ಮಾರ್ಕ್ಸ್, ಎಡಪಂಥ ಮತ್ತು ಎಡಕ್ಕೆ ಓಡಿದ ಇರುವೆ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೫
(೧೬)
೧೯೯೨ರಲ್ಲಿ ಕಲಾಭವನದಲ್ಲಿ ಕಲಾಇತಿಹಾಸವನ್ನು ಎಂ.ಎಫ್.ಎ ಸ್ನಾತಕೋತ್ತರ ವ್ಯಾಸಂಗದ ವಿಷಯವಾಗಿ ಆಯ್ಕೆಮಾಡಿಕೊಂಡಿದ್ದೆ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಕಾಲೇಜಿನಲ್ಲಿ ಡಿಗ್ರಿಯನ್ನು (ಬಿ.ಎಫ್.ಎ) ಚಿತ್ರಕಲೆಯಲ್ಲಿ ಕಲೆತಿದ್ದರಿಂದ ನನಗಾದ ಮೊದಲ ಉಪಯೋಗವೆಂದರೆ -- ಕಲಾಭವನದಲ್ಲಿ ಚಿತ್ರಬಿಡಿಸುವ ತೊಂದರೆ ಇರಲಿಲ್ಲ. ಏಕೆಂದರೆಃ (೧) ಚಿತ್ರಕಲೆಯು ಅದಾಗಲೇ ಅಭ್ಯಾಸವಾದಂತಾಗಿತ್ತು. ಮತ್ತು
(೨) ಈಗ ಚಿತ್ರಬಿಡಿಸುವ ಬಲವಂತವಿರಲಿಲ್ಲ.
ಆದರೆ ಅಲ್ಲಾದ ದುರುಪಯೋಗವೆಂದರೆ ಓದಿನದ್ದು!
ದಿನನಿತ್ಯ ಪತ್ರಿಕೆಯನ್ನು ಸಾಧ್ಯಂತವಾಗಿ ಓದುವ ಅಭ್ಯಾಸವಿಲ್ಲದವರನ್ನು ಕಲಾವಿದರು ಎನ್ನುತ್ತೇವೆ. ಆದ್ದರಿಂದ ಈಗಲೂ, ಇಪ್ಪತ್ತು ವರ್ಷದ ನಂತರವೂ, ಕಲಾವಿದರಿಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವು ಅತಿ ಕಡಿಮೆಯೆ. ಹೊಸ ಮಾಧ್ಯಮಗಳಾದ ಮೊಬೈಲು, ಡಿಜಿಟಲ್ ಕ್ಯಾಮರ, ವೆಬ್ ಪ್ರಪಂಚ, ಇಂಟರ್ನೆಟ್ಗಳನ್ನು 'ತಾಂತ್ರಿಕ'ವಾಗಿ ಕಲಾವಿದರು ಚೆನ್ನಾಗಿ ಪರಿಚಯ ಮಾಡಿಕೊಂಡಿರುತ್ತಾರೆಯೇ ಹೊರತು ಅದರೊಳಗಿನ 'ಕಲಾತ್ಮಕ ಸಾಧ್ಯತೆ'ಯನ್ನಲ್ಲ!
ಅಷ್ಟಿದ್ದರೂ ಎಂ.ಎಫ್.ಎ ಕಲಾಇತಿಹಾಸದಲ್ಲಿ, ಎರಡು ವರ್ಷದ ನಂತರ, ನಾನು ಮೊದಲನ ದರ್ಜೆ ಪಡೆದು, ಇಂಗ್ಲೀಷಿನಲ್ಲಿ ಹೇಳುತ್ತಾರಲ್ಲ "ಹಾರುವ ಬಣ್ಣಗಳೊಂದಿಗೆ" (ಫ್ಲೈಯಿಂಗ್ ಕಲರ್ಸ್) ತೇರ್ಗಡೆಗೊಂಡೆ. ಏಕೆಂದರೆ, ಯಾವುದೋ ಟಿವಿ ಆಡ್ನಲ್ಲಿ ಬರುತ್ತದಲ್ಲ, ಹಾಗೆ, ನನ್ನ ಕ್ಲಾಸಿನಲ್ಲಿ ನಾನೊಬ್ಬನೇ ವಿದ್ಯಾರ್ಥಿ ಇದ್ದದ್ದು!! ಮತ್ತು ಕಲಾಭವನದಲ್ಲಿ ಯಾರನ್ನಾದರೂ ಫೇಲ್ ಮಾಡುವ ಅಭ್ಯಾಸವೇ ಇಲ್ಲವಂತೆ, ಜಾಗದ ಸಮಸ್ಯೆಯಿಂದಾಗಿ!
