ಮಾರ್ಕೋಲು

ಹೆಸರಾಂತ ಬರಹಗಾರ್ತಿ ಆಶಾ ರಘು ಅವರ ನೂತನ ಕಾದಂಬರಿ ‘ಮಾರ್ಕೋಲು’ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾನಪದ ಕಥಾ ಹಂದರ ಹೊಂದಿರುವ ಈ ಕಾದಂಬರಿಗೆ ಕಲಾವಿದ ಶ್ರೀನಿವಾಸ ಪ್ರಭು ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…
“ಪ್ರಸಿದ್ಧ ಕಾದಂಬರಿಗಾರ್ತಿ ಆಶಾ ರಘು ಅವರ ಇತ್ತೀಚಿನ ಕಾದಂಬರಿ ʻಮಾರ್ಕೋಲು’. ಈಗಾಗಲೇ ಹಲವಾರು ಅರ್ಥಪೂರ್ಣ-ಸ್ವಾರಸ್ಯಕರ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಆಶಾ ರಘು ಅವರು ತಮ್ಮ ಪ್ರಯೋಗಶೀಲತೆಯಿಂದ, ಸೊಗಸಾಗಿ ಕಥೆ ಕಟ್ಟುವ ಸಂವಿಧಾನ ಕೌಶಲದಿಂದ, ಜಾನಪದದಿಂದ ಹಿಡಿದು ಕಾಲ್ಪನಿಕ-ಐತಿಹಾಸಿಕ-ಸಾಮಾಜಿಕ-ಪೌರಾಣಿಕದವರೆಗೆ ಹರಿದಾಡುವ ತಮ್ಮ ಕಾದಂಬರಿಗಳ ವಸ್ತುವೈವಿಧ್ಯದಿಂದ; ಪೌರಾಣಿಕದ ಅತಿ ಶಿಷ್ಟಭಾಷೆಯಿಂದ ಸಾಮಾಜಿಕದ ಆಡುಮಾತು ಹಾಗೂ ಕಸಿಗೊಂಡ ಗ್ರಾಮ್ಯ ಭಾಷಾ ಪ್ರಯೋಗದವರೆಗಿನ ಪ್ರಭೇದಗಳ ಸಮಯ- ಸಂದರ್ಭೋಚಿತ ಬಳಕೆಯಿಂದ ವಿಶೇಷವಾಗಿ ಗಮನ ಸೆಳೆದಿರುವ ಲೇಖಕಿ.
ವಿಧಿಗೆ ಮರುಬಾಣ ಎಂಬರ್ಥದಲ್ಲಿ ’ಮಾರ್ಕೋಲು’ ಎಂಬ ಶೀರ್ಷಿಕೆಯನ್ನು ಇಟ್ಟಿದ್ದೇನೆಂದು ಆಶಾ ರಘು ಸ್ಪಷ್ಟಪಡಿಸಿದ್ದಾರೆ. ಯಾವ ಭದ್ರಬುನಾದಿಯ ಮೇಲೆ ಇಡೀ ಕಾದಂಬರಿಯ ಶಿಲ್ಪದ ’ಕಟ್ಟೋಣ’ವಿದೆಯೋ ಅದಕ್ಕೆ ಈ ಮಾತು