ಮಾಲ್ವಾದ ಮಹಾರಾಣಿ - ಅಹಲ್ಯಾಬಾಯಿ ಹೋಳ್ಕರ್
ಹುಟ್ಟಿದ್ದು ಮಹಾರಾಷ್ಟ್ರದ ಚೌಂಡಿ ಎಂಬ ಪುಟ್ಟ ಗ್ರಾಮದಲ್ಲಿ. ರಾಜ ಮನೆತನವೂ ಅಲ್ಲದ ಊರಿನ ಪಟೇಲನಾಗಿದ್ದ ಮಾಂಕೋಜಿ ಸಿಂಧಿಯಾ ಎಂಬ ವ್ಯಕ್ತಿಯ ಮಗಳಾಗಿ. ಆದರೆ ಮದುವೆಯಾದದ್ದು ಮಾಲ್ವಾ ಸಂಸ್ಥಾನದ ಸುಭೇದಾರ (ದಳಪತಿ) ಮಲ್ಹಾರ್ ರಾವ್ ಹೋಳ್ಕರ್ ಇವರ ಮಗನಾದ ಖಂಡೇರಾವ್ ಅವರನ್ನು. ಸಾಮಾನ್ಯ ಮನೆತನದ ಹಳ್ಳಿಯ ಹುಡುಗಿ ಅಹಲ್ಯಾ ಅಂದಿನ ಮೌಢ್ಯ ಭರಿತ ಆಚಾರ, ವಿಚಾರಗಳಿಗೆ ಸಡ್ಡುಹೊಡೆದು ರಾಣಿಯಾಗಿ, ರಾಜಮಾತೆಯಾಗಿ ದಕ್ಷ ಆಡಳಿತವನ್ನು ನೀಡಿದ ಸಂಗತಿಯನ್ನು ಶತಮಾನಗಳು ಕಳೆದರೂ ಇಂದೋರ್ (ಮಾಲ್ವಾದ ಇನ್ನೊಂದು ಹೆಸರು) ನಗರದ ಜನರು ಮರೆತಿಲ್ಲ. ಅವಳು ಕಟ್ಟಿಸಿದ ದೇಗುಲಗಳು, ಕೆರೆಗಳು, ರಸ್ತೆಗಳು, ಕೋಟೆಗಳು ಈಗಲೂ ಇಂದೋರ್ ನಲ್ಲಿ ಇವೆ.
ಕಾರ್ಯನಿಮಿತ್ತ ಚೌಂಡಿ ಗ್ರಾಮದ ಮುಖಾಂತರ ಹಾದು ಹೋಗುತ್ತಿದ್ದ (ಪೇಶ್ವೆಗಳು ಆಡಳಿತ ನಡೆಸುತ್ತಿದ್ದ) ಮಾಲ್ವಾದ ಸುಭೇದಾರ ಮಲ್ಹಾರ್ ರಾವ್ ಹೋಳ್ಕರ್ ಅನಿರೀಕ್ಷಿತವಾಗಿ ಪುಟ್ಟ ಬಾಲಕಿಯಾಗಿದ್ದ ಅಹಲ್ಯಾಳನ್ನು ನೋಡಿ, ಮಾತನಾಡಿಸಿದಾಗ ಅವಳ ನಡೆ, ನುಡಿ ಮತ್ತು ವಿಚಾರಗಳು ಅವರನ್ನು ಬಹಳಷ್ಟು ಪ್ರಭಾವಿತರನ್ನಾಗಿಸುತ್ತದೆ. ತಮ್ಮ ಪುತ್ರ ಖಂಡೇರಾವ್ ನಿಗೆ ಈ ಹುಡುಗಿಯೇ ಸರಿಯಾದ ಜೋಡಿ ಎಂದು ಮನದಲ್ಲೇ ನಿರ್ಣಯಿಸುತ್ತಾರೆ. ಅಹಲ್ಯಾಳ ತಂದೆ ಮಾಂಕೋಜಿಯವರನ್ನು ಸಂಪರ್ಕಿಸಿ ಮದುವೆಗೆ ಒಪ್ಪಿಸುತ್ತಾರೆ. ರಾಜ ಕುಟುಂಬದ ಹೊರಗಿನ ಕನ್ಯೆಯನ್ನು ಮದುವೆಯಾಗುವುದು ಮಲ್ಹಾರ್ ರಾವ್ ಅವರ ಪತ್ನಿಗೆ ಇಷ್ಟವಿರಲಿಲ್ಲ. ಆದರೂ ತಮ್ಮ ಪತಿಯ ನಿರ್ಧಾರಕ್ಕೆ ತಲೆಬಾಗಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ.
