ಮಾಯಾ ಹೂವುಗಳ ಲೋಕ !

ಮಾಯಾ ಹೂವುಗಳ ಲೋಕ !

ನೀವು ಬಣ್ಣ ಬದಲಾಯಿಸುವ ಹೂವುಗಳನ್ನು ನೋಡಿರುವಿರಾ? ನಮ್ಮ ಪರಿಸರದಲ್ಲಿ ಅರಳುವ ಕೆಲವು ಹೂವುಗಳು ತಮ್ಮ ಬಣ್ಣವನ್ನು ಸಮಯಕ್ಕೆ ಅನುಗುಣವಾಗಿ ಬದಲಾಯಿಸುತ್ತಾ ಹೋಗುತ್ತದೆ. ಅರಳುವಾಗ ಬಿಳಿ ಬಣ್ಣದಾಗಿರುವ ಹೂವು ಸಾಯಂಕಾಲ ಹೊತ್ತಿಗೆ ಗುಲಾಬಿ ಬಣ್ಣಕ್ಕೆ ತಿರುಗಿರುತ್ತದೆ. ಸೂರ್ಯಕಾಂತಿಯಂತಹ ಹೂವುಗಳು ಸೂರ್ಯನ ಚಲನೆಯನ್ನೇ ಅನುಸರಿಸಿ ಅವುಗಳೂ ಅತ್ತಕಡೆಗೇ ತಿರುಗುತ್ತವೆ. ಇದು ನಮ್ಮ ಪ್ರಾಕೃತಿಕ ವಿಸ್ಮಯ ಲೋಕ.

ಇಲ್ಲೊಂದು ಅಪರೂಪದ ಹೂವಿದೆ. ಈ ಹೂವು ಮಣ್ಣಿನ ಗುಣಲಕ್ಷಣಗಳಿಗೆ ಅನುಸಾರವಾಗಿ ತನ್ನ ಬಣ್ಣವನ್ನು ಬದಲಾಯಿಸುತ್ತಾ ಹೋಗುತ್ತದೆ. ಈ ಹೂವಿನ ಹೆಸರು ಹೈಡ್ರೇಂಜ. ಇವುಗಳನ್ನು ಮಾಯಾ ಹೂವುಗಳೆಂದೇ ಕರೆಯುತ್ತಾರೆ. ಏಕೆಂದರೆ ಇವುಗಳು ಕೆಲವೊಮ್ಮೆ ಗುಲಾಬಿ ಬಣ್ಣದಲ್ಲಿದ್ದರೆ, ಕೆಲವು ಸಲ ನೀಲಿ ಬಣ್ಣವನ್ನು ಹೊಂದಿರುತ್ತವೆ. ಒಂದು ವಸ್ತುವಿನ ಆಮ್ಲೀಯ ಹಾಗೂ ಕ್ಷಾರ ಗುಣಗಳನ್ನು ಪತ್ತೆ ಹಚ್ಚಲು ಬಳಸುವ ಲಿಟ್ಮಸ್ ಪೇಪರ್ ನಂತೆಯೇ ಇವುಗಳೂ ಮಣ್ಣಿನ ಗುಣಲಕ್ಷಣದಂತೆ ತಮ್ಮ ಬಣ್ಣವನ್ನು ಹೊಂದಿಸಿಕೊಳ್ಳುತ್ತದೆ.

