ಮಾರುಕಟ್ಟೆಯಲ್ಲಿ ಪುಟ್ಟ ಹುಡುಗಿ

ಮಾರುಕಟ್ಟೆಯಲ್ಲಿ ಪುಟ್ಟ ಹುಡುಗಿ

ಹಲವಾರು ವರುಷಗಳ ಹಿಂದೆ, ಒಂದು ಹಳ್ಳಿಯಲ್ಲಿ ಪುಟ್ಟಿ ಹೆಸರಿನ ಪುಟ್ಟ ಹುಡುಗಿಯಿದ್ದಳು. ಒಮ್ಮೆ ಪುಟ್ಟಿಯ ಅಮ್ಮ ಅವಳನ್ನು ಮಾರುಕಟ್ಟೆಗೆ ಮೀನು ತರಲು ಕಳಿಸುತ್ತಾ “ಮನೆಗೆ ಬರುವಾಗ ಅದನ್ನು ತೊರೆಯ ನೀರಿನಲ್ಲಿ ತೊಳೆದು ತಾ" ಎಂದಳು.

ಮಾರುಕಟ್ಟೆಗೆ ಹೋದ ಪುಟ್ಟಿ ಮೀನು ಖರೀದಿಸಿದಳು. ಹಿಂತಿರುಗುವಾಗ ತೊರೆಯಲ್ಲಿ ಅದನ್ನು ತೊಳೆಯಲು ಅವಳು ಬಾಗಿದಾಗ, ಒಂದು ಕೊಕ್ಕರೆ ಹಾರಿ ಬಂದು ಅವಳ ಕೈಯಿಂದ ಮೀನನ್ನು ಕಿತ್ತುಕೊಂಡು ಹಾರಿ ಹೋಯಿತು. ಪುಟ್ಟಿ ಅತ್ತು ಬಿಟ್ಟಳು; ತನ್ನ ಬಳಿ ಬೇರೆ ಮೀನು ಖರೀದಿಸಲು ಹಣವಿಲ್ಲವೆಂದೂ, ಬರಿಗೈಯಲ್ಲಿ ಹೋದರೆ ಅಮ್ಮ ಬಯ್ಯುತ್ತಾಳೆಂದೂ ಕೊಕ್ಕರೆಗೆ ಚೀರಿ ಹೇಳಿದಳು. ಕೊಕ್ಕರೆ ಹೀಗೆಂದು ಕೂಗಿ ಹೇಳಿತು: “ನನಗೊಂದು ಗೋಧಿ ತೆನೆ ತಂದು ಕೊಟ್ಟರೆ ನಿನ್ನ ಮೀನನ್ನು ನಿನಗೆ ವಾಪಾಸು ಕೊಡ್ತೇನೆ.”

ಪುಟ್ಟಿ ಅಲ್ಲಿಂದ ಹೊಲಕ್ಕೆ ಓಡಿ ಹುಡುಕಿದಳು. ಅಲ್ಲಿ ಒಂದೇ ಒಂದು ಗೋಧಿ ತೆನೆ ಇರಲಿಲ್ಲ. ಆದರೆ ಹುಲ್ಲು ಇತ್ತು. ಕೊಕ್ಕರೆಗೆ ಕೊಡಲಿಕ್ಕಾಗಿ ಗೋಧಿ ತೆನೆ ಕೊಡಬೇಕೆಂದು ಹುಲ್ಲಿನ ಬಳಿ ಪುಟ್ಟಿ ಕೇಳಿದಳು. "ಮಳೆಯೇ ಬಂದಿಲ್ಲ. ಹಾಗಾಗಿ ಗೋಧಿ ತೆನೆ ಇಲ್ಲ. ಮಳೆಗಾಗಿ ನೀನು ದೇವರಲ್ಲಿ ಪ್ರಾರ್ಥಿಸಿದರೆ ನಿನಗೊಂದು ಗೋಧಿ ತೆನೆ ಕೊಡ್ತೇನೆ” ಎಂದಿತು ಹುಲ್ಲು.

