ಮಾರಿಯಾ ಸುಸೈರಾಜ್ it's not a controversy story

ಮಾರಿಯಾ ಸುಸೈರಾಜ್ it's not a controversy story

 ಒಂದು ಬಾರಿ ತಪ್ಪು ಮಾಡಿದವರು ಜೀವನ ಪೂರ್ತಿ ಆ ತಪ್ಪಿನ ಶಿಕ್ಷೆಯನ್ನು ಅನುಭವಿಸಬೇಕಾ? ತಪ್ಪು ಮಾಡಿದವರಿಗೆ ತಿದ್ದುಕೊಳ್ಳುವ ಅವಕಾಶವನ್ನೇ ನೀಡಬಾರದೇ? ಅಂತಹ ಅವಕಾಶವನ್ನು ಕಲ್ಪಿಸುವವರು ಕೂಡ ತಪ್ಪಿತಸ್ಥರಾ? 

ಮಾರಿಯಾ ಮೋನಿಕಾ ಸೂಸೈರಾಜ್ ಮತ್ತು ರಾಮ್ ಗೋಪಾಲ ವರ್ಮಾ ವಿಷಯದಲ್ಲಿ ಈಗಿನ ಮಾಧ್ಯಮದವರು ರಾಜಕೀಯ ನಾಯಕರು ನಡೆಸುತ್ತಿರುವ ಪ್ರಹಸನಗಳನ್ನು ಗಮನಿಸಿದಾಗ ಈ ಮೇಲಿನ ಪ್ರಶ್ನೆಗಳು ಉದ್ಬವಿಸುತ್ತಾವೆ.

ಈ ಎಲ್ಲ ಪ್ರಹಸನಗಳು ಪ್ರಾರಂಭಕ್ಕೆ ಮುನ್ನುಡಿ ರಾಮ್ ಗೋಪಾಲ್ ವರ್ಮಾ ನೀರಜ್ ಗ್ರೋವರ್ ಹತ್ಯೆಯನ್ನು ಕುರಿತಾದ ಸಿನಿಮಾದಲ್ಲಿ ಪ್ರಮುಖ ಆರೋಪಿಯಾದ ಮಾರಿಯಾಳನ್ನೇ ತನ್ನ ಸಿನಿಮಾದಲ್ಲಿನ ಪಾತ್ರಕ್ಕೆ ಆಯ್ಕೆ ಮಾಡಿರುವುದು. 

ಇದರಲ್ಲಿ ಮಾಧ್ಯಮದವರಿಗೆ ಮತ್ತು ರಾಜಕೀಯ ಪಕ್ಷಗಳ ಕಾಮಾಲೆ ಕಣ್ಣಿಗೆ ಕಂಡ ಘೋರ ಅಪರಾದವೇನು ಎಂದೇ ಗೊತ್ತಾಗುತ್ತಿಲ್ಲ. 

ಇಷ್ಟಕ್ಕೂ ಈ ಹತ್ಯೆಯ ಹಿಂದಿನ ನಿಜವಾದ ಕಾರಣವೇನು ಎಂದು ತಿಳಿದುಕೊಳ್ಳುವ ಕೋರಿಕೆ ಯಾರಿಗು ಇಲ್ಲ. ಮಾರಿಯಾ ಅದರಲ್ಲಿ ತಪ್ಪಿತಸ್ಥೆ ಅದೊಂದೇ ನೆಪ ಸಾಕಾಗಿದೆ ಅವರವರ ಟಿ.ಆರ್.ಪಿ ಜಾಸ್ತಿ ಮಾಡಿಕೊಳ್ಳೋದಿಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ ತಮ್ಮ ಇಮೇಜ್ ಬೆಳೆಸಿಕೊಳ್ಳುವುದರ ಜೊತೆಗೆ ಸದಾ ಸುದ್ದಿಯಲ್ಲಿರಲು.