ಮಣ್ಣಿನಲ್ಲಿರುವ ಆಮ್ಲೀಯ ಗುಣ ಪ್ರಮಾಣಕ್ಕೆ ಅನುಸಾರ ಹೈಡ್ರೇಂಜ ಹೂವುಗಳು ನೀಲಿ ಅಥವಾ ಗುಲಾಬಿ ಬಣ್ಣದಲ್ಲಿರುತ್ತವೆ. ಮಣ್ಣಿನಲ್ಲಿ ಅಲ್ಯೂಮಿನಿಯಂ ಅಂಶವು ಇದ್ದರೆ ಮಾತ್ರ ಈ ಹೂವುಗಳು ನೀಲಿ ಬಣ್ಣದಲ್ಲಿರುತ್ತವೆ. ಮಣ್ಣು ಅಲ್ಯೂಮಿನಿಯಂನ ಅಧಿಕ ಅಂಶವನ್ನು ಹೊಂದಿದ್ದು ಆ ಮಣ್ಣು ಕ್ಷಾರೀಯವಾಗಿದ್ದರೆ, ಸಸ್ಯಕ್ಕೆ ಅಲ್ಯೂಮಿನಿಯಂ ಅಂಶವನ್ನು ಮಣ್ಣಿನಿಂದ ಹೀರಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಆ ಹೂವು ನೀಲಿ ಬಣ್ಣಕ್ಕೆ ತಿರುಗದೆ ಗುಲಾಬಿ ಬಣ್ಣದಲ್ಲಿರುತ್ತದೆ. ಅಂದರೆ ಕ್ಷಾರೀಯ ಅಂಶ ಅಧಿಕವಾಗಿರುವ ಮಣ್ಣಿನಲ್ಲಿ ಹೈಡ್ರೇಂಜ ಹೂವುಗಳ ಬಣ್ಣ ಗುಲಾಬಿಯಾಗಿರುತ್ತವೆ. ಈಗ ಗೊತ್ತಾಯಿತಲ್ಲವೇ ಹೈಡ್ರೇಂಜ ಹೂವುಗಳನ್ನು ಮಾಯಾ ಹೂವುಗಳೆಂದು ಏಕೆ ಕರೆಯುತ್ತಾರೆ ಎಂದು !

***

ಮೊಟ್ಟೆ ಎಂಬ ಅದ್ಭುತ !

ಕೋಳಿಯ ಮೊಟ್ಟೆ ಕೇವಲ ಒಂದು ಕೋಶದಿಂದ ಆಗಿದೆ. ಅದರ ಚಿಪ್ಪು ತುಂಬಾ ಗಟ್ಟಿಯಾಗಿದೆ. ಹೊರಗಿನ ವಾತಾವರಣದ ಮೂಲಕ ಮೊಟ್ಟೆಯ ಒಳಗಡೆ ಏನೂ ಹೋಗಲಾರದು ಎಂದು ನೀವು ಭಾವಿಸಿದರೆ ಅದು ತಪ್ಪು. ಮೊಟ್ಟೆಯು ತೇವಾಂಶ, ಗಾಳಿ ಮತ್ತು ಬ್ಯಾಕ್ಟೀರಿಯಾದಂತದ ವಸ್ತುಗಳನ್ನು ಚಿಪ್ಪಿನ ಮೂಲಕ ಹಾದು ಹೋಗಲು ಅನುವು ಮಾಡಿಕೊಡುತ್ತದೆ. ಮೊಟ್ಟೆಯ ಚಿಪ್ಪು ಖನಿಜ ಕ್ಯಾಲ್ಸೈಟ್ ನ ಸುಮಾರು ೯೪ ಪ್ರತಿಶತ ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಹೊಂದಿದೆ. ಈ ಮೊಟ್ಟೆಯನ್ನು ನೀವು ಲಘುವಾಗಿ ಕಂಡಿರಬಹುದು. ದಡ್ಡ ವಿದ್ಯಾರ್ಥಿಗೆ ಸಿಗುವ ಶೂನ್ಯ ಅಂಕಗಳನ್ನು ಮೊಟ್ಟೆಗೆ ಹೋಲಿಸಿರಬಹುದು. ಆದರೆ ಮೊಟ್ಟೆಯೊಳಗಿನ ಒಳಭಾಗವು ಮೊಟ್ಟೆಯಷ್ಟೇ ಬಲವಾಗಿ ಮತ್ತು ಅದರಂತೆಯೇ ಏಕರೂಪದಲ್ಲಿರುತ್ತದೆ ಹಾಗೂ ಅದು ಬೆಳೆಯುತ್ತಿರುತ್ತದೆ ಎಂಬುವುದೇ ಒಂದು ಅದ್ಭುತ ಸಂಗತಿ.

