ಮಾರಕ ಕೀಟನಾಶಕಗಳನ್ನು ಬಳಸದೆ ಸುಸ್ಥಿರ ಕೃಷಿ

ಮಾರಕ ಕೀಟನಾಶಕಗಳನ್ನು ಬಳಸದೆ ಸುಸ್ಥಿರ ಕೃಷಿ

ಲಕ್ಷ್ಮಣ ಜಾರ್ಪುಲ ಒಬ್ಬ ರೈತ. ಆಂಧ್ರಪ್ರದೇಶದ ಕಮ್ಮಮ್ ಜಿಲ್ಲೆಯ ಕೋತಗುಡೆಮ್ ಮಂಡಲದ ಸೀತಾರಾಂಪುರ ಗ್ರಾಮದ ರೈತ. ಮೂರು ವರುಷಗಳ ಮುನ್ನ ಅವರೊಂದು ನಿರ್ಧಾರ ಮಾಡಿದರು: “ಇನ್ನು ನಾನು ಹತ್ತಿ ಬೆಳೆಗೆ ಕೀಟನಾಶಕಗಳನ್ನು ಸುರಿಯುವುದಿಲ್ಲ.”

ಇದಕ್ಕೆ ಕಾರಣ ಅವರ ಅನುಭವ. ಅದನ್ನು ಅವರ ಮಾತಿನಲ್ಲೇ ಕೇಳಿ: "ನಾನು ಕೀಟಗಳನ್ನು ಹಿಡಿದು ಕೀಟನಾಶಕಗಳ ಒಳಗೇ ಅದುಮಿ ಇಡುತ್ತಿದ್ದೆ; ಆದರೆ ಅವು ಸಾಯುತ್ತಿರಲಿಲ್ಲ. ಇಂತಹ ಕೀಟನಾಶಕಗಳಿಂದ ಏನು ಪ್ರಯೋಜನ? ಹಾಗಾಗಿ ನಾನು ಕೀಟನಾಶಕಗಳ ಖರ್ಚು ಉಳಿಸಲು ನಿರ್ಧರಿಸಿದೆ. ಅನಂತರ ನನ್ನ ಇಳುವರಿ ಏನೂ ಕಡಿಮೆ ಆಗಲಿಲ್ಲ.”

ಅಲ್ಲಿ ಅವರದೇ ಹಾದಿ ಹಿಡಿದ ರೈತರು ಹಲವರಿದ್ದಾರೆ. ಅವರೆಲ್ಲ ಮುಂಚೆ ಕೀಟನಾಶಕಗಳಿಗಾಗಿ ಎಕ್ರೆಗೆ ಸುಮಾರು ರೂಪಾಯಿ ೩,೦೦೦ ಖರ್ಚು ಮಾಡುತ್ತಿದ್ದರು. ಈಗ ಕೀಟಹತೋಟಿಗಾಗಿ ಅವರು ಮಾಡುವ ವೆಚ್ಚ ಎಕ್ರೆಗೆ ಕೇವಲ ರೂಪಾಯಿ ೩೦೦.

ದೆಹಲಿಯ ಪಾಕ್ಷಿಕ “ಡೌನ್ ಟು ಅರ್ತ್”ನ ಪ್ರತಿನಿಧಿಗಳು ಆಂಧ್ರಪ್ರದೇಶದ ಪಲವಂಚ, ಕೋಟಗುಡೆಮ್ ಮತ್ತು ತೇಕುಲಪಳ್ಳಿ - ಈ ಮೂರು ಮಂಡಲಗಳಲ್ಲಿ ಹಲವಾರು ರೈತರ ಸಂದರ್ಶನ ನಡೆಸಿದರು. ಅದರಿಂದ ತಿಳಿದು ಬಂದ ಸಂಗತಿ: ಸುಮಾರು ೫,೦೦೦ ಎಕ್ರೆ ಕೃಷಿಪ್ರದೇಶದಲ್ಲಿ ರೈತರು ಹತ್ತಿ ಬೆಳೆಗೆ ಕೀಟನಾಶಕಗಳ ಬಳಕೆ ತೊರೆದಿದ್ದಾರೆ. ಹೀಗೆ ಮಾಡಬೇಕೆಂದು ಅವರಿಗೆ ಯಾರೂ ಹೇಳಿಲ್ಲ. ಅವರಾಗಿಯೇ ಕೀಟನಾಶಕಗಳ ವಿಷವರ್ತುಲದಿಂದ ಹೊರಬಂದಿದ್ದಾರೆ.