ಉದ್ದೇಶಪೂರಕವೋ ಅಥವಾ ಆಕಸ್ಮಿಕವೋ ಹತ್ಯೆಮಾಡುವುದು, ಇನ್ನೊಬ್ಬರ ಜೀವ ತೆಗೆಯುವುದು ಜೀವನಪರ್ಯಂತ ಅನುಭವಿಸಬೇಕಾದ ಶಿಕ್ಷೆ ಕೊಡಲೇ ಬೇಕೆಂದಿದ್ದರೆ ಈ ಹಿಂದೆ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಚಲಾಯಿಸಿ ಅಮಾಯಕರ ಸಾವಿಗೆ ಕಾರಣನಾದ ಸಲ್ಮಾನ್ ಖಾನ್ ಗು ಅದೇ ಶಿಕ್ಷೆ ಆಗಬೇಕಲ್ಲ. ಆದರೆ ಅವನು ಈಗ ಸೆಲೆಬ್ರಿಟಿ, ಮುಂಬೈ ಗಲಭೆಗೆ ಸಂಬಂದಪಟ್ಟಂತೆ ಆರೋಪಿಯಾಗಿ, ಶಿಕ್ಷೆಯನ್ನು ಅನುಭವಿಸಿದ ಸಂಜಯ್ ದತ್ ಕೂಡ ಈಗ ಸೆಲೆಬ್ರಿಟಿ ನಟ. ಇವರಿಗಿಲ್ಲದ ಶಿಕ್ಷೆ, ಕಾನೂನು, ನಿರ್ಬಂದಗಳು ಮಾರಿಯಾಗೆ ಯಾಕೆ?

ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಮುತ್ತಪ್ಪ ರೈ ಕನ್ನಡದ ಕಟ್ಟಾಳಾಗಬಹುದಾದರೆ, ಮತ್ತೊಬ್ಬ ಭೂಗತ ರೌಡಿ ಶ್ರೀದರ್ ಅಗ್ನಿ ಪತ್ರಿಕೆ ಸ್ಥಾಪಿಸಿ, ಕನ್ನಡಸೇನೆಯ ಸೈನ್ಯಾಧಿಪತಿ(?)ಯಾಗಿ, ಸಿನಿಮಾ ನಿರ್ದೇಶಕನಾಗಿ, ನೈಸ್ ವಿರುದ್ದ ಧರಣಿ ನಡೆಸುಬಹುದಾದರೆ ಮಾರಿಯಾ ತನ್ನದೇ ಕಥೆಯ ತನ್ನದೇ ಪಾತ್ರವನ್ನು ಯಾಕೆ ನಿರ್ವಹಿಸಬಾರದು?  ಆ ರೀತಿಯ ಚಿತ್ರವನ್ನು ರಾಮ್ ಗೋಪಾಲ ವರ್ಮಾ ಯಾಕೆ ಮಾಡಬಾರದು?

ನೀರಜ್ ಅವರ ಮನೆಯವರ ಸಂಬಂಧಿಕರಿಗೆ ನೋವಾಗುತ್ತದೆ ಅಂತಾದರೆ. ಇಷ್ಟಕ್ಕು ಈ ಕೊಲೆ ಯಾಕೆ ನಡೆಯಿತು? ಎಂಬ ವಿಷಯ ಮೊದಲಿಗೆ ಬರುತ್ತದೆ. ಅಸಲಿಗೆ ಮಾರಿಯಾ ಹುಟ್ಟಿನಿಂದಲೇ ಕ್ರಿಮಿನಲ್ ಹಿನ್ನಲೆ ಕೊಲೆಗಡುಕಿ ಆಗಿರಲಿಲ್ಲವಲ್ಲ. ಹಾಗಿದ್ದು ಒಂದು ಕೊಲೆಗೆ ಸಹಾಯ ಮಾಡಿದ್ಲು ಕೊಲೆ ಮಾಡಿದ್ಲು ಅನ್ನೋದಾದರೆ ಅದಕ್ಕೆ ಪ್ರೇರೆಪಿಸಿದ ಅಂಶಗಳು ಏನು ಎಂಬುದರ ಹಿನ್ನಲೆ ಎಲ್ಲೂ ವಿವರಗಳಿಲ್ಲ.

