ಮಾವಿನ ಮರ ತಿಳಿಸಿದ ಬದುಕಿನ ಪಾಠ

ಅಂದು ಸೂರಿಯ ಐದನೇ ವರ್ಷದ ಹುಟ್ಟು ಹಬ್ಬ. ಮನೆಯಲ್ಲಿ ಆತನ ಹುಟ್ಟುಹಬ್ಬಕ್ಕೆ ಆಗಮಿಸಿದವರೆಲ್ಲಾ ವಿಧವಿಧದ ಉಡುಗೊರೆಗಳನ್ನು ನೀಡಿದ್ದರು. ಕೆಲವರು ಆಟವಾಡುವ ಆಟಿಕೆಗಳನ್ನು ನೀಡಿದರೆ, ಕೆಲವರು ಜ್ಞಾನಕ್ಕೆ ಆಧಾರವಾಗುವ ಉತ್ತಮ ಪುಸ್ತಕಗಳನ್ನು ನೀಡಿದ್ದರು. ಸುಂದರ ಉಡುಗೆ ತೊಡುಗೆಗಳೂ ಆ ಉಡುಗೊರೆಯ ರಾಶಿಯಲ್ಲಿದ್ದವು. ಪ್ರತೀ ವರ್ಷ ಏನಾದರೂ ಆಟಿಕೆಗಳನ್ನು ನೀಡುವ ಆತನ ಅಪ್ಪ ಆ ವರ್ಷ ಆತನಿಗೆ ಒಂದು ವಿಭಿನ್ನವಾದ ಉಡುಗೊರೆ ನೀಡಿದ್ದರು. ಅದೇ ಒಂದು ಮಾವಿನಹಣ್ಣಿನ ಮರದ ಸಸಿ.
ಹುಟ್ಟುಹಬ್ಬದ ಕಾರ್ಯಕ್ರಮ ಮುಗಿದ ಬಳಿಕ ಸೂರಿ ಮತ್ತು ಆತನ ತಂದೆ ಜೊತೆಯಾಗಿ ಅವರ ತೋಟಕ್ಕೆ ತೆರಳಿದರು. ಅಲ್ಲಿ ಸೂರಿಯ ತಂದೆ ಮಾವಿನ ಸಸಿ ನೆಡಲು ಒಂದು ಗುಂಡಿಯನ್ನು ತೆಗೆದರು. ನಂತರ ಸೂರಿಯ ಕೈಯಿಂದಲೇ ಆ ಸಸಿಯನ್ನು ನೆಡಿಸಿ, ಅದಕ್ಕೆ ಮಣ್ಣು ತುಂಬಿಸಿ, ಸ್ವಲ್ಪ ನೀರು ಹಾಕಿಸಿದರು. ಈ ಪ್ರಾಯೋಗಿಕ ಉಡುಗೊರೆ ಸೂರಿಗೆ ಬಹಳ ಖುಷಿ ಕೊಟ್ಟಿತು.
“ಅಪ್ಪಾ, ಈ ಗಿಡ ಯಾವಾಗ ದೊಡ್ಡದಾಗುತ್ತೆ? ಯಾವಾಗ ಹಣ್ಣುಗಳನ್ನು ಕೊಡುತ್ತದೆ?” ಎಂದು ಕುತೂಹಲದಿಂದ ಕೇಳಿದ. ಅದಕ್ಕೆ ಅಪ್ಪ “ ನೀನು ದಿನಾಲೂ ಅದಕ್ಕೆ ನೀರು ಹಾಕುತ್ತಿದ್ದರೆ, ನಿನ್ನ ಜೊತೆಯೇ ಬೆಳೆದು ದೊಡ್ದದಾಗಿ ಬೇಗನೇ ಹಣ್ಣುಗಳನ್ನು ಕೊಡುತ್ತದೆ" ಎಂದ.