ಈ  ಬದಲಾವಣೆಯ ಗಾಳಿಯ ಜಾಡು ಹಿಡಿಯಲಿಕ್ಕಾಗಿ ಕೆಲವು ಅಂಕೆಸಂಖ್ಯೆಗಳನ್ನು ಗಮನಿಸೋಣ. ಈ ಮಂಡಲಗಳ ಮುಖ್ಯ ಬೆಳೆ ಹತ್ತಿ. ಅಲ್ಲಿ ಒಟ್ಟು ಬೆಳೆಪ್ರದೇಶದ ಅರ್ಧಕ್ಕಿಂತ ಜಾಸ್ತಿ ಭಾಗದಲ್ಲಿ ಹತ್ತಿಯ ಕೃಷಿ. ಭಾರತದ ರಾಜ್ಯಗಳಲ್ಲಿ ಅತ್ಯಧಿಕ ಕೀಟನಾಶಕ ಬಳಸುವ ರಾಜ್ಯ ಆಂಧ್ರಪ್ರದೇಶ. ಕಮ್ಮಮ್ ಜಿಲ್ಲೆಯಲ್ಲಂತೂ ಕೀಟನಾಶಕಗಳ ಬಳಕೆ ಉಳಿದೆಲ್ಲ ಜಿಲ್ಲೆಗಳಿಗಿಂತ ಅಧಿಕ. ಕಳೆದ ೧೦ ವರುಷಗಳಲ್ಲಿ ಸಾಲದಿಂದ ಸೋತ ನೂರಾರು ಹತ್ತಿ ಬೆಳೆಗಾರರು ಈ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಒಟ್ಟು ಬಳಕೆಯಾಗುವ ಕೀಟನಾಶಕಗಳ ಅರ್ಧಕ್ಕಿಂತ ಜಾಸ್ತಿ ಕೇವಲ ಒಂದು ಬೆಳೆಗೆ ಬಳಕೆ - ಅದುವೇ ಹತ್ತಿ ಬೆಳೆ. ಆದರೆ ಭಾರತದಲ್ಲಿ ಹತ್ತಿ ಪ್ರಮುಖ ಬೆಳೆ ಅಲ್ಲ; ಇಲ್ಲಿ ಒಟ್ಟು ಬೆಳೆಪ್ರದೇಶದ ಶೇಕಡಾ ೫ರಲ್ಲಿ ಮಾತ್ರ ಹತ್ತಿಯ ಕೃಷಿ.

ಪಲವಂಚ ಮಂಡಲದ ಪುನುಕುಲ ಗ್ರಾಮದಲ್ಲಿ ೨೦೦೪ರಲ್ಲಿ ಬದಲಾವಣೆಯ ಗಾಳಿ ಶುರು. ಕೀಟನಾಶಕಗಳಿಲ್ಲದೆ ಕೃಷಿ ನಿರ್ವಹಣೆ ಮಾಡಿದ ಆಂಧ್ರಪ್ರದೇಶದ ಮೊದಲ ಗ್ರಾಮ ಎಂಬ ಹೆಗ್ಗಳಿಕೆ ಪುನುಕುಲಕ್ಕೆ ಸಂದಿದೆ. ಈಗಲೂ ಅಲ್ಲಿನ ರೈತರು ಹತ್ತಿ ಬೆಳೆಗೆ ಕೀಟನಾಶಕ ಬಳಸುವುದಿಲ್ಲ (ಭತ್ತ, ತೊಗರಿ, ಮೆಣಸು ಇತ್ಯಾದಿ ಬೆಳೆಗಳಿಗೆ ಕೀಟನಾಶಕ ಬಳಸುತ್ತಾರೆ.) ಅಷ್ಟೇ ಅಲ್ಲ, ಬಹುಪಾಲು ರೈತರು ಕೀಟನಾಶಕಗಳ ಬಳಕೆ ಮಾಡುತ್ತಿಲ್ಲ. ಬದಲಾಗಿ, ಕೀಟಗಳ ಪ್ರಾಕೃತಿಕ ಶತ್ರುಗಳೇ ತಮ್ಮ ಬೆಳೆ ರಕ್ಷಿಸಲು ಅನುವು ಮಾಡಿಕೊಟ್ಟಿದ್ದಾರೆ.

