ಮಾನ್ಸೂನ್ ಮಾರುತಗಳು ಏನು ಮತ್ತು ಹೇಗೆ?

ಮಾನ್ಸೂನ್ ಮಾರುತಗಳು ಏನು ಮತ್ತು ಹೇಗೆ?

ಮಾನ್ಸೂನ್ (ಮಳೆಗಾಲ) ಎಂಬ ಪದವು ಅರೇಬಿಕ್ ಭಾಷೆಯ ಪದವಾಗಿದೆ ಇದರ ಅರ್ಥ ಮೌಸಮ್ ಎಂಬುದಾಗಿದೆ. ಪ್ರಸಕ್ತ ಋತುಮಾನದ ಗಾಳಿಯು ಹಿಮ್ಮುಖವಾಗಿ ಬೀಸಿದರೆ ಅದನ್ನು ಮಾನ್ಸೂನ್ ಎಂದು ಕರೆಯಲಾಗುತ್ತದೆ. ಹೀಗೆ ಮಾನ್ಸೂನ್ ರೂಪಾಂತರಗೊಳ್ಳುವ ಸಮಯದಲ್ಲಿ ಗಾಳಿಯ ದಿಕ್ಕಿನ ಬದಲಾವಣೆ ಹಾಗೂ ಮಳೆಯ ಪ್ರಮಾಣದಲ್ಲಿ ಏರಿಳಿತಗಳಾಗುವುದು.

ಭಾರತೀಯ ಕೃಷಿಯಲ್ಲಿ ಮಾನ್ಸೂನ್ ನ ಮಹತ್ವ: ನೈರುತ್ಯ ಮಾನ್ಸೂನ್ ನಿಂದ ಭಾರತದ ಬಹುತೇಕ ರೈತರು ತಮ್ಮ ಕೃಷಿಯನ್ನು ನಡೆಸುತ್ತಿದ್ದಾರೆ. ಮಾನ್ಸೂನ್ ಆಗಮನದಿಂದ ಮುಂಗಾರಿನ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ, ಹಾಗೂ ಈ ರೀತಿಯ ಆರಂಭಿಕ ಬೆಳೆಗಳಾದ ಭತ್ತ, ಎಣ್ಣೆಬೀಜಗಳು ಹಾಗೂ ದ್ವಿದಳ ಧಾನ್ಯಗಳಂತಹ ಬೆಳೆಗಳನ್ನು ಬೆಳೆಸಲು ಸಹಾಯ ಮಾಡುತ್ತವೆ. “ಭಾರತೀಯ ಮಾನ್ಸೂನ್ ರೈತರೊಂದಿಗೆ ಜೂಜಾಡುತ್ತಿದೆ”-ಏಕೆಂದರೆ ಮಾನ್ಸೂನ್‌ನ ಅನಿರೀಕ್ಷಿತ ಸ್ವರೂಪದ ಕಾರಣದಿಂದ ಅದರ ವಿತರಣೆ, ತೀವ್ರತೆ ಹಾಗೂ ಸಮಯವಾರು ಹಂಚಿಕೆಯಲ್ಲಿ ಅತಿ ಹೆಚ್ಚು ಅನಿಯಮಿತವಾಗಿದೆ.

ಭಾರತೀಯ ಆರ್ಥಿಕತೆಯ ಮೇಲೆ ಮಾನ್ಸೂನ್‌ನ ಪ್ರಭಾವ: ಭಾರತ ದೇಶವು ಅತಿಹೆಚ್ಚು ಹಳ್ಳಿಗಳ (೫,೮೦,೦೦೦) ದೇಶವಾಗಿದ್ದು ಹಾಗೂ ಆ ಹಳ್ಳಿಗಳ ಮುಖ್ಯ ಕಸುಬು ವ್ಯವಸಾಯವಾಗಿದೆ. ಭಾರತದ ವಾರ್ಷಿಕ ಆದಾಯದಲ್ಲಿ ಸರಿಸುಮಾರು ೧೫% ಕೃಷಿಯಿಂದ ಕೂಡಿರುತ್ತದೆ. ಹಿಂದಿನ ವರ್ಷದ ಅಧ್ಯಯನದ ಪ್ರಕಾರ ಮಳೆ ಹಾಗೂ ಕೃಷಿ ಉತ್ಪಾದನೆ ಹಾಗೂ ಆದಾಯಕ್ಕೆ ನೇರ ಹಾಗೂ ಸಕಾರಾತ್ಮಕ ಸಂಬಂಧವಿದೆ. (ವಾರ್ಷಿಕ ವರದಿ, ೨೦೧೭-೧೮. ಭಾರತೀಯ ಹವಾಮಾನ ಇಲಾಖೆ, ನವದೆಹಲಿ)