ಪುಟ್ಟಿ ತಕ್ಷಣವೇ ದೇವರನ್ನು ಪ್ರಾರ್ಥಿಸಿದಳು. ಆದರೆ ಮಳೆ ಬರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ದಾರಿಯಲ್ಲಿ ಪುಟ್ಟಿ ಏನು ಮಾಡುತ್ತಿದ್ದಾಳೆಂದು ಕೇಳಿದ. "ನಾನು ದೇವರಲ್ಲಿ ಮಳೆಗಾಗಿ ಪ್ರಾರ್ಥಿಸುತ್ತಿದ್ದೇನೆ. ದೇವರು ಮಳೆ ಕಳಿಸಿದರೆ, ಗೋಧಿಯ ಹುಲ್ಲು ನನಗೆ ಗೋಧಿಯ ತೆನೆ ಕೊಡ್ತದೆ. ಅದನ್ನು ಕೊಕ್ಕರೆಗೆ ಕೊಟ್ಟರೆ, ನನ್ನಿಂದ ಕದ್ದ ಮೀನನ್ನು ಕೊಕ್ಕರೆ ನನಗೆ ವಾಪಾಸು ಕೊಡ್ತದೆ. ಅದನ್ನು ನಾನು ಮನೆಗೆ ಅಡುಗೆಗಾಗಿ ಒಯ್ಯುತ್ತೇನೆ. ಆಗ ನನಗೆ ಅಮ್ಮ ಬಯ್ಯೋದಿಲ್ಲ” ಎಂದು ಉತ್ತರಿಸಿದಳು.

“ನಿನ್ನ ಪ್ರಾರ್ಥನೆ ದೇವರಿಗೆ ತಲಪಬೇಕಾದರೆ ನೀನು ಗಂಧದಕಡ್ಡಿ ಉರಿಸಬೇಕು” ಎಂದು ಹೇಳಿದ ಆ ವ್ಯಕ್ತಿ ಅಲ್ಲಿಂದ ಹೊರಟು ಹೋದ. ಪುಟ್ಟ ಅಲ್ಲಿಂದ ಕಿರಾಣಿ ಅಂಗಡಿಗೆ ಓಡಿದಳು. ಒಂದು ಗಂಧದ ಕಡ್ಡಿ ಬೇಕೆಂದು ಅಂಗಡಿ ಮಾಲೀಕನ ಬಳಿ ಕೇಳಿದಳು. ತನ್ನ ಕತೆಯನ್ನೆಲ್ಲ ಹೇಳಿದಳು. ಚಮ್ಮಾರನ ಬಳಿ ಹೋಗಿ, ತಾನು ರಿಪೇರಿಗೆ ಕೊಟ್ಟಿರುವ ಬೂಟ್ಸುಗಳನ್ನು ವಾಪಾಸು ತಂದರೆ ಪುಟ್ಟಿಗೆ ಒಂದು ಗಂಧದ ಕಡ್ಡಿ ಕೊಡುತ್ತೇನೆಂದ ಅಂಗಡಿ ಮಾಲೀಕ.

ಪುಟ್ಟಿ ಅಲ್ಲಿಂದ ಚಮ್ಮಾರನ ಬಳಿಗೆ ಓಡಿದಳು. ಅವಳು ಏದುಸಿರು ಬಿಡುತ್ತಿದ್ದಳು. ತನ್ನ ಕತೆಯನ್ನೆಲ್ಲ ಹೇಳಿದಳು. ಚಮ್ಮಾರ ತಲೆಯಾಡಿಸುತ್ತಾ ಪುಟ್ಟಿ ಚರ್ಮ ಹದ ಮಾಡುವವನ ಬಳಿಗೆ ಹೋಗಿ ಒಂದು ತುಂಡು ಚರ್ಮ ತಂದಿತ್ತರೆ ಆ ಬೂಟ್ಸ್ ಕೊಡೋದಾಗಿ ಹೇಳಿದ.

