ಮಾಮರವೆಲ್ಲೋ...........ಕೋಗಿಲೆಯೆಲ್ಲೋ.........

ಮಾಮರವೆಲ್ಲೋ...........ಕೋಗಿಲೆಯೆಲ್ಲೋ.........

ಬರಹ

ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು

ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋಳಾಗಿ ನಿಂತಿದ್ದ

ಗಿಡ-ಮರಗಳೆಲ್ಲ ಹಸಿರನ್ನು ತುಂಬಿಸಿಕೊಳ್ಳುತ್ತಿವೆ. ನಿಮಗೆಲ್ಲಾ ತಿಳಿದಿರುವಂತೆ ವಸಂತ ಕಾಲ ಹಸಿರು ಚಿಗುರುವ ಕಾಲ ; ಗಿಡ - ಮರಗಳೆಲ್ಲ

ಮತ್ತೆ ಹೊಸದಾಗಿ ಚಿಗುರುವ ಸಮಯ. ಅಲ್ಲದೇ ನಮ್ಮ ಹಿಂದೂ ಪಂಚಾಂಗದ ಪ್ರಕಾರ ಹೊಸವರುಷವೊಂದು ಆರಂಭವಾಗುವುದೂ ಕೂಡ

ಈ ವಸಂತಕಾಲದೊಂದೆಗೆ. ಅದಕ್ಕೇ ಅಲ್ಲವೇ, ಈ ವಸಂತಕಾಲದ ಪ್ರಾರಂಭದಲ್ಲೇ ಹೊಸ ’ಯುಗ’ದ ’ಆದಿ’ ಎಂದು ಹೇಳುವ ಯುಗಾದಿ

ಹಬ್ಬವಿರುವುದು. ಹಾಗಾಗಿ, ಈ ಭೂಮಿಯೆಂಬ ಸೃಷ್ಟಿಯಲ್ಲಿ, ಪ್ರಕೃತಿಯೆಂಬ ಅದ್ಬುತದಲ್ಲಿ ವಸಂತಕಾಲ ಹೊಸ ಅಧ್ಯಾಯವೊಂದರ

ಪ್ರಾರಂಭ.

ಅವೆಲ್ಲಾ ಏನೇ ಇರಲಿ, ವಸಂತಕಾಲಎಂದಾಕ್ಷಣ ಅದರ ಜೊತೆಜೊತೆಗೆ ಬರು ಇನ್ನೆರಡು ವಿಷಯಗಳಿವೆ. ಅವೇ ವಸಂತಕಾಲದ ಮಾವಿನ

ಚಿಗುರು ಹಾಗು ಕೋಗಿಲೆಯ ಗಾನ. "ವಸಂತಕಾಲ ಬಂದಾಗ... ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇ ಬೇಕು...." ಎಂದು

ಅಣ್ಣಾವ್ರು ಹಾಡಿರುವ ಹಾಡನ್ನು ಎಷ್ತೋ ಸಲ ಕೇಳಿದ್ದೇನೆ ; "ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತಣ ಸಂಬಂಧವಯ್ಯಾ.."

ಎಂಬ ಅಕ್ಕಮಹಾದೇವಿಯವರ ವಚನವನ್ನೂ ಓದಿದ್ದೇನೆ. ಆಗೆಲ್ಲ ನನ್ನನ್ನು ಕಾಡುತ್ತಿದ್ದದ್ದು ಒಂದೇ ಪ್ರಶ್ನೆ , ’ ಈ ವಸಂತಕಾಲಕ್ಕು,

ಮಾವಿನಮರಕ್ಕೂ, ಕೋಗಿಲೆಗೂ ಇರುವ ಸಂಬಂಧವಾದರೂ ಏನು ? ’

ನಿಮಗೂ ಎಂದಾದರು ಈ ಪ್ರಶ್ನೆ ಎದುರಾಗಿತ್ತೆ....?