ಮಾನ್ಸೂನ್ ನ ಗುಣ ಲಕ್ಷಣಗಳು: ಮಾನ್ಸೂನ್ ಮಾರುತಗಳು ಸಾಮಾನ್ಯವಾಗಿ ಮೇ ಕೊನೆಯ ವಾರದಲ್ಲಿ ಅಥವಾ  ಜೂನ್‌ ಮೊದಲ ವಾರದಲ್ಲಿ ಕೇರಳವನ್ನು ಪ್ರವೇಶಿಸುತ್ತವೆ. (ಆದರೆ ಅವುಗಳ ಆಗಮನ ಮತ್ತು ನಿರ್ಗಮನ ಸಮಯಗಳು ಮುಂಚಿತವಾಗಿರಬಹುದು ಅಥವಾ ವಿಳಂಬವಾಗಿರಬಹುದು) ಮಾನ್ಸೂನ್ ಸ್ಥಿರವಾದ ಮಾರುತವಲ್ಲ (ಅವುಗಳು ಪ್ರಾದೇಶಿಕ ಹವಮಾನದ ಪ್ರಭಾವಕ್ಕೊಳಗಾಗುತ್ತವೆ) ಉದಾಹರಣೆ: ವಾಯುಭಾರಕುಸಿತ, ಸೈಕ್ಲೋನ್ ಇತ್ಯಾದಿ

ಮಾನ್ಸೂನ್ ಮಾರುತಗಳು ಅಸಮಾನವಾಗಿರುತ್ತವೆ. ಕೆಲವೊಮ್ಮೆ ಪ್ರವಾಹವಾಗುವಂತಹ ಮಳೆಗಳನ್ನು ನೋಡುತ್ತೇವೆ ಇನ್ನೊಮ್ಮೆ ಅತೀ ಕಡಿಮೆ ಪ್ರಮಾಣದ ಮಳೆಗಳನ್ನು ಗಮನಿಸುತ್ತೇವೆ. (ಅತಿವೃಷ್ಟಿ ಮತ್ತು ಅನಾವೃಷ್ಟಿ)

ಮಾನ್ಸೂನ್‌ನ ಕ್ರಿಯಾ ವಿಧಾನ: ಭಾರತೀಯ ಮಾನ್ಸೂನ್ ಮಾರತವನ್ನು ಎರಡು ಮಾರುತಗಳನ್ನಾಗಿ ವಿಂಗಡಿಸಲಾಗಿದೆ

೧) ನೈಋತ್ಯ ಮಾನ್ಸೂನ್

೨) ಈಶಾನ್ಯ ಮಾನ್ಸೂನ್

೧) ನೈರುತ್ಯ ಮಾನ್ಸೂನ್: (ಜುಲೈನಿಂದ ಸೆಪ್ಟೆಂಬರ್‌ವರೆಗೆ).

ನೈರುತ್ಯ ಮಾನ್ಸೂನ್ ಮಾರುತಗಳು ಭಾರತಕ್ಕೆ ೮೦% ಮಳೆಯನ್ನು ನೀಡುತ್ತವೆ. ನೈರುತ್ಯ ಮಾನ್ಸೂನ್ ಮಾರುತಗಳು ಮೇ/ಜೂನ್ ಸಮಯದಲ್ಲಿ ಕೇರಳವನ್ನು ಪ್ರವೇಶಿಸುತ್ತವೆ. ಹಾಗೂ ಜುಲೈ ೧೫ ರೊಳಗೆ ಇಡೀ ಭಾರತವನ್ನು ಆವರಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಗಾಳಿಯು ೩೦ ಕಿಮೀ/ಗಂಟೆ ವೇಗದಲ್ಲಿ ಬೀಸುತ್ತದೆ. ಉತ್ತರ ಮತ್ತು ಮಧ್ಯ ಭಾರತೀಯ ಉಪಖಂಡದಲ್ಲಿರುವ ಥಾರ್ ಮರುಭೂಮಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ಬೇಸಿಗೆ ಕಾಲದಲ್ಲಿ ಗಣನೀಯವಾಗಿ ಬಿಸಿಯಾಗುತ್ತವೆ. ಇದರಿಂದ ಉತ್ತರ ಹಾಗೂ ಮಧ್ಯ ಭಾರತೀಯ ಉಪಖಂಡಗಳು ಕಡಿಮೆ ಒತ್ತಡ ಪ್ರದೇಶಗಳಾಗುತ್ತವೆ.