ತೋರುಬೆರಳಾಗಿಬಿಡುತ್ತದೆ. ’ಸಂತಾಲಿ, ಮರಾಠಿ, ತಮಿಳು, ಕನ್ನಡ ಮೊದಲಾದ ಹಲವು ಜನಪದ ಕಥೆ-ಉಪಕಥೆಗಳನ್ನು ಇಲ್ಲಿ ಬಳಸಿದ್ದೇನೆ, ಸಾಫೋಕ್ಲಿಸ್ ನ ಈಡಿಪಸ್ ಕಥೆಯನ್ನು ಹೋಲುವ ವಿಧಿಯಮ್ಮನ ಕಥೆ ಈ ಕಾದಂಬರಿಯ ಪ್ರಮುಖ ಕಥೆಯಾಗಿದೆ’ ಎಂದು ಕೂಡಾ ಆಶಾ ಸ್ಪಷ್ಟಪಡಿಸಿದ್ದಾರೆ. ಈಡಿಪಸ್ ನ ಕಥೆಯನ್ನು ಹೋಲುವ ಕಥೆ ಎಂದಾಕ್ಷಣ್ಣವೇ ಕುತೂಹಲ ಕೆರಳುವುದು ಸಹಜ. ಭಾರತೀಯ ಸಂದರ್ಭಕ್ಕೆ ’ತಂದೆಯನ್ನು ಕೊಂದು ತಾಯಿಯನ್ನು ಲಗ್ನವಾಗಿ ಸಂತಾನ ಪಡೆಯುವ ಈಡಿಪಸ್ ನ ಕಥೆ ಎಷ್ಟರಮಟ್ಟಿಗೆ ಹೊಂದುತ್ತದೆಂಬ ಅನುಮಾನ ಮೂಡುವುದೂ ಸಹಜವೇ. ಆದರೆ ಕಾದಂಬರಿಗಾರ್ತಿ ಜಾಣ್ಮೆಯಿಂದ ಕಟ್ಟಿಕೊಟ್ಟಿರುವ ಕಾಲ್ಪನಿಕ-ಜಾನಪದೀಯ ಪರಿವೇಷ, ಎಂಥ ಕಥೆಯನ್ನೂ ಸಂಭವನೀಯವಾಗಿಸಿಬಿಡುವ ಸಾಧ್ಯತೆಯನ್ನು ಮೈಗೂಡಿಸಿಕೊಂಡುಬಿಟ್ಟಿದೆ!
’ಮಾರ್ಕೋಲು’ ವಿಗೆ ಮರಳುವುದಾದರೆ: ಕಾದಂಬರಿ ಆರಂಭವಾಗುವುದು ಕಥಾನಾಯಕಿ ನೀಲಾಂಬಿಕೆಯ ವಿವಾಹದ ಸನ್ನಿವೇಶದಿಂದ. ಹರಿಹರನೆಂಬ ಯುವಕನೊಂದಿಗೆ ತನ್ನ ಮದುವೆಯಾಗುತ್ತಿರುವ ಈ ಸಂಭ್ರಮದ ಕ್ಷಣದಲ್ಲೇ ಹಳವಂಡಕ್ಕೆ ಜಾರುವ ನೀಲಾಂಬಿಕೆಯ ಒಳಗಣ್ಣಿನೆದುರು ಕಳೆದ ಹಲವರ್ಷಗಳ ನೆನಪುಗಳ ಮೆರವಣಿಗೆ ಶುರುವಾಗಿ, ಅದು ಹಲವಾರು ಘಟ್ಟಗಳನ್ನೆಲ್ಲಾ ಕ್ರಮಿಸಿಕೊಂಡು ಮರಳಿ ಲಗ್ನದ ಮಂಟಪಕ್ಕೆ ನಡೆದು ನಂತರ ಬಲು ಶೀಘ್ರವಾಗಿ ಶಿಖರದತ್ತ ಧಾವಿಸುತ್ತದೆ!