***

ಅಗೋಚರ ಬರಹ

ತಮ್ಮ ಸೇನೆಯ ರಹಸ್ಯ ವಿಚಾರಗಳು ಬಹಿರಂಗವಾಗಬಾರದೆಂದು ಹಲವಾರು ಗುಪ್ತ ಸಂದೇಶಗಳನ್ನು ಬಹಳ ಹಿಂದಿನ ಕಾಲದಿಂದಲೂ ರವಾನೆಯಾಗುತ್ತಿರುವ ಸಂಗತಿ ನಿಮಗೆ ತಿಳಿಯದೇನಲ್ಲ. ಅದೇ ರೀತಿ ಜಾರ್ಜ್ ವಾಷಿಂಗ್ಟನ್ ಅವರು ಜನರಲ್ ಆಗಿದ್ದಾಗ, ಅವರ ಬಂಡಾಯ ಸೇನೆಯಿಂದ ಆಗಾಗ ರಹಸ್ಯ ಸಂದೇಶಗಳು ಅವರಿಗೆ ಬರುತ್ತಿದ್ದವು. ಬ್ರಿಟೀಷರು ಪತ್ರದಲ್ಲಿರುವ ಸಂದೇಶಗಳನ್ನು ಓದಿ, ಅವುಗಳನ್ನು ಅಡ್ಡಿಪಡಿಸಿದರೆ ಎಂಬ ಕಾರಣದಿಂದ ಸಾಮಾನ್ಯ ಸಂದೇಶಗಳ ಸಾಲಿನ ನಡುವೆ ಅಗೋಚರ ಸಂದೇಶಗಳನ್ನು ಬರೆದಿಡುತ್ತಿದ್ದರು. ಜನರಲ್ ವಾಷಿಂಗ್ಟನ್ ಅವರು ಈ ಅದೃಶ್ಯ ಸಂದೇಶಗಳನ್ನು ತಿಳಿದುಕೊಳ್ಳಲು ಮೇಣದ ಬತ್ತಿಯ ಜ್ವಾಲೆಯ ಬಳಿ ಪತ್ರವನ್ನು ಹಿಡಿಯುವ ಮೂಲಕ ಅದನ್ನು ಬಿಸಿ ಮಾಡುತ್ತಿದ್ದರು. ಆಗ ಆ ಪತ್ರದಲ್ಲಿರುವ ನಿಗೂಢ ಸಂದೇಶಗಳು ಸ್ಪಷ್ಟವಾಗಿ ಗೋಚರವಾಗುತ್ತಿದ್ದವು. 

ಕೆಲವು ಸಲ ರಾಸಾಯನಿಕ ವಸ್ತುವನ್ನು ಬಳಸಿಯೂ ಸಂದೇಶವನ್ನು ತಿಳಿದುಕೊಳ್ಳುತ್ತಿದ್ದರು. ಅದೃಶ್ಯ ಸಂದೇಶಗಳನ್ನು ಬರೆಯಲು ಮತ್ತು ಅವುಗಳನ್ನು ಕಂಡುಹಿಡಿಯಲು ಬಳಸಲಾದ ವಸ್ತುಗಳು ನೀವು ಬಳಸಿದ ವಸ್ತುಗಳಿಗಿಂತ ಭಿನ್ನವಾಗಿರಬಹುದು, ಆದರೆ ಮೂಲ ಪರಿಕಲ್ಪನೆಗಳು ಇದೇ ಆಗಿದ್ದವು. ರಹಸ್ಯವನ್ನು ರಹಸ್ಯವಾಗಿಯೇ ತಲುಪಿಸಬೇಕಾದವರಿಗೆ ಮುಟ್ಟಿಸುವುದು ಯುದ್ಧದ ಸಮಯದ ತುರ್ತು ಆಗಿತ್ತು.

***

(ಮಾಹಿತಿ ಕೃಪೆ: ಸೂತ್ರ ಪತ್ರಿಕೆ)  

ಚಿತ್ರ ಕೃಪೆ: ಅಂತರ್ಜಾಲ ತಾಣ