೧೭೨೫ ಮೇ ೩೧ರಂದು ಜನಿಸಿದ ಅಹಲ್ಯಾ ಮದುವೆಯಾಗುವಾಗ ಎಂಟೋ-ಒಂಬತ್ತು ವರ್ಷ ಪ್ರಾಯವಿರಬೇಕು. ಆ ಸಮಯದಲ್ಲಿ ಬಾಲ್ಯವಿವಾಹವು ಜಾರಿಯಲ್ಲಿತ್ತು. ಆಟ ಆಡುವ ಸಮಯದಲ್ಲಿ ಮದುವೆಯಾಗುವ ಹುಡುಗಿಯರ ಪತಿ ಸಣ್ಣ ಪ್ರಾಯದಲ್ಲೇ ಸತ್ತು ಹೋದರೆ ಆ ಹುಡುಗಿ ಸಾಯುವ ವರೆಗೆ ಬಾಲವಿಧವೆಯಾಗಿಯೇ ಜೀವನ ಸಾಗಿಸಬೇಕಾಗಿತ್ತು. ಈ ರೀತಿಯ ಜೀವನ ಸಾಗಿಸಿದವರನ್ನು, ಅವರ ಸಂಕಷ್ಟಗಳನ್ನು ಬಾಲ್ಯದಲ್ಲೇ ಕಂಡ ಅಹಲ್ಯಾ ಅವುಗಳಿಗೆಲ್ಲಾ ಮುಕ್ತಿ ಹಾಡ ಬಯಸಿದ್ದಳು. ಸತಿ ಸಹಗಮನ ಪದ್ಧತಿಯೂ ಆ ಕಾಲದ ಒಂದು ಭೀಕರ ಆಚರಣೆಯಾಗಿತ್ತು. ಮದುವೆಯಾಗಿ ರಾಜಮನೆತನ ಸೇರಿದ ಅಹಲ್ಯಾಬಾಯಿ ಕ್ರಮೇಣ ಬೆಳೆದು, ಇಬ್ಬರು ಮಕ್ಕಳ ತಾಯಿಯಾದಳು. ಹಿರಿಯವನು ಮಾಲೇ ರಾವ್ ಹಾಗೂ ಕಿರಿಯವಳು ಮುಕ್ತಾಬಾಯಿ. ಅಹಲ್ಯಾ ಬಾಯಿಯ ಮಗ ಅಷ್ಟೊಂದು ಚುರುಕಾಗಿರಲಿಲ್ಲ. ಮಂದಮತಿಯೂ ಆಗಿದ್ದ. ಅಹಲ್ಯಾಬಾಯಿಯವರಿಗೆ ಅವರ ಮಾವ ಮಲ್ಹಾರ್ ರಾವ್ ಸರ್ವ ರೀತಿಯ ಬೆಂಬಲವನ್ನು ನೀಡಿದರು. ಅವರಿಂದ ಯುದ್ಧಕಲೆ, ಕುದುರೆ ಸವಾರಿಯನ್ನೂ ಕಲಿತಳು.