ನೀಲಾಂಬಿಕೆಯ ತಾಯಿ ವಿಧಿಯಮ್ಮ ಹುಟ್ಟಿದ ಮಕ್ಕಳ ಹಣೆಬರಹವನ್ನು ಅವರ ಪೂರ್ವ ಕರ್ಮಾನುಸಾರವಾಗಿ ಬರೆಯುವ ವಿಶೇಷ ಶಕ್ತಿಯನ್ನು ಪಡೆದಿದ್ದು, ಅದೇ ಕಾಯಕದಲ್ಲಿಯೇ ತೊಡಗಿದ್ದಾಳೆ ಕೂಡಾ. ತನ್ನ ಇಬ್ಬರು ಮಕ್ಕಳಾದ ಕನಕಾಂಬಿಕೆ ಹಾಗೂ ನೀಲಾಬಿಕೆಯರ ಹಣೆಬರಹವನ್ನು ವಿಧಿಯಮ್ಮ ಬರೆದಿರುವುದು ಹೀಗೆ: ’ಹಿರಿಯ ಮಗಳು ಕನಕ ಪೂರ್ವದಿಕ್ಕಿನಿಂದ ಕುದುರೆಯ ಮೇಲೇರಿ ಬರುವ ಶ್ರೀಮಂತ ಸರದಾರನನ್ನು ಮದುವೆಯಾಗಿ ನಾಲ್ಕು ಮಕ್ಕಳನ್ನು ಪಡೆದು ಸುಖವಾಗಿರುತ್ತಾಳೆ; ಕಿರಿಯ ಮಗಳು ನೀಲಾಂಬಿಕೆ ಮದುವೆಗೆ ಮುನ್ನವೇ ಮಗುವನ್ನು ಹೆತ್ತು ಆ ಮಗುವನ್ನೇ ಮುಂದೆ ವಿವಾಹವಾಗುತ್ತಾಳೆ!’ ಈಡಿಪಸ್ ಕಥೆಗೂ ಮಾರ್ಕೋಲು ಕಥೆಗೂ ಸಾಮ್ಯ ಇರುವುದೇ ಈ ಒಂದು ದುರಂತದ ಘಟನೆಯಲ್ಲಿ.
ವಿಧಿಯಮ್ಮನ ಪಾತ್ರಕ್ಕೆ ಸಮಾನಾಂತರವಾಗಿ ಕಾದಂಬರಿಯಲ್ಲಿ ಮತ್ತೊಂದು ಪಾತ್ರ ಬರುತ್ತದೆ. ಅದೇ ದ್ಯಾವಮ್ಮನ ಪಾತ್ರ. ಮಾಯಾ ಕನ್ನಡಿಯೊಂದರ ನೆರವಿನಿಂದ ಭೂತ-ಭವಿಷ್ಯತ್ ಗಳನ್ನು ನೋಡಬಲ್ಲ ಅತಿಮಾನುಷ ಸಾಮಾರ್ಥ್ಯ ಇರುವಂಥವಳು ದ್ಯಾವಮ್ಮ. ವಿಧಿಯಮ್ಮ ದ್ಯಾವಮ್ಮರ ಪಾತ್ರಗಳನ್ನು ಪರಿಭಾವಿಸಿ ಅರ್ಥೈಸಿರುವ ಬಗೆಯೇ ಕಾದಂಬರಿಯಲ್ಲಿ ವಿಶೇಷವಾಗಿ ಗಮನ ಸೆಳೆಯುವಂತದು. ಅತ್ಯಂತ ಕುಶಲತೆಯಿಂದ, ಜಾಣ್ಮೆಯಿಂದ ಈ ಪಾತ್ರಗಳ ಸುತ್ತಲೇ ಕಥಾಕಟ್ಟಡದ ಘಟನಾವಳಿಗಳ ಇಟ್ಟಿಗೆಗಳನ್ನು ಜೋಡಿಸುತ್ತಾ ಹೋಗುತ್ತಾರೆ ಆಶಾ ಅವರು. ವಿಧಿಯಮ್ಮ-ದ್ಯಾವಮ್ಮ ಇಬ್ಬರೂ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ಪಡೆದಿರುವ ಸಾಧಕಿಯರೇ ಆಗಿದ್ದರೂ ಇಬ್ಬರ ನಿಲುವುಗಳಲ್ಲಿಯೂ, ಧೋರಣೆಗಲಲ್ಲಿಯೂ ಸಾಕಷ್ಟು ಭಿನ್ನತೆ ಇದೆ. ವಿಧಿಯಮ್ಮ ವಿಧಿಯ ಪಾರಮ್ಯವನ್ನು ನಂಬುವವಳು. ’ನಾವಂದುಕೊಂಡಂಗೆಲ್ಲಾ ಎಲ್ಲಿ ನಡೀತದೆ ಜಗತ್ತಿನಾಗೆ? ಏನೋ ಹುಚ್ಚು… ನಾಲ್ಕು ದಿನ ಕುಣೀತವೆ… ಕಾಲಿನಾಗಿನ ಗೆಜ್ಜೆ ಕಳ್ಕಂಡಾಗ ಕುಣಿತ ತಾನಾಗೇ ನಿಲ್ತದೆ’- ಇದು ಅವಳ ನಿಲುವು. ಈ ನಿಲುವಿನ ಪ್ರತಿಪಾದನೆಗೆ, ವಿಧಿಯ ಕ್ರೌರ್ಯವನ್ನು ತಪ್ಪಿಸಿಕೊಳ್ಳಲಾಗದ ಅದರ ಬಲೆಯನ್ನೂ ವಿಜೃಂಭಿಸುವ ಕೆಲ ಉಪಕಥೆಗಳು ವಿಧಿಯಮ್ಮನ ಪ್ರಕರಣಗಳಲ್ಲಿ ಬರುತ್ತವೆ. ’ಯಾವ ಕಾಲಕ್ಕೆ ಯಾರಿಗೆ ಏನಾಗಬೇಕು ಅಂತ ಇರ್ತದೋ ಅದ್ನ ತಪ್ಪಿಸಾಕೆ ಯಾರಿಂದಲೂವೆ ಸಾಧ್ಯ ಆಗದು’- ಇದು ವಿಧಿಯಮ್ಮನ ಕಠೋರ ನಿಲುವು-ನಂಬಿಕೆ.
ಅದೇ ದ್ಯಾವಮ್ಮ ಕೊಂಚ ಆಧುನಿಕ ಮನೋಧರ್ಮದವಳು; ’ಮನುಷ್ಯನ ಪ್ರಯತ್ನದಿಂದ, ಯುಕ್ತಿಯಿಂದ ಹಣೆಬರಹವನ್ನೂ ಮೀರಬಹುದು’ ಎಂದು ನಂಬಿರುವವಳು. ಇವಳ ನಂಬಿಕೆಯನ್ನು ಪುಷ್ಟೀಕರಿಸುವಂತಹ ಒಂದಷ್ಟು ಉಪಕಥೆಗಳು ಇವಳ ಪ್ರಕರಣಗಳಲ್ಲಿ ಬರುತ್ತವೆ. ತಾಯಿಯಿಂದ ತನ್ನ ಹಣೇಬರಹದ ವಿಷಯವನ್ನು ನೀಲಾಂಬಿಕೆ ಈಗಾಗಲೇ ಅರಿತುಕೊಂಡು ವಿಚಲಿತಳಾಗಿದ್ದಾಳೆ. ಚಿಂತೆಯಲ್ಲಿ ಮುಳುಗಿರುವ ಅವಳಿಗೆ ಆಶಾಕಿರಣದಂತೆ ಭಾಸವಾಗುವುದು, ಹೊಸ ಭರವಸೆ ಟಿಸಿಲೊಡೆಯುವುದು ದ್ಯಾವಮ್ಮ ಹೇಳುವ ಕಥೆಗಳಿಂದಲೇ. ’ನಾನು ಹಣೆಬರಾನ ಮೀರಿ ಬದುಕತೀನಿ. ಅದರ ದಾರಿಯಾಗೆ ನಾ ಎಂದಿಗೂವೆ ಹ್ವಾಗಲ್ಲ, ನಾನು ಹ್ವಾಗಾ ದಾರಿಗೆ ವಿಧಿಯೇ ಬರಬೇಕು’ ಎಂಬ ಸಂಕಲ್ಪ ನೀಲಾಂಬಿಕೆಯದು. ’ಒಟ್ಟಾರೆ ಏನು ನಡೀಬೇಕು ಅಂತ ಹಣೆಬರದಾಗೆ ಬರೆದಿದ್ರೂನೂವೆ ಅದನ್ನ ಜಾಣತನದಿಂದ ನಿವಾರಿಸ್ಕೋಬೋದು’ ಅನ್ನುವ ಒಂದು ಹೊಳಹನ್ನು ದ್ಯಾವಮ್ಮನ ಕಥೆಗಳಿಂದ ಗ್ರಹಿಸಿದ್ದಾಳೆ ನೀಲೆ.