ಅಪ್ಪನ ಮಾತಿನಂತೆ ಸೂರಿ ಪ್ರತೀ ದಿನ ಶಾಲೆಯಿಂದ ಬಂದ ಬಳಿಕ ಆ ಗಿಡಕ್ಕೆ ನೀರು ಹಾಕುತ್ತಿದ್ದ. ಅಪ್ಪ ಕೊಡುತ್ತಿದ್ದ ಗೊಬ್ಬರಗಳನ್ನೂ ಅದರ ಬುಡದಲ್ಲಿ ಉದುರಿಸುತ್ತಿದ್ದ. ಸೂರಿಯ ಜೊತೆ ಆ ಗಿಡವೂ ಚೆನ್ನಾಗಿ ಬೆಳೆಯಿತು. ಸೂರಿಗೂ ಆ ಗಿಡದ ಜೊತೆ ಒಂದು ಬಾಂಧವ್ಯ ಬೆಳೆಯಿತು. ಪ್ರತೀದಿನ ಆತ ಶಾಲೆಯಿಂದ ಬಂದು ಆ ಗಿಡದ ಜೊತೆ ಶಾಲೆಯಲ್ಲಿ ಏನೇನು ನಡೆಯಿತು ಎಂದು ಹೇಳುತ್ತಿದ್ದ. ಗಿಡ ಮೌನವಾಗಿ ಕೇಳುತ್ತಿತ್ತು. ಅಪ್ಪ ಜೋರು ಮಾಡಿದಾಗ, ಅಮ್ಮ ಹೊಡೆದಾಗ, ಹೊಸ ಬಟ್ಟೆ ತಂದುಕೊಟ್ಟಾಗ ಎಲ್ಲವನ್ನೂ ಸೂರಿ ಗಿಡದ ಬಳಿ ಹೇಳುತ್ತಿದ್ದ. ಆ ಗಿಡದ ಮೇಲೆ ಹತ್ತಿ ಅದರ ರೆಂಬೆಗಳಲ್ಲಿ ಕೂತು ಆಟವಾಡುತ್ತಿದ್ದ. ಗಿಡಕ್ಕೂ ಇದು ಸಂತೋಷ ಕೊಡುತ್ತಿತ್ತು.
ಆದರೆ ಸಮಯ ನಿಲ್ಲುವುದೇ? ಹಾಗೂ ಹೀಗೂ ಸೂರಿ ಹತ್ತನೇ ತರಗತಿಯನ್ನು ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಹೋಗಬೇಕಾಯಿತು. ಅಪ್ಪ ಅಮ್ಮನನ್ನು ಬಿಟ್ಟು ಹೋಗುವ ನೋವಿಗಿಂತ ಆತನಿಗೆ ಆ ಮಾವಿನ ಮರವನ್ನು ಬಿಟ್ಟು ಹೋಗುವ ನೋವು ಅಧಿಕವಾಗಿತ್ತು. ಆದರೆ ಮುಂದಿನ ವಿದ್ಯಾಭ್ಯಾಸ ತುಂಬಾ ಅಗತ್ಯವಿತ್ತು.
“ಪ್ರತೀ ವರ್ಷ ರಜೆಯಲ್ಲಿ ಬಂದು ಸಿಗುತ್ತೇನೆ, ನಿನ್ನ ಜೊತೆ ಆಟವಾಡುತ್ತೇನೆ" ಎಂದು ಮರಕ್ಕೆ ಭರವಸೆ ನೀಡಿ ಆತ ನಗರಕ್ಕೆ ಹೋದ. ಪ್ರತೀ ವರ್ಷ ಬರುತ್ತಿದ್ದ. ಮರದ ಹತ್ತಿರ ಹೋಗುತ್ತಿದ್ದ, ಆದರೆ ಆತ ಈಗ ಬೆಳೆದು ದೊಡ್ಡವನಾದುದರಿಂದ ಮರವನ್ನು ಹತ್ತಿ ಆಡುತ್ತಿರಲಿಲ್ಲ. ಆತನ ಅಗಲುವಿಕೆ ಮರಕ್ಕೂ ಬೇಸರ ತಂದಿತ್ತು. ಆದರೆ ಆತನ ಭವಿಷ್ಯ ಮುಖ್ಯವಾದುದರಿಂದ ಮರವೂ ತನ್ನ ನೋವನ್ನು ನುಂಗಿ ಆತ ಬಂದಾಗ ಮಾತ್ರ ಲವಲವಿಕೆ ತೋರಿಸುತ್ತಿತ್ತು. ಈ ನಡುವೆ ಸೂರಿಯ ಅಪ್ಪ ಹಾಗೂ ಅಮ್ಮ ಒಂದು ಅಪಘಾತದಲ್ಲಿ ನಿಧನ ಹೊಂದಿದರು. ಸಂಬಂಧಿಕರು ಹುಸಿ ಪ್ರೀತಿ ತೋರಿಸಿ ಸ್ವಲ್ಪ ಆಸ್ತಿಯನ್ನು ಲಪಟಾಯಿಸಿದರು. ಮಾವಿನ ಮರ ಇದ್ದ ಜಾಗ ಮಾತ್ರ ಸೂರಿ ಹಠ ಮಾಡಿ ಉಳಿಸಿಕೊಂಡ.
