ಮಾರ್ಜಾಲ ಮಹಿಮೆ !
ಮಾರ್ಜಾಲ ಅರ್ಥಾತ್ ಬೆಕ್ಕು ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಬೆಕ್ಕು ಹಲವರ ಜೀವನದ ಅವಿಭಾಜ್ಯ ಅಂಗವಾಗಿ ಶತಮಾನಗಳೇ ಉರುಳಿವೆ. ನಾಯಿಯನ್ನು ಸಾಕುವಂತೆ ಬೆಕ್ಕನ್ನು ಮನೆಯಲ್ಲಿ ಸಾಕುವ ಜನ ಸಾಕಷ್ಟಿದ್ದಾರೆ. ಬೆಕ್ಕು ನಾಯಿಯಷ್ಟು ಪ್ರಾಮಾಣಿಕ ಪ್ರಾಣಿ ಅಲ್ಲವೆಂಬ ಅಪವಾದ ನಡುವೆಯೂ ಬೆಕ್ಕನ್ನು ಮುದ್ದು ಮಾಡುತ್ತಾರೆ. ತಮ್ಮ ಜೊತೆಯೇ ಮಲಗಿಸಿಕೊಳ್ಳುತ್ತಾರೆ. ಬೆಕ್ಕಿನಲ್ಲೂ ಹಲವಾರು ವಿಧಗಳಿವೆ. ದೇಶದಿಂದ ದೇಶಕ್ಕೆ ಬೆಕ್ಕಿನ ರೂಪಗಳು ಬದಲಾಗುತ್ತದೆ. ಮೈಬಣ್ಣ, ಮೈಮೇಲಿನ ರೋಮಗಳು, ಗಾತ್ರ ಇವೆಲ್ಲಾ ಬದಲಾಗುತ್ತಾ ಹೋಗುತ್ತವೆ. ಮಕ್ಕಳ ಪ್ರೀತಿಯ ‘ಪುಸ್ಸಿ ಕ್ಯಾಟ್', ಆಂಗ್ಲ ಭಾಷೆಯನ್ನು ಕಲಿಸುವಾಗ ಬರುವ ‘ಸಿ' ಫಾರ್ ಕ್ಯಾಟ್ ಬಗೆಗಿನ ಸ್ವಲ್ಪ ರೋಚಕ ವಿಷಯಗಳನ್ನು ತಿಳಿದುಕೊಳ್ಳುವ.
ನಮ್ಮ ಮಕ್ಕಳ ಕಥಾಲೋಕದಲ್ಲಿ ಬೆಕ್ಕಿಗೆ ತುಂಬಾ ಪ್ರಾಶಸ್ತ್ಯವಿದೆ. ಬೆಕ್ಕುಗಳೆರಡು ಬೆಣ್ಣೆಗಾಗಿ ಜಗಳ ಮಾಡಿ ನಂತರ ಅದು ಯಾರಿಗೆ ಸೇರಬೇಕೆಂದು ನಿರ್ಣಯಿಸಲು ಮಂಗಣ್ಣನಿಗೆ ಹೇಳಿ. ಆ ಮಂಗಣ್ಣ ಇಡೀ ಬೆಣ್ಣೆಯನ್ನು ಸ್ವಾಹ ಮಾಡುವ ಕಥೆ ನಿಮಗೆಲ್ಲಾ ತಿಳಿದೇ ಇದೆ. ಬೆಕ್ಕು ಹುಲಿಯ ಕುಟುಂಬಕ್ಕೆ ಸೇರಿದ ಪ್ರಾಣಿ. ಕೆಲವರಿಗೆ ಬೆಕ್ಕು ಶುಭಶಕುನವಾದರೆ, ಬಹುತೇಕರು ಬೆಕ್ಕು ಅಪಶಕುನವೆನ್ನುತ್ತಾರೆ. ಎಲ್ಲಾದರೂ ಒಳ್ಳೆಯ ಕಾರ್ಯಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ ಹೊಗುವ ಕಾರ್ಯಕ್ಕೆ ಅಡ್ಡಿ ಬಂತೆಂದೇ ಲೆಕ್ಕ. ಇದೆಲ್ಲಾ ಮೂಢನಂಬಿಕೆಯ ಮಾತು ಅಂತೀರಾ? ಏನಾದರಾಗಲಿ, ಬೆಕ್ಕು ಒಂದು ಮುದ್ದಿನ ಪ್ರಾಣಿಯಂತೂ ಹೌದು.