೧೭೫೪ರಲ್ಲಿ ಒಂದು ಯುದ್ಧದ ಸಮಯದಲ್ಲಿ ಖಂಡೇರಾವ್ ಅಕಾಲ ಮರಣಕ್ಕೆ ಈಡಾಗುತ್ತಾನೆ. ತಮ್ಮ ಸೊಸೆ ಅಹಲ್ಯಾ ಪತಿಯ ಜೊತೆಗೆ ಸಹಗಮನ ಮಾಡುವ ವಿಷಯ ಬಂದಾಗ ಮಾವ ಮಲ್ಹಾರ್ ರಾವ್ ತಡೆಯುತ್ತಾರೆ. ‘ಮಕ್ಕಳನ್ನು ಅನಾಥರನ್ನಾಗಿಸಿ ಹೋಗಬೇಡ. ಮಾಲ್ವಾಗೆ ನಿನ್ನ ಅಗತ್ಯವಿದೆ' ಎಂದು ಸೊಸೆಯನ್ನು ತಡೆಯುತ್ತಾರೆ. ನಂತರದ ದಿನಗಳಲ್ಲಿ ಸೊಸೆಯ ಸಹಾಯದಿಂದ ಮಲ್ಹಾರ್ ರಾವ್ ರಾಜ್ಯಭಾರವನ್ನು ಮುಂದುವರೆಸುತ್ತಾರೆ. ಅಹಲ್ಯಾ ಖುದ್ದಾಗಿ ಯುದ್ಧಗಳ ಮುಂದಾಳತ್ವವನ್ನು ವಹಿಸಿ ತಮ್ಮ ಶತ್ರುಗಳ ಹುಟ್ಟಡಗಿಸುತ್ತಾಳೆ. ಖಂಡೇರಾವ್ ತೀರಿಹೋದ ಹನ್ನೆರಡು ವರ್ಷಗಳ ನಂತರ ಮಲ್ಹಾರ್ ರಾವ್ ಹೋಲ್ಕರ್ ಸಹ ನಿಧನ ಹೊಂದುತ್ತಾರೆ. ಅಹಲ್ಯಾ ತನ್ನ ಮಗ ಮಾಲೇರಾವ್ ಅವನನ್ನು ಸುಭೇದಾರನನ್ನಾಗಿ ಮಾಡುತ್ತಾಳೆ. ಇದಕ್ಕೆ ಪೇಶ್ವೆಗಳ ಒಪ್ಪಿಗೆಯೂ ದೊರೆಯುತ್ತದೆ. ಆದರೆ ಅನಾರೋಗ್ಯ ಪೀಡಿತ ಮಾಲೇರಾವ್ ಒಂದೇ ವರ್ಷದಲ್ಲಿ ನಿಧನಹೊಂದಿದಾಗ ಮಾಲ್ವಾ ಮತ್ತೆ ಅನಾಥವಾಗುತ್ತದೆ.
ಹಲವಾರು ಮಂದಿ ಪೇಶ್ವೆಯನ್ನು ಸಂಪರ್ಕಿಸಿ ರಾಜ್ಯವಾಳಲು ಮಲ್ಹಾರ್ ರಾವ್ ಹೋಳ್ಕರ್ ವಂಶಸ್ಥರು ಯಾರೂ ಉಳಿದಿಲ್ಲ. ನಮ್ಮಲ್ಲಿ ಒಬ್ಬರನ್ನು ದಳಪತಿಗಳನ್ನಾಗಿ ಮಾಡಿ ಎಂದು ಅಹವಾಲು ಸಲ್ಲಿಸುತ್ತಾರೆ. ಆದರೆ ಮಾಲ್ವಾದ ಸೈನ್ಯ ಹಾಗೂ ಜನತೆಯು ರಾಜಮಾತೆ ಅಹಲ್ಯಾಬಾಯಿ ಪರವಾಗಿತ್ತು. ಪೇಶ್ವೆ ತಮ್ಮ ಮಂತ್ರಿಗಳ ಮಾತಿನಂತೆ ಮಾಲ್ವಾದ ಆಡಳಿತವನ್ನು ಅಹಲ್ಯಾಬಾಯಿಯ ಕೈಗೆ ಒಪ್ಪಿಸಿದರು. ಅಹಲ್ಯಾಬಾಯಿ ತಮ್ಮ ೪೨ನೆಯ ವಯಸ್ಸಿನಲ್ಲಿ ಮಾಲ್ವಾದ ಮಹಾರಾಣಿಯಾಗಿ ಅಧಿಕಾರ ವಹಿಸಿಕೊಂಡಳು. ನಂತರ ಸುಮಾರು ಮೂವತ್ತು ವರ್ಷಗಳ ಕಾಲ ಆಡಳಿತ ನಡೆಸಿ ಮಾಲ್ವಾವನ್ನು ಅತ್ಯುನ್ನತ ನಗರವನ್ನಾಗಿಸಿದ ಕೀರ್ತಿ ಅಹಲ್ಯಾಬಾಯಿಗೆ ಸಲ್ಲಬೇಕು.