ಈ ಬದಲಾವಣೆಗೆ ಕಾರಣ ಆ ಪುಟ್ಟಗ್ರಾಮದಲ್ಲಿ ಸುಸ್ಥಿರ ಕೃಷಿ ಕೇಂದ್ರ ಎಂಬ ಪುಟ್ಟ ಸರ್ಕಾರೇತರ ಸಂಸ್ಥೆಯೊಂದು ಕೃತಿಗಿಳಿಸಿದ ಪುಟ್ಟ ಯೋಜನೆ. ಇದರ ಯಶಸ್ಸಿಗೆ ಕಾರಣವೇನು? ಹತ್ತಿ ಬೆಳೆಗಾರರ ಪರಿಸರಪ್ರೇಮ ಅಥವಾ ಕೀಟನಾಶಕಗಳ ಶೇಷಾಂಶಗಳ ಭಯ ಕಾರಣವಲ್ಲ. ನಿಜವಾದ ಕಾರಣ “ಲಾಭ." ಕೀಟನಾಶಕಗಳ ಬಳಕೆಯಿಂದಾಗಿ ಅವರ ಆದಾಯ ಹೆಚ್ಚುತ್ತಿಲ್ಲ; ಬದಲಾಗಿ, ಖರ್ಚು ಮಾತ್ರ ಹೆಚ್ಚುತ್ತಿದೆ. ಅದಷ್ಟೇ ಅಲ್ಲ, ಅವುಗಳಿಂದ ಬೆಳೆ ರಕ್ಷಣೆಯೂ ಆಗುತ್ತಿಲ್ಲ.

ಆದ್ದರಿಂದಲೇ, ಕೀಟನಾಶಕಗಳ ಬಳಕೆ ವ್ಯರ್ಥ. ಕೀಟಗಳು ಕೃತಕ ಕೀಟನಾಶಕಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತವೆ. ಇದರಿಂದಾಗಿ ಇನ್ನಷ್ಟು ಪ್ರಬಲ (ಅಂದರೆ ಇನ್ನಷ್ಟು ದುಬಾರಿ) ಕೀಟನಾಶಕಗಳನ್ನು ಬಳಸ ಬೇಕಾಗುತ್ತದೆ. ಜೊತೆಗೆ, ಬೆಳೆಗಳಿಗೆ ಹೆಚ್ಚು ಪರಿಮಾಣದಲ್ಲಿ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ (ಅಂದರೆ ಎಕ್ರೆಗೆ ಒಂದು ಲೀಟರಿನ ಬದಲಾಗಿ ಎರಡು ಲೀಟರ್ ಅಥವಾ ಇನ್ನೂ ಜಾಸ್ತಿ).  ಇದು ಮುಗಿಯದ ಕತೆ. ಅದಲ್ಲದೆ, ಕೀಟನಾಶಕಗಳು ರೈತಮಿತ್ರ ಕೀಟಗಳನ್ನೂ (ಉದಾ: ಜೇನ್ನೊಣ) ಪ್ರಾಕೃತಿಕ ಕೀಟಸಂಹಾರಿಗಳನ್ನೂ ಕೊಲ್ಲುತ್ತವೆ. ಈ ವಿಷವರ್ತುಲದಲ್ಲಿ ಸಿಕ್ಕಿಬಿದ್ದ ರೈತರ ಪಾಡು ಸುಳಿಯಲ್ಲಿ ಸಿಕ್ಕಿಬಿದ್ದ ತರಗೆಲೆಯಂತೆ.

ಕೀಟನಾಶಕಗಳಿಲ್ಲದ ಕೃಷಿ ನಿರ್ವಹಣೆಯಲ್ಲಿ ಬೆಳೆಗಳ ರಕ್ಷಣೆ ಹೇಗೆ ಸಾಧ್ಯ? ಬೆಳೆ ಮತ್ತು ಕೀಟಗಳ ಬಗ್ಗೆ ರೈತರ ಅನುಭವ ವಿನಿಮಯ ಮತ್ತು ಸ್ಥಳೀಯವಾಗಿ ಲಭ್ಯವಿರುವ ಅಲ್ಪ ವೆಚ್ಚದ ವಸ್ತುಗಳ ಮೂಲಕ.