ಐದುವರೆ ಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಯೋಸಿನ್ ಎಂಬ ಹರಿತ ಕೋರೆಗಳ (ಹುಲಿಯಂತಹ) ಪ್ರಾಣಿ ಬೆಕ್ಕಿನ ಪೂರ್ವಜ ಎಂದು ಹೇಳಲಾಗುತ್ತದೆ. ನಂತರದ ಮಿಯಾಸಿಡ್ ಮಾರ್ಜಾಲ ಕುಟುಂಬಸ್ಥರಾದ ಹುಲಿ ಮುಂತಾದ ಸಂಬಂಧಿಗಳ ಜೊತೆ ಬೆಕ್ಕು ಹಲವಾರು ಬಾರಿ ರೂಪಾಂತರವಾಗಿ ಈಗಿನ ರೂಪ ಪಡೆದುಕೊಂಡಿದೆಯಂತೆ. ಬೆಕ್ಕಿನಲ್ಲೂ ಕಾಡು ಬೆಕ್ಕು ಹಾಗೂ ಸಾಕು ಬೆಕ್ಕು ಎಂಬ ವಿಧಗಳಿವೆ. ಕಾಡು ಬೆಕ್ಕು ಸಾಕುವ ಬೆಕ್ಕಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿದ್ದು, ಬಲಶಾಲಿಯಾಗಿರುತ್ತದೆ. ಬೆಕ್ಕು ಮಾಂಸಹಾರಿ ಪ್ರಾಣಿ. ಇಲಿ ಹೆಗ್ಗಣಗಳನ್ನು ಹಿಡಿಯಲೆಂದೇ ಬೆಕ್ಕನ್ನು ಸಾಕುವ ಕ್ರಮ ಮೊದಲು ಇತ್ತು. ಈಗಿನ ಬೆಕ್ಕುಗಳು ಬಹುಷಃ ಮನೆಯ ರುಚಿಕರ ತಿಂಡಿ ತಿನಸುಗಳನ್ನು ತಿಂದು ಸೋಮಾರಿಯಾಗಿ ಇಲಿ ಹಿಡಿಯುವುದನ್ನು ಮರೆತೇ ಬಿಟ್ಟಿದೆ ಅನಿಸುತ್ತೆ. ಆ ಬೆಕ್ಕುಗಳಿಗೆ ಇಲಿ ಹಿಡಿಯಲು ‘ಟಾಮ್ ಮತ್ತು ಜೆರಿ' ಕಾರ್ಟೂನ್ ತೋರಿಸಬೇಕೇನೋ?!
ಪುರಾತನ ಈಜಿಪ್ಟ್ ನ ಬೆಕ್ಕು ದೇವತೆಯ ಹೆಸರು ‘ಪಸ್’. ತಮಗೆ ಬರುವ ಕಷ್ಟಗಳಿಂದ ಪಾರು ಮಾಡಲು ಇವರು ಬೆಕ್ಕನ್ನು ಆರಾಧಿಸುತ್ತಿದ್ದರಂತೆ. ಅನೇಕ ‘ಪಸ್' ಮಂದಿರಗಳೂ ಈಜಿಪ್ಟ್ ನಲ್ಲಿದ್ದುವು. ನಮ್ಮ ದೇಶದಿಂದ ಬೆಕ್ಕನ್ನು ಯಾರಾದರೂ ಬೇರೆ ದೇಶಕ್ಕೆ ತೆಗೆದುಕೊಂಡು ಹೋದರೆ ಅದು ಅವರಿಗೆ ಅನಿಷ್ಟ ಎಂದು ನಂಬಿದ್ದರು. ಈ ಬಲವಾದ ನಂಬಿಕೆಯ ಕಾರಣದಿಂದ ಅವರು ತಾವು ಸಾಕಿದ ಬೆಕ್ಕನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಯಾರಿಗೂ ಕೊಡುತ್ತಿರಲಿಲ್ಲ. ಇಷ್ಟೇ ಅಲ್ಲ, ಈಜಿಪ್ಟ್ ನಲ್ಲಿ ಬೆಕ್ಕನ್ನು ಕೊಲ್ಲುವುದು ಮಹಾ ಅಪರಾಧವಾಗಿತ್ತು. ಬೆಕ್ಕನ್ನು ಕೊಂದ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಕೊಲ್ಲಲಾಗುತ್ತಿತ್ತು.
ಕತ್ತೆಯ ಹಾಲಿನಿಂದ ಸ್ನಾನ ಮಾಡಿ ತನ್ನ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದ ರಾಣಿ ಕ್ಲಿಯೋಪಾತ್ರಾ ಬಗ್ಗೆ ನಿಮಗೆ ಗೊತ್ತಲ್ಲ, ಅವಳಿಗೆ ಬೆಕ್ಕು ಬಹಳ ಪ್ರಿಯವಾದ ಪ್ರಾಣಿಯಾಗಿತ್ತು. ಅವಳ ಅರಮನೆಯಲ್ಲಿ ಹಲವಾರು ಬೆಕ್ಕುಗಳಿದ್ದವಂತೆ ಮತ್ತು ಬೆಕ್ಕಿಗಾಗಿಯೇ ಅವಳು ಹಲವಾರು ಯುದ್ಧಗಳನ್ನೂ ಮಾಡಿದ್ದಳಂತೆ.
ಕ್ರಿಸ್ತ ಪೂರ್ವ ೨೦೦೦ದಲ್ಲಿ ವ್ಯಾಪಾರಿಗಳು ತಮ್ಮ ಜೊತೆ ಇಂಗ್ಲೆಂಡ್ ಗೆ ಬರುವಾಗ ಬೆಕ್ಕನ್ನು ತಂದರಂತೆ. ಭಾರತಕ್ಕೂ ಹಾಗೆಯೇ ಬಂದಿರಲೂ ಬಹುದು. ಚೀನಿಯರು ಬೆಕ್ಕಿನ ಕಣ್ಣುಗಳನ್ನು ಗಮನಿಸಿ ಸಮಯವನ್ನು ಅಂದಾಜು ಮಾಡುತ್ತಿದ್ದರಂತೆ. ಮುಂಜಾನೆಯ ಸಮಯ ಬೆಕ್ಕಿನ ಕಣ್ಣಿನ ಗುಡ್ಡೆಗಳು ಚಿಕ್ಕದಾಗಿಯೂ, ಹೊತ್ತೇರತೊಡಗಿದಂತೆ ಮತ್ತಷ್ಟು ಚಿಕ್ಕದಾಗಿಯೂ, ಕತ್ತಲಾಗತೊಡಗಿದಾಗ ಕಣ್ಣಿನ ಕಾಂತಿಯು ಹೆಚ್ಚಾಗುತ್ತಿದ್ದುವಂತೆ. ಕತ್ತಲಿನಲ್ಲಿ ಬೆಕ್ಕಿನ ಕಣ್ಣಿನ ಮೇಲೆ ಬೆಳಕು ಬಿದ್ದಾಗ ಅವುಗಳು ಹೊಳೆಯುತ್ತವೆ. ಈ ಕಾರಣದಿಂದ ಮಾಂತ್ರಿಕರು ಕಪ್ಪು ಬೆಕ್ಕುಗಳನ್ನು ತಮ್ಮ ಮಂತ್ರ-ತಂತ್ರ ವಿದ್ಯೆಗಳಿಗೆ ಬಳಸಿಕೊಂಡರು.
ಅತಿಯಾದ ತಾಳ್ಮೆ ಮತ್ತು ಅತಿಯಾದ ರೋಷಕ್ಕೆ ಬೆಕ್ಕು ಉತ್ತಮ ಉದಾಹರಣೆ. ಕೆಲವು ಸಲ ಅತ್ಯಂತ ಸಂಯಮದಿಂದ ವರ್ತಿಸುವ ಬೆಕ್ಕು, ಕೆಲವು ಸಲ ವಿಪರೀತ ರೋಷ ಪೂರಿತವಾಗಿರುತ್ತದೆ. ಸಾಕಿದವರನ್ನು ಕಚ್ಚಿ ಅಥವಾ ಉಗುರಿನಿಂದ ಪರಚಿ ರಕ್ತ ಬರಿಸಿದ ಪ್ರಸಂಗವೂ ಇದೆ. ಬೆಕ್ಕು ಬಹಳ ಹೊತ್ತಿನವರೆಗೆ ಉಪವಾಸದಿಂದಲೂ ಇರುತ್ತದೆ ಹಾಗೆಯೇ ಹಸಿವಾದಾಗ ಬಕಾಸುರನಂತೆ ತಿನ್ನುವ ಗುಣವೂ ಇದೆ. ಕದ್ದು ತಿನ್ನುವುದರಲ್ಲಿ (ಯಾರಿಗೂ ತಿಳಿಯದಂತೆ) ಬೆಕ್ಕು ನಿಷ್ಣಾತ. ಅದಕ್ಕೆ ಇದನ್ನು ‘ಕಳ್ಳ ಬೆಕ್ಕು' ಎಂದೂ ಕರೆಯುತ್ತಾರೆ.
ಈಗೆಲ್ಲಾ ಸೌಂದರ್ಯ ಸ್ಪರ್ಧೆಗಳು ಮಾಮೂಲು. ಮನುಷ್ಯರ, ಪ್ರಾಣಿಗಳ ಸೌಂದರ್ಯ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ೧೮೭೧ರಲ್ಲಿ ಬೆಕ್ಕಿನ ಸೌಂದರ್ಯ ಸ್ಪರ್ಧೆ ನಡೆದಿತ್ತಂತೆ. ಆ ಸಮಯದಲ್ಲಿ ಬೆಕ್ಕಿನ ಸಂಘವೊಂದು ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್ ನಲ್ಲಿ ಬೆಕ್ಕುಗಳ ಪ್ರದರ್ಶನ ಹಾಗೂ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಬೇರೆ ಬೇರೆ ದೇಶಗಳ ಹಾಗೂ ಜಾತಿಯ ಸುಮಾರು ೧೭೦ ಬೆಕ್ಕುಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ನಂತರದ ದಿನಗಳಲ್ಲಿ ಇಂಗ್ಲೆಂಡ್ ಮತ್ತು ನ್ಯೂಯಾರ್ಕ್ ನಗರಗಳಲ್ಲಿ ಬೆಕ್ಕಿನ ಸೌಂದರ್ಯ ಸ್ಪರ್ಧೆಗಳು ನಿಯಮಿತವಾಗಿ ನಡೆಯಲು ಪ್ರಾರಂಭವಾದುವು. ಬೆಕ್ಕಿಗಾಗಿಯೇ ಸಂರಕ್ಷಣ ಕೇಂದ್ರಗಳು ಸ್ಥಾಪನೆಯಾದವು. ಶ್ರೀಮಂತರು ತಾವು ದೂರದ ಊರಿಗೆ ಪ್ರವಾಸ ಹೋಗುವಾಗ ತಾವು ಸಾಕಿದ ಬೆಕ್ಕುಗಳನ್ನು ನಿಗದಿತ ದರ ಪಾವತಿಸಿ ಈ ಕೇಂದ್ರದಲ್ಲಿ ಬಿಟ್ಟುಹೋಗಲು ಪ್ರಾರಂಭ ಮಾಡಿದರು.
ಬೆಕ್ಕಿನಲ್ಲಿ ನೀಲಿ ಕಣ್ಣಿನ ಬೆಕ್ಕು, ಪರ್ಶಿಯನ್ ಬೆಕ್ಕು, ಚಿರತೆಯನ್ನು ಹೋಲುವ ಲಿಂಕ್ಸ್, ಕರಿಮುಖದ ಬ್ಲಾಕ್ ಪಾಯಿಂಟ್ ಸೀಲ್, ತುಪ್ಪಳವನ್ನು ಹೊದ್ದಂತೆ ಇರುವ ಚಿಂಚಿಲಾ ತಳಿ, ಹಳದಿ ಬಣ್ಣದ ಬರ್ಮಾ ಬೆಕ್ಕು, ಟರ್ಕಿ ಬೆಕ್ಕು, ಆಮೆ ಚಿಪ್ಪಿನ ಬೆಕ್ಕು, ಅಂಗೋರಾ ಬೆಕ್ಕು, ರಷ್ಯನ್ ಬೆಕ್ಕು ಹೀಗೆ ಹಲವಾರು ವಿಧಗಳಿವೆ.
ಭಾರತದಲ್ಲಿ ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅನಿಷ್ಟ ಎಂಬ ಮಾತು ಇದೆ. ಆದರೆ ಬೆಕ್ಕನ್ನು ಕೊಲ್ಲುವುದು ಮಹಾಪಾಪ. ಕೊಂದರೆ ಕೈಕಾಲುಗಳು ನಡುಗಲಾರಂಭಿಸುತ್ತವೆ ಎಂಬ ನಂಬಿಕೆ ಇದೆ. ಆದರೂ ತಮಿಳುನಾಡಿನ ಕೆಲವು ಜನಾಂಗದವರು ಬೆಕ್ಕನ್ನು ಆಹಾರವಾಗಿ ಬಳಸುತ್ತಾರಂತೆ. ಬೆಕ್ಕು ಅನಾರೋಗ್ಯವಾದಾಗ ಹುಲ್ಲನ್ನು ತಿನ್ನುತ್ತದೆ. ಬೆಕ್ಕಿನ ಸ್ನೇಹ ಬೆಳೆಸುವುದು ಕಷ್ಟ. ಆದರೆ ಬೆಕ್ಕು ತಾನಾಗಿಯೇ ನಿಮ್ಮ ಬಳಿ ಬಂದು ಸ್ನೇಹವನ್ನು ಬೆಳೆಸಿದರೆ ಅದರಿಂದ ಬಿಡುಗಡೆ ಸಿಗುವುದು ಕಷ್ಟ. ಅದು ನಿಮ್ಮ ಕಾಲಿನ ಬುಡದಲ್ಲೇ ಓಡಾಡುತ್ತಾ, ನಿಮ್ಮ ಸಂಗಡವೇ ಇದ್ದು, ಮಲಗುವಾಗಲೂ ನಿಮ್ಮ ಹಾಸಿಗೆಯಲ್ಲೇ ಮಲಗುತ್ತದೆ. ಹೀಗಿದೆ ಮಾರ್ಜಾಲ ಪುರಾಣ!
ಚಿತ್ರ ವಿವರ : ೧. ಸಾಮಾನ್ಯ ಮನೆ ಬೆಕ್ಕು (ಚಿತ್ರ: ಮಮತಾ ಕಿಶೋರ್)
೨. ಪರ್ಶಿಯನ್ ಬೆಕ್ಕು
೩. ಚಿರತೆಯನ್ನು ಹೋಲುವ ಲಿಂಕ್ಸ್ ಬೆಕ್ಕು
೪. ಬ್ಲಾಕ್ ಪಾಯಿಂಟ್ ಬೆಕ್ಕು
೫. ರಷ್ಯನ್ ಬೆಕ್ಕು
ಚಿತ್ರ ಕೃಪೆ: ಅಂತರ್ಜಾಲ ತಾಣ