ಧೀಮಂತ ನಾಯಕತ್ವ, ದೂರದರ್ಶಿ ವ್ಯಕ್ತಿತ್ವ, ಸಾಮಾನ್ಯ ಜನರಲ್ಲಿ ಕಳಕಳಿಯುಕ್ತ ಪ್ರೀತಿ ಎಲ್ಲವೂ ಅಹಲ್ಯಾಬಾಯಿಯವರಿಗಿತ್ತು. ಇಂದೋರ್ ಸಂಸ್ಥಾನವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದರು. ಅಹಲ್ಯಾಬಾಯಿಯ ಆಳ್ವಿಕೆಯು ಸಮರ್ಥ ರಾಯಭಾರಕ್ಕೆ ಹಿಡಿದ ಕನ್ನಡಿಯಾಗಿತ್ತು. ಅವರ ಆಸ್ಥಾನದಲ್ಲಿ ಪ್ರತಿಭೆಗೆ ಮತ್ತು ಪಾಂಡಿತ್ಯಕ್ಕೆ ಗೌರವವಿತ್ತು. ತಮ್ಮ ವಿರೋಧಿಗಳನ್ನೂ ಕ್ಷಮಿಸುವ ದೊಡ್ಡ ಮನಸ್ಸು ಅವರಿಗಿತ್ತು. ವ್ಯಾಪಾರಿಗಳಿಗೆ, ರೈತರಿಗೆ ಬೇಕಾದ ಅನುಕೂಲವನ್ನು ಅಹಲ್ಯಾಬಾಯಿ ಮಾಡಿಕೊಟ್ಟಿದ್ದರು. ಮಾಲ್ವಾ ಸಾಮ್ರಾಜ್ಯದ ರಾಜಧಾನಿಯಾದ ಇಂದೋರ್ ನಗರವನ್ನು ದೊಡ್ಡ ನಗರವನ್ನಾಗಿಸಿದ ಕೀರ್ತಿ ಅಹಲ್ಯಾಬಾಯಿಗೆ ಸಲ್ಲಬೇಕು. ಅಹಲ್ಯಾಬಾಯಿ ಬಹಳ ದೊಡ್ದ ದೈವ ಭಕ್ತೆ, ಆ ಕಾರಣದಿಂದ ರಾಜ್ಯದ ಎಲ್ಲಾ ಶಿಥಿಲಗೊಂಡ ಪ್ರಾಚೀನ ದೇವಾಲಯಗಳನ್ನು ಪುನರುತ್ಥಾನಗೊಳಿಸಿದರು.
