ಮಾರ್ಗವಿಲ್ಲದ ಮಾರ್ಗ

ಮಾರ್ಗವಿಲ್ಲದ ಮಾರ್ಗ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಸ್ವಾಮಿ ರಾಮದಾಸ್, ಅನುವಾದ: ವಸುಧಾ ಮೂರ್ತಿ
ಪ್ರಕಾಶಕರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಮುಲ್ಲತ್ತಹಳ್ಳಿ, ಬೆಂಗಳೂರು-೫೬೦೦೫೬
ಪುಸ್ತಕದ ಬೆಲೆ
ರೂ. ೧೦.೦೦, ಮುದ್ರಣ: ೨೦೧೦

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಮಾರ್ಗವಿಲ್ಲದ ಮಾರ್ಗ' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್ ಯೂನಿವರ್ಸಿಟಿ" ಮಾಲೆಯಲ್ಲಿ ಶ್ರೀಸಾಮಾನ್ಯರಿಗೆ ಮಾತ್ರವಲ್ಲದೆ, ಸಾಹಿತ್ಯ ಸಂಸ್ಕೃತಿ ಇತಿಹಾಸಗಳ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಬೋಧಪ್ರದವಾಗಿರುವಂಥ ಕಿರುಹೊತ್ತಗೆಗಳನ್ನು ಹೊರತರಲಾಗಿದೆ. ಆಕಾರದಲ್ಲಿ ಕಿರಿದಾದರೂ ಮಹತ್ವದಲ್ಲಿ ಏನೂ ಕಡಿಮೆ ಇಲ್ಲದ ಈ ಪುಸ್ತಕಗಳನ್ನು ಕನ್ನಡದಲ್ಲೂ ಹೊರತರುವ ಯೋಜನೆಯಲ್ಲಿ ಭಾಗಿಯಾಗುವುದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಹೆಮ್ಮೆಯ ವಿಷಯವಾಗಿದೆ. ಅರುವತ್ತರ ದಶಕದಲ್ಲಿ ಈ ಮಾಲೆಯನ್ನು ಆರಂಭಿಸಿದಾಗ ಇದನ್ನು ‘ಒಂದು ರೂಪಾಯಿ ಮಾಲೆ' ಎಂದೇ ಕರೆಯಲಾಗಿತ್ತು. ಈಗಲೂ ಜನಸಾಮಾನ್ಯರಿಗೆ ಸುಲಭ ದರದಲ್ಲಿ ಈ ಪುಸ್ತಕಗಳನ್ನು ತಲುಪಿಸುವ ಉದ್ದೇಶದಿಂದ ಈ ಮಾಲೆಯ ಎಲ್ಲ ಪುಸ್ತಕಗಳಿಗೂ ಹತ್ತು ರೂ. ಗಳ ಸಾಂಕೇತಿಕ ದರವನ್ನೇ ಗೊತ್ತುಪಡಿಸಲಾಗಿದೆ. ಎನ್ನುವುದು ಪ್ರಧಾನ್ ಗುರುದತ್ತ ಅವರ ಮಾತು.

ಸದ್ಗುರು ಸ್ವಾಮಿ ರಾಮದಾಸರ ಉಪದೇಶಗಳಲ್ಲಿ ಕೆಲವನ್ನಾದರೂ ಸಾಧಕರಿಗೆ ಅನುಕೂಲಕರವಾಗಿ ಸಿಗುವಂತೆ ಮಾಡಲು ಅವರ ಕೃತಿಗಳಿಂದ ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ. ಜೀವನದ ಗುರಿ, ವಾಸ್ತವಿಕ ದೃಷ್ಟಿ, ಆಂತರಿಕ ಬದಲಾವಣೆ, ಗುರುವಿನ ಕೃಪೆ, ದಿವ್ಯ ನಾಮಸ್ಮರಣೆ, ಶ್ರದ್ಧೆ ಮತ್ತು ಸಮರ್ಪಣೆ, ಧ್ಯಾನ, ಸಮಾಧಿ, ಜೀವನ್ಮುಕ್ತತೆ, ಗೀತೆಯ ಸಂದೇಶ ಮೊದಲಾದವುಗಳ ಬಗ್ಗೆ ರಾಮದಾಸರ ಆಲೋಚನೆಗಳು ಹೇಗಿದ್ದವು ಎಂಬುದನ್ನು ಈ ಕೃತಿ ನಮಗೆ ವಿವರಿಸುತ್ತದೆ. ಸ್ವಾಮಿಗಳು ಸಾಧನೆಗೆ ಮತ್ತು ದೇವರನ್ನು ಅರಿಯುವ ದಾರಿಯಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಬೇಕಾದ ಕೆಲವು ಸರಳ ನಿಯಮಗಳನ್ನೂ ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

‘ಮಾರ್ಗವಿಲ್ಲದ ಮಾರ್ಗ' ಕೃತಿಯ ಪರಿವಿಡಿಯಲ್ಲಿ ೧೮ ಪುಟ್ಟ ಅಧ್ಯಾಯಗಳಿವೆ. ಮಾರ್ಗವಿಲ್ಲದ ಮಾತು, ಶ್ರದ್ಧೆ ಮತ್ತು ಸಮರ್ಪಣೆ, ಧ್ಯಾನ, ಸಮಾಧಿ, ಎತ್ತರ ತಲುಪಿದ ನಂತರ, ಒಳಗಿನ ದನಿ, ದೇವರ ಅರಿವಿಗೆ ದಾರಿ, ಗೀತೆಯ ಸಂದೇಶ ಮೊದಲಾದ ಅಧ್ಯಾಯಗಳು ಮನಮುಟ್ಟುವಂತಿವೆ. ‘ಎತ್ತರ ತಲುಪಿದ ನಂತರ’ ಎನ್ನುವ ಅಧ್ಯಾಯದಲ್ಲಿ 

“ವಾಸ್ತವಿಕತೆಯ ಈ ನೋಟದಿಂದ, ದೇವರನ್ನು ಅರಿತ ಆತ್ಮ ಮಹಾ ಸತ್ಯದಿಂದ ಬೇರೆಯೇ ಸ್ಥಾನವನ್ನು ಪಡೆಯುತ್ತದೆ. ಅವನು ತನ್ನನ್ನು, ದೇವರ ಮಗ, ಮಗು, ಸೇವಕ ಅಥವಾ ಭಕ್ತನೆಂದು ಕರೆದುಕೊಳ್ಳುತ್ತಾನೆ. ಈ ದ್ವಂದ್ವದಲ್ಲಿ ದೇವರು ಮತ್ತು ಭಕ್ತ ಒಂದೇ ಎಂಬ ಅನಿಸಿಕೆ ಇದೆ. ಈ ಅನಿಸಿಕೆ ಏಕೆಂದರೆ ಈ ಚಟುವಟಿಕೆಯಲ್ಲಿ ದೇವರನ್ನು ಅರಿತವನು ಸೇವಕನಂತೆ ವರ್ತಿಸುತ್ತಾನೆ. ಇದರಿಂದ ಪ್ರೀತಿಯ ಪರಾಕಾಷ್ಟೆಯನ್ನು ತಲುಪಲು ಸಾಧ್ಯ. ಪ್ರೀತಿಯು ದ್ವಂದ್ವದ ತತ್ವದಿಂದಲೇ ಬದುಕಿರುವುದು. ಅವನ ಎಲ್ಲ ಕಾರ್ಯಗಳಲ್ಲಿಯೂ ಪ್ರೀತಿಯಿದೆ, ಪ್ರೀತಿಯೇ ಅವನ ಜೀವನ ಮತ್ತು ಪ್ರೀತಿಯಲ್ಲಿ ಅವನು ತನ್ನ ಧ್ಯೇಯವನ್ನೇ ಕಂಡುಕೊಳ್ಳುತ್ತಾನೆ.” ಎಂದು ವಿವರಗಳನ್ನು ನೀಡಿದ್ದಾರೆ.

೩೬ ಪುಟಗಳ ಪುಟ್ಟ ಪುಸ್ತಕವನ್ನು ಓದುವುದಕ್ಕೆ ತುಂಬಾ ಸಮಯ ಬೇಡ, ಆದರೆ ಓದಿ ಅರ್ಥೈಸಿ ಅದರಂತೆ ನಡೆದುಕೊಳ್ಳಲು ಮಾತ್ರ ಬಹಳ ಸಮಯ ಬೇಕಾಗಬಹುದು.