ಮಾವಿನ ಒಣ ಬೇಸಾಯದಲ್ಲಿ ಇಂಗುಗುಂಡಿಯ ಮಹತ್ವ
ಮಾವು ನಮ್ಮ ದೇಶದ ರಾಷ್ಟ್ರೀಯ ಹಣ್ಣು. ಅಲ್ಲದೇ ಹಣ್ಣುಗಳ ರಾಜನೂ ಕೂಡ. ಹಲವು ವಿಧದ ಮಣ್ಣಿನಲ್ಲಿ ಇದನ್ನು ಬೆಳೆಯಬಹುದಾದರೂ ಕೆಂಪುಗೊಡು ಮಣ್ಣು ಸೂಕ್ತ. ಜೂನ್-ಜುಲೈ ತಿಂಗಳಿನಲ್ಲಿ ೩೦ X ೩೦ ಅಡಿ ಅಂತರದಲ್ಲಿ ೯೦ X ೯೦ X ೯೦ ಸೆಂ.ಮೀ. ಗಾತ್ರದ ಗುಣಿಗಳನ್ನು ಅಗೆದು ಅದಕ್ಕೆ ಸಮಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಮಣ್ಣಿನ ಮಿಶ್ರಣದಿಂದ ತುಂಬಿ ಮಧ್ಯದಲ್ಲಿ ಕಸಿ ಗಿಡಗಳನ್ನು ನಾಟಿ ಮಾಡಲಾಗುತ್ತದೆ. ನಾಟಿ ಮಾಡಿದ ನಂತರ ಗಿಡಗಳಿಗೆ ಕೋಲಿನ ಆಸರೆ ಕೊಟ್ಟು ತಕ್ಷಣವೇ ನೀರನ್ನು ಹಾಯಿಸಬೇಕು. ಮಾವಿನಲ್ಲಿ ಅನೇಕ ತಳಿಗಳು ಪ್ರಚಲಿತದಲ್ಲಿದ್ದು, ಅದರಲ್ಲಿ ಮುಖ್ಯವಾಗಿ ಬಾದಾಮಿ, ಮಲ್ಲಿಕಾ, ತೋತಾಪುರಿ, ಬೆನೆಶಾನ್, ರಾಜಗೀರಾ, ರಸಪೂರಿ ಮತ್ತು ನೀಲಂ ಮುಖ್ಯವಾದವುಗಳು. ಈ ತಳಿಗಳಲ್ಲಿ ಬೆನೆಶಾನ್, ತೋತಾಪುರಿ ಮತ್ತು ನೀಲಂ ತಳಿಯು ಒಣಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿದೆ.
ಮಾವಿನ ಕಸಿ ಗಿಡಗಳಿಗೆ ನಾಟಿಯ ಸಮಯದಲ್ಲಿ ಮತ್ತು ಪ್ರತಿ ವರ್ಷಕ್ಕೆ ೨೫ ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಪೂರೈಸುವುದು ಹಾಗೂ ರಾಸಾಯನಿಕ ಗೊಬ್ಬರಗಳನ್ನು ಮೊದಲನೆ ವರ್ಷ ೭೫:೨೦:೭೦ ಗ್ರಾಂ ಪ್ರತಿ ಗಿಡಕ್ಕೆ ಸಾರಜನಕ, ರಂಜಕ, ಪೊಟ್ಯಾಷ್ ನ್ನು ಕೊಟ್ಟು ಇದನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಾ ಹೋಗಿ ೧೦ನೇ ವರ್ಷದ ಗಿಡಕ್ಕೆ ೭೩೦: ೧೮೦: ೬೮೦ ಗ್ರಾಂ. ಸಾರಜನಕ, ರಂಜಕ, ಪೊಟ್ಯಾಷ್‌ನ್ನು ೨೫ ಕೆ.ಜಿ. ಕೊಟ್ಟಿಗೆ ಗೊಬ್ಬರದ ಜೊತೆಗೆ ಪ್ರತಿ ಗಿಡಕ್ಕೆ ಒದಗಿಸಬೇಕಾಗುತ್ತದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಅಭಿವೃದ್ಧಿ ಪಡಿಸಿರುವ ಮಾವು ಸ್ಪೇಷಲ್‌ನ್ನು ೪ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಸಿಂಪರಣೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ. ಮಾವಿನ ಬೆಳೆಯಲ್ಲಿ ಪ್ರತಿ ಹೆಕ್ಟೇರಿಗೆ, ಪ್ರತಿ ವರ್ಷಕ್ಕೆ ೫ ರಿಂದ ೧೦ ವರ್ಷದ ಗಿಡಗಳಿಂದ ೧೦ ಟನ್ ಇಳುವರಿ ನಿರೀಕ್ಷಿಸಬಹುದಾಗಿದೆ.