ಒಂದು ಸಂಸ್ಥಾನದ ಮಹಾರಾಣಿಯಾಗಿದ್ದರೂ ಬಹಳ ಸರಳವಾದ ಜೀವನವನ್ನು ನಡೆಸಿದ ಶ್ರೇಯ ಇವರಿಗೆ ಸಲ್ಲುತ್ತದೆ. ತಮ್ಮ ಪುತ್ರಿಯ ಪತಿಯ ಅಕಾಲ ಮರಣ ಹಾಗೂ ಮಗಳ ಸಹಗಮನ ಇವೆಲ್ಲಾ ಇವರಿಗೆ ನೋವು ಕೊಟ್ಟ ಸಂಗತಿ. ಹಲವಾರು ಯುದ್ಧಗಳನ್ನು ಹೆಚ್ಚಿನ ರಕ್ತಪಾತ ಮಾಡದೇ ಉಪಾಯದಿಂದ ಜಯಿಸಿದ ಕೀರ್ತಿ ಅಹಲ್ಯಾಬಾಯಿ ಅವರದ್ದು. ಅಹಲ್ಯಾಬಾಯಿಯನ್ನು ಮಾಲ್ವಾದ ಜನರು ಸಾಕ್ಷಾತ್ ದೇವಿಯ ರೂಪವೆಂದೇ ಪರಿಗಣಿಸುತ್ತಿದ್ದರು ಎನ್ನುತ್ತಾರೆ ಬ್ರಿಟೀಷ್ ಅಧಿಕಾರಿ ಸರ್ ಜಾನ್ ಮಾಲ್ಕೋಮ್. 'ಅಹಲ್ಯಾಬಾಯಿ ಎಲ್ಲಾ ನಾಗರಿಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದಳು, ಇವಳ ಕಾಲದಲ್ಲಿ ವರ್ತಕರು, ಕಾರ್ಮಿಕರು, ರೈತರು ಅಹರ್ನಿಶಿಯಾಗಿ ದುಡಿಯುತ್ತಿದ್ದರು. ಇವರಿಗೆ ಶತ್ರುಗಳ ಭಯವಿರಲಿಲ್ಲ. ಪ್ರಜೆಗಳ ಸಂತೋಷವೇ ತಮ್ಮ ಸಂತೋಷ ಎಂದು ತಿಳಿದುಕೊಂಡಿದ್ದಳು. ಜನರ ಓಡಾಟಕ್ಕೆ ವಿಶಾಲವಾದ ರಸ್ತೆಗಳು ಇದ್ದವು, ಹೊರ ಊರಿನಿಂದ ಬಂದ ಪ್ರವಾಸಿಗರಿಗೆ ತಂಗಲು ಪ್ರವಾಸೀ ತಂಗುದಾಣಗಳು, ಬಾಯಾರಿದವರಿಗೆ ನೀರು ಕುಡಿಯಲು ಬಾವಿಗಳು ಇದ್ದವು. ನಿರಾಶ್ರಿತರಿಗೆ, ಬಡವರಿಗೆ ರಾಜ್ಯಾಡಳಿತವೇ ಸಹಾಯ ಮಾಡುತ್ತಿತ್ತು. ಶತ್ರುಗಳನ್ನು ಸಾಕ್ಷಾತ್ ಕಾಳಿಯಂತೆ ಸಂಹಾರ ಮಾಡುತ್ತಿದ್ದಳು, ಅಹಲ್ಯಾಬಾಯಿ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ನಿಧನ ಹೊಂದಿದಾಗ ಇಡೀ ಮಾಲ್ವಾ ಸಂಸ್ಥಾನವೇ ಕಣ್ಣೀರಾಗಿತ್ತು' ಎಂದು ಬರೆದಿದ್ದಾರೆ ಮಾಲ್ಕೋಮ್. ಇವರ ಸಾಹಸ ಕಂಡು ಇವರ ಕಡು ವೈರಿ ಹೈದರಾಬಾದ್ ನ ನಿಜಾಮನೂ ‘ಅಹಲ್ಯಾಬಾಯಿಯಂತಹ ಮಹಿಳೆಯೂ ಇಲ್ಲ, ರಾಣಿಯೂ ಇಲ್ಲ' ಎಂದು ಹೊಗಳಿದ್ದ.
