ಮಾರುಕಟ್ಟೆ ಮತ್ತು ಮೌಢ್ಯಾಚಾರ

ಮಾರುಕಟ್ಟೆ ಮತ್ತು ಮೌಢ್ಯಾಚಾರ

ಬರಹ

ಮಾರುಕಟ್ಟೆ ಮತ್ತು ಮೌಢ್ಯಾಚಾರ

ಅಂದು ನನ್ನ ಗೆಳೆಯರೊಬ್ಬರು ತಮ್ಮ ಮಗ ಪಿಯುಸಿಯಲ್ಲಿ ಪದೇ ಪದೇ ಫೇಲಾಗುತ್ತಿದ್ದ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನ ಸುಪ್ರಸಿದ್ಧ ವಾಸ್ತು ತಜ್ಞರ ಸಲಹೆಯ ಮೇರೆಗೆ ಅವನ 'ಓದುವ ಕೋಣೆ'ಯ ವಾಸ್ತುವನ್ನು ಬದಲಿಸಿ ಸರಿ ಮಾಡಿದ್ದರೂ, ಆತ ಮತ್ತೆ ಫೇಲಾಗಿ ಉಂಟಾಗಿದ್ದ ಅಸಂಗತ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಸುಸ್ತಾಗಿ ಮನೆಗೆ ಬಂದೆ. ವಾರ್ತೆಗಳಿಗಾಗಿ ಟಿವಿ ಹಾಕಿದರೆ, 'ಕಸ್ತೂರಿ ವಾರ್ತೆ'ಯಲ್ಲಿ ಸೊಟ್ಟ ಮೂತಿಯ ಹೋರಾಶಾಸ್ತ್ರಿಯೊಬ್ಬ ಅಭಿನವ್ ಬಿಂದ್ರಾಗೆ ಒಲಪಿಂಕ್ಸ್ನಲ್ಲಿ ಚಿನ್ನದ ಪದಕ ಬಂದದ್ದೇ ಬರಲಿರುವ ಚಂದ್ರಗ್ರಹಣದ ಪ್ರಭಾವದಿಂದ ಎಂದರೆ ನೀವು ನಂಬುತ್ತೀರಾ? ಎಂಬ ಅಪದ್ಧ ವಿಶ್ಲೇಷಣೆಯನ್ನು ಆಸ್ಫೋಟಕ ಶೈಲಿಯಲ್ಲಿ ಆರಂಭಿಸಿದ್ದ. ದೇವೇಗೌಡರ ಮನೆತನದ ಮೌಢ್ಯ ಅವರ ಒಡೆತನದ ವಾಹಿನಿಗೂ ಹರಡಿದೆ ಎನಿಸಿ ಬೇರೆ ವಾಹಿನಿ ಹಾಕಿದರೆ, ಅಲ್ಲಿಯೂ ಇನ್ನೊಬ್ಬ ಬುರುಡೆದಾಸ ಚಂದ್ರ ಗ್ರಹಣದ ಫಲಾಫಲಗಳನ್ನು ವಿವರಿಸುತ್ತಿದ್ದ! ಯಾವ ಯಾವ ರಾಶಿಯವರು ಯಾವ ಯಾವ ದೋಷಕ್ಕಾಗಿ ಯಾವ ಯಾವ ದೇವರ ಬಳಿ ಯಾವ ಯಾವ ಶಾಂತಿಗಳನ್ನು ಮಾಡಿಸಿಕೊಳ್ಳಬೇಕೆಂಬುದರ ವಿವರಗಳನ್ನು ದೊಡ್ಡ ಗಂಟಲಲ್ಲಿ ಬೊಗಳುತ್ತಿದ್ದ.

ನನ್ನ ಈ ಒರಟು ಭಾಷೆಗಾಗಿ ಕ್ಷಮಿಸಿ. ನನಗೆ ತಲೆ ಕೆಟ್ಟಂತಾಗಿತ್ತು. ನಿಧಾನವಾಗಿ ಯೋಚಿಸಿದಾಗ ತಲೆ ಕೆಟ್ಟಿರುವುದು ನನಗಲ್ಲ, ಈ ದೇಶಕ್ಕೆ ಅನಿಸಿತು. ಇನ್ನೂ ನಿಧಾನವಾಗಿ ಯೋಚಿಸಿದಾಗ ತಲೆ ಕೆಟ್ಟಿರುವುದು ದೇಶಕ್ಕಲ್ಲ, ಈ ದೇಶವನ್ನು ತಮ್ಮ ಕೈಗೆ ತೆಗೆದುಕೊಂಡಿರುವ ಕೆಲವು ವರ್ಗಗಳಿಗೆ ಎನಿಸಿತು: ಇತ್ತೀಚಿನ ಸೂರ್ಯಗ್ರಹಣದ ಸಂದರ್ಭದಲ್ಲಿ ಯಾವುದೋ ತುರ್ತು ಕೆಲಸದ ಮೇಲೆ ಹೊರ ಹೋಗಿದ್ದ ನನ್ನ ಹೆಂಡತಿ, ಇಡೀ ಊರು ಶೋಕಾಚರಣೆಯಲ್ಲಿ ತೊಡಗಿರುವಂತೆ, ಮನೆ - ಅಂಗಡಿಗಳೆಲ್ಲ ಮುಚ್ಚಿ; ಬೀದಿಗಳು ಬಿಕೋ ಎನ್ನುತ್ತಿದ್ದುದನ್ನು ಕಂಡು ಗಾಬರಿಯಾಗಿ, ತನ್ನ ಕೆಲಸ ಮುಗಿಸಲಾರದೆ ವಾಪಸ್ ಬಂದಿದ್ದಳು. ಅವಳು, 'ಇದೇ ಊರಿನಲ್ಲಿ ಹುಟ್ಟಿ ಬೆಳೆದ ನನಗೆ ಎಂದೂ ಗ್ರಹಣದ ದಿನ ಈ ತರಹ ಸೂತಕದ ವಾತಾವರಣ ಕಂಡಿರಲಿಲ್ಲ. ಈ ದೇಶಕ್ಕೆ ಯಾವುದೋ ಮಹಾ ಸೂತಕ ಕಾದಿದೆ!' ಎಂದು ತನ್ನ ಊರಿನ ಮೇಲಿನ ಸಿಟ್ಟನ್ನು ದೇಶದ ಮೇಲೆ ಹಾಕುತ್ತಾ, ನನ್ನ ಹೊಟ್ಟೆ ತಣಿವನ್ನು ಪೂರೈಸುವ ಸಲುವಾಗಿ ಸಂಜೆಯ ತಿಂಡಿ ಮಾಡಲು ಅಣಿಯಾದಳು. ಅವಳಿಗೆ ತನ್ನೂರು ಮಾತ್ರವಲ್ಲ, ಇಡೀ ದೇಶವೇ ಸೂತಕದಲ್ಲಿದ್ದಂತಿತ್ತು ಎಂಬುದು ಗೊತ್ತಿರಲಿಲ್ಲವೆಂದಲ್ಲ. ತನ್ನೂರು ಶಿವಮೊಗ್ಗವೂ ಹೀಗಾಯಿತಲ್ಲ ಎಂಬ ವಿಷಾದವಷ್ಟೆ ಅವಳದು!

ನನ್ನ ಹೆಂಡತಿ ದೈವಭಕ್ತೆಯಲ್ಲದಿದ್ದರೂ, ವಿಚಾರವಾದಿಯಂತೂ ಅಲ್ಲ. ಇಡೀ ಜಗತ್ತು ಯಾವುದೋ ಒಂದು ದೊಡ್ಡ ಶಕ್ತಿಯಿಂದ ನಡೆಸಲ್ಪಡುತ್ತಿದೆ ಎಂದು ನಂಬಿದವಳು. ಕಂಡ ಕಂಡಲ್ಲೆಲ್ಲ ಅಲ್ಲದಿದ್ದರೂ, ಶ್ರದ್ಧೆ ಕಂಡೆಡೆ ಕೈಮುಗಿಯುವವಳು. ತನ್ನ ಕುಟುಂಬದ ಹಿನ್ನೆಲೆಯ ಆರ್ಯಸಮಾಜದ ತತ್ವಗಳ ನೆರಳಿನಲ್ಲಿ ಬೆಳೆದವಳು. ರಾಮಕೃಷ್ಣ ಪರಮಹಂಸ ಮತ್ತು ರಮಣ ಮಹರ್ಷಿಗಳಲ್ಲದೆ ದೊಡ್ಡೇರಿಯ ಸತ್ಉಪಾಸಿ ಮಲ್ಲಣ್ಣನವರ ಉಪದೇಶಗಳಲ್ಲಿಯೂ ತನ್ನ ಪಾಲಿನ ಸತ್ಯವನ್ನು ಕಂಡುಕೊಂಡವಳು. ಹಾಗಾಗಿ, ಈ ಗ್ರಹಣಗಳ ಆಚರಣೆಗಳ ಕುರಿತ ಅವಳ ಈ ಅತೀವ ಬೇಸರದ ಬಗ್ಗೆ ನಾನು ಮೌನವಾಗಿ ಆಲೋಚಿಸುತ್ತಾ, ಗ್ರಹಣದ ಸಮಯದಲ್ಲಿ ಅವಳು ಮಾಡಿಕೊಟ್ಟ ನನ್ನ ಪ್ರೀತಿಯ ಉಪ್ಪಿಟ್ಟನ್ನು ತಿಂದು ಮುಗಿಸುತ್ತಿದ್ದಂತೆ, ಪಕ್ಕದ ಗಣಪತಿ ದೇವಸ್ಥಾನದಲ್ಲಿ ಘಂಟೆ ಮೊಳಗಿತು. ಗ್ರಹಣ ಮುಗಿದಿತ್ತು. ಬೀದಿಯಲ್ಲಿ ಜನ ಕಾಣಿಸತೊಡಗಿದರು. ನಾನು ಮತ್ತು ನನ್ನ ಹೆಂಡತಿ ಅನ್ಯ ಮನಸ್ಕರಾಗಿ ಗಾಳಿ ಸೇವನೆಗೆ ಹೊರಟೆವು.

