ಮಾವಿನ ಮರವೊಂದರ ಕಣ್ಣೀರ ಕಥೆ !

ಮಾವಿನ ಮರವೊಂದರ ಕಣ್ಣೀರ ಕಥೆ !

ನೂರಾರು ವರ್ಷಗಳಿಂದ ವೇಣೂರು- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಬೆಳೆದು ನಿಂತಿದ್ದ ದೈತ್ಯಾಕಾರದ ಮಾವಿನ ಮರಗಳನ್ನು ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣ, ವಿದ್ಯುತ್ ತಂತಿಗೆ ಅಳವಡಿಕೆಗೆ ಅಡಚಣೆ ಎಂಬ ನೆಪ ನೀಡಿ ದಾರುಣವಾಗಿ ಕಡಿದುಹಾಕಲಾಯಿತು. ಇಂತಹ ಅದೆಷ್ಟೋ ಮರಗಳಿಂದ ದಾರಿಹೋಕರು ಹೆಕ್ಕಿ ತಿಂದ ಹಣ್ಣುಗಳೆಷ್ಟೋ, ಕೋತಿ, ಪಕ್ಷಿ, ಹೆಗ್ಗಣ, ಸಹಸ್ರಪದಿ, ಕೀಟಗಳು ಮುಂತಾದ ಜೀವಿಗಳು ತಿಂದುದೆಷ್ಟೋ? ಇನ್ನು ಅವುಗಳಿಗೆಲ್ಲಾ ಉಪವಾಸ. ಈ ಮರಗಳಲ್ಲಿ ಗೂಡು ಕಟ್ಟಿಕೊಂಡು ತಮ್ಮ ಸಂಸಾರವನ್ನು ಬೆಳೆಸುವ ಕನಸು ಕಾಣುತ್ತಿದ್ದ ಹಕ್ಕಿಗಳೆಷ್ಟೋ? ಈ ಮಾವಿನ ಮರಗಳಲ್ಲಿ ವೈವಿದ್ಯಮಯವಾದ ಕಾಡು ಮಾವುಗಳಿತ್ತು. ಕೆಲವು ಉಪ್ಪಿನಕಾಯಿಗೆ ಸೂಕ್ತವಾಗಿದ್ದರೆ, ಮತ್ತೆ ಕೆಲವು ಹಣ್ಣಿಗೆ. ರನ್ನಾಡಿಪಲ್ಕೆ ಎಂಬ ಬಸ್‌ಸ್ಟಾಂಡ್ ಗಿಂತ ಸ್ವಲ್ಪ ಮುಂದೆ ಇದ್ದ ಮಾವಿನ ಮರದಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಅಲ್ಫೋನ್ಸ್ ಮಾವಿನ ಹಣ್ಣಿನ ಗಾತ್ರದ ಆದರೆ ಅದಕ್ಕಿಂತ ಉತ್ತಮ ರುಚಿಯ ಮಾವಿನ ಹಣ್ಣು ಆಗುತ್ತಿತ್ತು. ಅದೆಲ್ಲವೂ ಇನ್ನು ನೆನಪು ಮಾತ್ರ. ಆ ಮರಗಳನ್ನೆಲ್ಲಾ ಕಡಿದು ಧರೆಗೆ ಉರುಳಿಸಲಾಗಿದೆ. ಇನ್ನೂ ನೂರಾರು ವರ್ಷ ಬದುಕಿರುತ್ತಿದ್ದವು, ಆದರೆ ಮನುಷ್ಯ ಬಿಡಬೇಕಲ್ಲಾ, ಇನ್ನೂ ನಮ್ಮ ಬೆಳವಣಿಗೆ ಆಗಿಲ್ಲ. ತಿರುಳೂ ಕೂಡಿಲ್ಲ ಎಂಬ ಮೌನಕೂಗಿನೊಂದಿಗೆ ಮರಗಳು ಅಡ್ಡಡ್ಡ ಮಲಗಿವೆ. ಹಿಂದೆ ಮಾವಿನ ಮರಗಳಿಂದ ಹಲಗೆ, ದೋಣಿ ಮಾಡುತ್ತಿದ್ದರು. ಈಗ ದೋಣಿಗೂ ಬೇಡ ಹಲಗೆಗೂ ಬೇಡ. ಕಟ್ಟಿಗೆಯಾಗಿ ಉರಿದು ಬೂದಿಯಾಗಬೇಕಷ್ಟೇ. ಪ್ರತೀಯೊಂದು ಜೀವಿಯು ತನ್ನ ಅವನತಿಯ ಕಾಲಕ್ಕೆ ತನ್ನ ಸಂತತಿಯನ್ನು ಉಳಿಸಿರುತ್ತವೆ. ಆದರೆ ಮರಮಟ್ಟುಗಳಿಗೆ ಈ ಯೋಗ ಇಲ್ಲ. ಅಳಿದ ಮೇಲೆ ಮುಗಿಯಿತು.