ಹೀಗೆ ಜನಪರ ಆಡಳಿತ ನಡೆಸಿದ ಅಹಲ್ಯಾಬಾಯಿ ಎಲ್ಲಾ ಪ್ರಜೆಗಳ ಕಣ್ಮಣಿಯಾಗಿದ್ದರು. ಅಹಲ್ಯಾ ಬಾಯಿ (ಮರಣ: ೧೩ ಆಗಸ್ಟ್, ೧೭೯೫) ನಂತರ ಮಲ್ಹಾರ್ ರಾವ್ ಅವರು ದತ್ತು ತೆಗೆದುಕೊಂಡಿದ್ದ ಅವರ ಸೋದರಳಿಯ ತುಕೋಜಿ ರಾವ್ ರಾಜ್ಯಭಾರವನ್ನು ವಹಿಸಿಕೊಳ್ಳುತ್ತಾರೆ.
ಅಹಲ್ಯಾಬಾಯಿ ಹೋಲ್ಕರ್ ಕುರಿತು ಲೋಕ ಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ‘ಮಾತೋಶ್ರೀ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ೨೦೦೨ರಲ್ಲಿ ಅಹಲ್ಯಾಬಾಯಿ ಕುರಿತಾದ ಚಲನಚಿತ್ರ ‘ದೇವಿ ಅಹಲ್ಯಾಬಾಯಿ' ಯ ನಿರ್ಮಾಣವಾಗಿದೆ. ಅಹಲ್ಯಾಬಾಯಿಯ ನೆನಪಿಗಾಗಿ ಮಹಾರಾಷ್ಟ್ರದ ಥಾಣೆ ನಗರದಲ್ಲಿ ‘ಅಹಲ್ಯಾದೇವಿ ಹೋಳ್ಕರ್ ಉದ್ಯಾನ್' ಎಂಬ ಉದ್ಯಾನವನನ್ನು ನಿರ್ಮಾಣ ಮಾಡಲಾಗಿದೆ. ಇಂದೋರ್ ನಗರದ ವಿಮಾನ ನಿಲ್ದಾಣಕ್ಕೆ ‘ದೇವಿ ಅಹಲ್ಯಾಬಾಯಿ ಹೋಳ್ಕರ್' ವಿಮಾನ ನಿಲ್ದಾಣ ಎಂದು ಹೆಸರಿಸಲಾಗಿದೆ. ೧೯೯೪ರಲ್ಲಿ ಹಿಂದಿ ಧಾರವಾಹಿ ‘ದಿ ಗ್ರೇಟ್ ಮರಾಠ' ದಲ್ಲಿ ಅಹಲ್ಯಾಬಾಯಿಯ ಪಾತ್ರದ ಉಲ್ಲೇಖವಿದೆ. ಈಗ ೨೦೨೧ರಲ್ಲಿ ‘ಪುಣ್ಯಶ್ಲೋಕ ಅಹಲ್ಯಾಬಾಯಿ' ಎಂಬ ಹಿಂದಿ ಧಾರವಾಹಿಯು ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ೧೯೯೬ರಲ್ಲಿ ಅಹಲ್ಯಾಬಾಯಿಯಲ್ಲಿ ನೆನಪಿನಲ್ಲಿ ಅಂಚೆ ಇಲಾಖೆಯು ಅಂಚೆ ಚೀಟಿಯನ್ನು ಹೊರತಂದಿದೆ.
ಮಹಿಳೆಯರಿಗೆ ಹತ್ತು ಹಲವಾರು ಕಟ್ಟುಪಾಡುಗಳಿದ್ದ ಸಮಯದಲ್ಲಿ ಒಂದು ಸಂಸ್ಥಾನವನ್ನು ಅದೂ ಪತಿ ಹಾಗೂ ಮಕ್ಕಳ ನೆರವಿಲ್ಲದೇ ಏಕಾಂಗಿಯಾಗಿ ಬೆಳೆಸಿದ ಪರಿ ಇತಿಹಾಸದ ಪುಟಗಳಲ್ಲಿ ಸದಾಕಾಲ ಅಮರವಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ಅಹಲ್ಯಾಬಾಯಿ ಸದಾ ಕಾಲ ಸ್ಮರಣೀಯರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಚಿತ್ರಕೃಪೆ: ಅಂತರ್ಜಾಲ ತಾಣ