ಹೀಗೆ ವಿಧಿಯಮ್ಮ-ದ್ಯಾವಮ್ಮ ಎಂಬೆರಡು ಮುಖ್ಯಪಾತ್ರಗಳು ಕಾದಂಬರಿಯಲ್ಲಿ ಒಂದು ನಾಣ್ಯದ ಎರಡು ಮುಖಗಳಂತೆ ಕಾಣಿಸಿಕೊಳ್ಳುತ್ತವೆ. ಒಂದು ರೀತಿಯಲ್ಲಿ ವಿಧಿಯಮ್ಮನ alter ego ದ್ಯಾವಮ್ಮ ಎನ್ನಬಹುದೇನೋ. ಒಂದು ರೀತಿಯ ’ದ್ವಿಮುಖೀ ವ್ಯಕ್ತಿತ್ವ’ ದಂತೆ ಭಾಸವಾಗುವ ಈ ಎರಡು ಪಾತ್ರಗಳ ಬದುಕು-ವ್ಯಕ್ತಿತ್ವ-ನಂಬಿಕೆ-ಘಟನೆಗಳನ್ನು juxtapose ಮಾಡುವ ಮೂಲಕ ಅನನ್ಯವಾದ ಅನುಭವವನ್ನು ಕಟ್ಟಿಕೊಡುತ್ತಾರೆ ಆಶಾ ಅವರು. ಯಾವ ವಿಜೃಂಭಣೆಯತ್ತಲೂ ವಾಲದೆ ಸಮಚಿತ್ತ-ಸಂಯಮದಿಂದ, ತಮ್ಮ ವೈಯಕ್ತಿಕ ನಿಲುವುಗಳ ಪ್ರತಿಪಾದನೆಯ ಸುಳಿವೂ ದಾಖಲಾಗದ ಎಚ್ಚರದಿಂದ, ನಂಬಿಕೆ-ಅಪನಂಬಿಕೆ-ಮೂಢ ನಂಬಿಕೆಗಳ ಈ ಒಂದು ಸೂಕ್ಷ್ಮವಲಯದ ಪದರಗಳನ್ನು ಬಿಡಿಸುತ್ತಾ ಹೋಗುತ್ತಾರೆ ಲೇಖಕಿ.
ನೀಲಾಂಬಿಕೆಯ ದುರಂತ ಈಡಿಪಸ್ ದೊರೆಯ ದುರಂತದಷ್ಟು ತೀವ್ರವೂ ಮರ್ಮಭೇದಕವೂ ಅಲ್ಲದಿರಬಹುದು; ತನ್ನ ದುರಂತ ಕಥೆ ಹೇಗೆ ರೂಪುಗೊಳ್ಳುತ್ತದೆಂಬ ಅರಿವಿರುವ ನೀಲಾಂಬಿಕೆ ಮದುವೆಯೇ ಆಗದಿದ್ದರೆ ದುರಂತ ತಪ್ಪಿಬಿಡುತ್ತಿತ್ತಲ್ಲವೇ ಎಂದು ವಾದಿಸಲೂ ವೇದಿಕೆ ಇರಬಹುದು. ಬಹುಶಃ ಈ ಒಂದು ಉಡಾಫೆ ಅಥವಾ ’ತನ್ನ ಗಂಡನಾಗುವವ ಕಾಡಿನಲ್ಲಿ ತಾನು ಬಿಸುಟು ಬಂದ ಮಗುವಾಗಿರಲು ಸಾಧ್ಯವೇ ಇಲ್ಲ’ ವೆಂಬ ದೃಢ ನಂಬಿಕೆ (ಹುಸಿ ನಂಬಿಕೆ)- ಇದೇ ಆ ಪಾತ್ರದ Hamartia- ದುರಂತ ದೋಷ ಎಂದುಕೊಳ್ಳಬಹುದೇನೋ.