ಪ್ರಸ್ತುತ ನಿರರ್ಥಕತೆಯನ್ನು ತುಂಬುವ ಸಲುವಾಗಿ ಹಿಂದು ಮಹಾಸಾಗರದಲ್ಲಿರುವ ತೇವಾಂಶಯುಕ್ತ ಗಾಳಿಗಳು ಭಾರತೀಯ ಉಪಖಂಡವನ್ನು ಪ್ರವೇಶಿಸುತ್ತವೆ. ಈ ತೇವಾಂಶಯುಕ್ತ ಗಾಳಿಗಳು ಹಿಮಾಲಯ ಪರ್ವತಗಳ ಕಡೆಗೆ ಸೆಳೆಯಲ್ಪಡುತ್ತದೆ ತದನಂತರ ಹಿಮಾಲಯ ಪರ್ವತಗಳು ತಡೆಗೋಡೆಗಳಂತೆ ವರ್ತಿಸುತವೆ. ಇದರಿಂದ ಪ್ರಸ್ತುತ ಮಾರುತಗಳ ಮಧ್ಯ/ಕೇಂದ್ರ ಏಷ್ಯಾವನ್ನು ತಲುಪದಂತೆ ತಡೆಯುತ್ತವೆ ಹಾಗಾಗಿ ಮಾರುತಗಳು ಏರಿಕೆಯಾಗುವಂತೆ ಒತ್ತಾಯಿಸುತ್ತವೆ.

ಅಲ್ಲದೇ ಮೋಡಗಳು ಸಹ ಏರಿಕೆಯಾಗುತ್ತವೆ ಇದರಿಂದ ಮೋಡದ ತಾಪಮಾನ ಕುಸಿಯುತ್ತದೆ ಹಾಗೂ ಮಳೆ ಸಂಭವಿಸುತ್ತದೆ. ಭಾರತೀಯ ಉಪಖಂಡದ ಕೆಲವು ಪ್ರದೇಶಗಳಲ್ಲಿ ವಾರ್ಷಿಕವಾಗಿ ೧೦,೦೦೦ ಮೀ. ಮೀ(೩೯೦ ಇಂಚು) ಮಳೆಯಾಗುತ್ತದೆ. ಉದಾಹರಣೆ: ಮಾಸಿನ್‌ರಾಮ್, ಚಿರಾಪುಂಚಿ.

ಭಾರತೀಯ ಪರ್ಯಾಯದ್ವೀಪದ ಭೌಗೋಳಿಕ ಕಾರಣದಿಂದಾಗಿ ನೈರುತ್ಯ ಮಾನ್ಸೂನ್ ಮಾರುತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

