ಮಾರುತಿಯ ಲಂಕಾ ಪ್ರಯಾಣ

Submitted by Shreerama Diwana on Fri, 08/07/2020 - 11:59
ಬರಹ

ಲಂಕೆಗೆ ಹಾರಿದ ಹನುಮನು

ಶಂಕೆಯ ಪಡುತಿರದೆ ಸೀತೆಯನು ತಾ ನೋಳ್ಪಂ|

ರಂಕದಿ ಕೃಶದಲಿ ಕೊರಗುತ

ಲಂಕಿಣಿ ಕಾಯುತಲಿ ಮಾತೆ ರಾಮನ ಸತಿಯಂ||

 

ಬಳಿಯಲಿ ಬರುತಿಹ ರಾವಣ

ಕಳೆಯಿಂ ಕುಂದಿರುವ ಜಾಹ್ನವಿ ಮುದುಡಿ ಕೂಡಲ್|

ದಳದಳ ಕಂಗಳ ದೃಗುಜಲ

ವಿಳಿದಿದೆ ದುಮ್ಮಿಕ್ಕಿ ಹರಿದು ಪೇಳಿದೆ ನೋವಂ||

 

ರಾಮನ ವಂಶದ ಚರಿತೆಯ

ಭೀಮನ ಕಾಯದಲಿ ಹೇಳಿ ವೃಕ್ಷದ ತುದಿಯಲ್|

ನಾಮವನಾಲಿಸಿ ಸೀತೆಯು

ರೋಮದಿ ಚಣದೊಳಗೆ ಚೇತನವ ತುಂಬುತಲಿಂ||

 

ಗುರುತನು ಕೇಳಲು ಹನುಮನು

ಮರೆಯದೆ ಜಾನಕಿಯು ಗುರುತಿನುಂಗುರ ಕೊಡುತೈ|

ಮರುಗುತ ರಾಘವ ನೆನೆಪಿಸಿ

ಸೊರಗುತ ಲಂಕೆಯಲಿ ನಿದಿರೆಯಿರದೆಯೆ ಕುಳಿತಳ್||

 

ಹಾರುತ ಬಂದನು ಮಾರುತಿ

ಸಾರವ ರಾಮನಿಗೆ ಹೇಳಿ ಗುರುತನು ತೋರೈ|

ಧೀರನು ಶೂರನು ರಾಘವ

ತೋರುತ ಶಕ್ತಿಯನು ರಾವಣನ ಲಂಕೆಯಲಿಂ||

 

ಲಕ್ಷ್ಮಣ ಕದನಕೆ ಹೊರಟನು

ಲಕ್ಷ್ಯವದನು ಕೊಡದೆ ಹೊಡೆದ ಬಾಣವ ಚಣದೊಳ್|

ವೃಕ್ಷದ ಬಳಿಯಲಿ ನಿಂತಿಹೆ

ಲಕ್ಷ್ಮಣ ರಾಮರದು ಬಗ್ಗಿಯಸ್ತ್ರವ ಹೊಡೆದಂ||

 

ವಾನರ ಸೈನ್ಯವು ಮುತ್ತಿತು

ದಾನವ ಕೋಟೆಯನು ಕಪಿಯ ಸೈನ್ಯವು ಚಣದಿಂ|

ಮಾನವ ರೂಪದ ದೇವನು

ಕಾಣದೆ ಮರೆಮಾಚಿ ರಾಮ ಮಾಡಲು ಯುದ್ದಂ||

 

ತಂದನು ಪುಷ್ಪಕ ನೌಕೆಯ 

ನಿಂದನು ಕದನವನು ದಾಶರಥಿಯಲಿ ತಾನದು ಹಗೆಯಂ|

ಚಂದನ ಗೊಂಬೆಯ ಸೀತೆಯ

ಬಂಧನದಲ್ಲಿರಿಸಿ ತಂದ ಸೀತೆಯ ಶಿರವಂ||

 

ಬೆಚ್ಚುತ ರಾಘವ ಚಿಂತೆಯು

ಹೆಚ್ಚಿದ ಬೇಗೆಯಲಿ ರೋಗಿಯಂತೆಯೆ ಕುಸಿದಂ|

ಮೆಚ್ಚಿನ ಮಡದಿಯ ಹೋದಳು

ಹುಚ್ಚನ ತೆರದಲಿಯೆ ದಾಶರಥಿ ದೃಗುಜಲ ಸುರಿಸಲ್||

 

ಮುಳಿದನು ವಾನರ ನಾಯಕ

ಕಳೆಯನು ಗುಂದಿರುವ ರಾಮನೊಲುಮೆಗೆ ಪಾತ್ರಂ|

ಗಳಗಳವಳುತಲಿ ದೊರೆಯೈ

ಸೆಳೆಯಿತು ನಲ್ಲೆಯಲಿ ಹರಣ ನೆನೆಯುತ ಬಿಡುತೈ ||

 

ಶಂಕರಾನಂದ ಹೆಬ್ಬಾಳ

ಚಿತ್ರ: ಅಂತರ್ಜಾಲ ತಾಣದ ಕೃಪೆ

ಚಿತ್ರ್