ಕೊಲೆಗೆ ಸಂಬಂದಪಟ್ಟ ಸಿನಿಮಾ ಮಾಡಲೇ ಬಾರದು ಅನ್ನೋದಾದ್ರೆ ಬಹುಶಃ ಸಿನಿಮಾ ರಂಗದಲ್ಲಿ ಸಿನಿಮಾಗಳೇ ತಯಾರಾಗುತ್ತಿರಲಿಲ್ಲ. 

ಈ ಸಿನಿಮಾ ಮಾಡಬಾರದೆಂದು ನೋಟೀಸು ರೂಪದ ಬೆದರಿಕೆ ಪತ್ರವನ್ನು ನೀಡಿರುವ ಸೋ ಕಾಲ್ಡ್ ಹಿಂದುಗಳ ಪಕ್ಷ ಬಿಜೆಪಿ, ತನ್ನ ಅಸ್ತಿತ್ವದ ಮೂಲಾಧಾರವಾದ ಶ್ರೀರಾಮನ ಕಥೆ, ಪುರಾಣವನ್ನು ಬರೆದ ವಾಲ್ಮೀಕಿ ಕೂಡ ಕೊಲೆಗಡುಕನೇ ಎಂಬ ಅಂಶವನ್ನು ಹೇಗೆ ಮರೆಯುತ್ತದೆ. 

ಈ ಹಿಂದೆ ಇಂತಹದ್ದೇ ಪ್ರಯೋಗದ ಸಿನಿಮಾ ಮಾಡಿದ್ದರಿಂದಲೇ ಸ್ಟಾರ ನಿರ್ದೇಶಕ ಆದವನು ಪ್ರೇಮ್. ಕರಿಯ ಸಿನಿಮಾದಲ್ಲಿ ನಿಜಜೀವನದ ರೌಡಿಗಳನ್ನೇ ತನ್ನ ಸಿನಿಮಾದಲ್ಲಿ ರೌಡಿಗಳ ಪಾತ್ರಧಾರಿಗಳನ್ನಾಗಿಸಿದ್ದ. ಇಷ್ಟೆಲ್ಲಾ ಸಾಧ್ಯವಾಗಿದ್ದೂ ತನ್ನ ಪಾಡಿಗೆ ತಾನು ಸಿನಿಮಾ ಮಾಡುವ ವರ್ಮಾನನ್ನು ಅನಾವಶ್ಯಕವಾಗಿ ಪಾಪುಲರ್ ಮಾಡುವುದರಲ್ಲಿ, ಅವನಿಗೆ ಸಂಬಂದಿಸಿದಂತೆ ವಿವಾದಗಳನ್ನು ಹುಟ್ಟಿಸಿ, ಬೆಳೆಸುವುದು ಯಾವ ಪುರುಷಾರ್ತಕ್ಕಾಗಿ?

 

ಇಷ್ಟೆಲ್ಲಾ ಉದಾಹರಣೆಗಳಿದ್ದು ಇಲ್ಲಿಯವರೆಗು ಅಪರಾಧಕೃತ್ಯದ ನೈಜ ಘಟನೆಯಲ್ಲಿ ಆರೋಪಿತ ವ್ಯಕ್ತಿ , ಅದೇ ಘಟನೆಯನ್ನು ಸಿನಿಮಾ ಮಾಡಿದಾಗ ತನ್ನ ಪಾತ್ರವನ್ನು ತಾನೆ ಮಾಡುವುದಾದರೆ ಅದು ಭಾರತೀಯ ಚಿತ್ರರಂಗದಲ್ಲಿ ದಾಖಲೆಯೇ ಸರಿ.

 

ಮಂಸೋರೆ