’ವಸಂತಕಾಲದ ಮಾವಿನ ಚಿಗುರು ತಾಜಾ ಆಗಿರುತ್ತೆ , ಅದು ಕೋಗಿಲೆಯ ಕಂಠಕ್ಕೆ ಒಳ್ಳೆಯದು , ಹಾಗಾಗಿ ಕೋಗಿಲೆ ಮಾವಿನ ಚಿಗುರನ್ನು

ತಿಂದು, ಖುಷಿಯಿಂದ ಹಾಡುತ್ತೆ. ’ ಎಂಬಂತಹ ಉತ್ತರಗಳು ಯಾಕೋ ನನ್ನನ್ನು ತೃಪ್ತಿಗೊಳಿಸಲಿಲ್ಲ. ಆದ್ದರಿಂದ ನನ್ನ ಪ್ರಶ್ನೆ ಉತ್ತರ ಕಾಣದೆ

ಹಾಗೇ ಉಳಿದಿತ್ತು. ಆದರೆ, ಇತ್ತೀಚೆಗೆ ನನ್ನ ಸಂಬಂಧಿ ಅಜ್ಜಿಯೊಬ್ಬರು ನನ್ನ ಈ ಉತ್ತರ ಕಾಣದ ಪ್ರಶ್ನೆಗೆ ಉತ್ತರವಾಗಬಲ್ಲಂತಹ

ಕಥೆಯೊಂದನ್ನು ಹೇಳಿದರು. ಇದೇ ಕಥೆಯೊಂದನ್ನು ಹೋಲುವ ಕಥೆಯೊಂದು ಪತ್ರಿಕೆಯೊಂದರಲ್ಲೂ ಪ್ರಕಟವಾಗಿತ್ತು. ನಿಮಗೂ ಸಹ

ನನಗೆ ಎದುರಾದ ಪ್ರಶ್ನೆ ಎದುರಾಗಿದ್ದರೆ ದಯಮಾಡಿ ಈ ಕಥೆಯನ್ನೊಮ್ಮೆ ಓದಿಬಿಡಿ. ನಿಮ್ಮಲ್ಲಿ ಯಾವುದೇ ರೀತಿಯ ಪ್ರಶ್ನೆಗಳಿರದಿದ್ದರೂ

ಕೂಡ ಓದಿ. ಆಸಕ್ತಿಕರವಾಗಿದೆ ಹಾಗು ನೆನಪಿನಲ್ಲುಳಿಯುವಂತೆ ಇದೆ. :-

" ವೈಕುಂಠದಲ್ಲಿದ್ದ ವಿಷ್ಣುವಿಗೆ ಅದೊಮ್ಮೆ ಅಮೃತ ಕುಡಿಯಬೇಕೆಂಬ ಬಯಕೆಯಾಯಿತು.

ಅಮೃತ ಸಿಗುವುದು ’ಸ್ವರ್ಗ ಲೋಕದಲ್ಲಿ’. ಅಲ್ಲಿಂದ ಅಮೃತ ಕಲಶವನ್ನು ಹೊತ್ತು ತರಬೇಕು. ಅದಕ್ಕಾಗಿ ಯೋಗ್ಯ ವ್ಯಕ್ತಿಯೊಬ್ಬ ಬೇಕು.

ಇದಕ್ಕೆ ಯಾರು ಸೂಕ್ತ ಎಂದು ಯೋಚನೆ ಮಾಡುತ್ತಿರುವಾಗಲೇ ವಿಷ್ಣ್ವುವಿಗೆ ಗರುಡ ನೆನಪಾದ. ಗರುಡನನ್ನು ಹಿಂಬಾಲಿಸಲು ಯಾರಿಂದಲೂ

ಸಾಧ್ಯವಿಲ್ಲ ಎಂದು ನಿರ್ಧರಿಸಿ ಸ್ವರ್ಗ ಲೋಕಕ್ಕೆ ಗರುಡನನ್ನು ಕಳಿಸಿದರು.

ಗರುಡ ವೇಗವಾಗಿ ಸ್ವರ್ಗ ತಲುಪಿ ಅಲ್ಲಿನ ಮುಖ್ಯಸ್ಠರಿಗೆ ವಿಷ್ಣುವಿನ ಬಯಕೆಯನ್ನು ತಿಳಿಸಿದ. ಅವರಿಗೆ ಕುಡಿಯಲು ’ಅಮೃತ’ ಕೊಡಿ ಎಂದ.

ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಬಯಕೆಯನ್ನು ಪೂರೈಸುವುದು ನನಗೆ ಒದಗಿದ ಸೌಭಾಗ್ಯವೆಂದು ತಿಳಿದು, ಅಲ್ಲಿನ ಮುಖ್ಯಸ್ಠ

ಗರುಡನ ಕೈಯಲ್ಲಿ ಅಮೃತ ಕಲಶವನ್ನು ಕೊಟ್ಟು ಎಚ್ಚರಿಕೆಯಿಂದ ತೆಗೆದುಕೊಂಡು ಹೋಗು ಎಂದ.

ಅಮೃತ ಕಲಶವನ್ನು ಪಡೆದ ಗರುಡ ವೇಗವಾಗಿ ವಿಷ್ಣ್ವುವಿನ ಬಳಿಗೆ ನಡೆದಿದ್ದ. ಹೀಗೆ ಸಾಗುವಾಗ ಅದೇ ಮಾರ್ಗದಲ್ಲಿ ಸುಂದರವಾದ

ಗಂಧರ್ವ ಕನ್ಯೆಯೊಬ್ಬಳು ಮಧುರವಾಗಿ ಹಾಡುತ್ತಾ ಹೊರಟಿದ್ದಳು. ಆಕೆಯ ಕಣ್ಣುಗಳು ಗರುಡ ತೆಗೆದುಕೊಂಡು ಹೊರಟಿದ್ದ ಅಮೃತ ಕಲಶದ

ಮೇಲೆ ಬಿತ್ತು. ಹೇಗಾದರೂ ಮಾಡಿ ಗರುಡನ ಕೊಕ್ಕಿನಲ್ಲಿ ನೇತು ಬಿದ್ದಿರುವ ಬಂಗಾರದ ಕಲಶ ಪಡೆಯಬೇಕೆಂಬ ಆಸೆ ಹೆಚ್ಚಾಯಿತು.

ನಂತರ ಆ ಗಂಧರ್ವ ಕನ್ಯೆ ಗರುಡನ ಹಿಂದೆ ಹಿಂದೆ ನಡೆದಳು. ಇದನ್ನು ತಿಳಿದ ಗರುಡ ಮತ್ತೂ ವೇಗವಾಗಿ ಸಾಗತೊಡಗಿದ. ಅಷ್ಟೇ

ವೇಗವಾಗಿ ಗಂಧರ್ವ ಕನ್ಯೆ ಕೂಡಾ ಹಿಂಬಾಲಿಸಿದಳು.

ಗರುಡ ಮುಂದೆ ಮುಂದೆ, ಗಂಧರ್ವ ಕನ್ಯೆ ಹಿಂದೆ ಹಿಂದೆ.

ಓಟದ ಸ್ಪರ್ಧೆ ನಡೆದ ಹಾಗಿತ್ತು ಅವರಿಬ್ಬರ ನಡುವೆ. ಗರುಡನಿಗೋ ಭಯ. ಹೇಗಾದರೂ ಮಾಡಿ ಈ ಬೆಡಗಿಯಿಂದ ತಪ್ಪಿಸಿಕೊಂಡು

ಅಮೃತ ಕಲಶವನ್ನು ವಿಷ್ಣ್ವುವಿಗೆ ಮುಟ್ಟಿಸಿದರೆ ಸಾಕೆಂದು ಆತ ಮತ್ತಷ್ಟೂ ವೇಗವಾಗಿ ಹಾರತೊಡಗಿದ. ಹೀಗೆ ಹಾರುವಾಗ ಕಲಶದಲ್ಲಿದ್ದ

ಅಮೃತ ತುಳುಕಿ ಒಂದು ಹನಿ ಅಮೃತ ಕಲಶದಿಂದ ಜಾರಿಬಿತ್ತು. ಇದನ್ನು ಕಂಡ ಗಂಧರ್ವ ಕನ್ಯೆ ತನ್ನ ಆಸೆ ಫಲಿಸಿತೆಂದು ತಿಳಿದು

ಅಮೃತ ಬಿಂದುವನ್ನು ಹಿಡಿಯಲು ಹೋದಳು. ಆದರೆ, ಅದು ಅವಳ ಕೈಗೆ ಸಿಗಲಿಲ್ಲ. ಬದಲಿಗೆ ಆಕಾಶದಿಂದ ಜಾರಿ ಭೂಮಿಗೆ ಬಿತ್ತು.