ಓದು ಬರಹ ಹಾಗೂ ಮಾತಿನ ಅಭ್ಯಾಸವಿಲ್ಲದವರು, ಅದಕ್ಕೆ ಒಗ್ಗದವರು, ಬಹುಪಾಲು ಎಸ್.ಎಸ್.ಎಲ್.ಸಿ ಫೈಲ್ ಆದವರು, ಕಲಾಶಾಲೆಗಳನ್ನು ಸೇರುತ್ತಿದ್ದರು ಆಗ. ಈಗ ಪರವಾಗಿಲ್ಲ. ಪಿ.ಯು.ಸಿ ಫೈಲ್ ಆದವರು ಮಾತ್ರ ಸೇರಬಯಸುತ್ತಾರೆ. ಆದರೆ ಈಗ ಕಲಾಶಾಲೆ ಸೇರಲು ಕನಿಷ್ಠ ಅರ್ಹತೆಯೇ 'ಪಿ.ಯು.ಸಿ. ಪಾಸ್' ಆಗಿರುವುದರಿಂದ ಮಿನಿಮಮ್ ಅಂಕ ಗಳಿಸಿರುವವರೇ ಹೆಚ್ಚು. ನನ್ನ ಬಹುಪಾಲು ಸ್ನೇಹಿತರು, ನನ್ನನ್ನೂ ಒಳಗೊಂಡಂತೆ, ಅಂತಹ ಜಾಯಮಾನಕ್ಕೆ ಸೇರಿದವರೇ. ಕಲಾಭವನದ ಮೊದಲ ವರ್ಷವಂತೂ ನನಗೆ 'ಚಿತ್ರ'ಹಿಂಸಾತ್ಮಕವಾಗಿತ್ತು. ಸ್ನಾತಕಪೂರ್ವ ಕಲಾಇತಿಹಾಸದ ವಿದ್ಯಾರ್ಥಿಗಳಲ್ಲಿ ಬಹುಪಾಲು ಬೆಂಗಾಲಿಗಳು ಮಾತು, ಓದು, ಬರಹಗಳಲ್ಲಿ ಪಂಟರುಗಳಾಗಿದ್ದರು. ಜೊತೆಗೆ ಎರಡೂ ತರಹದ ಮಾರ್ಕ್ಸಿಸ್ಟ್ ಗಳಾಗಿದ್ದರು.
(೧) ಎಡಪಂಥದ ಬಗ್ಗೆ ದೈವಭಕ್ತಿಯಷ್ಟು ನಿಷ್ಠೆ ಮತ್ತು ಎಲ್ಲ ಕ್ಲಾಸಿನಲ್ಲೂ ಬೆಂಗಾಲಿಳೇ ಹೆಚ್ಚು 'ಮಾಕ್ಸ್' ಗಳಿಸಿ, ಮೊದಲು ಬರಬೇಕೆನ್ನುವುದು ಅಲ್ಲಿನ ವಿಧಿ (ಮತ್ತು ಗುರು-ಶಿಷ್ಯರುಗಳ) ನಿಯಮವಾಗಿತ್ತು.
(೧೭)
ನನ್ನೊಂದಿಗೆ ಕಾಲುಕೆರೆದುಕೊಂಡು ಜಗಳಕ್ಕಿಳಿಯುತ್ತಿದ್ದರು ಅವರುಗಳು, ವಿಷಯದ ಚರ್ಚೆಯ ಹೆಸರಿನಲ್ಲಿ. ನನಗದು ಬಹಳ ಉಪಯೋಗಕ್ಕೆ ಬಂದಿತು-ಮಾತು ಕಲಿಯುವಲ್ಲಿ. ಅಂತಹ ನೂರಾರು ಜಗಳಗಳ ಒಂದು ಸ್ಯಾಂಪಲ್:
"ಕ್ಯೂಬಾದ ಜನ, ಶೆಗುವಾರರ ಐಡಿಯಾಲಜಿ ಗೊತ್ತ ನಿನಗೆ ಅನಿಲ್ ದ?" ಎನ್ನುತ್ತಿದ್ದ ಕಲಾಇತಿಹಾಸದ ಜ್ಯೂನಿಯರ್ ಶಂತನು ಲೋದ್.
"ಇಲ್ಲ! ಆದ್ರೆ ಕಾಗೋಡು ಸತ್ಯಾಗ್ರ ಗೊತ್ತು."
ಶಂತನು ಮತ್ತು ಮಾರ್ಕ್ಸಿಸ್ಟ್ ಗುರು ಕ್ಯಾಪ್ಟನ್ ದಾ ಎಂಬ 'ಮತ್ತೊಂದಿನ್ಯಾವ ಹೆಸರೂ ಇಲ್ಲದ ದಾದಾ'-ಇಬ್ಬರೂ--ಒಬ್ಬರ ಮುಖ ಒಬ್ಬರು ನೋಡುತ್ತ ಮುಸಿಮುಸಿ ನಗುತ್ತಿದ್ದರು.
"ಮತ್ತೆ ಕಲಾ ಇತಿಹಾಸ ಹೇಗೆ ಓದ್ತೀಯ? ಮಾರ್ಕ್ಸಿಸ್ಟ್ ಮ್ಯಾನಿಫೆಸ್ಟೋ ಗೊತ್ತೆ?"
"ಇಲ್ಲ. ಆದ್ರೆ ಮ್ಯಾನಿಫೆಸ್ಟೋ ಒಂದು ಸಂಪ್ರದಾಯವಾಗಿ ಆರಂಭವಾದುದು ದಾದಾಯಿಸಂ ಎಂಬ ಕಲಾಪಂಥದಿಂದ ಎಂದು ಗೊತ್ತು."