ಒಂದು ದಿನ ಆತ ಮರದ ಬಳಿ ಬಂದ. ಸೂರಿಯ ಮುಖವೇ ಆತನ ಬೇಸರವನ್ನು ಎತ್ತಿ ತೋರಿಸುತ್ತಿತ್ತು. ಬಂದವನೇ ಮರವನ್ನು ಗಟ್ಟಿಯಾಗಿ ತಬ್ಬಿ ಹೇಳಿದ “ ಮಾವಿನ ಮರವೇ, ನನಗೆ ಹೆಚ್ಚಿನ ಕಲಿಕೆಗಾಗಿ ಹಣ ಬೇಕಾಗಿದೆ. ಸಂಬಂಧಿಕರು ಯಾರೂ ಹಣ ಕೊಡುವುದಿಲ್ಲ. ಅವರು ನಾನು ಕಲಿತದ್ದು ಸಾಕು. ಏನಾದರೂ ಕೆಲಸ ಮಾಡು ಅಂತಾರೆ. ನಾನು ಏನು ಮಾಡಲಿ?”. ಮರ ಹೇಗೆ ಮಾತನಾಡೀತು?
ಅದೇ ನೋವಿನಲ್ಲಿ ಸೂರಿ ಹೋಗಿ ಮಲಗಿಕೊಂಡ. ಕನಸಿನಲ್ಲಿ ಆ ಮಾವಿನ ಮರ ಬಂತು. ಬಂದು ಆತನಿಗೆ ಹೇಳಿತು. “ಸೂರಿ, ನೀನು ಬೇಸರ ಮಾಡಬೇಡ. ನನ್ನಲ್ಲಿರುವ ಎಲ್ಲಾ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಪೇಟೆಗೆ ಹೋಗು. ಅದನ್ನು ನೀನು ಅಲ್ಲಿ ಮಾರಿದರೆ ಉತ್ತಮ ಬೆಲೆ ಸಿಗುತ್ತದೆ. ನಾನು ಬಿಡುವ ಮಾವಿನ ಹಣ್ಣು ಅಪರೂಪದ ತಳಿ. ಅದನ್ನು ಮಾರಿದರೆ ನಿನಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಾಕಾಗುವಷ್ಟು ಹಣ ಸಿಗುತ್ತದೆ.” ಎಂದು ಹೇಳಿತು.
ಕನಸಿನಿಂದ ಎದ್ದು ಸೂರಿ ಮರದ ಹತ್ತಿರ ಬಂದು ನೋಡಿದಾಗ ಮರದಲ್ಲಿ ಸಾವಿರಾರು ಅಪರೂಪದ ಮಾವಿನ ಹಣ್ಣುಗಳಿದ್ದವು. ಅವುಗಳನ್ನು ಆತ ಕಿತ್ತು ಮಾರಿ ತನ್ನ ವಿದ್ಯಾಭ್ಯಾಸಕ್ಕೆ ಬೇಕಾಗುವಷ್ಟು ಹಣ ಗಳಿಸಿದ. ಮುಂದಿನ ಹಲವಾರು ವರ್ಷಗಳ ಕಾಲ ಆತ ಊರಿಗೆ ಬರಲೇ ಇಲ್ಲ. ಮಾವಿನ ಹಣ್ಣಿನ ಮರವೂ ಆತನ ದಾರಿಯನ್ನೇ ಕಾಯುತ್ತಿತ್ತು. ಒಂದು ದಿನ ಮರದತ್ತ ಓಡೋಡಿ ಬರುತ್ತಿದ್ದ. ಅದನ್ನು ನೋಡಿದ ಮರ ಬಹಳ ಸಂತೋಷ ಪಟ್ಟಿತು. ಬಂದವನೇ ಹೇಳಿದ
“ ಮರವೇ, ನಿನ್ನ ಮಾತಿನಂತೆ ನಾನು ಕಲಿತು, ಉತ್ತಮ ಉದ್ಯೋಗವನ್ನು ಗಳಿಸಿಕೊಂಡೆ. ನಾನು ಈಗ ಒಂದು ಮನೆಯನ್ನು ಕೊಳ್ಳಲು ಬಯಸುತ್ತಿದ್ದೇನೆ. ಅದಕ್ಕಾಗಿ ನನಗೆ ಹಣದ ಅವಶ್ಯಕತೆ ಇದೆ. ನಾನು ಏನು ಮಾಡಲಿ?”
