ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಮನವಿ....

ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಮನವಿ....

ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀಗೆ ಆಯ್ಕೆ ನೀಡಿ ಜಾರಿ ಮಾಡಬಹುದೇ ಒಮ್ಮೆ ಯೋಚಿಸಿ. ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯ ಅಥವಾ ಅಸೂಯೆ ಬೇಡ. ಸಹಾನುಭೂತಿ ಇರಲಿ. ಆದರೆ… ಇದೊಂದು ಸಂಕೀರ್ಣ ವಿಷಯ. ಹೆಚ್ಚು ಕಡಿಮೆ ಎಷ್ಟು ಜನ ಉಚಿತ ಕೊಡುಗೆಗಳನ್ನು ಬೆಂಬಲಿಸುತ್ತಾರೋ ಅಷ್ಟೇ ಜನ ಅದನ್ನು ವಿರೋಧಿಸುತ್ತಾರೆ ಸಹ. ಕರ್ನಾಟಕದ ಅಸಮಾನತೆಯ ಸಮಾಜದಲ್ಲಿ ಇದನ್ನು ಸ್ವಲ್ಪ ಆಳವಾಗಿ ಎಲ್ಲಾ ಕೋನಗಳಿಂದ ಯೋಚಿಸಿ ಅಭಿಪ್ರಾಯ ರೂಪಿಸಿಕೊಳ್ಳಬೇಕು.

ತೆರಿಗೆ ಹಣವನ್ನು ವಿವೇಚನೆ ಇಲ್ಲದೇ ಬಳಸಿ ದುರುಪಯೋಗ ಮಾಡುವುದು ಮತ್ತು ಜನರನ್ನು ಸೋಮಾರಿಯಾಗಿ ಮಾಡುವ ಕಾರಣದಿಂದ ಉಚಿತ ಯೋಜನೆಗಳನ್ನು ಮುಖ್ಯವಾಗಿ ವಿರೋಧಿಸಲಾಗುತ್ತದೆ ಎಂಬ ಒಂದು ವಾದ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯ ಕಾರಣ ಇನ್ನೂ ಬಹಳಷ್ಟು ಜನ ಬಡತನದಲ್ಲಿಯೇ ಇರುವುದರಿಂದ ಅವರಿಗೆ ಸರ್ಕಾರದ ಬೆಂಬಲದ ಅವಶ್ಯಕತೆ ಇದೆ. ಜೊತೆಗೆ ಇದು ಭಿಕ್ಷೆಯಲ್ಲ ಒಂದು ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿ ಎಂಬ ಇನ್ನೊಂದು ವಾದ.

ಎರಡು ಅತಿರೇಕಗಳ ನಡುವೆ ಸಮನ್ವಯದ ಹಾದಿಯೂ ಇರುತ್ತದೆ. ಅದೆಂದರೆ ಅವಶ್ಯಕತೆ ಇರುವವರಿಗೆ ಉಚಿತ ಯೋಜನೆಗಳು ದೊರೆಯಲೂ ಬೇಕು. ಹಾಗೆಯೇ ಅದರ ದುರುಪಯೋಗವನ್ನೂ ತಡೆಯಬೇಕು. ಅದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಮನವಿ...

ಆಯ್ಕೆ - 

1) " ನಾನು ಅತ್ಯಂತ ಕಡು ಬಡವ. ನಿಮ್ಮ ಎಲ್ಲಾ ಉಚಿತ ಯೋಜನೆಗಳು ನನಗೆ ಅತ್ಯಂತ ಅವಶ್ಯಕತೆ ಇದೆ. ಆದ್ದರಿಂದ ನನಗೆ ಈ ಸರ್ಕಾರ ಘೋಷಿಸಿರುವ ಎಲ್ಲಾ ಗ್ಯಾರಂಟಿಗಳಿಗೆ ನಾನು ಅರ್ಹ. ನನಗೆ ಗ್ಯಾರಂಟಿ ಕಾರ್ಡ್ ನೀಡಿ. ಮುಂದೆ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ನಾನು ಇದನ್ನು ತಿರಸ್ಕರಿಸುವೆನು”