"ಏನ್ ಪ್ರಯೋಜನ. ಕಲೆ ಅನ್ನೋದು ಜನಪರವಾಗಿರಬೇಕು. ಜನಸಾಮಾನ್ಯರನ್ನು ತಲುಪಬೇಕು. ತಲುಪದಿದ್ದರೆ ಅದು ಕಲೆಯೇ ಅಲ್ಲ."
"ಹಾಗೆಂದು ಭಾವಿಸಿದ ರಷ್ಯನ್ ಎಡಪಂಥೀಯರು ಇಪ್ಪತ್ತನೇ ಶತಮಾನದ ರಷ್ಯದ ಕಲೆಯನ್ನು ಕುಲಗೆಡಿಸಿಟ್ಟರು. ಅಲ್ಲಿಂದ ಬಂದ ಅತ್ಯುತ್ತಮ ದೃಶ್ಯಕಲಾವಿದರೆಲ್ಲರೂ ಆ ದೇಶದಿಂದ ಓಡಿಸಲ್ಪಟ್ಟವರೇ ಅಲ್ಲವೆ-ಮಾರ್ಕ್ ಶಗಾಲ್, ಆಂಥೋನ್ ಪೆವ್ಸ್ನರ್, ನಾಮ್ ಗಾಬೋ, ಕ್ಯಾಂಡಿನ್ಸ್ಕಿ ಮುಂತಾದವರು?" ಎಂದೆ.
ನಖಶಿಕಾಂತ ಉರಿದುಹೋಯಿತು ಅವರಿಗೆ. ಉರಿದದ್ದು ಶಂತನುವಿನ ನಖ, ಕ್ಯಾಪ್ಟನ್ದಾನ ಶಿಕ!
"ಹಾಗಿದ್ದರೆ ಕಲೆಯ ಉದ್ದೇಶವೇನು, ನಿನ್ನ ಪ್ರಕಾರ?" ಎಂದ ಕ್ಯಾಪ್ಟನ್ ದಾ.
ಆಗಲೇ ಎರಡು ರೌಂಡ್ ಮಣ್ಣಿನ ಮಡಕೆಯ ಚಹ ಸೇವಿಸಿಯಾಗಿತ್ತು. ಬಹುಪಾಲು ಸೇವನೆ ಅವರದ್ದು, ಕಾಸು ನನ್ನದು. ಅಂದರೆ ಕ್ಯಾಂಟಿನ್ ಮಾಮ ಮೊದಲು ನನ್ನ ಲೆಕ್ಕಕ್ಕೆ, ಆನಂತರ ಅವರಿಬ್ಬರ ಲೆಕ್ಕಕ್ಕೆ ಎರಡೆರೆಡು ಚಹಾದ ಖಾತೆ ತೆರೆದಿದ್ದ, ಎಂದಿನಂತೆ.
ಈಗ ಮಾಮಾನನ್ನೇ ತೆಗೆದುಕೊಳ್ಳಿ. ಆತ ಮಾರ್ಕ್ಸಿಸ್ಟ? ಕ್ಯಾಪಿಟಲಿಸ್ಟ? ಹೇಳಿ," ಎಂದೆ.
"ಆತ ಸಂತಾಲಿ ಬುಡಕಟ್ಟಿನವನು. ತಲೆತಲಾಂತರದಿಂದ ಆತನಂತಹವರಿಗೆ ಮಧ್ಯಮವರ್ಗ ಅನ್ಯಾಯವೆಸಗಿದೆ. ಆದ್ದರಿಂದ ಆತ ಆರು ಮಡಿಕೆ ಚಹಾಕ್ಕೆ ಹದಿನೆಂಟು ಚಹಾದ ಚಾರ್ಜ್ ಮಾಡಿ ನಮ್ಮ ಮೂವರಿಗೂ ಆ ಖರ್ಚನ್ನು ಭರಿಸುವಂತೆ ಮಾಡುವಲ್ಲಿ ಮಾರ್ಕ್ಸಿಸಂ ಗೆಲ್ಲುತ್ತದೆ. ಈತ ಮಾರ್ಕ್ಸಿಸ್ಟ್-ಮಾಮಾ," ಎಂದರವರಿಬ್ಬರೂ, ಒಕ್ಕೋರಲಿನಲ್ಲಿ.
"ಬಂಡವಾಳಶಾಹಿ ಮುಖವಾಡದ ಎಡಪಂಥೀಯ. ಅಂದ ಹಾಗೆ ಪ್ರಮುಖ ಮಾರ್ಕ್ಸ್ - ಪಂಡಿತರೆಲ್ಲ ಫ್ರಾನ್ಸ್ ಎಂಬ ಪ್ರಜಾಪ್ರಭುತ್ವವಾದಿ ದೇಶದಿಂದ ಹೇಗೆ ಬಂದರು? ಮತ್ತು ರಷ್ಯದಿಂದ ಏಕೆ ಬರಲಿಲ್ಲ? ಯೋಚಿಸಿ ನೋಡಿ. ವೈರುಧ್ಯವೆಂದರೆ ಮಾರ್ಕ್ಸ ವಾದವನ್ನು ಜೀವಂತವಾಗಿರಿಸುವಲ್ಲಿ ಬಂಡವಾಳಶಾಹಿಗಳು ಸಾಕಷ್ಟು ಎಚ್ಚರವಹಿಸಿದ್ದಾರೆ. ಗಾಂಧಿಯನ್ನು ಬಡತನದಲ್ಲಿರಿಸಲು ಸರ್ಕಾರ ಸಾಕಷ್ಟು ಖರ್ಚು ಮಾಡಿತು ಎಂಬಂತೆ ಇದು," ಎಂದೆ.