ಭೂಮಿಯಲ್ಲಿ ಬಿದ್ದ ಅಮೃತ ಮಣ್ಣಲ್ಲಿ ಸೇರಿತು. ಮುಂದೆ ಅದು ಮರವಾಗಿ ಬೆಳೆಯಿತು. ಅದೇ ಮಾವಿನ ಮರ.....!!!! ( ಇದೇ ಕಾರಣಕ್ಕೆ

ಇರಬೇಕು ಮಾವಿನ ಹಣ್ಣನ್ನು, ಹಣ್ಣುಗಳ ರಾಜ ಎಂದು ಕರೆಯುವುದು.... )

ಇತ್ತ, ಗರುಡ ಬರುವುದು ತಡವಾದುದಕ್ಕೆ ವಿಷ್ಣುವಿಗೆ ಸಿಟ್ಟು ಬಂದಿತ್ತು. ಈ ಸಂಬಂಧ ಗರುಡನನ್ನು ಕೇಳಿದಾಗ, ದಾರಿಯಲ್ಲಿ ಗಂಧರ್ವ ಕನ್ಯೆ

ಹಿಂದೆ ಬಿದ್ದದ್ದನ್ನು ; ಕಲಶದಲ್ಲಿಯ ಅಮೃತ ಪಡೆಯಲು ಪ್ರಯತ್ನ ಪಟ್ಟುದ್ದನ್ನು ತಿಳಿಸಿದನು. ಗಂಧರ್ವ ಕನ್ಯೆಯ ಬಯಕೆಯನ್ನು ತಿಳಿದ

ವಿಷ್ಣ್ವುವಿಗೆ ಸಿಟ್ಟು ಬಂದಿತು. ಆ ಸಿಟ್ಟಿನ ಭರದಲ್ಲಿಯೇ ಆ ಗಂಧರ್ವ ಕನ್ಯೆಗೆ ’ ಬಿಳಿ ಬಣ್ಣದ ನೀನು ಕಪ್ಪು ಬಣ್ಣವಾಗಿ ಹೋಗು ; ನಿನ್ನ ಮಧುರ

ಧ್ವನಿಯು ನಿನಗೆ ಮರೆತು ಹೋಗಲಿ ’ ಎಂದು ಶಾಪ ಕೊಟ್ಟುಬಿಟ್ಟ.

ಆ ಶಾಪದ ವಿಷಯ ಕೇಳಿ ಗಂಧರ್ವ ಕನ್ಯೆ ಚಿಂತಿತಳಾದಳು. ತುಂಬಾ ದು:ಖಿಸಿದಳು. ನನ್ನ ತಪ್ಪನ್ನು ಮನ್ನಿಸಿ ಎಂದು ಪರಿಪರಿಯಾಗಿ

ಬೇಡಿಕೊಂಡಳು.

ಆಕೆಯ ರೋಧನ ಕೇಳಿ ವಿಷ್ಣುವಿನ ಮನಸ್ಸು ಕರಗಿತು. ಆದರೆ, ಕೊಟ್ಟ ಶಾಪವನ್ನು ಮರಳಿ ಪಡೆಯುವುದಾದರು ಹೇಗೆ...??!!

