ಮಾಸ್ತಿಯವರು ಕನ್ನಡದ ಆಸ್ತಿ ಏಕೆ ಗೊತ್ತಾ?

ಮಾಸ್ತಿಯವರು ಕನ್ನಡದ ಆಸ್ತಿ ಏಕೆ ಗೊತ್ತಾ?

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಲೋಕ ಕಂಡ ಓರ್ವ ಅತ್ಯುತ್ತಮ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರು. ಜೂನ್ ಆರನೇ ತಾರೀಖು ಅವರ ಜನ್ಮ ದಿನವೂ ಹೌದು ಮರಣದ ದಿನವೂ ಹೌದು. ಈ ವರ್ಷ ಮಾಸ್ತಿಯವರ ೧೩೦ನೇ ವರ್ಷದ ಜನ್ಮ ದಿನ. ಇವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಿ ಅಯ್ಯಂಗಾರ್ ಹಾಗೂ ತಾಯಿ ತಿರುಮಲ. ಮನೆಯಲ್ಲಿನ ಕಡು ಬಡತನದ ನಡುವೆಯೂ ಬಂಧುಗಳ ಸಹಕಾರದಿಂದ ಇವರು ವಿದ್ಯಾರ್ಜನೆ ಮಾಡಿದರು.

ಆಗಿನ ಮದ್ರಾಸ್ ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಎಂ ಎ ಪದವಿಯನ್ನು ಗಳಿಸಿದರು. ಅದೂ ಚಿನ್ನದ ಪದಕದ ಜೊತೆ. ಸ್ವಲ್ಪ ಸಮಯ ಉಪನ್ಯಾಸಕ ವೃತ್ತಿಯನ್ನು ಮಾಡಿದರೂ ನಂತರ ಅವರು ಆಗಿನ ಮೈಸೂರು ಸರಕಾರದಲ್ಲಿ ಸಹಾಯಕ ಕಮೀಷನರ್ ಅಥವಾ ಜಿಲ್ಲಾಧಿಕಾರಿಯಾಗಿ ಸೇವೆಗೆ ಸೇರಿದರು. ಆ ಸಮಯದಲ್ಲಿ ಅವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಕೊಟ್ಟರು. 

ಜಿಲ್ಲಾಧಿಕಾರಿ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನಹಿತ ಕಾರ್ಯವೊಂದು ಅವರಿಗೇ ಕಾಣಸಿಕ್ಕಿದ ಪ್ರಸಂಗ:

ಮಾಸ್ತಿಯವರು ಧರ್ಮಸ್ಥಳದ ಲಕ್ಷ ದೀಪೋತ್ಸವದ “ಸರ್ವ ಧರ್ಮ ಸಮ್ಮೇಳನ” ದಲ್ಲಿ ಅಧ್ಯಕ್ಷತೆ ವಹಿಸಲು ಚಾರ್ಮಾಡಿ ಘಾಟಿಯ ಮೂಲಕ ಸಾಹಿತಿ ಜಿ.ಪಿ. ರಾಜರತ್ನಂ ಅವರ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದರು. ಅವರಿಗೆ ಬಾಯಾರಿಕೆಯಾಯಿತು. ರಸ್ತೆ ಸಮೀಪದ ಹಳ್ಳಿಯಲ್ಲಿ ಒಬ್ಬ ಬಾವಿಯಿಂದ ನೀರು ಸೇದುತ್ತಿರುವುದನ್ನು ಕಂಡರು. ಗಾಡಿ ನಿಲ್ಲಿಸಿ ನೀರು ಸೇದುವ ಬಾವಿಯ ಬಳಿ ಮಾಸ್ತಿಯವರು ಹೋದರು. ನೀರು ಸೇದುತ್ತಿದ್ದವನಲ್ಲಿ ಕುಡಿಯಲು ನೀರು ಕೇಳಿದರು. ಆ ರೈತ ಬಾವಿಯಿಂದ ನೀರು ಸೇದಿದ. ಆ ನೀರನ್ನು ಮಾಸ್ತಿಯವರಿಗೆ ಕುಡಿಯಲು ಕೊಡುವ ಬದಲು ಅಲ್ಲಿಯೇ ಪಕ್ಕದಲ್ಲಿದ್ದ  ನೀರಿನ ತೊಟ್ಟಿಗೆ ಸುರಿದ. ಆ ರೈತ ಮತ್ತೊಂದು‌ ಕೊಡಪಾನ ನೀರು ಸೇದಿ "ಬನ್ನಿ ಸ್ವಾಮಿ, ನೀರು ಕುಡಿಯರಿ" ಎಂದ. 