ಅದೇ ದಿನ ರಾತ್ರಿ ಸೂರಿಯ ಕನಸಿನಲ್ಲಿ ಮರ ಮತ್ತೆ ಬಂತು “ಗೆಳೆಯಾ, ನೀನು ಏಕೆ ಬೇಸರಿಸಿಕೊಳ್ಳುವಿ? ನಾನಿರುವುದೇ ನಿನಗಾಗಿ. ನನ್ನ ರೆಂಬೆ-ಕೊಂಬೆಗಳನ್ನು ಕಡಿದು ಮಾರಿ ಬಿಡು. ಉತ್ತಮ ಬೆಲೆ ಸಿಗುತ್ತದೆ. ಅದರಿಂದ ನೀನು ನಿಮ್ಮ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದು" ಅಂದಿತು.
ಸೂರಿ ಅದರಂತೆಯೇ ಮಾಡಿದ. ಹಸಿರಾದ ಎಲೆ, ಅಗಲವಾಗಿ ಚಾಚಿಕೊಂಡಿದ್ದ ರೆಂಬೆ-ಕೊಂಬೆಗಳಿಂದ ನಳನಳಿಸುತ್ತಿದ್ದ ಮರದ ಕತ್ತರಿಸಿದ ಕಾಂಡ ಮಾತ್ರ ಉಳಿದು ಹೋಯಿತು. ನಂತರದ ದಿನಗಳಲ್ಲಿ ಆತ ಮರದ ಬಳಿ ಬರಲೇ ಇಲ್ಲ. ಮರವೂ ಸೂರಿಯ ಅಗಲುವಿಕೆಯ ನೋವಿನಿಂದ ಮತ್ತೆ ಚಿಗುರಿಕೊಳ್ಳಲೇ ಇಲ್ಲ. ಆದರೆ ಜೀವ ಕಳೆದುಕೊಳ್ಳಲಿಲ್ಲ. ಕೊನೆಗೊಂದು ದಿನ ಸೂರಿ ಬಂದ. ಆತನ ಗುರುತೇ ಸಿಗುತ್ತಿರಲಿಲ್ಲ. ಹಣ್ಣಾದ ಕೂದಲು, ಬಾಗಿದ ಸೊಂಟ, ನಡೆದಾಡಲು ಕಷ್ಟ ಪಡುತ್ತಿದ್ದ. ಬಂದವನೇ ಮರದ ಬಳಿ ಬಹಳ ಅತ್ತ.
“ ಯೌವನದ ಸಮಯದಲ್ಲಿ ನಾನು ನಿನ್ನ ಸರ್ವಸ್ವವನ್ನೂ ನನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡೆ. ಆದರೆ ನೀನು ನನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದೆ. ಈಗ ಜೀವನದ ಕೊನೆಯ ದಿನಗಳಲ್ಲಿ ನನಗೆ ನಿನ್ನ ತ್ಯಾಗದ ಅರಿವಾಗಿದೆ. ನನ್ನ ಮಕ್ಕಳಿಗಾಗಿ ನಾನು ಜೀವಮಾನವಿಡೀ ದುಡಿದೆ. ಆದರೆ ನಾನಿಂದು ಮುದುಕನಾದಾಗ ಅವರು ನನ್ನನ್ನು ಸಾಕಲು ಮನಸ್ಸು ಮಾಡುತ್ತಿಲ್ಲ. ನಾನು ಅವರಿಗೆ ಹೊರೆಯಾಗಿರುವೆ. ಅವರ ಚುಚ್ಚು ಮಾತಿನಿಂದ ನೊಂದು ಕೊಳ್ಳುವಾಗ ನಿನ್ನ ನೆನಪಾಯಿತು ಗೆಳೆಯಾ, ನೀನು ನನಗಾಗಿ ಏನೆಲ್ಲಾ ತ್ಯಾಗ ಮಾಡಿದೆ ಎಂಬುದರ ಅರಿವು ನನಗೀಗ ಆಯಿತು. ನನ್ನನ್ನು ಕ್ಷಮಿಸಿ ಬಿಡು ಗೆಳೆಯಾ” ಎಂದು ಕಣ್ಣೀರು ಹಾಕಿದ ಸೂರಿ.