ವೇಣೂರಿನಲ್ಲಿ ಸ್ಥಾಪಿತವಾಗುತ್ತಿರುವ ವಿದ್ಯುತ್ ಪೂರೈಕೆಯ ಸಬ್ ಸ್ಟೇಷನ್ ಮಾಡುವುದಕ್ಕೋಸ್ಕರ ರಸ್ತೆ ಬದಿಯಲ್ಲಿ ತಾಳೆ ಮರದ ಗಾತ್ರದ ದೈತ್ಯ ಕಂಬಗಳನ್ನು ಹಾಕಲಾಗಿದೆ. ಇದರ ಮೇಲೆ ತಂತಿ ಎಳೆಯಲಾಗುತ್ತಿದೆ.  ತಂತಿ ಎಳೆಯಬೇಕಿದ್ದರೆ, ವಿದ್ಯುತ್ ಪ್ರವಹಿಸಬೇಕಿದ್ದರೆ, ಈ ಮರಗಳು ಅಡ್ಡಿಯಾಗುತ್ತವೆ. ಯಾರೋ ನೆಟ್ಟು ಬೆಳೆಸಿದ ಸುಮಾರು ೬೫ಕ್ಕೂ ಹೆಚ್ಚು ಕಾಡು ಮಾವಿನ ಮರಗಳು ಮನುಷ್ಯನ ವಿದ್ಯುತ್ ಅವಶ್ಯಕತೆಗಾಗಿ ಪ್ರಾಣ ಕಳೆದುಕೊಳ್ಳುವಂತಾಯಿತು. ಇಲ್ಲಿಗೆ ಅಲ್ಲಿನ ಮಾವಿನ ಮರಗಳ ವೈಭವ-ನೆರಳು, ಪಶು ಪ್ರಾಣಿ ಪಕ್ಷಿಗಳಿಗೆ ದೊರೆಯುತ್ತಿದ್ದ ಆಶ್ರಯ ಕಡಿದುಹೋಯಿತು. 

ಅಭಿವೃದ್ದಿಗೆ ಅಡ್ಡಿಯಾಗುವ ಕಾರಣಕ್ಕೆ ಪರಿಸರಕ್ಕೆ ಅನಿವಾರ್ಯವಾಗಿ ಕಿರುಕುಳ ಕೊಡಬೇಕಾದೀತು. ರಸ್ತೆ ಅಗಲೀಕರಣಕ್ಕೆ, ವಿದ್ಯುತ್ ಸರಬರಾಜಿಗೆ ಮರ ಕಡಿಯಲೇ ಬೇಕಾಗಬಹುದು. ಇದು ಅಭಿವೃದ್ದಿಗಾಗಿ ತ್ಯಾಗ ಎಂಬುದಾಗಿ ಕರೆಯಲ್ಪಡುತ್ತದೆ. ನಾವು ಕಟ್ಟಾ ಪರಿಸರವಾದಿಗಳಂತೆ ಮರ ಕಡಿಯಲೇ ಬಾರದು. ರಸ್ತೆ ಹೇಗಿದ್ದರೂ ಆದೀತು, ವಿದ್ಯುತ್ ಇದ್ದ ಹಾಗೇ ಇರಲಿ ಎಂಬ ವಾದ ಮಾಡುತ್ತಿಲ್ಲ. ನಮ್ಮದು ಕಪ್ಪು ಬಿಳುಪಿನ ವರ್ಣಗಳ ಮಧ್ಯೆ ಇರುವ ಬೂದುವಿನೊಂದಿಗೆ ರಾಜಿ ಅಷ್ಟೇ. ಮರವನ್ನು ಯಾರು ನೆಟ್ಟಿದ್ದಾರೋ ಎಂಬ ಬಗ್ಗೆ ನಮ್ಮ ಯಾವುದೇ ಇಲಾಖೆಗಳಲ್ಲಿ ದಾಖಲೆ ಇರಲಿಕ್ಕಿಲ್ಲ. ಆದರೆ ಅವರ ಪರಿಸರ ಕಾಳಜಿಯ ಕುರಿತಾಗಿ ನಮ್ಮಲ್ಲಿ ಕನಿಷ್ಟ ಗೌರವ ಮತ್ತು ಅದರ ಸ್ಮರಣೆ ಇರಲೇ ಬೇಕು. ಅದು ಯಾವ ತಳಿಯೋ, ಅದರ ಗುಣ ಯಾವುದೋ ಗೊತ್ತಿಲ್ಲದಿರಬಹುದು. ಆದರೆ ಅದರ ಒಂದು ತಳಿಯನ್ನು ಉಳಿಸುವ ಕೆಲಸ ಮಾತ್ರ ಕಷ್ಟದ್ದಾಗಿರಲಿಲ್ಲ.