ಕೊಟ್ಟ ಶಾಪವನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ. ಅಲ್ಪ ಬದಲಾವಣೆ ಮಾಡಬಹುದು. ಏನೆಂದರೆ, ನಿನ್ನ ಬಿಳಿ ಬಣ್ಣವಂತೂ ಕಪ್ಪು

ಬಣ್ಣಕ್ಕೆ ಬದಲಾವಣೆ ಆಗುತ್ತದೆ. ಅದನ್ನಂತೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ನಿನ್ನ ಮಧುರ ಧ್ವನಿಯನ್ನು ನಿನಗೆ ಮರಳಿ

ಕೊಡುತ್ತೇನೆ. ಆದರೆ, ಪೂರ್ಣ ಪ್ರಮಾಣದಲ್ಲಿ ಅಲ್ಲ. ಸ್ವಲ್ಪ ಸಮಯದವರೆಗೆ ಮಾತ್ರ. ವಸಂತ ಮಾಸದಲ್ಲಿ ಮಾವಿನ ಚಿಗುರು ಬಿಟ್ಟಾಗ

ಅದನ್ನು ಸೇವಿಸು. ನಿನ್ನ ಧ್ವನಿ ಮಧುರವಾಗಿರುತ್ತದೆ. ಮಾವಿನ ಚಿಗುರಿನ ಕಂಪು, ನಿನ್ನ ದನಿಯ ಇಂಪು ಮೇಳೈಸಿ ಜಗತ್ತು

ತಲೆ ಬಾಗುತ್ತದೆ. ನಿನ್ನ ಮಧುರ ದನಿಯನ್ನು ಜನ ಕೊಂಡಾಡುತ್ತಾರೆ, ಕವಿಗಳು ಹಾಡಿ ಹೊಗಳುತ್ತಾರೆ. ನಿನ್ನ ಕೂಗು ಕೇಳಿದರೆ ಸಾಕು

ವಸಂತ ಮಾಸ ಬಂದಿತು ಎಂದು ಹರ್ಷ ಪಡುತ್ತಾರೆ ಎಂದು ಕೊಟ್ಟ ಶಾಪದಲ್ಲಿ ಬದಲಾವಣೆ ಮಾಡಿದನು.

ಹೀಗೆ ಅಮೃತಕ್ಕಾಗಿ ಆಸಿ ಗಂಧರ್ವ ಕನ್ಯೆಯೇ ಮುಂದೆ ಕೋಗಿಲೆಯಾಗಿ ಜನಿಸಿ ಮಾವಿನ ಚಿಗುರಿನಲ್ಲಿ ಅಮೃತವನ್ನು ಪಡೆದಳು ಎಂಬ

ಪ್ರತೀತಿ ಇದೆ. "

ಮ್..ಮ್..... ಹೇಗಿದೆ ಕಥೆ....?? ನಿಮಗೆಲ್ಲಾ ಏನನಿಸಿತು....? ದಯವಿಟ್ಟು ಸ್ವಲ್ಪ ಸಮಯ ಬಿಡುವು ಮಾಡಿಕೊಂಡು

ನಿಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿಬಿಡಿ. ಓಹ್..!! ಅದಕ್ಕೂ ಮೊದಲು

ನಾನು ನನ್ನ ಅಭಿಪ್ರಾಯವನ್ನು ತಿಳಿಸಿಬಿಡಬೇಕಲ್ಲವೆ....??!! :-)

ಕಥೆಯ ಕಲ್ಪನೆ ನಿಜಕ್ಕೂ ಅದ್ಬುತ...!! really its great...!! ಈ ಕಥೆ ಒಂದು ಕಟ್ಟುಕಥೆಯೇ ಆಗಿರಬಹುದು.

ಆದರೆ ನಾವು ಗಮನಿಸಿ ಮೆಚ್ಚ ಬೇಕಾಗಿರುವುದು ನಮ್ಮ ಹಿರಿಯರ /

ಪೂರ್ವಜರ ಕಥೆ ಹೆಣೆಯುವ ಶೈಲಿಯನ್ನು. ಈ ರೀತಿಯ ಕಥೆಗಳಿಗೆ ಅವರು ಆಯ್ಕೆ ಮಾಡಿಕೊಂಡಿರುವ ಪಾತ್ರಗಳಾದರೂ

ಯಾವುದು ? ನಮ್ಮ ಪುರಾಣದ ದೇವ - ದೇವತೆಗಳನ್ನು. ಅಂದರೆ,

ಬದುಕಿನ ಪ್ರತಿ ಭಾಗದಲ್ಲೂ ಅವರು ದೇವರನ್ನು ನೆನೆಯುತ್ತಿದ್ದರು ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ಪ್ರಕೃತಿಯಲ್ಲಿ