ಪುಟ್ಟಿಗೆ ಓಡಿಓಡಿ ಸುಸ್ತಾಗಿತ್ತು. ಆದರೂ ಹಲ್ಲು ಕಚ್ಚಿ ಚರ್ಮ ಹದ ಮಾಡುವವನ ಬಳಿಗೆ ಹೋಗಿ ದೈನ್ಯತೆಯಿಂದ ಒಂದು ತುಂಡು ಚರ್ಮ ಕೇಳಿದಳು. ತನ್ನ ಗೋಳಿನ ಕತೆಯನ್ನೆಲ್ಲ ಹೇಳಿದಳು. ಚರ್ಮ ಕೊಟ್ಟರೆ ಚಮ್ಮಾರ ಬೂಟ್ಸ್ ಕೊಡ್ತಾನೆಂದೂ, ಅದನ್ನು ಕೊಟ್ಟರೆ ಅಂಗಡಿಯಾತ ಗಂಧದ ಕಡ್ಡಿ ಕೊಡ್ತಾನೆಂದೂ, ಅದನ್ನು ತಾನು ಉರಿಸಿ ದೇವರಿಗೆ ಪ್ರಾರ್ಥಿಸಿದರೆ ಮಳೆ ಬಂದು, ಗೋಧಿಯ ಹುಲ್ಲು ಗೋಧಿ ತೆನೆ ಕೊಡ್ತದೆಂದೂ, ಅದನ್ನು ಕೊಕ್ಕರೆಗೆ ಕೊಟ್ಟರೆ ಅದು ತನ್ನ ಮೀನನ್ನು ವಾಪಾಸು ಕೊಡ್ತದೆಂದೂ ಪುಟ್ಟಿ ವಿವರಿಸಿದಳು.

ಚರ್ಮ ಹದ ಮಾಡುವವನಿಗೆ ಪುಟ್ಟಿಯ ಸಮಸ್ಯೆ ಕೇಳಿ ದಯೆ ಮೂಡಿತು. ಆತ ಅವಳಿಗೆ ಚರ್ಮದ ತುಂಡು ಕೊಟ್ಟ. ಅದನ್ನು ಪುಟ್ಟಿ ಓಡಿ ಹೋಗಿ ಚಮ್ಮಾರನಿಗೆ ಕೊಟ್ಟಾಗ ಅವನು ಬೂಟ್ಸ್ ಅವಳಿಗಿತ್ತ. ಅಲ್ಲಿಂದ ಕಿರಾಣಿ ಅಂಗಡಿಗೆ ಧಾವಿಸಿದ ಪುಟ್ಟಿ ಬೂಟ್ಸ್ ಕೊಟ್ಟಾಗ ಅಂಗಡಿ ಮಾಲೀಕ ಗಂಧದ ಕಡ್ಡಿ ಕೊಟ್ಟ. ಪುಟ್ಟಿ ಅದನ್ನು ಉರಿಸಿದಾಗ, ಅಲ್ಲಿ ಮಳೆ ಹನಿಯಿತು! ಈಗ ಪುಟ್ಟಿಗೆ ಹುಲ್ಲು ಗೋಧಿ ತೆನೆ ಕೊಟ್ಟಿತು. ಪುಟ್ಟಿ ಅದನ್ನೊಯ್ದು ಕೊಕ್ಕರೆಗೆ ಕೊಟ್ಟಾಗ ಅದು ಮೀನನ್ನು ವಾಪಾಸು ಕೊಟ್ಟಿತು.

ಕೊನೆಗೂ ಪುಟ್ಟಿಗೆ ಅವಳ ಮೀನು ಸಿಕ್ಕಿತು. ಅದನ್ನು ತಗೊಂಡು ಒಂದೇ ಉಸಿರಿನಲ್ಲಿ ಮನೆಗೆ ಓಡಿ ಅಮ್ಮನಿಗಿತ್ತಳು ಪುಟ್ಟಿ. ಅಮ್ಮ ಅದನ್ನು ಬೇಯಿಸಿ ರುಚಿಕರ ಅಡುಗೆ ಮಾಡಿದ ನಂತರ, ಅವರಿಬ್ಬರೂ ಹೊಟ್ಟೆ ತುಂಬ ಊಟ ಮಾಡಿದರು.