ಗಣಪತಿ ದೇವಸ್ಥಾನದ ಬಳಿ ಜನವೋ ಜನ. ಜನ ತಮ್ಮ ನಂಬಿಕೆಗಳಿಗನುಸಾರ ವಿಭೂತಿಯನ್ನೋ ಗಂಧವನ್ನೋ ಧರಿಸಿ, ಅಲ್ಲಿ ಮಂತ್ರಘೋಷಗಳ ಮೊಳಗಿನೊಂದಿಗೆ ಭರ್ಜರಿಯಾಗಿ ನಡೆದಿದ್ದ ಗ್ರಹಣ ದೋಷ ಪರಿಹಾರದ ಹೋಮ - ಹವನ - ಶಾಂತಿ ಪೂಜೆಗಳ ಫಲ ಸ್ವೀಕರಿಸಲು ಕಾತುರರಾಗಿ ನೆಲದ ಮೇಲೇ ನಿಸ್ಸಂಕೋಚವಾಗಿ ಆಸೀನರಾಗಿದ್ದರು. ಕುತೂಹಲದಿಂದ ಆ ಜನಸ್ತೋಮವನ್ನು ಗಮನಿಸಿದಾಗ, ಅಲ್ಲಿನ ಅರ್ಧ ಭಾಗ ತರುಣ ತರುಣಿಯರಿಂದಲೇ ತುಂಬಿಹೋಗಿದ್ದುದನ್ನು ಕಂಡು ಕೊಂಚ ಗಾಬರಿಯೇ ಆಯಿತು. ಅದನ್ನು ನನ್ನ ಹೆಂಡತಿಯ ಗಮನಕ್ಕೆ ತಂದಾಗ ಅವಳು ನನ್ನ ಆಶ್ಚರ್ಯಕ್ಕೆ ಉತ್ತರಕೊಡುವಂತೆ, 'ಅದಿರಲಿ, ಅಲ್ಲಿರುವವರು ಯಾವ ತರಹದ ಜನ ಗಮನಿಸಿ' ಎಂದಳು. ನಾನು ಸುಮ್ಮನೆ ನೋಡಿದೆ. ಹೆಚ್ಚೂ ಕಡಿಮೆ ಅಲ್ಲಿದ್ದವರೆಲ್ಲರೂ ನಮ್ಮ ಕಾಲೋನಿಯ ಅನುಕೂಲಸ್ಥರ ಮನೆಗಳವರೇ! ಬಡವರಂತೆ ಕಂಡವರು ಬಾಲ್ಯದಲ್ಲಿನ ನಮ್ಮಂತಯೇ, ಪ್ರಸಾದವೇನಾದರೂ ವಿನಿಯೋಗವಾಗುತ್ತದೇನೋ ಎಂದು ಗುಡಿಯ ಸುತ್ತ ಸಂಕೋಚದಿಂದ ಸುಳಿದಾಡುತ್ತಿದ್ದರಷ್ಟೆ... ಮನಸ್ಸು ಖಿನ್ನವಾಯಿತು. ಗಾಳಿ ಇದ್ದಕ್ಕಿದ್ದಂತೆ ತನ್ನ ಚಲನೆ ಕಳೆದುಕೊಂಡಂತಾಗಿ, ನಿಧಾನವಾಗಿ ಉಸಿರುಗಟ್ಟಿದ ಅನುಭವವಾಗಿ; ಅರ್ಧ ಬೇಸರ - ಅರ್ಧ ವಿಷಾದದಿಂದ ನಾವು ಗಾಳಿ ಸೇವನೆಗೆ ಮುಂದುವರಿಯದೆ, ಮನೆಗೆ ವಾಪಸ್ಸು ಬಂದೆವು. ಟಿವಿಯಲ್ಲಿ ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜಿನ ಮುಂದೆ ಎಚ್ಚೆನ್ ಶಿಷ್ಯರು ಈ ಮಡ್ಡರನ್ನು ಗೇಲಿಮಾಡಲೆಂಬಂತೆ ಗ್ರಹಣದ ಸಮಯದಲ್ಲೇ ತಿನ್ನಲು ಕಡಲೆ ಪುರಿ ಹಂಚುತ್ತಿದ್ದುದರ ಸುದ್ದಿ ಪ್ರಸಾರವಾಗುತ್ತಿತ್ತು. ಇಲ್ಲ, ಈ ಸಮಾಜದಲ್ಲಿ ಇನ್ನೂ 'ಜೀವ'ವಿದೆ ಎನ್ನಿಸಿ, ಮನಸ್ಸು ಸ್ವಲ್ಪ ನಿಸೂರಾಯಿತು.