ಆಯ್ಕೆ -

2) " ನಾನು ಈಗಿನ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿ ಇದ್ದೇನೆ. ನನಗೆ ಈಗ ಘೋಷಿಸಿರುವ ಯಾವ ಉಚಿತ ಯೋಜನೆಗಳ ಅವಶ್ಯಕತೆ ಇಲ್ಲ. ಮುಂದೆ ಅವಶ್ಯಕತೆ ಬಂದರೆ ಅದರ ಉಪಯೋಗ ಪಡೆಯುವೆ. ಅಲ್ಲಿಯವರೆಗೂ ನನಗೆ ಗ್ಯಾರಂಟಿ ಕಾರ್ಡ್ ಅವಶ್ಯಕತೆ ಇಲ್ಲ...."

ರೇಷನ್ ಅಂಗಡಿಗಳಲ್ಲಿ ಅವಶ್ಯಕತೆ ಇರುವವರಿಗೆ ಒಂದು ಡಿಜಿಟಲ್ ಕಾರ್ಡ್ ನೀಡಿ ಯೋಜನೆಯನ್ನು ಜಾರಿ ಮಾಡಬಹುದು. ಹೀಗೆ ಎಲ್ಲರಿಗೂ ಒಂದು ಅವಕಾಶ ನೀಡಬೇಕು. ಇದು ಸ್ವ ಇಚ್ಛೆಯಿಂದ ಮಾಡುವ ಘೋಷಣೆ. ಯಾವುದೇ ಒತ್ತಾಯ ಇರುವುದಿಲ್ಲ. ಜನರ ಆತ್ಮಸಾಕ್ಷಿಗೆ ಒಂದು ಕರೆ. ಏಕೆಂದರೆ ‌ಏನೇ ಷರತ್ತುಗಳು ವಿಧಿಸಿದರು ಅವಶ್ಯಕತೆ ಇರುವವರು ಮತ್ತು ಇಲ್ಲದವರು ಎಂಬ ಎರಡು ವಿಭಾಗ ಇರುವುದು ಕಟು ವಾಸ್ತವ.

ಸಾಮಾನ್ಯವಾಗಿ ನಾನು ಕಂಡಂತೆ ಶ್ರೀಮಂತ ಮತ್ತು ಮಧ್ಯಮ ವರ್ಗದ ಬಹುತೇಕರು ರೇಷನ್ ಅಂಗಡಿಯ ಅಕ್ಕಿ ಮತ್ತು ಇತರ ಪದಾರ್ಥಗಳನ್ನು ಉಪಯೋಗಿಸುವುದಿಲ್ಲ. ಅಸಲಿಗೆ ತೆಗೆದುಕೊಳ್ಳುವುದೇ ಇಲ್ಲ ಅಥವಾ ಸಣ್ಣ ಹೋಟೆಲ್‌ಗಳಿಗೆ ಮಾರುತ್ತಾರೆ ಅಥವಾ ತಮ್ಮ ಕೆಲಸದವರಿಗೆ ಕೊಡುತ್ತಾರೆ ಅಥವಾ ಸಾಕು ಪ್ರಾಣಿಗಳಿಗೆ ಆಹಾರವಾಗಿ ಬಳಸುತ್ತಾರೆ. ಅಂತಹವರು ಈ ಯೋಜನೆ ಬಿಟ್ಟು ಕೊಡಬಹುದು. ಅವಶ್ಯಕತೆ ಇರುವವರು ಖಂಡಿತ ಉಪಯೋಗಿಸಲಿ. 

ಅನೇಕ ಮನೆಯ ಕಡು ಬಡವ ಗೃಹಿಣಿಯರಿಗೆ 2000 ಒಂದು ದೊಡ್ಡ ಮೊತ್ತ ಮತ್ತು ಜೀವನ ಭದ್ರತೆ ಮತ್ತು ಸ್ವಾಭಿಮಾನದ ರಕ್ಷಾ ಕವಚವೂ ಹೌದು. ಹಾಗೆಯೇ ಬಹಳಷ್ಟು ಕುಟುಂಬದವರಿಗೆ 2000 ಅತ್ಯಂತ ಚಿಲ್ಲರೆ ಹಣ. ಉದ್ಯಮಿಗಳು, ಸರ್ಕಾರಿ ನೌಕರರು, ದೊಡ್ಡ ಕಂಪನಿಯ ಖಾಸಗಿ ಉದ್ಯೋಗಿಗಳು, ದೊಡ್ಡ ವ್ಯಾಪಾರಿಗಳು, ಮನೆಗಳನ್ನು ಬಾಡಿಗೆ ಕೊಟ್ಟಿರುವವರು ಮುಂತಾದವರು ಸ್ವ ಇಚ್ಛೆಯಿಂದ ಗೃಹಿಣಿಯರಿಗೆ ಕೊಡುವ 2000 ಮಾಸಿಕ ಭತ್ಯೆ ತಿರಸ್ಕರಿಸುವುದು.