ಮಾಸ್ತಿಯವರು ಬೊಗಸೆಯಲ್ಲಿ ನೀರು ಕುಡಿದರು. ಕೊಡಪಾನ (ಬಿಂದಿಗೆ) ದಲ್ಲಿ‌ ಉಳಿದ ನೀರನ್ನು ಆತ ಮತ್ತೆ ಆ ತೊಟ್ಟಿಗೆ ಹಾಕಿದ. ಮಾಸ್ತಿಯವರು ಅವನಿಗೆ ಹಣ ಕೊಡಲು ಮುಂದಾದರು. ಆದರೆ ಆತ ನಿರಾಕರಿಸಿದ. "ಅಲ್ಲ ಸ್ವಾಮಿ, ನಾವು ಕುಡಿಯೋ ನೀರಿಗೆ ದುಡ್ಡಿಸ್ಕಂಡ್ರೆ ಆ ದೇವ್ರಂತ ವ್ಯಕ್ತಿಗೆ ಅನ್ಯಾಯ ಮಾಡ್ದಂಗೆ" ಎಂದ. ಅದಕ್ಕೆ ಮಾಸ್ತಿ ಅವರು "ಯಾರಪ್ಪ ಆ ದೇವ್ರಂಥ ವ್ಯಕ್ತಿ" ಎಂದು ಕೇಳಿದರು. 

"ಹಿಂದೆ ಬರಗಾಲ ಬಂದಿತ್ತು. ಆಗ ಕುಡಿಯಲು ನೀರಿರಲಿಲ್ಲ. ನಮ್ಮ ಚಿಕ್ಕಮಂಗಳೂರಲ್ಲಿ ಒಬ್ರು ಡಿಸಿ ಇದ್ರು. ಊರ್ಗೆ ಬರ್ಗಾಲ ಬಂದೈತೆ, ಒಂದು ಬಾವಿ ತೋಡ್ಸಿ ಕೊಡಿ ಸಾಮಿ ಅಂತ ಕೇಳಿದ್ವಿ, ಅದಕ್ಕೆ ನೋಡ್ರೀ ನೀವು ಮನುಷ್ಯರು, ಬಾಯೈತೆ, ನೀವು ಮಾತಾಡ್ತೀರ, ಈಗ ಬಾವಿ ಬೇಕಂತ ಕೇಳ್ತೀರ, ಬಾವಿ ತೆಗೆಸಿ ಕೊಡ್ತೇನೆ. ಆದ್ರೆ ಪಕ್ಕದಲ್ಲಿ ತೊಟ್ಟಿ ಮಾಡಿ. ನೀವು ನಿಮಗಾಗಿ ಒಂದು ಕೊಡಪಾನ ನೀರು ತಗೊಂಡರೆ ಆ ತೊಟ್ಟಿಗೊಂದು ಕೊಡಪಾನ ನೀರು ಹಾಕಿ, ಯಾಕೆಂದರೆ ದನಕರು, ಪ್ರಾಣಿಪಕ್ಷಿಗಳಿಗೆ ಮಾತಾಡೋಕೆ ಬರೋಲ್ಲ, ಅವಕ್ಕೂ ಬರ್ಗಾಲವೇ ಅಲ್ಲವಾ ? ಅವಕ್ಕೂ ನೀರು ಬೇಕಲ್ವಾ ? ಈ ಷರತ್ತು ಹಾಕಿ ಬಾವಿ ತೆಗೆಸಿ ಕೊಟ್ಟವ್ರೇ ಬುದ್ದಿ, ಅವರು ಮೂರು ನಾಮ ಹಾಕ್ಕೋಳ್ಳೋರು ಬುದ್ದೀ, ವಯಸ್ಸಾಗಿತ್ತು, ಮೂಡ್ಲ ದಿಕ್ಕಿನವ್ರು" ಎಂದು ರೈತ ಮಾತು ನಿಲ್ಲಿಸಿದ, 