ನಾನು ಹಳ್ಳಿಯಲ್ಲಿ ಗುಡಿ - ಗುಂಡಾರಗಳು, ಊರ ಪರವು, ತೇರು, ಹಬ್ಬ - ಹರಿದಿನಗಳ ಮಧ್ಯೆಯೇ; ಬ್ರಾಹಣ ಮತ್ತು ವೈಶ್ಯರ ಸನಿಹದಲ್ಲೇ ಬೆಳೆದು ಬಂದವನಾದರೂ, ಈಗ - ಕಳೆದ ಐದು ಹತ್ತು ವರ್ಷಗಳಲ್ಲಿ - ನೋಡುತ್ತಿರುವಂತಹ ಮೌಢ್ಯಾಚರಣೆಗಳನ್ನು - ಅದೂ ಈ ವೈದಿಕ ವೈಭವಗಳೊಂದಿಗೆ - ನಾನೆಂದೂ ನೋಡಿಲ್ಲ. ಬಾಲ್ಯದಲ್ಲಿ ನೋಡುತ್ತಿದ್ದ ಆಚರಣೆಗಳಲ್ಲಿ ಹೆಚ್ಚಿನವು ಸಾಮೂಹಿಕವಾಗಿರುತ್ತಿದ್ದವು ಮತ್ತು ಆ ಕಾರಣದಿಂದಾಗಿಯೋ ಏನೋ, ಧಾರ್ಮಿಕಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಹುರುಪು ಹುಟ್ಟಿಸುವಂತಿದ್ದವು. ಇನ್ನು, ನಾನು ಬೆಳೆದ ಕಾಲ ವೈಚಾರಿಕತೆಯ ಕಾಲ. ಕಾಲೇಜು ದಿನಗಳಲ್ಲಂತೂ, ಪೆರಿಯಾರ್, ಕೋವೂರ್, ಧರ್ಮಲಿಂಗಂ, ಎಂಡಿಎನ್‌ರಲ್ಲದೆ ನಮ್ಮ ಅಧ್ಯಾಪಕರುಗಳೇ ಆದ ಎಚ್ಚೆನ್, ಜಿಟಿಎನ್ ಮತ್ತು ಜೆ.ಆರ್ ಲಕ್ಷ್ಮಣರಾವ್ ಅಂತಹವರು ವಿವಿಧ ಸ್ತರಗಳ ವಿಚಾರವಾದಿ ಚರ್ಚೆಗಳನ್ನು ಹುಟ್ಟು ಹಾಕಿದ್ದ ಕಾಲ. ಇವುಗಳ ಮಧ್ಯೆ ನನ್ನಂತಹವರು ದೇವರು ಧರ್ಮಗಳ ಬಗ್ಗೆ ಅನುಮಾನಗಳನ್ನು ಬೆಳೆಸಿಕೊಂಡರೂ; ಮನುಷ್ಯ ಬರೀ ಭೌತಿಕ ಜೀವಿಯಾಗಿ ಬದುಕಲಾರನೇನೋ ಎಂಬ ಅನುಮಾನದಲ್ಲಿದ್ದಾಗ, ಕುವೆಂಪು, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶ್ ಮುಂತಾದವರು ಬೇರೆ ಬೇರೆ ತರಂಗಾಂತರಗಳಲ್ಲಾದರೂ, ಒಟ್ಟು ಪರಿಣಾಮದಲ್ಲಿ ಈ ಒಣ ಭೌತಿಕ ತಾರ್ಕಿಕತೆಗೆ ಒಂದು ಸೃಜನಶೀಲ ಸ್ಪಂದನವನ್ನು ನೀಡಿ ನಮ್ಮನ್ನು ಆಕರ್ಷಿಸಿದ್ದರು.

ಹಾಗಾಗಿಯೇ ನನ್ನಂತಹವರು, ತಮ್ಮನ್ನು ವೈಯುಕ್ತಿಕವಾಗಿ ನಾಸ್ತಿಕನೆಂದು ಕರೆದುಕೊಂಡರೂ, ಸಾರ್ವಜನಿಕ ಜೀವನದಲ್ಲಿ ಆಜ್ಞೇಯತಾವಾದಿಯಾಗಿ ನಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಪಾರ ಜ್ಞಾನವನ್ನೂ, ಹೆಮ್ಮೆಯನ್ನೂ, ಕಾಳಜಿಯನ್ನೂ ಹೊಂದಿದ್ದ ಡಾ||ರಾಮಮನೋಹರ ಲೋಹಿಯಾರ ಸಮಾಜವಾದಿ ಚಿಂತನೆ ಕಡೆ ಸೆಳೆಯಲ್ಪಟ್ಟಿದ್ದು. ಅವರು ನಮ್ಮ ಧರ್ಮ - ಸಂಸ್ಕೃತಿ - ಪರಂಪರೆಗಳ ಬಗ್ಗೆ ಕಟು ವಿಮರ್ಶೆ ಮಾಡುತ್ತಿದ್ದರಾದರೂ (ಉದಾ: 'ಭಾರತವೆಂಬುದು ಅಲ್ಲಲ್ಲಿ ಸುಂದರವಾಗಿ ಅರಳಿದ ತಾವರೆಗಳಿರುವ ದೊಡ್ಡ ಕೊಚ್ಚೆ ಕೊಳ'), ರಾಮಾಯಣ ಕಥೆಯ ಸ್ಥಿತ್ಯಂತರ ಬಿಂದುವಿನಂತಿರುವ 'ಚಿತ್ರಕೂಟ'ವನ್ನು ಗುರುತಿಸಿ; ಅಲ್ಲಿ ತಮ್ಮ ಪಕ್ಷದ ವತಿಯಿಂದ 'ರಾಮಾಯಣ ಮೇಳ'ವನ್ನೂ ಆಯೋಜಿಸುತ್ತಿದ್ದರು. ಎಡಪಂಥೀಯರೆನಿಸಿಕೊಂಡವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಮಾತಾಡುವುದೇ ಪಂಥ ವಿರೋಧಿ ಎಂದು ಭಾವಿಸಿದ್ದಾಗ, ಅವರು ಜನತೆಯ ಆರೋಗ್ಯದ ದೃಷ್ಟಿಯಿಂದ ಅಜ್ಮೇರ್ ಸೇರಿದಂತೆ ದೇಶದ ಎಲ್ಲ ಯಾತ್ರಾ ಸ್ಥಳಗಳನ್ನೂ ನಾಗರಿಕ ಸೌಲಭ್ಯಗಳನ್ನೊದಗಿಸಿ ಅಭಿವೃದ್ಧಿಪಡಿಸಬೇಕೇಂದೂ, ಅಲ್ಲಿನ ನದಿಗಳನ್ನು ಸ್ವಚ್ಛಗೊಳಿಸಬೇಕೆಂದೂ ಆಗ್ರಹಿಸಿದ್ದರು. ಆದರೆ ವಾರಾಣಸಿಯಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು 'ಪರಂಪರೆ'ಯ ಹೆಸರಿನಲ್ಲಿ ಸಾರ್ವಜನಿಕವಾಗಿ 101 ಜನ ಬ್ರಾಹ್ಮಣರ ಪಾದ ಪೂಜೆಯಲ್ಲಿ ತೊಡಗಿದಾಗ. ಅದೊಂದು ಹೀನ ಅಭಿರುಚಿಯ, ರಾಷ್ಟ್ರೀಯ ನಾಚಿಕೆಗೇಡಿನ ಅನಾಚಾರ ಎಂದು ಕಿಡಿಕಿಡಿಯಾದರು. ಹಾಗೆ ಪಾದಪೂಜೆಗೆಂದು ಆಯ್ಕೆಯಾಗಿ ಅಲ್ಲಿಗೆ ಹೋಗಿ, ಆದರೆ ಅಲ್ಲಿನ ದೃಶ್ಯ ಭೀಭತ್ಸವೆನಿಸಿ ವಾಪಸು ಬಂದು ವಿಷಯ ತಿಳಿಸಿದ ಓರ್ವ ಬ್ರಾಹ್ಮಣನನ್ನು ರಾಷ್ಟ್ರದ ಶ್ರೇಷ್ಠ ಪ್ರಜೆಯೆಂದು ಬಣ್ಣಿಸಿದ ಲೋಹಿಯಾ, ಇಂತಹವರಿಂದಲೇ ರಾಷ್ಟ್ರದ ಪರಂಪರೆ ಸ್ವಚ್ಛವಾದೀತೆಂದು ಆಶಿಸಿದರು.

ಆದರೆ ಇಂತಹ ಭೀಭತ್ಸ ಧರ್ಮಾಚರಣೆಯಲ್ಲಿ ಪಾದಪೂಜೆ ಮಾಡಿಸಿಕೊಂಡು ಬಂದವರಲ್ಲೊಬ್ಬರಾದ ನಮ್ಮ ದೇವುಡು ನರಸಿಂಹಶಾಸ್ತ್ರಿ ನಮ್ಮ ಕೆಲವು ಸಾಂಸ್ಕೃತಿಕ ವಕ್ತಾರರ ಪ್ರಕಾರ ನಮ್ಮ ಶ್ರೇಷ್ಠ ಧಾರ್ಮಿಕ ಪಂಡಿತ ಮತ್ತು ಲೇಖಕ! ಈ ಶ್ರೇಷ್ಠ ವಿಪ್ರೋತ್ತಮರೇ ಕುವೆಂಪು ಅವರ 'ನಿರಂಕುಶಮತಿಗಳಾಗಿ' ಎಂಬ - ಆಧುನಿಕ ಕನ್ನಡ ಪ್ರಜ್ಞೆ ಎಂಬುದೇನಾದರೂ ಇದ್ದರೆ, ಅದರ ಬಾಗಿಲು ತೆಗೆದ - ಭಾಷಣದ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕೋರಿದ್ದುದು! ಇಂತಹ ಮೂಢ ಪುರೋಹಿತರನ್ನು ನಮ್ಮ ಸಾಂಸ್ಕೃತಿಕ ಸಂಪತ್ತೆಂದು ಕೊಂಡಾಡುವ "ಅವಧಾನಿ"