ಅನೇಕ ಯುವಕರಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲೇ ಹಣದ ಕೊರತೆ ಇರುತ್ತದೆ. ಅಂತಹವರು ನಿರುದ್ಯೋಗ ಭತ್ಯೆ ಪಡೆಯಲಿ. ಉಳಿದಿರುವ ಅಷ್ಟು ಸಣ್ಣ ತಾತ್ಕಾಲಿಕ ನೆರವನ್ನು ತಿರಸ್ಕರಿಸಿ ಸ್ವಾಭಿಮಾನ ಮೆರೆಯಲಿ ಮತ್ತು ದೇಶ ಕಟ್ಟುವಲ್ಲಿ ಸಹಕರಿಸಲಿ. ಸಾಮಾನ್ಯವಾಗಿ ಒಂದೆರಡು ವಿದ್ಯುತ್ ಬಲ್ಬ್ ಮತ್ತು ಟಿವಿ  ಉಪಯೋಗಿಸುವ ಕಡು ಬಡವರು ಮಾತ್ರ 200 ಯೂನಿಟ್ ಒಳಗೆ ವಿದ್ಯುತ್ ಉಪಯೋಗಿಸಬಹುದು. ಫ್ಯಾನ್, ಫ್ರಿಟ್ಜ್, ಮಿಕ್ಸಿ, ವಾಷಿಂಗ್ ಮಿಷನ್, ಮೊಬೈಲ್ ಚಾರ್ಜಿಂಗ್ ಮುಂತಾದವುಗಳನ್ನು ಉಪಯೋಗಿಸುವವರು 200 ಯೂನಿಟ್ ಗಿಂತ ಹೆಚ್ಚೇ ಉಪಯೋಗಿಸುತ್ತಾರೆ. ಆದ್ದರಿಂದ ಈ ಯೋಜನೆ ಸಹಜವಾಗಿ ಬಡವರಿಗೆ ಮಾತ್ರ ಅನುಕೂಲ ಆಗುತ್ತದೆ. ಉಳಿದವರ ಬಿಲ್ ಎಂದಿನಂತೆ ಇರುತ್ತದೆ. 

ಹಾಗೆಯೇ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವವರು ಬಡವರು, ದಿನಗೂಲಿ ನೌಕರರು, ಗಾರ್ಮೆಂಟ್ಸ್ ಉದ್ಯೋಗಿಗಳು, ಚಿಲ್ಲರೆ ಅಂಗಡಿ, ಹಣ್ಣು ಮತ್ತು ತರಕಾರಿ ಮಾರುವವರೇ ಹೆಚ್ಚಾಗಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕಡಿಮೆಯೇ. ಮಧ್ಯಮ ವರ್ಗದವರು ಕಾರು ಮತ್ತು ದ್ವಿಚಕ್ರ ವಾಹನ ಬಳಸುತ್ತಾರೆ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳು ಸುಮ್ಮನೆ ಹೊರಗಡೆ ತಿರುಗಾಡುವುದು ಕಡಿಮೆಯೇ. ಉಚಿತವಾದಾಗ ಸ್ವಲ್ಪ ಹೆಚ್ಚು ದೇವ ಮಂದಿರಗಳಿಗೆ ಹೋಗಬಹುದು. ಅದರಿಂದ ಅಂತಹ ಹೆಚ್ಚಿನ ನಷ್ಟ ಇಲ್ಲ.