೧) ಅರೇಬಿಯನ್ ಸಮುದ್ರ ಶಾಖೆ

೨) ಬಂಗಾಳ ಕೊಲ್ಲಿ ಶಾಖೆ

ನೈರುತ್ಯ ಮಾನ್ಸೂನ್‌ನ ಅರಬ್ಬಿ ಸಮುದ್ರ ಶಾಖೆ ಮೊದಲು ಕೇರಳದ ಕರಾವಳಿ ತೀರ ಹಾಗೂ ಪಶ್ಚಿಮ ಘಟ್ಟಗಳನ್ನು ತಲುಪುತ್ತದೆ. ಈ ಕಾರಣದಿಂದಾಗಿ ಭಾರತ ದೇಶದಲ್ಲಿ ಕೇರಳ ರಾಜ್ಯಕ್ಕೆ ಮೊದಲು ಮಳೆಯಾಗುತ್ತದೆ/ ಮುಂಗಾರು ಪ್ರವೇಶಿಸುತ್ತದೆ. ಈ ಶಾಖೆಯು ಪಶ್ಚಿಮ ಘಟ್ಟಗಳ ಉತ್ತರಭಾಗಕ್ಕೆ ಚಲಿಸುತ್ತದೆ (ಗೋವಾ & ಕೊಂಕಣ) ಹಾಗೂ ಪಶ್ಚಿಮ ಘಟ್ಟಗಳ ಪಶ್ಚಿಮಕ್ಕೆ ಮತ್ತು ಕರಾವಳಿ ತೀರಕ್ಕೆ ಮಳೆಯನ್ನು ನೀಡುತ್ತವೆ. ಪಶ್ಚಿಮ ಘಟ್ಟಗಳ ಪೂರ್ವ ಭಾಗಕ್ಕೆ ಮಳೆಯಾಗುವುದಿಲ್ಲ ಎಕೆಂದರೆ ಪ್ರಸ್ತುತ ಗಾಳಿಯು ಪಶ್ಚಿಮ ಘಟ್ಟಗಳನ್ನು ದಾಟುವುದಿಲ್ಲ. ಪ್ರಸ್ತುತ ಶಾಖೆಯು ದೆಹಲಿಯವರೆಗೆ ತಲುಪುತ್ತದೆ. ಹಾಗೂ ನೈರುತ್ಯ ಮಾನ್ಸೂನ್ ೮೦% ಮಳೆಯನ್ನು ನೀಡುತ್ತದೆ.

ಬಂಗಾಳ ಕೊಲ್ಲಿ ಶಾಖೆಯು ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತ ಹಾಗೂ ಬಂಗಾಳದ ಕಡೆಗೆ ಪ್ರವೇಶಿಸುತ್ತದೆ ಹಾಗೂ ಬಂಗಾಳ ಕೊಲ್ಲಿಯಿಂದ ಹೆಚ್ಚು ತೇವಾಂಶವನ್ನು ಎತ್ತಿಕೊಳ್ಳುತ್ತವೆ. ಈ ಮಾರುತಗಳಿಂದ ಪೂರ್ವ ಹಿಮಾಲಯಗಳಲ್ಲಿ ಹೆಚ್ಚು ಮಳೆಗಳನ್ನುಂಟು ಮಾಡುತ್ತವೆ. ಪೂರ್ವ ಹಿಮಾಲಯ ಶ್ರೇಣ ಗಳನ್ನು ಪ್ರವೇಶಿಸಿದ ನಂತರ ಗಾಳಿಯು ಪಶ್ಚಿಮಾಭಿಮುಖವಾಗಿ ಬೀಸುತ್ತದೆ. ಇದರಿಂದ ಸುಮಾರು ೧ ರಿಂದ ೨ ವಾರಗಳವರೆಗೆ ಇಂಡೋ ಗ್ಯಾಂಜೆಟಿಕ್ ಬಯಲು ಪ್ರದೇಶಗಳಲ್ಲಿ ಮಳೆಯಾಗುತ್ತದೆ. 