"ಅದೆಲ್ಲ ಬೇಡ. ನೀನು ಏನೇ ಹೇಳು. ಮಾರ್ಕ್ಸಿಸಂ ಜೀತೇ ಹೋಬೆ (ಚಿರಾಯು) ಎಂದು ಹೇಳದ ನೀನು ಏನೇ ಹೇಳು, ಅದನ್ನು ಹೇಳುವ ಮುನ್ನವೇ ಅದನ್ನು ಧಿಕ್ಕರಿಸುತ್ತೇವೆ," ಎಂದರಿಬ್ಬರೂ ಜೋಡಿಜೀವಗಳಂತೆ.
ಮಾತಿನ, ಮಾತುಗಳ ಮಧ್ಯೆ ಬಿಸಿ ಚಹಾ, ಅದಕ್ಕಿಂತಲೂ ಬಸಿಬಿಸಿ ವಾಗ್ವಾದಗಳು ಮೊದಲು ಕತ್ತಲಾಗುವವರೆಗೆ ನಂತರ ಕತ್ತಲಾದ ಮೇಲೆಯೂ ಮುಂದುವರೆಯುತ್ತಿದ್ದುದು ಹೀಗೆ.ಸಂಪದದಲ್ಲಾಗುವಂತೆ, ಕಲಾಭವನದ ವಾದ-ವಾಗ್ವುದ್ಯಗಳೆಲ್ಲ ವೃತ್ತಾಕಾರದಲ್ಲಿರುತ್ತಿದ್ದವು. ಎಲ್ಲಿಂದ ಆರಂಭಗೊಳ್ಳುತ್ತಿತ್ತೋ ಅಲ್ಲಿಗೇ ಬಂದು ನಿಂತುಕೊಳ್ಳುತ್ತಿತ್ತು ಎಂದು ಬರೆದಾಕ್ಷಣ ಬರಬಹುದಾದ ಪ್ರತಿಕ್ರಿಯೆಯೂ ಸಹ ವೃತ್ತಾಕಾರವಾಗುವ ವ್ಯಂಗ್ಯೋಕ್ತಿಯು ನನಗೆ ಮಾತಿನ ಮಧ್ಯೆ ಮೌನದ ಪ್ರಾಮುಖ್ಯತೆಯನ್ನು ಸಾಕಷ್ಟು ಕಲಿಸಿಬಿಟ್ಟಿತು.
(೧೮)
ನಿನ್ನ ಪ್ರಕಾರ ಕಲೆಯ ಉದ್ದೇಶವೇನು?" ಎಂದವರಿಬ್ಬರೂ ನೂರೊಂದನೇ ಬಾರಿ, ಮತ್ತೆ ಕೇಳುವ ಹಠ ಹಿಡಿದುಬಿಟ್ಟಿದ್ದರು.
"ಕಲೆಗೆ ಉದ್ದೇಶವಾದರೂ ಏಕಿರಬೇಕು? ಕಲೆಯೇ ಒಂದು ಉದ್ದೇಶವಲ್ಲವೆ?" ಎಂದು ನಾನು ಕಿಚಾಯಿಸಿದೆ.
"ಅರೆ!!" ಎಂದು ಹೃದಯಸ್ಥಂಭನವಾದಂತೆ ಉದ್ಘಾರ ತೆಗೆದರು, ಅವರಿಬ್ಬರೂ. "ಕಲೆಗೆ ಉದ್ದೇಶವೇ ಇಲ್ಲದಿದ್ದಲ್ಲಿ, ನೀನು ಕಲೆಯನ್ನು ಕಲಿಯಲೇಕೆ ಬಂದೆ?" ಎಂದು ಏಕವಚನಕ್ಕಿಳಿದುಬಿಡುತ್ತಿದ್ದರು.
"ಉದ್ದೇಶವೇನೆಂದು ಅರಿಯುವುದಕ್ಕೇ ಇಲ್ಲಿ ಬಂದಿದ್ದೇನೆ! ಮೊದಲೇ ಗೊತ್ತಿದ್ದಲ್ಲಿ, ಕಲಿವ ಅವಶ್ಯಕತೆಯಾದರೂ ಏನು?" ಎಂದು ಪಾಟಿಸವಾಲು ಹಾಕಿದೆ.