ಇನ್ನು‌ ಸೋಮಾರಿಗಳಾಗುತ್ತಾರೆ ಎಂಬುದು ಸಂಪೂರ್ಣ ವಾಸ್ತವವಲ್ಲ. ತಾತ್ಕಾಲಿಕವಾಗಿ ಸ್ವಲ್ಪ ಮಟ್ಟಿಗೆ ನಿಜವಿದ್ದರೂ ಬೇಡಿಕೆಯ ಕಾರಣದಿಂದ ಕೃಷಿ ಕೆಲಸದ ಕೂಲಿ ಹೆಚ್ಚಾಗಿ ಅವರ ಜೀವನಮಟ್ಟ ಉತ್ತಮವಾಗಬಹುದು. ಅನೇಕ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಹಾಗು ಸಾಪ್ಟ್ ವೇರ್ ಉದ್ಯೋಗಿಗಳ ಕೆಲಸ ಮತ್ತು ಸಂಬಳ ನೋಡಿದಾಗ ನಿಜಕ್ಕೂ ಅತ್ಯಂತ ಶ್ರಮದಾಯಕ ಕೂಲಿಗಳ ಸಂಬಳ ಹೆಚ್ಷಾದರೆ ಉತ್ತಮ. ಅದಕ್ಕೆ ಪೂರಕವಾಗಿ ರೈತರ ಆದಾಯವೂ ಹೆಚ್ಚಾಗಬೇಕಾಗುತ್ತದೆ.

ಏನೇ ಆಗಲಿ ಎಲ್ಲವೂ ಒಂದಕ್ಕೊಂದು ಪೂರಕ ಮತ್ತು ಬೆಸೆದು ಕೊಂಡಿದೆ. ಇದು ಒಂದು ರೀತಿಯ ಚಕ್ರ. ಅತಿಯಾದ ಉಚಿತಗಳ ಬಗ್ಗೆ ಎಚ್ಚರವಿರಲಿ ಹಾಗೆಯೇ ನಮ್ಮದೇ ಕಡು ಬಡವರ ಬಗ್ಗೆ ಅಸೂಯೆ ಪಟ್ಟು ಈ ಸಮಾಜವನ್ನು ಇನ್ನೂ ಒಡೆಯಬೇಡಿ. ಅನಾವಶ್ಯಕವಾಗಿ ಯೋಜನೆಯನ್ನು ವಿರೋಧಿಸುವ ಬದಲು ಸ್ವಾಭಿಮಾನದಿಂದ ಗ್ಯಾರಂಟಿಗಳನ್ನು ತಿರಸ್ಕರಿಸಿ ಬಡವರ ಬಗ್ಗೆ ಅನುಕಂಪ ತೋರಿಸಿ. ಹಾಗೆಯೇ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಅನೇಕ ದುಂದು ವೆಚ್ಚ ಕಡಿಮೆ ಮಾಡಿದರೆ ಈ ಯೋಜನೆಗಳು ಆರ್ಥಿಕ ಹೊರೆಯಾಗುವುದಿಲ್ಲ. ಅನೇಕ ಶ್ರೀಮಂತರು ಸರ್ಕಾರದಿಂದ ಪಡೆಯುವ ಬೃಹತ್ ಮೊತ್ತದ ಪ್ರತ್ಯಕ್ಷ ಮತ್ತು ಪರೋಕ್ಷ ಸಹಾಯಗಳ ನಡುವೆ ಬಡವರಿಗೆ ತಲುಪುವ ಉಚಿತ ಯೋಜನೆಗಳ ಮೊತ್ತ ಕಡಿಮೆಯೇ ಮತ್ತು ಸರ್ಕಾರ ಕಾರ್ಯನಿರ್ವಹಿಸಬೇಕಾಗಿರುವುದೇ ಬಡವರ ಪರವಾಗಿ ಎಂದು ನೆನಪಿಸುತ್ತಾ… ಶೋಷಿತರ ಪರವಾಗಿ ಸದಾ ಆಲೋಚಿಸಿ ಕಾರ್ಯೋನ್ಮುಖವಾಗುವುದು ಸಹ ಮಾನವೀಯ ಮೌಲ್ಯವೇ....

-ವಿವೇಕಾನಂದ ಎಚ್.ಕೆ, ಬೆಂಗಳೂರು.

ಚಿತ್ರ ಕೃಪೆ: ಇಂಟರರ್ನೆಟ್ ತಾಣ