ಈಶಾನ್ಯ ಮಾನ್ಸೂನ್: ಈಶಾನ್ಯ ಮನ್ಸೂನ್‌ಗಳು ಭಾರತಕ್ಕೆ ೧೫% ಮಳೆಯನ್ನು ನೀಡುತ್ತವೆ. ಪ್ರಮುಖವಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಅತಿ ಹೆಚ್ಚು ಮಳೆಯಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸೂರ್ಯ ವೇಗವಾಗಿ ದಕ್ಷಿಣದಲ್ಲಿ ಹಿಂದುಳಿದಾಗ ಭಾರತದ ಉಪಖಂಡದ ಉತ್ತರದ ಭೂಭಾಗವು ವೇಗವಾಗಿ ತಂಪಾಗುತ್ತದೆ. ತದನಂತರ ಉತ್ತರ ಭಾರತಾದ್ಯಾಂತ ಈ ಗಾಳಿಯು ಒತ್ತಡವು ಪ್ರಾರಂಭಿಸುತ್ತದೆ. ಅದರ ಪರಿಣಾಮವಾಗಿ ಹಿಂದೂ ಮಹಾಸಾಗರ ಹಾಗೂ ಅದರ ಸುತ್ತಮುತ್ತಲಿನ ವಾತಾವಾರಣ ಅದರ ತಾಪಮಾನವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ತಂಪಾದ ಗಾಳಿಯು ಹಿಮಾಲಯ ಮತ್ತು ಇಂಡೋ ಗ್ಯಾಂಜೆಟಿಕ್ ಬಯಲು ಪ್ರದೇಶದಿಂದ ಹಿಂದೂ ಮಹಾಸಾಗರ ಹಾಗೂ ಡೆಕ್ಕನ್ ಪರ್ಯಾಯದ್ವೀಪದ ದಕ್ಷಿಣ ಭಾಗವನ್ನು ಪ್ರವೇಶಿಸುತ್ತದೆ. ಇದನ್ನು ಈಶಾನ್ಯ ಮಾನ್ಸೂನ್ ಅಥವಾ ಮಾನ್ಸೂನ್ ಹಿಮ್ಮೆಟ್ಟುವಿಕೆ ಎನ್ನಲಾಗುತ್ತದೆ. 

ಕೆಲವು ವರ್ಷ ಮಾನ್ಸೂನ್ ತಡವಾಗುವುದೇಕೆ?: ಕೆಲವು ವರ್ಷ ೨-೩ ವಾರ ತಡವಾಗಿ ದೇಶದ ಹಲವು ಭಾಗಗಳಲ್ಲಿ ಮಾನ್ಸೂನ್ ಆರಂಭವಾಗುತ್ತದೆ. ಆದರೆ ಶೆ. ೩೬% ರಷ್ಟು ಮಳೆ ಕೊರತೆ ಜೂನ್ ತಿಂಗಳಿನಲ್ಲಿ ಉಂಟಾಗುತ್ತದೆ. ಇದಕ್ಕೆ ಕಾರಣವೇನು? ಮುಂದಿನ ದಿನಗಳಲ್ಲಿ ಮಳೆ ಹೇಗಿರಬಹುದು ಎಂಬುದರ ಸಂಕ್ಷಿಪ್ತ ಮಾಹಿತಿ ಈ ಲೇಖನದಲ್ಲಿದೆ. 

ಪ್ರಪಥಮವಾಗಿ ಬೇಸಿಗೆಯ ಅವಧಿಯಲ್ಲಿ ಉತ್ತರ ಮತ್ತು ಮಧ್ಯ ಭಾರತದ ಥಾರ್ ಮರುಭೂಮಿ ಮತ್ತು ಪಕ್ಕದ ಪ್ರದೇಶಗಳು ಬಿಸಿಯಾಗಿ ಕಡಿಮೆ ಒತ್ತಡದ ಪ್ರದೇಶಗಳನ್ನು ರಚಿಸುತ್ತವೆ. ಈ ಅನೂರ್ಜಿತೆಯನ್ನು ಪೂರೈಸಲು ಹಿಂದೂ ಮಹಾಸಾಗರದಿಂದ ತೇವಾಂಶಯುಕ್ತ ಗಾಳಿಗಳು ಭಾರತೀಯ ಉಪಖಂಡಕ್ಕೆ ನುಗ್ಗುತ್ತವೆ. ಈ ಗಾಳಿಗಳು ತೇವಾಂಶಯುಕ್ತವಾಗಿರುತ್ತವೆ ಹಾಗೂ ಇದರಿಂದ ಮೋಡ ರಚನೆಯಾಗುತ್ತವೆ. ಆದರೆ ಪ್ರಸ್ತುತ ವರ್ಷದಲ್ಲಿ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಅಕಾಲಿಕ ಮಳೆಯನ್ನು ಕಾಣಬಹುದು. ಈ ಕಾರಣದಿಂದ ಏಪ್ರಿಲ್ ನಲ್ಲಿ ಆರಂಭವಾಗಬೇಕಿದ್ದ ಅಧಿಕ ತಾಪಮಾನವು ಹೆಚ್ಚು ವಿಳಂಬವಾಗುತ್ತದೆ (೩೦ ದಿನ)- ಮೇ ಮೊದಲ ವಾರದವರೆಗೆ ಪಾಕಿಸ್ತಾನ, ರಾಜಸ್ತಾನ ಹಾಗೂ ಕೇಂದ್ರ ಭಾರತದಲ್ಲಿ ಶಾಖದ ಅಲೆಗಳಿರುವುದಿಲ್ಲ. 