ನಡೆಯುವ ಪ್ರತಿಯೊಂದು ಘಟನೆಗಳಿಗೂ / ಸರ್ವ ಕ್ರಿಯೆಗಳಿಗೂ ದೇವರೇ

ಕಾರಣ, ಅವನದೇ ಅನುಗ್ರಹ ಎಂದು ತಿಳಿಸಲು ಅವರು ಹೆಣೆಯುತ್ತಿದ್ದ / ಕಟ್ಟುತ್ತಿದ್ದ ಈ ರೀತಿಯ ಕಥೆಗಳು ನಿಜವಾಗಿಯು

ನಮ್ಮಲ್ಲಿ, ನಮ್ಮ ಬದುಕಿನ ಬಗ್ಗೆ, ಸುತ್ತಮುತ್ತಲ ಪರಿಸರದ ಬಗ್ಗೆ ಆಸಕ್ತಿ ಹಾಗೂ ಅರಿವನ್ನು ಮೊಡಿಸಲು

ಸಹಕಾರಿಯಾಗುತ್ತವೆ.

ಆದರೆ......................................

ಈ ರೀತಿಯ ಕಥೆಗಳು ಇನ್ನೆಷ್ಟಿವೆ....? ಅವುಗಳನ್ನು ನಮಗೆಲ್ಲಾ ತಿಳಿಸಿ, ಹೇಳುವವರು ಯಾರು.....?

" ನಮ್ಮ ಪುರಾಣ, ವೇದ ಉಪನಿಷತ್ತುಗಳಲ್ಲಿರುವ ಕಥೆಗಳನ್ನು, ಕಥಾವಿಷಯಗಳನ್ನು ಒಟ್ಟುಗೂಡಿಸಿದರೆ, ಜಗತ್ತಿನ

ಗ್ರಂಥಾಲಯಗಳ ಮುಕ್ಕಾಲು ಭಾಗವನ್ನು ತುಂಬಬಹುದು.... " ಎಂದು

ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅಂದರೆ, ಈ ರೀತಿಯ ಕಥೆಗಳು ಅಪಾರ. ಎಲ್ಲವನ್ನು ಬಲ್ಲವರು ಯಾರೂ ಇಲ್ಲ.

ಹಾಗಾಗಿ ಮತ್ತೊಬ್ಬರು ಬಂದು ನಮಗೆಲ್ಲಾ ಇವುಗಳನ್ನು

ತಿಳಿಸಿಕೊಡಲಿ ಎಂದು ಕಾಯುತ್ತಾ ಕೂರುವುದು ನಿಜಕ್ಕೂ ಮೂರ್ಖತನವಾದೀತು. ನಾವೇ ಸ್ವತಃ ಸ್ವಯಃ ಜಾಗೃತರಾಗಿ /

ಎಚ್ಚೆತ್ತುಕೊಂಡು ಪುಸ್ತಕ ಅಧ್ಯನದ ಕಡೆ ಕಾರ್ಯ ಪ್ರವೃತ್ತರಾಗಬೇಕು.

ನಮಗೆ ತಿಳಿದಿರುವುದನ್ನು ನಮ್ಮ ಸುತ್ತಮುತ್ತಲಿನವರಿಗೆ ತಿಳಿಸಿಕೊಟ್ಟು, ಅವರನ್ನೂ ಪ್ರೇರೆಪಿಸಬೇಕು. ಹೀಗಾದಾಗಲಷ್ಟೇ

ನಮ್ಮ ಜೀವನವನ್ನು ಸಂಪನ್ನಗೊಳಿಸುವ ವಿಚಾರಗಳು, ವಿಷಯಗಳು ನಮಗೆ

ತಿಳಿಯುತ್ತದೆ ಹಾಗೂ ನಮ್ಮ ತಿಳುವಳಿಕೆಯ ಭಂಡಾರ ಸಮೃದ್ದಿಯಾಗುತ್ತದೆ.

ಹೌದಲ್ಲವೇ.....??!!!

- ರೋಹಿತ್.ಎಸ್.ಹೆಚ್.