ಮಾವಿನ ಕಾಯಿ ಗೊಜ್ಜು

ಮಾವಿನ ಕಾಯಿ ಗೊಜ್ಜು

ಬೇಕಿರುವ ಸಾಮಗ್ರಿ

ಉಪ್ಪು ನೀರಿಗೆ ಹಾಕಿದ ಮಾವಿನಕಾಯಿ -೩, ಚಿಟಿಕೆಯಷ್ಟು ಜೀರಿಗೆ, ಉದ್ದಿನಬೇಳೆ, ಮೆಂತೆ, ಸ್ವಲ್ಪ ಎಣ್ಣೆ/ತುಪ್ಪ, ಕರಿಬೇವು, ಮೆಣಸು ೫-೬, ಬೆಳ್ಳುಳ್ಳಿ ಎಸಳು ೨-೩, ಸ್ವಲ್ಪ ಇಂಗು, ಸಣ್ಣ ತುಂಡು ಶುಂಠಿ, ಸಾಂಬಾರು ಹುಡಿ ೨ ಚಮಚ, ರುಚಿಗೆ ಬೆಲ್ಲ, ಬೇಕಾದರೆ ಸ್ವಲ್ಪ ಉಪ್ಪು.

ತಯಾರಿಸುವ ವಿಧಾನ

ಹಳ್ಳಿಯಲ್ಲಿ ನೀರು ಮಾವಿನಕಾಯಿ ಎಂದು ಹೇಳುವುದಿದೆ. ಮೂರು ಮಧ್ಯಮಗಾತ್ರದ ಮಾವಿನಕಾಯಿಗಳನ್ನು ತೊಳೆದು ಸ್ವಲ್ಪ ಬೇಯಿಸಿಕೊಳ್ಳಬೇಕು. ಗಟ್ಟಿಯಾಗಿದ್ದರೆ ಕುಕ್ಕರಲ್ಲಿಯೂ ಬೇಯಿಸಬಹುದು. ತಣ್ಣಗಾದ ಮೇಲೆ ಬೇಯಿಸಿದ ಕಾಯಿಗಳನ್ನು ಹಿಚುಕಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಒಗ್ಗರಣೆ ವಸ್ತುಗಳನ್ನು (ವಿಶೇಷವಾಗಿ ಚಿಟಿಕೆ ಜೀರಿಗೆ,ಉದ್ದಿನಬೇಳೆ,ನಾಲ್ಕು ಕಾಳು ಮೆಂತೆ)ಹಾಕಿ ಎಣ್ಣೆ ಅಥವಾ ತುಪ್ಪ ಸೇರಿಸಿ. ಕರಿಬೇವು, ಮೆಣಸು, ಬೆಳ್ಳುಳ್ಳಿ, ಇಂಗು, ಶುಂಠಿ ಸೇರಿಸಿ ಚೆನ್ನಾಗಿ ಹುರಿಯಬೇಕು. ಗಾಂಧಾರಿ ಮೆಣಸು ಇದ್ದರೆ ಹಾಕಬಹುದು. ಹಿಚುಕಿದ ಮಾವಿನಕಾಯಿ ಸೇರಿಸಿ, ಬೇಕಾದಷ್ಟು ನೀರು ಹಾಕಬೇಕು. ಉಪ್ಪು ನೋಡಿಕೊಂಡು ಹಾಕಿ. ಯಾಕೆಂದರೆ ಮಾವಿನಕಾಯಿಯಲ್ಲಿಯೇ ಸಾಕಷ್ಟು ಉಪ್ಪು ಇರುತ್ತದೆ. ಸಾಂಬಾರ್ ಹುಡಿ, ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ, ಕೆಳಗಿಳಿಸಿ ಮುಚ್ಚಿಡಿ. ಈ ಗೊಜ್ಜು ಊಟಕ್ಕೆ, ಚಪಾತಿ, ರೊಟ್ಟಿ, ದೋಸೆಗೆ ಬಹಳ ರುಚಿ. (ಸಿಹಿ ಬೇಕಾದವರು ಜಾಸ್ತಿ ಬೆಲ್ಲ ಹಾಕಬಹುದು.)

-ರತ್ನಾ ಕೆ ಭಟ್, ತಲಂಜೇರಿ, ಪುತ್ತೂರು