ಮಾವಿನ ಹೆಚ್ಚಿನ ಇಳುವರಿಯಲ್ಲಿ ನೀರಿನ ಸಮರ್ಪಕ ಬಳಕೆ: ಸಾಮಾನ್ಯವಾಗಿ ಮಾವು ಗಿಡಗಳಿಗೆ ನಾಟಿ ಮಾಡಿದ ತಕ್ಷಣ ನೀರು ಒದಗಿಸಬೇಕಾಗುತ್ತದೆ. ತದನಂತರ, ಹವಾಗುಣಕ್ಕೆ ಅನುಸರಿಸಿ ವಾರಕ್ಕೆ ೨-೩ ಸಲ ನೀರನ್ನು ಹಾಯಿಸಬೇಕು (ಹೊಸದಾಗಿ ನಾಟಿ ಮಾಡಿದ ಕಸಿಗಿಡಗಳಿಗೆ ವಾರಕ್ಕೆ ೩೦ ಲೀಟರ್ ನೀರನ್ನು ಹಾಯಿಸಬೇಕು) ಹಾಗೂ ಮೊದಲೆರಡು ವರ್ಷ ನಿಯಮಿತವಾಗಿ ನೀರನ್ನು ಕೊಡುವುದರಿಂದ ಗಿಡದ ಬೆಳವಣಿಗೆ ಮತ್ತು ಗಿಡಗಳು ಉತ್ತಮವಾಗಿ ಸ್ಥಾಪಿತವಾಗಲು ಅನುಕೂಲವಾಗುತ್ತದೆ. ಮಾವು ಹೂವು ಬಿಡುವ ಕಾಲದ ೨-೩ ತಿಂಗಳ ಮೊದಲು ನೀರು ಕೊಡುವುದನ್ನು ನಿಲ್ಲಿಸುವುದರಿಂದ ಹೂ ಬಿಡಲು ಪ್ರೇರಪಣೆಯಾಗುತ್ತದೆ.
ಕಾಯಿ ಕಚ್ಚಿದ ಸಮಯದಲ್ಲಿ ನೀರು ನಿರ್ವಹಣೆ: ಮಾವು ಕಾಯಿ ಕಚ್ಚುವ ಸಮಯದಲ್ಲಿ ನೀರನ್ನು ಕೊಡುವುದರಿಂದ ಕಾಯಿ ಉದುರುವಿಕೆ ಕಡಿಮೆಯಾಗಿ ಹೆಚ್ಚಿನ ಇಳುವರಿ ಪಡೆಯಬಹುದು. ಅಲ್ಲದೇ ಕಾಯಿ ಕಚ್ಚಿದ ಸಮಯದಿಂದ ಕಾಯಿ ಸಂಪೂರ್ಣ ಪಕ್ವವಾಗುವವರೆಗೂ ನೀರನ್ನು ೧೦ ದಿನಗಳ ಅಂತರದಲ್ಲಿ ಒದಗಿಸುವುದರಿಂದ ಹೆಚ್ಚಿನ ಗಾತ್ರದ ಕಾಯಿಗಳನ್ನು ಪಡೆಯುವುದರೊಂದಿಗೆ ಅಧಿಕ ಇಳುವರಿ ಪಡೆಯಬಹುದು.
ಒಣ ಪ್ರದೇಶದಲ್ಲಿ ಇಂಗು ಗುಂಡಿಗಳ ಪ್ರಾಮುಖ್ಯತೆ: ಒಣಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗಿರುವುದರಿಂದ ಕೃಷಿ ಹೊಂಡ ಮಾಡುವ ಬದಲು ರೈತರು ಚಿಕ್ಕ ಚಿಕ್ಕ ಇಂಗುಗುಂಡಿಗಳನ್ನು ನಾಲ್ಕು ಗಿಡಗಳ ಮಧ್ಯದಲ್ಲಿ ಒಂದರಂತೆ ಮುಂಗಾರಿಗೆ ಮುಂಚೆ ನಿರ್ಮಿಸಿಕೊಂಡರೆ, ಮಳೆಗಾಲದಲ್ಲಿನ ನೀರು ಇಂಗು ಗುಂಡಿಯಲ್ಲಿ ಶೇಖರಣೆಯಾಗುವುದರ ಜೊತೆಯಲ್ಲಿ ನೀರು ಇಂಗಿ ಭೂಮಿಯಲ್ಲಿ ತೇವಾಂಶವನ್ನು ಹೆಚ್ಚಿಸುವುದರ ಜೊತೆಗೆ ಇಳುವರಿ ಹೆಚ್ಚುವುದು. ಇಂಗುಗುಂಡಿಯ ಗಾತ್ರ ೨.೫ ಮೀ. ಉದ್ದ ೧.೨ ಮೀ. ಅಗಲ ೧.೨ ಮೀ. ಆಳ ಇರುವಂತೆ ನೋಡಿಕೊಳ್ಳುವುದು.
ಇಂಗು ಗುಂಡಿಯ ಅನುಕೂಲತೆಗಳು:
* ಮಾವಿನಲ್ಲಿ ಹೂ ಮತ್ತು ಕಾಯಿ ಉದುರುವಿಕೆ ಕಡಿಮೆಯಾಗಿ ಇಳುವರಿ ಹೆಚ್ಚುವುದು
* ಉತ್ತಮ ಗಾತ್ರದ ಕಾಯಿಗಳಿಂದ ಅಧಿಕ ಇಳುವರಿ
* ಕಾಯಿಗಳು ಬೇಗನೆ ಕಟಾವಿಗೆ ಬರುವುದು
* ಒಣಪ್ರದೇಶಕ್ಕೆ ಸೂಕ್ತವಾದ ತಂತ್ರಜ್ಞಾನ, ಕಡಿಮೆ ಖರ್ಚಿನಲ್ಲಿ ಇಂಗುಗುಂಡಿಗಳ ಅಳವಡಿಕೆ
* ಉತ್ತಮ ಗುಣಮಟ್ಟದ ಕಾಯಿಗಳನ್ನು ಪಡೆಯಬಹುದು
* ನೀರು ಮತ್ತು ಕೂಲಿಯಾಳುಗಳ ನಿರ್ವಹಣೆ ಖರ್ಚನ್ನು ತಡೆಯಬಹುದು.
ಮಾಹಿತಿ ಮತ್ತು ಚಿತ್ರ : ನಾಗರಾಜ, ಕೆ. ಎಸ್. ಕೃಷಿ ವಿಜ್ಞಾನ ಕೇಂದ್ರ, ಕೋಲಾರ