ಈ ರೈತ ಹೇಳುತ್ತಿರುವುದು ತನ್ನನ್ನೇ ಎಂದು ಮಾಸ್ತಿಯವರಿಗೆ ಅರ್ಥ ಆಗಿತ್ತು. ಆ ಸಮಯದಲ್ಲಿ ಚಿಕ್ಕಮಗಳೂರಿನ ಡಿಸಿ (ಆಗಿನ ಸಹಾಯಕ ಕಮೀಷನರ್) ಆಗಿ ನಿವೃತ್ತಿ ಹೊಂದಿದ್ದರು. ಮಾಸ್ತಿಯವರಿಗೆ ಆ ರೈತನ ಮುಗ್ದತೆ, ಪ್ರಾಮಾಣಿಕತೆ ತುಂಬಾ ಸಂತೋಷ ನೀಡಿತು. ಆ ಡಿಸಿ ತಾನೇ ಎಂದು ರೈತನಿಗೆ ಹೇಳಲಿಲ್ಲ. ನಡೆದ‌ ಘಟನೆಯನ್ನು ಜೊತೆಯಲ್ಲಿ ಬಂದಿದ್ದ ಜಿಪಿ ರಾಜರತ್ನಂ ಅವರಲ್ಲಿ ಹೇಳಿದಾಗ "ನೀವು ಆ ವ್ಯಕ್ತಿಗೆ ಹೇಳಿದ್ದರೆ ಅವನು ಇನ್ನಷ್ಟು ಖುಷಿ ಪಡುತ್ತಿದ್ದ" ಎಂದರು.

ನಾನು ಆ ಹುದ್ದೆಗೆ ಸಂಬಳ ಪಡೆಯುತ್ತಿದ್ದೆ, ನಾನೇನು ಧರ್ಮಾರ್ಥ ಮಾಡಲಿಲ್ಲ, ಸರ್ಕಾರದ ಹಣದಿಂದ ಮಾಡಿಸಿದೆ ಹೊರತು ನನ್ನ ಕಿಸೆಯ ಹಣದಿಂದಲ್ಲ, ಆ ರೈತನ ಮುಗ್ದತೆ, ಪ್ರಾಮಾಣಿಕತೆಯ ಮುಂದೆ ನನ್ನ ಕೆಲಸ ಏನೇನೂ ಅಲ್ಲ, ಜೊತೆಗೆ ನಾನೇ ಆ ಡಿಸಿ ಎಂದು ಹೇಳಿದರೆ ಆ ರೈತನಿಗೆ ತಳಮಳವೂ ಶುರುವಾಗುತ್ತಿತ್ತು. ಎಂದು ಮಾಸ್ತಿಯವರು ಹೇಳಿದರು.

ಇದು ಮಾಸ್ತಿಯವರ ಮನಸ್ಸು. ಯಾವತ್ತೂ ತಾವು ಮಾಡಿದ ಕಾರ್ಯಕ್ಕೆ ಮೆಚ್ಚುಗೆ ಪಡೆಯಲು ಕಾಯಲಿಲ್ಲ ಅವರು. ಕನ್ನಡ ಸಾಹಿತ್ಯಕ್ಕೆ ತಮ್ಮಿಂದ ಆದ ಸೇವೆಯನ್ನು ಮಾಡಿದರು. ಶ್ರೀನಿವಾಸ ಇವರ ಕಾವ್ಯನಾಮ. ಸಣ್ಣ ಕಥೆ, ನೀಳ್ಗತೆ, ಕವನಗಳು, ಜೀವನ ಚರಿತ್ರೆ, ಪ್ರಬಂಧ, ನಾಟಕಗಳು, ಕಾದಂಬರಿಗಳು ಹೀಗೆ ಕನ್ನಡದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಬರೆದರು. ಇವರ ‘ಚಿಕವೀರ ರಾಜೇಂದ್ರ’ ಕೃತಿಗೆ ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  

*ನಾನು ಎಂಬುದು ನಾನಲ್ಲ, ಈ ಮನುಷ್ಯ ಜನ್ಮವೂ ನನ್ನದಲ್ಲ ಎನ್ನುವ ರೀತಿಯಲ್ಲಿ ಬಾಳಿದ, ಬದುಕು ಅಂದರೆ ಹೀಗೆ ಎಂದು ಬಾಳಿ ತೋರಿಸಿದ ಜ್ಞಾನ ಪೀಠ ಪ್ರಶಸ್ತಿ ವಿಜೇತ ನಮ್ಮ ಮಾಸ್ತಿ ಕನ್ನಡದ ಆಸ್ತಿ*

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