ಆ ದಿನ ರಾತ್ರಿ ಸೂರಿಯ ಕನಸಿನಲ್ಲಿ ಆ ಮರ ಮತ್ತೆ ಬಂತು. “ನೀನು ಏಕೆ ಬೇಸರ ಮಾಡಿಕೊಳ್ಳುವಿ ಗೆಳೆಯಾ, ನಾವು ಬೇರೆಯವರಿಗಾಗಿ ಬದುಕುವುದರಲ್ಲಿಯೇ ಸುಖವಿದೆ. ನಿನಗಾಗಿ ತ್ಯಾಗ ಮಾಡಿರುವುದರಲ್ಲಿ ನಾನು ಸುಖ ಕಂಡೆ.” ಎಂದು ಹೇಳಿತು. ಮರುದಿನ ಬೆಳಕು ಹರಿಯೋದೇ ತಡ ಸೂರಿ ಕೂಡಲೇ ಮರದೆಡೆಗೆ ಹೋದ. ತುಂಡಾಗಿ ಕೊರಡಾಗಿದ್ದ ಮರ ಅಲ್ಲಲ್ಲಿ ಚಿಗುರಿಕೊಂಡಿತ್ತು. ಸೂರಿಯ ಪಶ್ಚಾತ್ತಾಪ ಮರವನ್ನು ಮತ್ತೆ ಜೀವಿಸುವಂತೆ ಮಾಡಿತು.
***
ಇದೊಂದು ಬರೇ ಕಾಲ್ಪನಿಕ ಕಥೆ. ಹೀಗೇ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದಾಗ ಸಿಕ್ಕ ಒಂದು ಹಿಂದಿ ವಿಡಿಯೋದ ಪ್ರೇರಣೆ ಅಷ್ಟೇ. ಆದರೆ ಈ ಮರದ ಜಾಗದಲ್ಲಿ ನಿಮ್ಮ ತಂದೆಯನ್ನು ಕಲ್ಪಿಸಿಕೊಂಡು ನೋಡಿ. ನೀವು ಕಲಿಯಲು ಹಣ ಬೇಕೆಂದಾಗ ಏನಾದರೂ ಮಾಡಿ ಹಣ ಕೊಡುತ್ತಾರೆ (ಮರದ ಹಣ್ಣುಗಳನ್ನು ಮಾರಿದಂತೆ), ನಿಮಗೆ ಮನೆ ಕಟ್ಟಲು ಹಣವಿಲ್ಲದಾಗ ಹಳೆಯ ಮನೆ, ಆಸ್ತಿ ಮಾರಿಯಾದರೂ (ಮರದ ಕೊಂಬೆಗಳನ್ನು ಮಾರಿದಂತೆ) ಹಣ ಹೊಂದಿಸುತ್ತಾರೆ. ನಿಮ್ಮ ಸುಖದಲ್ಲಿ ಅವರು ಬದುಕು ಕಾಣುತ್ತಾರೆ, ಸುಖ ಪಡುತ್ತಾರೆ. ಅವರಿಗೆ ಬೇಕಾಗಿರುವುದು ಕೇವಲ ನಿಮ್ಮ ಪ್ರೀತಿ ಮತ್ತು ನಾಲ್ಕು ಒಳ್ಳೆಯ ಮಾತುಗಳು ಅಷ್ಟೇ. ನೀವು ಅವರಿಗೆ ಪ್ರೀತಿಯನ್ನು ಕೊಟ್ಟರೆ ಅವರು ಮತ್ತೆ ಎದ್ದು ನಿಲ್ಲುತ್ತಾರೆ (ಮರದಂತೆ ಚಿಗುರಿಕೊಳ್ಳುತ್ತಾರೆ). ಇದೇ ಜೀವನ ಅಲ್ಲವೇ?
ಚಿತ್ರ ಕೃಪೆ: ಅಂತರ್ಜಾಲ ತಾಣ