ನಮ್ಮಲ್ಲಿ ಅರಣ್ಯ ಸಂರಕ್ಷಣೆಗೆಂದೇ ಇಂದು ಬೃಹತ್  ಇಲಾಖೆ ಇದೆ. ಇಲ್ಲಿ ಉನ್ನತ ವ್ಯಾಸಂಗ ಮಾಡಿದ ಸಿಬ್ಬಂದಿಗಳಿರುತ್ತಾರೆ. ಅವರು ಅಭಿವೃದ್ದಿಗಾಗಿ ಮರಮಟ್ಟುಗಳು ಕಡಿಯಬೇಕಾದ ಸಮಯದಲ್ಲಿ ಅದನ್ನು ಇನ್ನೆಲ್ಲಿದರೂ ಉಳಿಸಿ ಸಂರಕ್ಷಿಸುವ ಬಗ್ಗೆ ಯೋಚನೆ ಮಾಡಬೇಕು. ಆದರೆ ನಮ್ಮ ಅರಣ್ಯ ಇಲಾಖೆ ಮರ ಕಡಿಯುವವರಿಗೆ ಪರವಾನಿಗೆ ನೀಡಲು, ಕದ್ದು ಕಡಿದು ಸಾಗಣೆಯಾಗುವ ಮರ ಮಟ್ಟುಗಳನ್ನು ಜಪ್ತಿ ಮಾಡಿ ಇಲಾಖೆಯ ಬಾಗಿಲಲ್ಲಿ ಕಾಷ್ಠತುಂಬಿದ ವಾಹನವನ್ನು ನಿಲ್ಲಿಸಿ ಫೋಟೋ ತೆಗೆದು ಸೌಂದರ್ಯ ನೋಡುವುದಕ್ಕಷ್ಟೇ ಸೀಮಿತ. ಅರಣ್ಯ ಇಲಾಖೆ ಸ್ಥಾಪನೆಯಾಗಿ ಸುಮಾರು ೬೦ ವರ್ಷಗಳಾಗಿವೆ. ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಕ್ಷೀಣವಾಗುತ್ತಿವೆ.