ಸಂತತಿಗೆ ಮತ್ತೆ ಬಲ ಬಂದಿರುವುದರಿಂದಲೇ ಮತ್ತೆ ಇಂದು ಈ ಮತಿಹೀನ ಮತಾಚರಣೆಗಳ ಆರ್ಭಟ ಜೋರಾಗಿರುವುದು. ಹಾಗೆ ನೋಡಿದರೆ, ಈ ಸಂತತಿಯನ್ನು ಈಗ ಸಾಕುತ್ತಿರುವವರಾದರೂ ಯಾರು? ದೇವಸ್ಥಾನಗಳಿಗೆ, ಮಠಗಳಿಗೆ, ಸಾಹಿತ್ಯ ಪ್ರತಿಷ್ಠಾನಗಳ ಹೆಸರಲ್ಲಿನ ಜಾತಿ ಗೂಡುಗಳಿಗೆ ಸರ್ಕಾರದ ಖಜಾನೆಯಿಂದ ಕೋಟಿಗಟ್ಟಲೆ ಹಣ ಹಂಚುತ್ತಿರುವ ಶೂದ್ರ ಗುಗ್ಗುಗಳೇ. ರೇಷ್ಮೆ ಶಾಲು - ಪಂಚೆಗಳ ಹುಸಿ ಮಡಿ ಮತ್ತು ಹಸಿ ರೋಮಾಂಚನದಲ್ಲ್ಲಿ, ರಾಜ್ಯಕ್ಕೆ ಬಡಿದಿರುವ ದೋಷ ಪರಿಹಾರಕ್ಕಾಗಿಯೋ ಅಥವಾ ತಮ್ಮ ಹಳೆಯ ಪಾಪ ಪರಿಹಾರಕ್ಕಾಗಿಯೋ; ತಮ್ಮ ಕಂಠಪಾಠ ಪಾಂಡಿತ್ಯವನ್ನು ಮೆರೆಯುತ್ತಾ ಯಾರಿಗೂ ಅರ್ಥವಾಗದ ಮಂತ್ರಗಳನ್ನು ಅರಚುವ ಕಳ್ಳ ಪೂಜಾರಿಗಳ ಮತ್ತು ಅವರು ಸಾಕಿಕೊಂಡಿರುವ ಸುಳ್ಳು ದೇವರುಗಳ ಮುಂದೆ ಹರಕೆಯ ಕುರಿಗಳಂತೆ ತಲೆಬಾಗಿ ನಿಲ್ಲುತ್ತಿರುವ ಭ್ರಷ್ಟ ಶೂದ್ರ ನಾಯಕರೇ. ಹಳೆಯ ಎಂಜಿನಿಯರುಗಳು ಗಾಳಿ ಬೆಳಕುಗಳ ಅಗತ್ಯ ನೋಡಿ ಕಟ್ಟಿರುವ ಅಧಿಕೃತ ಮನೆಗಳನ್ನು, ತಮ್ಮ ಅಧಿಕಾರ ಸಂಪತ್ತುಗಳ ಅಭದ್ರತೆಯ ಭಯದಿಂದ ವಾಸ್ತು ತಜ್ಞರೆಂಬ ಆಧುನಿಕ ಪುರೋಹಿತಶಾಹಿಯ ಉಪದೇಶಗಳ ಮೇರೆಗೆ ಪದೇ ಪದೇ ಒಡೆಸಿ ಸಾರ್ವಜನಿಕ ಹಣದಲ್ಲಿ ಅವನ್ನು ಬದಲಾಯಿಸಿಕೊಂಡು ಹುಸಿ ರಕ್ಷಣೆಯ ಭಾವನೆಯಲ್ಲಿ ಮುಳುಗಿರುವ ಶೂದ್ರಶ್ರೀಗಳೇ!

ಲೌಕಿಕ ನೈತಿಕತೆಯೇ ದೇವರು ಧರ್ಮಗಳೆಂಬ ಪಾರಮಾರ್ಥಿಕ ಪರಿಕಲ್ಪನೆಯ ಮೂಲ ತಳಹದಿ ಎಂಬುದನ್ನೇ ಅರಿಯದ ಈ 'ದೇಶಪ್ರೇಮಿ' ಮತ್ತು 'ಧರ್ಮಪ್ರೇಮಿ'ಗಳ ಮೌಢ್ಯ, ದೇಶಘಾತುಕವೂ ಧರ್ಮಘಾತುಕವೂ ಆಗಿದೆ. ಕುವೆಂಪು ಎಪ್ಪತ್ತರ ದಶಕದಲ್ಲಿ ಎಲ್ಲ ತರಹದ ಪುರೋಹಿತಶಾಹಿಯ ವಿರುದ್ಧ ಸಮರ ಸಾರಿದ್ದ 'ಒಕ್ಕೂಟ'ದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, 'ಮೊದಲು ಕ್ಲೀನ್ ಆಗಬೇಕಾದದ್ದು ನಿಮ್ಮ... ನಿಮ್ಮ... ತಲೆಗಳೇ' ಎಂದಿದ್ದುದು ಬಹುಶಃ ಇಂತಹವರನ್ನು ಗಮನದಲ್ಲಿಟ್ಟುಕೊಂಡೇ. ಆದರೆ ಇಂದು ಘಾತುಕ ವೈದಿಕರೂ, ಖೂಳ ಶೂದ್ರರೂ ಸೇರಿ ಇಂದು ದೇಶವನ್ನು ಮೌಢ್ಯಾಚಾರಗಳ ನರಕವನ್ನಾಗಿಸುತ್ತದ್ದಾರೆ. ಇವರು ತಮ್ಮ ರಾಜಕೀಯ ಅಧಿಕಾರ ಮತ್ತು ಸಂಪತ್ತುಗಳನ್ನು ರಕ್ಷಿಸಿಕೊಳ್ಳಲು, ನಮ್ಮ ನವೋದಯದ ಭಾಗವಾಗಿ ಮೂಡಿದ ವೈಚಾರಿಕ ಆಂದೋಲನದ ಫಲಗಳನ್ನು ನಾಶಗೊಳಿಸುತ್ತಿದ್ದಾರೆ.