ಬೆಂಗಾಲಿಯಲ್ಲಿ ಅವರಿಬ್ಬರೂ ಮಾತನಾಡಿಕೊಳ್ಳತೊಡಗಿದರು. ಗಡ್ಡ ಬಿಡುವುದು, ಮೀನು ತಿನ್ನುವುದು, ಬುದ್ಧಿವಂತರೆನಿಸಿಕೊಳ್ಳುವುದು, ಮಾರ್ಕ್ಸಿಸ್ಟ್ ಗಳಾಗಿರುವುದು-ಈ ಮೂರು ಅಂಶಗಳು ಬೆಂಗಾಲಿಗಳ ಮತ್ತು ಕೇರಳದವರಿಬ್ಬರು ಮುಖ್ಯಾಂಶವೆಂದುಕೊಂಡಿದ್ದೆವು. ಇಬ್ಬರಿಗೂ ವಿಕ್ಷಿಪ್ತ ಸಾಮ್ಯತೆ ಇತ್ತು. ಜೊತೆಗೆ, 'ಎದುರಿಗಿರುವವರು ಬೇರೆ ಯಾವ ಜಗತ್ತಿನವರಾದರೂ ಅವರಿಗೆ ಬೆಂಗಾಲಿ ಮತ್ತು ಮಲಯಾಳಂ ಬರುತ್ತದೆ' ಎಂಬಂತೆ ತಮ್ಮ ಮಾತೃಭಾಷೆಯಲ್ಲಿ ಮಾತನಾಡಿಸತೊಡಗುತ್ತಾರೆ.
"ನೀನು ಸ್ವತ: ಮಲ್ಲು ಅಥವ ಬೆಂಗಾಲಿಯಂತೆ ಕಾಣುತ್ತೀಯ. ಓಟೋ ಹಮಾರ್ ಐಡಿಯಾಲಜಿ ಬುಸ್ತೆಪಾಚಿನ ಎಂದು ಮತ್ತೆ ಅವರ ಭಾಷೆಗೆ ದಾಟಿಬಿಡುತ್ತಿದ್ದರು-'ಇವನಿಗೇನೂ ಅರ್ಥವಾಗುವುದಿಲ್ಲ' ಎಂಬರ್ಥ ಬರುವಂತೆ.
"ಮಾರ್ಕ್ಸಿಸಂ ಅನ್ನು ಅನುಸರಿಸದ ವ್ಯಕ್ತಿ ಪಶುಸಮಾನ. 'ಎಲ್ಲರೂ ಸಮ' ಎಂಬ ಸರಳ ಸತ್ಯವನ್ನು ಇವನಿಗೆ ಹೇಗೆ ಅರ್ಥಮಾಡಿಸುವುದು? ಎನ್ನುತ್ತ, ಇಂಗ್ಲೀಷಿನಲ್ಲಿ ನನ್ನ ಬಗ್ಗೆ ನನಗೆ ಹಾಗೂ ಕ್ಯಾಪ್ಟನ್ನದಾನಿಗೆ ಹೇಳುತ್ತಲೇ ಶಂತನು ಖಾಲಿಯಾಗಿದ್ದ ಮಣ್ಣಿನ ಲೋಟವನ್ನು ಕಟ್ಟೆಯ ಮೇಲೆ ಓಡಾಡುತ್ತಿದ್ದ ಇರುವೆ ಗೊದ್ದದೆ ಮೇಲೆ ತಿರುವು ಹಾಕಿಬಿಟ್ಟ!
"ಇದ್ಯಾವ 'ಸೀಮೆ' ಮಾರ್ಕ್ಸಿಸಂ ಕಣಯ್ಯ ನಿಂದು. ಪ್ರಾಣಿಹಿಂಸೆ ಮಹಾಪಾಪ ಎಂದ ಶಾಖಾಹಾರಿ ಬುದ್ಧನೇ ಇದಕ್ಕಿಂತಲೂ ಬೆಟರು. ಮಾರ್ಕ್ಸಿಸಂ ತನ್ನ ವಾದದಲ್ಲಿ ಬಳಸಲಾಗದ ತಾಂತ್ರಿಕತೆಯನ್ನು ಬುದ್ಧ ಅನುಷ್ಠಾನಗೊಳಿಸಿದ್ದಾನೆ. ಅದೇನೆಂದರೆ 'ಮೌನ'ದ ಮಹತ್ವವನ್ನು ಬಿಡಿಸಿಹೇಳಿದ್ದು. ಎಲ್ಲಕ್ಕೂ ಮಾತಿನ ಮೂಲಕ ಪರಿಹಾರವಿರುವುದಿಲ್ಲ. ಎಲ್ಲಿ ಮಾತು ಮುಗಿಯುತ್ತದೋ ಅಲ್ಲಿ ಮೌನ ಮಾತಾಗತೊಡಗುತ್ತದೆ. ನಿಮ್ಮ ವಾದದ ಭಾವತೀವ್ರತೆಯು ಮುಂದೆ ನಿಮ್ಮನ್ನು ಬಂದೂಕು ಹಿಡಿಯುವಂತೆಯೂ ಮಾಡಿಸಿಬಿಡುತ್ತದೆ. ಯಾವ ಸಂದರ್ಭದಲ್ಲೂ ಹಿಂಸೆಯು ಮೊದಲನೆಯದಾಗಿ ಹಿಂಸೆಯು ಹುಟ್ಟಿದ ಮೂಲವನ್ನೇ ನಾಶಪಡಿಸುತ್ತದೆ ಎಂಬ ಗಾಂಧಿ ಹೇಳಿಕೆ ತಿಳಿದಿಲ್ಲವೆ?!" ಎಂದು ಜೋರು ಮಾಡತೊಡಗಿದೆ.