ಕೀಟಗಳ ಜೀವನಚಕ್ರದಲ್ಲಿ ೪ ಹಂತಗಳು: ವಯಸ್ಕ ಕೀಟ, ಮೊಟ್ಟೆಗಳು, ಹುಳ ಮತ್ತು ಕೋಶಾವಸ್ಥೆ. ಬಹುಪಾಲು ಕೀಟಗಳು ಹುಳವಾಗಿದ್ದಾಗಲೇ ಹಾನಿಕರ. ಹಾಗಾಗಿ, ಕೀಟಗಳು ಹುಳದ ಹಂತ ತಲಪುವುದನ್ನು ತಡೆಗಟ್ಟುವ ನಿಯಂತ್ರಣಾ ವಿಧಾನವೇ ಪರಿಣಾಮಕಾರಿ. ಕೀಟಗಳ ವರ್ತನೆ ಹಾಗೂ ಬೆಳೆ ಅವಲಂಬಿಸಿ, ಅಂತಹ ಹಲವು ನಿಯಂತ್ರಣಾ ವಿಧಾನಗಳನ್ನು ಅಲ್ಲಿನ ರೈತರು ಬಳಸುತ್ತಾರೆ:
೧)ಬೇಸಗೆಯಲ್ಲಿ ಆಳವಾಗಿ ಹೊಲ ಉತ್ತು, ಕೀಟಗಳ ಕೋಶ ಹಾಗೂ ಕೀಟಗಳನ್ನು ಬಿಸಿಲಿಗೆ ಒಡ್ದುವುದು.
೨)ಪ್ರಾಕೃತಿಕ ಕೀಟಸಂಹಾರಿಗಳನ್ನೂ ರೈತಮಿತ್ರ ಕೀಟಗಳನ್ನೂ ಸಂರಕ್ಷಿಸುವುದು.
೩)ಬೆಳಕಿನ “ಬಲೆ"ಗಳು ಮತ್ತು ಉರಿಬೆಂಕಿ ಬಳಸಿ ಕೀಟಗಳನ್ನು ಆಕರ್ಷಿಸಿ ಕೊಲ್ಲುವುದು.
೪)ಮೇರಿಗೋಲ್ಡ್, ಹರಳು ಇತ್ಯಾದಿ "ಕೀಟ ಆಕರ್ಷಿಸುವ ಬೆಳೆ”ಗಳನ್ನು ಮುಖ್ಯ ಬೆಳೆಯ ಜೊತೆ ಬೆಳೆಸುವುದು.
೫)ಗಂಡುಕೀಟಗಳನ್ನು ಆಕರ್ಷಿಸಿ ಕೊಲ್ಲಲು ಫೆರಮೋನ್‌ ಬಲೆಗಳ ಬಳಕೆ.
೬)ಬೇವಿನ ಬೀಜದ ಸಾರ ಅಥವಾ ಮೆಣಸು-ಬೆಳ್ಳುಳ್ಳಿ ಅಂಟುಮಿಶ್ರಣದ ದ್ರಾವಣ ಸಿಂಪಡಣೆ.
೭)ದನದ ಮೂತ್ರ ಮತ್ತು ಸೆಗಣಿ ದ್ರಾವಣ ಸಿಂಪಡಣೆ (ಇದು ಕೀಟಗಳನ್ನು ದೂರ ಓಡಿಸುತ್ತದೆ.)

ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲೊಂದು ಮೌನಕ್ರಾಂತಿ ನಡೆಯುತ್ತಿದೆ. ಯಾಕೆಂದರೆ “ಕೀಟನಾಶಕಗಳಿಲ್ಲದ ಕೃಷಿ”ಯನ್ನು ಆಲಿನ ರಾಜ್ಯ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಅಂಗೀಕರಿಸಿ ಪ್ರಚಾರ ಮಾಡುತ್ತಿದೆ. ಇದು ದೊಡ್ಡ ಸಂಗತಿ. ಕಾರಣವೇನೆಂದರೆ, ಅದೇ ಸರಕಾರದ ಕೃಷಿ ಇಲಾಖೆ ಕಳೆದ ೪೦ ವರುಷಗಳಲ್ಲಿ ಪ್ರಚಾರ ಮಾಡಿದ್ದನ್ನೆಲ್ಲ ಈ ಹೊಸ ವಿಧಾನ ಕಿತ್ತೊಗೆದಿದೆ. ಅಲ್ಲಿನ ಕೃಷಿ ವಿಶ್ವವಿದ್ಯಾಲಯ ಮಾತ್ರ ಇನ್ನೂ ಗಾಢ ನಿದ್ದೆಯಲ್ಲಿದೆ! ಇರಲಿ ಬಿಡಿ. ಅಂತಿಮವಾಗಿ, ಹೊಸ ವಿಧಾನದ ಯಶಸ್ಸು ನಿರ್ಧರಿಸುವವರು ರೈತರು ವಿನಃ ಬೇರೆ ಯಾರೂ ಅಲ್ಲ.

ಫೋಟೋಗಳು: ನಾಲ್ಕು ವಿಧದ ಫೆರಮೋನ್ ಕೀಟಾಕರ್ಷಕ ಬಲೆಗಳು
ಕೃಪೆ: ಅಂತರ್ಜಾಲ ತಾಣಗಳು