ನಮ್ಮ ಮನೆಗಳು, ಊರು, ರಾಜ್ಯ ಮತ್ತು ದೇಶದ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಶಾಂತಿ ನೆಮ್ಮದಿಗಳ ಮೂಲವಾಗಿದ್ದ ಧರ್ಮಾಚರಣೆಗಳು ಸಂಪತ್ತು ಮತ್ತು ಅಧಿಕಾರದ ಸಂಪರ್ಕ ದೊರೆತೊಡನೆ, ಮತಿಹೀನ ಮತಾಚರಣೆಗಳಾಗಿ ಮಾರ್ಪಾಡಾಗಿ, ಸಾರ್ವಜನಿಕ ಅಶಾಂತಿಗೆ ಕಾರಣವಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಮಾರುಕಟ್ಟೆ ಮತ್ತು ಮತಿಹೀನತೆ ಒಟ್ಟೊಟ್ಟಿಗೆ ಬೆಳೆಯುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಹೆಚ್ಚೂ ಕಡಿಮೆ ನಿಂತೇ ಹೋಗಿದ್ದ ಬಲಿ ಆಚರಣೆಗಳು ಇಂದು ಊರ ದೇವತೆ ಹಬ್ಬದ ಹೆಸರಿನಲ್ಲಿ ಸಾಮೂಹಿಕ ಪ್ರಾಣಿ ಬಲಿಯ ಮೂಲಕ ಇಡೀ ಊರ ರಸ್ತೆಗಳನ್ನು ರಕ್ತದಿಂದ ತೊಯ್ಸಿ ಭಯಾನಕ ದೃಶ್ಯ ನಿರ್ಮಿಸುತ್ತಿವೆ. ಇದಕ್ಕೆ ತಕ್ಕಂತೆ, ಇದು ಶೂದ್ರ ಜಾತಿಗಳ ಸಾಂಸ್ಕೃತಿಕ ಮರುಸ್ಥಾಪನೆಯ ಪ್ರತೀಕ ಎಂದು ವಿಶ್ಲೇಷಿಸುವ ಶೂದ್ರ ಸಂಸ್ಕೃತಿ ಚಿಂತಕರೂ ನಮ್ಮಲ್ಲಿ ತಯಾರಾಗಿದ್ದಾರೆ. ಹಾಗೇ ವೈದಿಕ ಪುರೋಹಿತಶಾಹಿಯಿಂದ ಹೊಸ ಹೊಸ ಹಬ್ಬ ಹರಿದಿನಗಳು ಆವಿಷ್ಕಾರಗೊಳ್ಳುತ್ತಾ, ಹೊಸ ಹೊಸ ಸಿದ್ಧಿಗಳು ಪ್ರಚುರಗೊಂಡು, ಹೊಸ ಹೊಸ ವಿಶೇಷ ಪೂಜೆಗಳು ವಿನ್ಯಾಸಗೊಳ್ಳುತ್ತಿವೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಗಳು ಸದಾ ಗಿಜುಗುಡುತ್ತಾ, ದೇವಸ್ಥಾನಗಳ ಮತ್ತು ತೀರ್ಥಕ್ಷೇತ್ರಗಳ ಬಳಿ ಜನರ ನೂಕು ನುಗ್ಗಲು ಹೆಚ್ಚಿ; ಜನರ ಪುಣ್ಯಾರ್ಜನೆಯ ಕೆಲಸ, ಸರ್ಕಾರದ ಪಾಲಿಗೆ ಶಾಂತಿ ಮತ್ತು ಸುವ್ಯವಸ್ಥೆಯ ಗಂಭೀರ ಸಮಸ್ಯೆಯಾಗಿ ಮಾರ್ಪಾಡಾಗಿದೆ. ಇನ್ನು ನಮ್ಮ ಮದುವೆ - ಮುಂಜಿ - ನಾಮಕರಣ - ತಿಥಿ ಇತ್ಯಾದಿಗಳೆಲ್ಲ ಕೌಟುಂಬಿಕತೆಯ ಆತ್ಮೀಯ ಸ್ಪರ್ಶವನ್ನೇ ಕಳೆದುಕೊಂಡು, ಅಸಭ್ಯ ಸಂಪತ್ತಿನ ಅಶ್ಲೀಲ ಪ್ರದರ್ಶನಗಳಿಗೆ ವೇದಿಕೆಗಳಾಗಿವೆ. ಆದರೆ ಇದನ್ನು ನಮ್ಮ ಶತಾವಧಾನಿಗಳು, ಅಷ್ಟಾವಧಾನಿಗಳು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಪುನರುತ್ಥಾನವೆಂದು ವರ್ಣಿಸುತ್ತಾ, ನಮ್ಮ ಭ್ರಷ್ಟ ಆಡಳಿತಗಾರರನ್ನೂ, ಅವರ ಚೇಲಾಗಳನ್ನೂ ಇನ್ನಷ್ಟು ಭ್ರಷ್ಟಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ಇದಕ್ಕೆಲ್ಲ ಮೂಲ ಕಾರಣ, ಮಾರುಕಟ್ಟೆಯ ಅಸಹಜ ವಿಸ್ತರಣೆ ಮನುಷ್ಯನ ಆಸೆ - ಆಕಾಂಕ್ಷೆಗಳ ಮಟ್ಟವನ್ನು ಅಸಹಜವಾಗಿ ಏರಿಸುತ್ತಾ, ಅವನ ವಿವೇಕದ ಮಟ್ಟವನ್ನು ಕಡಿಮೆ ಮಾಡುತ್ತಾ; ಅವನನ್ನು ಹೆಚ್ಚೆಚ್ಚು ಅಭದ್ರ, ಅಸ್ಥಿರ ಮತ್ತು ಅಶಾಂತನನ್ನಾಗಿ ಮಾಡುತ್ತಿರುವುದೇ ಆಗಿದೆ. ಇದರ ಪ್ರತಿಬಿಂಬವೇ ಈ ಬಲಿ, ಹವನ, ಹೋಮ ಶಾಂತಿ, ವಾಸ್ತು ಇತ್ಯಾದಿ ಅನುಮಾನಾಸ್ಪದ ಆಚರಣೆಗಳ ಹೆಚ್ಚಳ. ಇದು ನಮ್ಮ ಹಳೆಯ ಊಳಿಗಮಾನ್ಯಶಾಹಿ ವ್ಯವಸ್ಥೆಯ 'ಆಧುನಿಕ' ರೂಪವಷ್ಟೆ. ನಾವು ಹೊರ ರೂಪದಲ್ಲಿ ಆಧುನಿಕರಾಗಿದ್ದೇವೆಯೇ ಹೊರತು, ಒಳ ರೂಪದಲ್ಲಿ ಹಾಗೇ ಇದ್ದೇವೆ: ಅದೇ ಮತಿಗೆಟ್ಟ ಶೂದ್ರ 'ರಾಜ'ರು ಮತ್ತು ಅವರಿಗೆ ಕುಂಕುಮ ಹಚ್ಚಿ ಕುಣಿಸುವ ಪ್ರಳಯಾಂತಕ ಬುದ್ಧಿಯ ಪುರೋಹಿತರು! ಹಾಗಾಗಿ, ಇಂದಿನ ಈ ಮತಿಹೀನ, ಆತಂಕಕಾರಿ, ಅವೈಚಾರಿಕ ಆಚರಣೆಗಳನ್ನು ನಮ್ಮ ಠೊಳ್ಳು ಆಧುನಿಕತೆಯ ಪೊಳ್ಳು ಫಲಗಳೆಂದೇ ನಾನು ಕರೆಯಬಯಸುತ್ತೇನೆ. ಮನುಷ್ಯನ ಹೊರ ಅಗತ್ಯಗಳ ಕಡೆ ಕೊಟ್ಟಷ್ಟು ಗಮನವನ್ನು ಒಳ ಅಗತ್ಯಗಳ ಕಡೆ ಕೊಡಲಾಗದ ಈ ಆಧುನಿಕತೆ, ಸಹಜವಾಗಿಯೇ ಇವೆರಡರ ಮಧ್ಯೆ ಸಮತೋಲನ ಸಾಧಿಸುವಲ್ಲಿ ಸೋತಿದೆ. ಇದಕ್ಕೆ ಮುಖ್ಯ ಕಾರಣ, ಈ ಆಧುನಿಕತೆ ತನ್ನ ಹಿಂದಿನ ಪರಂಪರೆಯ ಶೀಲವನ್ನು ಅಸಿಂಧುಗೊಳಿಸುತ್ತಾ ಹೋದಂತೆ, ತನ್ನದೇ ಶೀಲವೊಂದನ್ನು ಕಟ್ಟಿಕೊಳ್ಳುವ ಕಡೆ ಗಮನ ಹರಿಸದೇ ಹೋದದ್ದು; ಸಂಸ್ಕೃತಿಯ ಕಡೆ ಅದರ ಗಮನ ಅಷ್ಟಾಗಿ ಹೋಗದೇ ಹೋದದ್ದು. ಹಾಗಾಗಿ ಅದನ್ನು ಈಗ ಹಳೆಯ ಪರಂಪರೆಯಿಂದಲೇ recycle ಮಾಡಿ ತುಂಬಿಕೊಳ್ಳುವ ಅಸಂಗತ ಮತ್ತು ಅಪದ್ಧ ಪ್ರಯತ್ನಗಳು ನಡೆದಿವೆ.

ಆಧುನಿಕತೆಯ ಮುಖಾಮುಖಿಯಲ್ಲಿ ಹುಟ್ಟಿದ ವರ್ಡ್ಸ್ ವರ್ತ್ ಅಥವಾ ಬ್ಲೇ‌ಕ್‌ರ ವಿಷಣ್ಣ ಉದ್ಗಾರಗಳ ಹಿಂದಿನ ಒಳನೋಟಗಳಿಂದಾಗಲಿ; ನಮ್ಮವರೇ ಆದ ಡಿವಿಜಿಯವರ 'ಹೊಸ ಚಿಗುರು ಹಳೆ ಬೇರು' ಅಥವಾ ಕುವೆಂಪು ಅವರ 'ಹಳೆಯ ಆಭರಣಗಳ ಹೊಸ ವಿನ್ಯಾಸ'ದ ತತ್ವಗಳಿಂದಾಗಲೀ, ಆಧುನಿಕತೆಯ shockಗಳನ್ನು ಹೀರಿಕೊಳ್ಳಬಲ್ಲ ಸಾಂಸ್ಕೃತಿಕ ಆಕೃತಿಗಳನ್ನು ರೂಪಿಸಿಕೊಳ್ಳಲಾಗದಷ್ಟು ನಾವು ಮೈಮರೆತು ಬಾಳಿದ್ದೇವೆ. ಹಾಗಾಗಿ ಈಗ, ಮೌಢ್ಯ ಸಾಮ್ರಾಜ್ಯದ ಪ್ರಜೆಗಳಾಗುವ ಖಂಡನೆಯನ್ನು ಎದುರಿಸಲು ಅರ್ಹರೇ ಆಗಿದ್ದೇವೆ.