ಮತ್ತೆ "ಏಟೊ ಬುಸ್ತೆಪಾಚಿನ" (ಇವನಿಗೇನು ಅರ್ಥವಾಗೋಲ್ಲ) ಎನ್ನುತ್ತಲೇ ಇದ್ದರವರಿಬ್ಬರು.
"ಎಲ್ಲ ಪ್ರಾಣಿಗಳಿಗೆ ಜೀವವಿಲ್ಲವೆ?" ಎಂದೆ, ಯಾವುದೋ ಎಳೆಯ ಜುಟ್ಟು ಹಿಡಿದಾಗಿದೆಯೆಂಬ ಸುಚನೆಯೊಂದಿಗೆ. ಇರುವೆ ಗಾಜಿನ ಲೋಟದೊಳಗೆ ತಡಬಡಾಯಿಸತೊಡಗಿತ್ತು.
"ಅಥವ ತಡಬಡಾಯಿಸುತ್ತಿದೆ ಎಂದು ನೀನೇ ಭಾವಿಸಿಕೊಂಡುಬಿಟ್ಟಿದ್ದೀಯ ಎಂದರು ಆ ಮನುಷ್ಯರು-ಮಾತ್ರ-ಮಾರ್ಕ್ಸಿಸ್ಟರಾಗಬಲ್ಲರು ಎಂಬ ನಂಬಿಕೆಯನ್ನು ಸಾಬೀತು ಪಡಿಸುತ್ತಿದ್ದ ಯುಗಳ 'ಪ್ರಾಣಿವಾದಿ' ಜೋಡಿ. ಜಾತಿಬೇಧ ಮಾಡುವವರು ಜಾತಿವಾದಿಗಳಾದರೆ ಮನುಷ್ಯ ಹಾಗೂ ಇತರ ಪ್ರಾಣಿಗಳಲ್ಲೇ ವ್ಯತ್ಯಾಸ ಮಾಡುವವರನ್ನು 'ಪ್ರಾಣಿವಾದಿ' ಎನ್ನಬಹುದಲ್ಲವೆ?!
"ಇಲ್ಲ ಇರುವೆಗಳಿಗೂ ಜೀವವಿರಬಹುದು, ಆದರೆ ಅವುಗಳ ಐ.ಕ್ಯೂ. ಕಡಿಮೆಯೇ, ಎಂದು, "ಮಾರ್ಕ್ಸ್ ವಾದವು ಕೇವಲ ಮನುಷ್ಯಜೀವಿಗಳಿಗೆ ಮಾತ್ರ ಅನ್ವಯವಾಗುತ್ತದೆಂಬ" ಮಟ್ಟಿಗೆ ತಂದು ನಿಲ್ಲಿಸಿದರು ವಾದವನ್ನು. ಮತ್ತೂ ಮುಂದುವರೆದರು,
"ನಿಮ್ಮಂತಹ ಬೂರ್ಜ್ವಾಗಳಿಂದಾಗಿಯೇ ಭಾರತ ಹೀಗಾಗಿರುವುದು" ಎಂದು ಮೂದಲಿಸತೊಡಗಿದರು, ಮತ್ತೆರೆಡು ನನ್ನದೇ ಖರ್ಚಿನ ಮಣ್ಣಿನ ಚಹಾ ಸೇವನೆಯ ನಂತರ. ಚರ್ಚೆ ಹೋಗಿ ವಾದವಾಗಿ, ವಿತಂಡವಾದವಾಗಿ ಮುಗಿದು ನಿಂತಿತು.
ನಿಮ್ಮಂತಹವರನ್ನು ಬಂದೂಕು ತೆಗೆದುಕೊಂಡು ಸುಡಬೇಕು ಎಂದು ತೀರ್ಮಾನಿಸಿ, ಅದೇ ಧ್ವನಿಯಲ್ಲಿ, ಅಂದಹಾಗೆ ಚಹಾ ಕೊಡಿಸಿದ್ದಕ್ಕೆ ಧನ್ಯವಾದಗಳು, ಎಂದು ಹೊರಟುಬಿಟ್ಟರು.
ಅವರು ಹೋದ ದಿಕ್ಕನ್ನೇ ನೋಡುತ್ತ ಗಾಜಿನ ಲೋಟದಿಂದ ಇರುವೆಯನ್ನು ಬೇರ್ಪಡಿಸಿದೆ.
ಅಷ್ಟು ಹೊತ್ತಿನ ವಾದವಿವಾದದ ಪ್ರಭಾವವೋ ಎಂಬಂತೆ ಇರುವೆಯು ಎಡ(ಪಂಥೀಯ)ದಿಕ್ಕಿಗೇ ಚಲಿಸತೊಡಗಿತ್ತು!!
(೧೯)
ಶಾಂತಿನಿಕೇತನದಲ್ಲಿ ಓದುವ ತೆವಲು ಹತ್ತಿಸಿಕೊಳ್ಳಲು ಕುಳಿತೆ. ಕಲೆ ಅಥವ ಓದು, ಬರಹ ಹುಟ್ಟಿನಿಂದಲೇ ಬರುವುದಿಲ್ಲವೆಂಬುದನ್ನು ನಾನು ಹುಟ್ಟಿದಂದಿನಿಂದಲೇ ತಿಳಿದುಕೊಂಡು ಬಿಟ್ಟಿದ್ದೆ. ನಾವು ಓದಿನಲ್ಲಿರಬಹುದು, ಬರೆಯುವುದರಲ್ಲಿರಬಹುದು ಅಥವ ಮತ್ಯಾವುದರಲ್ಲೇ ಇರಬಹುದು, ಮೇಧಾವಿಗಳೆನ್ನಿಸಿಕೊಳ್ಳಬೇಕೆಂದರೆ ಸುತ್ತಲೂ ಸಾಕಷ್ಟು ಮೂರ್ಖರನ್ನು ಇರಿಸಿಕೊಂಡಿರಬೇಕು! ಈ ಅರ್ಥದಲ್ಲಿ ಫ್ರೆಂಚ್ ತಾತ್ವಿಕ ಮಿಶೆಲ್ ಫ್ಯುಕೊ ಇಷ್ಟವಾಗತೊಡಗಿದ. ಆದ್ದರಿಂದಲೇ ಅರ್ಥವಾಗತೊಡಗಿದ.
ಅವನು ಹೇಳುವುದೇನೆಂದರೆ ನಾವು ಜ್ಞಾನ ಸಂಪಾದನೆ ಮಾಡಿಕೊಳ್ಳುವುದೂ ಒಂದು ರಾಜಕಾರಣ. ಜ್ಞಾನವನ್ನು ನಾವು ಪಡೆಯುವಾಗ, ಅದು ಬರುವ ಕ್ರಮದ ಬಗ್ಗೆ ಎಚ್ಚರವಿಲ್ಲದಿದ್ದರೆ ಸಾಕಷ್ಟು ಮೂಡತೆಯನ್ನೂ ಜೊತೆಜೊತೆಗೇ ಅಂಟುಜಾಡ್ಯವಾಗಿ ಬೆಳೆಸಿಕೊಂಡುಬಿಡುತ್ತೇವೆ. ಭಾರತ ಹಿಂದೂ ದೇಶ ಎಂಬ ನಂಬಿಕೆ ಇರಬಹುದು, ಎಡಪಂಥದಿಂದಾಗಿ ಜಗತ್ತಿನಲ್ಲಿ ಸಮಾನತೆ ಬಂದುಬಿಡುತ್ತದೆನ್ನುವುದಾಗಲಿ ಇಂತಹ 'ಆತ್ಯಂತಿಕ' ನಂಬಿಕೆಯೆಂಬ 'ಸುಷುಪ್ತ ಜ್ಞಾನ'ದಿಂದಾಗಿ ಉದಯಿಸುವಂತಹದ್ದು, ಎಂಬಂತೆ ವಾದಿಸುವ ಶೈಲಿ ಫ್ಯುಕೊನದ್ದು.
ಬೆಳಿಗ್ಗೆ ಏಳು ಗಂಟೆಯಿಂದ ಒಂಬತ್ತೂವರೆಯವರೆಗೂ ತರಗತಿಗಳು. ಆನಂತರ ಮೇಷ್ಟ್ರು ಮನೆಗೆ, ವಿದ್ಯಾಥರ್ಿಗಳು ಸ್ಟುಡಿಯೋಗೆ ಅಥವ ಲೈಬ್ರರಿಗೆ. ಬೆಳಿಗ್ಗೆ ಬೆಳಿಗ್ಗೆ ಲೈಬ್ರರಿಗೆ ಹೋಗುವುದೆಂದರೆ ಆಗೆಲ್ಲ ಶಾಲಾದಿನಗಳಲ್ಲಿ ಸಿನೆಮಕ್ಕೆ, ಅದರಲ್ಲೂ ಮ್ಯಾಟಿನಿ ಸಿನೆಮಾಕ್ಕೆ ಹೋದಂತೆ--ಹೊತ್ತಲ್ಲದ ಹೊತ್ತಲ್ಲಿ ಅದೇನೋ ಆದ ಹಾಗೆ.
"(೧) ಸ್ಕೂಲ್ ಇರುವಾಗ ಸಿನೆಮಕ್ಕೆ ಹೋಗ್ತಾನೆ, (೨) ಸ್ಕೂಲ್ ಇರುವ ದಿನ ಸಿನೆಮ ನೋಡ್ತಾನೆ, (೩) ಅದೂ ಮ್ಯಾಟಿನಿ ಸಿನೆಮ ನೋಡ್ತಾನೆ," ಎಂದು ಐ.ಸಾ.ಯು ಸೆಕ್ಷೆನ್ ಪ್ರಕಾರ ಕೇವಲ ಒಂದು ಸಿನೆಮ ನೋಡಿದ್ದಕ್ಕೆ ಮೂರು ವಿಭಿನ್ನ ಕಾರಣಗಳಿಗಾಗಿ, ಮೂರು ತರಹದ ಶಿಕ್ಷೆ ಸಿಗುತ್ತಿತ್ತಲ್ಲ, ಶಾಲಾದಿನಗಳಲ್ಲಿ (ನೀವೂ ಹಾಗೆ ಮಾಡಿದ್ದು ನೆನಪಿಲ್ಲವೆ? ಇರಲಿ, ಜಾಣ ಮರೆವು ನಿಮ್ಮದು). ಹಾಗೆ ಬೆಳಿಗ್ಗೆಯೇ ಲೈಬ್ರರಿಗೆ ಹೋಗುವ ನಮ್ಮಂತಹವರನ್ನು ಮಂದಿ ಮೂರ್ನಾಲ್ಕು ಕಾರಣಗಳಿಂದಾಗಿ ಮೂರ್ಖರೆನ್ನುತ್ತಿದ್ದರು:
ಬೆಳಿಗ್ಗೆಯೇ ಸ್ಟುಡಿಯೋದಲ್ಲಿ ಚಿತ್ರಬಿಡಿಸದೆ, ಬೆಳಿಗ್ಗೆ ಆರಾಮವಾಗಿ ನಾಷ್ಠಾ ಆದನಂತರ ಒಂದು ಸಣ್ಣ ನಿದ್ರೆ ತೆಗೆಯದೆ, ಬೆಳಿಗ್ಗೆಯೇ ಪೋಸ್ಟ್ ಆಫೀಸಿಗೆ ಹೋಗಿ, ಮನೆಯಿಂದ ಐನೂರು ವರ್ಷದ ಹಿಂದೆ ಪೋಸ್ಟ್ ಮಾಡಲಾದ ಪತ್ರವೇನಾದರೂ ಬಂದಿದೆಯೆ ಎಂದು ನೋಡದೆ ಸೀದ ಲೈಬ್ರರಿಗೆ ಹೋಗುತ್ತಿದ್ದಾನೀತ ಎಂದು.
ಈಗಿನಂತೆ ಇಪ್ಪತ್ತನಾಲ್ಕು ಗಂಟೆಕಾಲ ಟಿ.ವಿ ಛಾನೆಲ್ ಇರುತ್ತಿರಲಿಲ್ಲ ಆಗ.
(೨೦)
ಓದುವುದು ಎಂತಹ ವಿಚಿತ್ರ ಅಭ್ಯಾಸವೆಂಬುದನ್ನು ಓದಿಯೇ ತಿಳಿಯಬೇಕು. ಬೇಕಾದ ಕಡೆ ಕುಂತು, ನಿಂತು, ಮಲಗಿ ಓದತೊಡಗಿದೆ. ಓದುವುದು ಹೇಗೆ? ಎಂಬ ಬಗ್ಗೆ ಜನಪ್ರಿಯ ಪುಸ್ತಕಗಳನ್ನು ಬರೆದೇ ಪ್ರಸಿದ್ಧರಾಗಿದ್ದ ಎಡ್ವಡರ್್ ಡಿ ಬೋನೋ ಮುಂತಾದವರನ್ನು ಓದುತ್ತ ನಿದ್ದೆ ಹೋದೆ. ಹೌ ಟು ಡು (ಹೇಗೆ ಮಾಡುವುದು) ಎಂಬ ಸರಣಿ ಪುಸ್ತಕಗಳನ್ನು ಮಾರಾಟ ಮಾಡುವಲ್ಲಿ ಅಮೇರಿಕದ ಪ್ರಕಟಣಾಕಾರರು ನಿಪುಣರು. ವಿಭಿನ್ನವಾಗಿ ಯೋಚಿಸುವುದು, ಬರೆಯುವುದು, ಓದುವುದು ಹೇಗೆ ಎಂದು ಮಾತು-ಬರಹದ ಮೂಲಕ ಹೇಳಿಕೊಡುವ ಡಿ ಬೋನೋ ಬೆಂಗಳೂರಿಗೊಮ್ಮೆ ಬಂದು ಮಾತನಾಡಿದ್ದನ್ನು ಕೇಳಿಸಿಕೊಳ್ಳಲು ತಲೆಗೊಬ್ಬರಿಗೆ ಆರು ಸಾವಿರ ರೂಪಾಯಿಗಳಷ್ಟು ಹಣ ವಸೂಲಿ ಮಾಡಲಾಯಿತಂತೆ!
ಈಗ ತಿಳಿಯಿತೆ ಓದುವುದು, ಬರೆಯುವುದು ಮತ್ತು ಮಾತನಾಡುವುದು ಹೇಗೆಂದು. ಡಿ ಬೋನೋ ಹೀಗೆ ಸಂಪಾದಿಸಿದ ಹಣದಲ್ಲಿ ಒಂದು ಪುಟ್ಟ ಏರೋಪ್ಲೇನಿನ ಒಡೆಯ. ಮತ್ತು ಒಂದಿಡೀ ದ್ವೀಪವನ್ನು ಕೊಂಡುಕೊಂಡಿದ್ದಾನಂತೆ!//