ಅದೇನೇ ಆದರೂ, ದುರಂತಕ್ಕಿಂತಲೂ ದುರಂತದ ನಿವಾರಣೆ, ಅಥವಾ ಧನಾತ್ಮಕ ಬದುಕಿನ ನಿರೀಕ್ಷ್ಣೆಗಳು ಲೇಖಕಿಗೆ ಪ್ರಮುಖಾತಿ ಪ್ರಮುಖ ಸಂಗತಿಗಳು. ಅಂತೆಯೇ ನೀಲಾಂಬಿಕೆಯೂ ಹರಿಹರನೂ ದುರಂತಗಳತ್ತ ವಾಲುತ್ತಿರುವಾಗಲೇ ಅವರನ್ನು ಕತೆಗಾರ್ತಿ ಹಿಡಿದೆಳೆದು ತಂದು ಸುರಕ್ಷಿತ ದಡ ಮುಟ್ಟಿಸುತ್ತಾಳೆ! ಕಾದಂಬರಿಯ ಈ ಸ್ವಾರಸ್ಯಕರ ಅಂತ್ಯದ ಬಗ್ಗೆ ವಿವರವಾಗಿ ಹೇಳಿಬಿಟ್ಟರೆ ಓದಿ ಅನುಭವಿಸುವ ಸುಖಕ್ಕೆ ಕಲ್ಲು ಹಾಕಿದಂತಾಗುತ್ತದೆಂದು ಇಲ್ಲಿಗೇ ಇದನ್ನು ನಿಲ್ಲಿಸುತ್ತೇನೆ.
’ನೀನು ಬರೆಯೋದು ಹಾಳೆ ಮೇಲೆ; ನಾನು ಬರೆಯೋದು ಹಣೆ ಮೇಲೆ’, ’ಹಣೇಬರಾನ ಬದಲಾಯ್ಸಕ್ಕೆ ಆದ್ರೂ ಆಗಬೈದು, ಒಟ್ನಲ್ಲಿ ಎದುರಿಸಿ ನಿಲ್ಲುವಂತ ಗುಂಡಿಗೆ ಬೇಕು. ಆಗ ಆ ವಿಧಿಗೆ ಮಾರ್ಕೋಲು ತಕ್ಕಂಡು ಬಡಿಬೋದು’ - ಇವು ಕಾದಂಬರಿಯ ಕಾಡುವ ಸಾಲುಗಳು, ಒಂದು ರೀತಿಯಲ್ಲಿ ಇತ್ಯಾತ್ಮಕವಾಗಿ ಲೇಖಕಿಯ ಧೋರಣೆ- ಮನೋಧರ್ಮಗಳಿಗೂ ಕನ್ನಡಿ ಹಿಡಿಯಬಲ್ಲಂಥ ಸಾಲುಗಳು.
ಕಾದಂಬರಿಯ ಎರಡು-ಮೂರು ಮುಖ್ಯ ಪಾತ್ರ ಪೋಷಣೆಯತ್ತ ಮಾತ್ರ ನನ್ನ ಗಮನವನ್ನು ಕೇಂದ್ರೀಕರಿಸಿದ್ದೇನೆ. ಇದಲ್ಲದೆ ಅನೇಕ ಕಥೆ-ಉಪಕಥೆಗಳು, ಸ್ವಾರಸ್ಯಕರ ಪಾತ್ರಗಳು-ಸನ್ನಿವೇಶಗಳು ಕಾದಂಬರಿಯ ಹೂರಣದಲ್ಲಿ ಅಡಕಗೊಂಡಿವೆ. ಒಂದು ಓದಿಗೆ ದಕ್ಕದಷ್ಟು ವಿವರಗಳು ದಟ್ಟವಾಗಿ ಕೃತಿಯ ಹರಹಿನಲ್ಲಿ ತುಂಬಿಕೊಂಡಿವೆ.”
ಖ್ಯಾತ ಬರಹಗಾರರಾದ ಡಾ. ಬರಗೂರು ರಾಮಚಂದ್ರಪ್ಪ, ಚಿದಾನಂದ ಸಾಲಿ, ಶ್ರೀಮತಿ ಸುನಂದಾ ಕಡಮೆ ಮೊದಲಾದವರು ಈ ಕಾದಂಬರಿಗೆ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ.