ಮಾಲಿನ್ಯದಿಂದ ಆಯಸ್ಸು ಕಡಿತ: ಭಾರತಕ್ಕೆ ಇದು ಎಚ್ಚರಿಕೆ ಗಂಟೆ

ವಾಯುಮಾಲಿನ್ಯದ ಕಾರಣದಿಂದಾಗಿ ಭಾರತೀಯರ ಸರಾಸರಿ ಆಯಸ್ಸು ೩.೫ ವರ್ಷದಷ್ಟು ಕಡಿಮೆಯಾಗುತ್ತಿದೆ ಎಂದು ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ವಾಯುಗುಣಮಟ್ಟ ಸೂಚ್ಯಂಕ ಅಂದಾಜಿಸಿರುವುದು ಭಾರತಕ್ಕೆ ನಿಜಕ್ಕೂ ಎಚ್ಚರಿಕೆಯ ಗಂಟೆ. ಇದೇ ವಿವಿಯ ಅಂದಾಜಿನ ಪ್ರಕಾರ, 'ದೆಹಲಿಯಲ್ಲಿಜನರ ಸರಾಸರಿ ಆಯಸ್ಸು ೮.೨ ವರ್ಷದಷ್ಟು ಕಡಿಮೆಯಾಗುತ್ತಿದೆ. ವಾಯುಮಾಲಿನ್ಯದಿಂದಾಗಿ ಭಾರತದಲ್ಲೇ ಅತಿ ಹೆಚ್ಚು ಸಮಸ್ಯೆಗೆ ಒಳಗಾಗುತ್ತಿರುವ ನಗರ ದೆಹಲಿ. ನಂತರದ ಸ್ಥಾನದಲ್ಲಿ ಬಿಹಾರ, ಹರ್ಯಾಣ, ಉತ್ತರಪ್ರದೇಶ ಇವೆ. ಜಗತ್ತಿನಲ್ಲಿ ಅತಿ ಹೆಚ್ಚು ವಾಯುಮಾಲಿನ್ಯಕ್ಕೆ ಗುರಿಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಇದ್ದು, ೨ನೇ ಸ್ಥಾನ ಪಡೆದಿದೆ' ಎಂದೆಲ್ಲಾ ಶಿಕಾಗೋ ವಿವಿಯ ಅಧ್ಯಯನ ವರದಿ ಹೇಳುತ್ತಿದೆ.
ಕೆಲವು ವರ್ಷಗಳ ಹಿಂದೆ ಚೀನಾ ಕೂಡ ಭೀಕರ ಮಾಲಿನ್ಯವನ್ನು ಎದುರಿಸಿತ್ತು. ಅದರಿಂದ ಈಗ ಆ ದೇಶ ಹೊರಬಂದಿದೆ. ಅದು ನಮಗೆ ಮಾದರಿಯಾಗುತ್ತಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡುವ ಭಾರತದಲ್ಲಿ ಮಾಲಿನ್ಯ ಯಾವ ಪರಿ ಅವಾಂತರಗಳನ್ನು ಸೃಷ್ಟಿ ಮಾಡುತ್ತದೆ ಎಂಬುದನ್ನು ಪ್ರತಿ ವರ್ಷ ನವೆಂಬರ್, ಡಿಸೆಂಬರ್ ಬಂದಾಗ ದೆಹಲಿಯನ್ನು ನೋಡಿದರೆ ತಿಳಿಯುತ್ತದೆ. ಇಡೀ ರಾಜಧಾನಿ ವಲಯವೇ ಗ್ಯಾಸ್ ಚೇಂಬರ್ನಂತೆ ಪರಿವರ್ತನೆಯಾಗುತ್ತದೆ. ಸರ್ಕಾರಗಳನ್ನು ಶಪಿಸುತ್ತಾರೆ. ಸರ್ಕಾರ ಮಾಲಿನ್ಯ ತಗ್ಗಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅಷ್ಟರಲ್ಲಿ ಚಳಿಗಾಲ ಮುಗಿಯುತ್ತದೆ, ಕ್ರಮಗಳೂ ನಿಲ್ಲುತ್ತವೆ. ಅಲ್ಲಿಗೆ ಆ ವರ್ಷದ ಕಸರತ್ತು ಮುಗಿಯಿತು. ಆದರೆ ಅಷ್ಟರಲ್ಲಿ ಮಾಲಿನ್ಯ ಸೃಷ್ಟಿಸಿದ ತೊಂದರೆಗಳ ಕತೆ? ಗಾಳಿಯಲ್ಲಿ ಕಣ್ಣಿಗೆ ಕಾಣದಷ್ಟು ಗಾತ್ರದ ಕಣಗಳು ಮಾಲಿನ್ಯದಿಂದ ಸೃಷ್ಟಿಯಾಗುತ್ತವೆ. ಅವು ನಮಗೆ ಗೊತ್ತಿಲ್ಲದೆ ನಮ್ಮ ದೇಹವನ್ನು ಪ್ರವೇಶಿಸಿ ರಕ್ತವನ್ನು ಸೇರಿಕೊಳ್ಳುತ್ತವೆ. ಹೃದ್ರೋಗ, ಮೂತ್ರಪಿಂಡ ಸಮಸ್ಯೆ, ಶ್ವಾಸಕೋಶ ತೊಂದರೆ ಹಾಗೂ ಪಾರ್ಶವಾಯುವಿನಂತಹ ಸಮಸ್ಯೆಗಳನ್ನು ಜನರಲ್ಲಿ ಸೃಷ್ಟಿಸಿ ಅವರ ಸಾವಿಗೆ ಕಾರಣವಾಗುತ್ತವೆ. ಪ್ರತಿ ವರ್ಷ ಒಂದೆರಡು ವರದಿಗಳು ಭಾರತದಲ್ಲಿ ಮಾಲಿನ್ಯದಿಂದ ಆಗುತ್ತಿರುವ ಸಾವುಗಳ ಬಗ್ಗೆ ಎಚ್ಚರಿಕೆ ಗಂಟೆಯನ್ನು ಮೊಳಗಿಸುತ್ತಲೇ ಇರುತ್ತವೆ. ಆದರೆ ನಾವು ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಾಸ್ತವ. ಕೆಲವು ವರ್ಷಗಳ ಹಿಂದೆ ಚೀನಾ ಕೂಡ ಭೀಕರ ಮಾಲಿನ್ಯವನ್ನು ಎದುರಿಸಿತ್ತು. ಅದರಿಂದ ಈಗ ಆ ದೇಶ ಹೊರಬಂದಿದೆ. ಅದು ನಮಗೆ ಮಾದರಿಯಾಗುತ್ತಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡುವ ಗುಣ ಬಿಟ್ಟು, ಮಾಲಿನ್ಯಕ್ಕೆ ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯದೇ ಹೋದರೆ ಭಾರತೀಯರ ಆಯಸ್ಸು ತಗ್ಗುವುದರ ಜತೆಗೆ ಕಿರಿಯ ವಯಸ್ಸಿನಲ್ಲೇ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸಬೇಕಾಗುತ್ತದೆ. ಹಾಗಾಗುವುದು ಬೇಡ. ಮಾಲಿನ್ಯವನ್ನು ಹತ್ತಿಕ್ಕಲು ದೂರಗಾಮಿ ಕ್ರಮಗಳು ಅತ್ಯವಶ್ಯವಾಗಿ ಬೇಕಾಗಿವೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೦-೦೮-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