ಎರಡನೇಯದಾಗಿ ಕೆಲವು ಸಲ ಅರಬ್ಬಿ ಸಮುದ್ರದ ಮೇಲಿನ ಆ್ಯಂಟಿ ಸೈಕ್ಲೋನ್ ಮೇ ಅಂತ್ಯದವರೆಗೂ ಮುಂದುವರೆಯುತ್ತದೆ. ಇದರಿಂದಾಗಿ ಕರ್ನಾಟಕ & ಕೇರಳ ಕರಾವಳಿಗೆ ವಾಯುವ್ಯ ಮಾರುತಗಳು ಬೀಸುತ್ತಲೇ ಇರುತ್ತವೆ.. ಮಾನ್ಸೂನ್ ಆಗಮನಕ್ಕೆ ನೆರೆವಾಗುವ ನೈರುತ್ಯ ಮಾನ್ಸೂನ್ ಮಾರುತಗಳನ್ನು ಈ ಪ್ರದೇಶಕ್ಕೆ ಬರದಂತೆ ಬಲವಾಗಿ ತಡೆದಂತಾಗುತ್ತದೆ. ಅಲ್ಲದೇ ಈ ಆ್ಯಂಟಿ ಸೈಕ್ಲೋನ್ ನೈರುತ್ಯ ಮಾರುತಗಳ ಹರಿವಿಗೆ ಸಮಸ್ಯೆಯಾಗುತ್ತದೆ. ಇದರ ಜೊತೆ ಜೊತೆಗೆ ದೇಶದ ಮುಖ್ಯ ಭೂಭಾಗದಲ್ಲಿ ಹೆಚ್ಚಿನ ಒತ್ತಡದ ಗುಡ್ಡವು ಯಾವುದೇ ಹವಾಮಾನ ವ್ಯವಸ್ಥೆಯನ್ನು ರೂಪಿಸಲು ಸಹಕರಿಸುವುದಿಲ್ಲ. ಈ ವ್ಯವಸ್ಥೆಯನ್ನು ಅನುಮತಿಸಿದ್ದಲ್ಲಿ ಮಾತ್ರ ಮಾನ್ಸೂನ್ ಆರಂಭ ನಿಗದಿತ ಸಮಯದಲ್ಲಿ ಆಗುತ್ತದೆ.

ಜುಲೈ & ಆಗಸ್ಟ್ ನಲ್ಲಿ ಉತ್ತಮ ಮಳೆ: ಭಾರತದ ಹವಮಾನ ಇಲಾಖೆಯ ಪ್ರಕಾರವಾಗಿ ಈ ವರ್ಷ ಜುಲೈ ಮತ್ತು ಆಗಸ್ಟ್ ನಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಅಲ್ಲದೇ ಅರಬ್ಬೀ ಸಮುದ್ರದಲ್ಲಿ ಮೇಲೈ ಸುಳಿಗಾಳಿಗಳಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಕೆಲ ದಿನಗಳ ತನಕೆ ಒಳ್ಳೆ ಮಳೆಯಾಗಲಿದೆ ಎಂದು ಮುನ್ಸೂಚನಾ ಸಲಹಾ ವರದಿಯಲ್ಲಿ ಹೇಳಲಾಗಿದೆ

ಮಾಹಿತಿ : ಪ್ರವೀಣ್ ಕೆ. ಎಂ, ಡಾ. ಭರತ್‌ಕುಮಾರ್ ಟಿ. ಪಿ, ಡಾ. ಗಿರೀಶ್ ಆರ್, ಡಾ. ಶಿವಕುಮಾರ್ ಎಲ್, ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ

ಚಿತ್ರ ಕೃಪೆ: ಅಂತರ್ಜಾಲ ತಾಣ