ಕಡಿಯುವ ಮುಂಚೆ ಮಾವಿನ ಮರಗಳ ತಳಿಯ ಕುಡಿಯನ್ನು ಉಳಿಸಿಕೊಳ್ಳಲು ಯಾವುದೇ ಅತ್ಯಾಧುನಿಕ ತಾಂತ್ರಿಕತೆ ಬೇಕಾಗಿರಲಿಲ್ಲ. ವಿದ್ಯೆ ಇಲ್ಲದವನೂ ತಿಳಿ ಹೇಳಿದರೆ ಮಾಡಬಹುದಾದ ಕಸಿ ತಾಂತ್ರಿಕತೆ ನಮ್ಮಲ್ಲಿದೆ. ಮರದ ಕುಡಿಯನ್ನು ಮತ್ತೊಂದು ಸಸಿಗೆ ಕಸಿ ಮಾಡಿ ಅದರಲ್ಲಿ ಈ ಮರದ ಸ್ವರೂಪವನ್ನು ಕಾಣಬಹುದಿತ್ತು. ಮುಂದಿನ ಜನಾಂಗಕ್ಕಾಗಿ ಬೆಳೆಸಬಹುದಾಗಿತ್ತು. ಆದರೆ ಯಾರಿಗೂ ಇದು ಬೇಡ. ಎಲ್ಲೂ ಇದು ಆಗಿಲ್ಲ. ನನ್ನ ಅನುಭವದಲ್ಲಿ ರಸ್ತೆ ಅಗಲೀಕರಣಕ್ಕಾಗಿ ರಾಜ್ಯದಾದ್ಯಂತ ಕಡಿಯಲ್ಪಟ್ಟ ಲಕ್ಷಾಂತರ ಸಂಖ್ಯೆಯ ಮರ ಮಟ್ಟುಗಳ ತಳಿ ವೈವಿಧ್ಯಗಳೆಲ್ಲಾ ಅಳಿದವು. ಇನ್ನೂ ಅಳಿಯುತ್ತಿವೆ. ಅರಣ್ಯ ಕಾಯಲಿಕ್ಕಾಗಿ ಇರುವ ಇಲಾಖೆ ಅದನ್ನು ಮಾಡುವುದು ಒಂದೆಡೆ ಇರಲಿ. ಸಾರ್ವಜನಿಕರಿಗೆ ಎಲ್ಲಿಯಾದರೂ ಪರಿಸರ ಕಾಳಜಿ ಇದ್ದರೆ ಸಮೀಪದ ಯಾವುದಾದರೂ ನರ್ಸರಿಯಲ್ಲಿ ಕಸಿ ಕಟ್ಟುವುದನ್ನು ಕಲಿಯಿರಿ.  ಹಾಗೇ ಮರ ಕಡಿಯುವ ಮುನ್ನ ಅದರ ಒಂದೆರಡು ಕುಡಿಯನ್ನು ಕಸಿ ಕಟ್ಟಿ ಎಲ್ಲಾದರೂ ಉಳಿಸಿ. ಇದು ಸಾರ್ವಜನಿಕ ಸ್ಥಳದಲ್ಲಿ ಜನೋಪಕಾರಕ್ಕೆ ಮರಮಟ್ಟು ಬೆಳೆಸಿ ಮಹತ್ಕಾರ್ಯ ಮಾಡಿದ ನಮ್ಮ ಪೂರ್ವಿಕರ ಋಣವನ್ನು ಸಂದಾಯ ಮಾಡುವ ಪುಣ್ಯದ ಕೆಲಸ.

ಮಾವು, ಹಲಸು, ನೇರಳೆ, ಹೆಬ್ಬಲಸು ಇತ್ಯಾದಿ ಮರಗಳು, ಇವೆಲ್ಲಾ ಸಕಲ ಜೀವ ರಾಶಿಗಳಿಗೆ ಆಶ್ರಯ ಕೊಡುವ  ಮರಮಟ್ಟುಗಳಾಗಿವೆ. ಇವುಗಳ ಅವನತಿಯಿಂದ ಪರಿಸರದ ಅಸಮತೋಲನ ಉಂಟಾಗುತ್ತದೆ. ಆದುದರಿಂದ ಅನಿವಾರ್ಯವಾಗಿ ಮರಗಳನ್ನು ಕಡಿಯಲೇ ಬೇಕಾಗಿರುವ ಸಮಯದಲ್ಲಿ ಆ ಮರದ ಸಸಿಗಳನ್ನು ಮರು ಉತ್ಪತ್ತಿ ಮಾಡುವ ಬಗ್ಗೆ, ಆ ಮರವನ್ನು ಸ್ಥಳಾಂತರ ಮಾಡುವ ಬಗ್ಗೆ (ಈಗಾಗಲೇ ಬಹಳ ಕಡೆಗಳಲ್ಲಿ ಈ ವಿಧಾನ ನಡೆದಿದೆ) ಯೋಚನೆ ಮಾಡಬೇಕಿದೆ.  

ಚಿತ್ರ ೧: ಮರವಿನ್ನೂ ಎಳೆಯದು ಎಂಬುದನ್ನು ಸೂಚಿಸುತ್ತಿರುವ ಕಪ್ಪು ತಿರುಳು.

ಚಿತ್ರ ೨: ಇಂದೋ ನಾಳೆಯೋ ಕಡಿಯುವುದಕ್ಕೆ ತಯಾರಾಗಿರುವ ಮಾವಿನ ಮರ.  

ಚಿತ್ರ ೩: ಅಳಿಯುತ್ತಿರುವ ಮರಮಟ್ಟುಗಳಿಗೆ ಪುನರ್ಜೀವ ಕೊಡಲು ಸರಳ ಕಣ್ಣು ಕಸಿ.

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ  ಹೊಳ್ಳ