎಲ್ಲವೂ ಇರುವ ಈ ಕೃತಿ ಶೀರ್ಷಿಕೆಗೆ ತಕ್ಕಂತೆ ಮಾನಸೋಲ್ಲಾಸವೇ. ಹಳೆ ನೆನಪು ಎಂಬ ಬ್ಲ್ಯಾಕ್ ಆಂಡ್ ವೈಟ್ ಚಿತ್ರಕ್ಕೆ ವರ್ಣಮಯ ಚೌಕಟ್ಟು ತೊಡಿಸಿದ್ದಾರೆ ಚಕ್ರತೀರ್ಥರು”.

ಈ ಬೆನ್ನುಡಿಯನ್ನು ಓದಿದ ನಂತರ ಪುಸ್ತಕ ಓದದೇ ಇರಲಾರಿರಿ. ಮೂರ್ನಾಲ್ಕು ಪುಟಗಳಲ್ಲಿ ಮುಗಿಯುವ ಪುಟ್ಟ ಪುಟ್ಟ ೨೦ ಬರಹಗಳಿವೆ. ಪ್ರತೀ ಬರಹಕ್ಕೆ ಸೊಗಸಾದ ಚಿತ್ರಗಳಿವೆ. ಓದುತ್ತಾ ಓದುತ್ತಾ ಪುಸ್ತಕ ಮುಗಿದದ್ದೇ ಗೊತ್ತಾಗುವುದಿಲ್ಲ. ಜೊತೆಗೆ ನಮ್ಮ ನಮ್ಮ ಬಾಲ್ಯದ ನೆನಪಿನಲ್ಲೂ ತೇಲಾಡಬಹುದು. ಏಕೆಂದರೆ ಇದರಲ್ಲಿ ಪ್ರತಿಯೊಬ್ಬರ ಬಾಲ್ಯವೂ, ಅಂದಿನ ಅನುಭವವೂ ಮೇಳೈಸಿದೆ. ಬಾಲ್ಯದಲ್ಲಿ ಹೆದರುತ್ತಿದ್ದ ಭೂತ, ರೋಮಾಂಚನ ನೀಡುತ್ತಿದ್ದ ಸರ್ಕಸ್, ಮಳೆಗಾಲ ಮತ್ತು ಹವಳದ ಮರಿ ಎಂಬ ಜೀವಿ, ಹಾರಿಸಿದ ಗಾಳಿಪಟ, ನೋಡಿದ ಟಿವಿ ರಾಮಾಯಣ, ಸುರಭಿ ಎಂಬ ಧಾರಾವಾಹಿ, ಮಾಯವಾದ ಟೈಪ್ ರೈಟರ್ ಯಂತ್ರ, ಸಣ್ಣವರಿದ್ದಾಗ ತಿನ್ನುತ್ತಿದ್ದ ಮಸಾಲೆ ದೋಸೆ, ಅನುಭವಿಸಿದ ಬಿರು ಬೇಸಿಗೆ, ರೇಡಿಯೋ ಗಾನ ಎಲ್ಲವೂ ಸರಳ ಸುಮಧುರವಾಗಿ ಬಿಂಬಿತವಾಗಿವೆ. 

ಶ್ರೀನಿವಾಸ ಎಣ್ಣಿಯವರ ಸುಂದರ ಛಾಯಚಿತ್ರವು ಪುಸ್ತಕದ ರಕ್ಷಾಪುಟವನ್ನು ಅಲಂಕರಿಸಿದೆ. ೧೫೨ ಪುಟಗಳ ಈ ಪುಸ್ತಕವನ್ನು ಓದುತ್ತಾ ಓದುತ್ತಾ ನಮ್ಮ ಬಾಲ್ಯದ ನೆನಪುಗಳ ಚಿತ್ರಗಳು ಒಂದೊಂದಾಗಿಯೇ ನಮ್ಮ ಕಣ್ಣ ಮುಂದೆ ಬಂದು ನಿಲ್ಲಲಾರಂಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ.