ಮಾಸ್ತಿ ಕನ್ನಡದ ಆಸ್ತಿ

ಮಾಸ್ತಿ ಕನ್ನಡದ ಆಸ್ತಿ

ಯಾವ ರೂಪದೊಳು ನಿನ್ನ ಪೂಜಿಸಿದೊಡೇನು

ಯಾವ ನಾಮದಿ ನಿನ್ನ ಕರೆದರೇನು

ಕಲ್ಲಾಗಿದೆ ಮನ,ಭವದಲಿ ತೇಲಲು ಬಲ್ಲೆನೆಂತೋ

ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಕೋಲಾರ ಜಿಲ್ಲೆಯ ಮಾಲೂರಿನ ಹುಂಗೇನಹಳ್ಳಿಯಲ್ಲಿ ತಮಿಳು ಶ್ರೀ ವೈಷ್ಣವ ಅಯ್ಯಂಗಾರ್ ಮನೆತನದಲ್ಲಿ ೦೬-೦೬-೧೮೯೧ರಲ್ಲಿ ಜನಿಸಿದರು.ಪೂರ್ವಜರ ಬದುಕು ಶ್ರೀಮಂತಿಕೆಯಿಂದ ಕೂಡಿದ್ದರೂ ಶ್ರೀಯುತರ ಜೀವನ ಬಡತನದಲ್ಲಿಯೇ ನಡೆಯಿತು.ವಾರಾನ್ನ ವ್ಯವಸ್ಥೆ,ಬಂಧುಗಳ ಸಹಕಾರದಲ್ಲಿ ಓದಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.ಪ್ರತಿ ತರಗತಿಯಲ್ಲೂ ಮೊದಲಿಗರಾಗಿ ಸ್ಥಾನ ಗಳಿಸುತ್ತಿದ್ದರಂತೆ.ಆಂಗ್ಲ ಭಾಷೆಯಲ್ಲಿ ಎಂ.ಎ ಕಲಿತು ಸ್ವಲ್ಪ ಸಮಯ ಪ್ರೊಫೆಸರ್ ಆಗಿದ್ದರಂತೆ.

ನವೋದಯ ಕಾಲದ ಕವಿಯಾಗಿ, ಕವನ, ಕಾದಂಬರಿ, ಸಂಕಲನ, ಅನುವಾದ, ನೀಳ್ಗತೆ, ಸಣ್ಣಕತೆ, ನಾಟಕ, ಆತ್ಮಚರಿತ್ರೆ, ಪ್ರಬಂಧ ಹೀಗೆ ವೈವಿಧ್ಯ ಬರವಣಿಗೆ ಅವರದು. ‘ಚಿಕ್ಕವೀರ ರಾಜೇಂದ್ರ’ ಕಾದಂಬರಿಗೆ ಕನ್ನಡದ ನಾಲ್ಕನೆಯ ‘ಜ್ಞಾನಪೀಠ’ ಲಭಿಸಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ರಾಜ ಸೇವಾಸಕ್ತ* ಬಿರುದನ್ನು ನೀಡಿ ಗೌರವಿಸಿದರಂತೆ. ಕರ್ನಾಟಕ ವಿ.ವಿಯ ಗೌರವ ಡಾಕ್ಟರೇಟ್, ಮೈಸೂರು ವಿ.ವಿಯ ಡಿ-ಲಿಟ್ ಗೌರವ,ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ವ ಪೀಠ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರಂತೆ. ೧೯೭೨ರಲ್ಲಿ ‘ಶ್ರೀನಿವಾಸ’ ಎನ್ನುವ ಅಭಿನಂದನ ಗ್ರಂಥ ಸಮರ್ಪಿಸಿದರಂತೆ.

'ನಮ್ಮ ಹೃದಯದಲ್ಲಿ ಕನ್ನಡಕ್ಕೆ ಸರಿಯಾದ ಸ್ಥಾನಮಾನ ಸಿಗಲಿಲ್ಲ' ವೆಂಬ ಕೊರಗು ಅವರಿಗೆ ಇತ್ತಂತೆ. ವಿದ್ಯೆಯಿಂದ ಭಾವವಿಕಾಸವಾಗಬೇಕು, ಪ್ರಾಥಮಿಕ ಹಂತದಲ್ಲಾದರೂ ಕನ್ನಡ ಕಲಿಯಬೇಕು, ಮಾತೃಭಾಷೆಗೆ ಅಷ್ಟು ಶಕ್ತಿಯಿದೆ ಎನುವ ಅಭಿಪ್ರಾಯವಿಟ್ಟವರು. ತನ್ನ ಗುರಿ ಲೋಕ ಸುಖದ್ದಾಗಿರಬೇಕು. ಪ್ರೀತಿ, ಪ್ರೇಮ, ನಿಷ್ಠೆಯಿಂದ ದುಡಿಯಬೇಕು. ಆ ಮತ ಈ ಮತ ಯಾಕೆ? ಮನುಜ ಮತವೊಂದೇ ಈ ಜಗದಲ್ಲಿ ಎನುತ್ತಿದ್ದರಂತೆ. ಹೆಚ್ಚಿನ ಸುಖಕ್ಕೆ ಆಸೆಪಟ್ಟು ಕೆಟ್ಟ ಹಾದಿ ತುಳಿಯದಿರಿ ಎಂದು ತಮ್ಮ ಲೇಖನಗಳಲ್ಲಿ, ಭಾಷಣದಲ್ಲಿ ಹೇಳುವ ಮಹನೀಯರೆಂದು ಒಂದೆಡೆ ಓದಿದೆ. ಮನುಷ್ಯ ಪ್ರಯತ್ನ ನಿರಂತರ, ನಿಂತ ನೀರಾಗದೆ, ಹರಿಯುವ ನೀರಾಗಬೇಕು ಇವರ ಆಶಯ. ನಿಷ್ಪ್ರಯೋಜಕನಾಗಿ ಬಾಳಲೇ ಬಾರದು, ದುಡಿವ ಸಮಯದಲ್ಲಿ ದುಡಿದು ‌ಸಂಪಾದಿಸಬೇಕು, ಸಮುದಾಯದ ಸುಖದಲ್ಲಿ ತನ್ನ ಸುಖ-ಸಂತೋಷ ಅಡಕವಾಗಿದೆ, ಬಡವನು, ದೊಡ್ಡವನು ಎಲ್ಲ ಅವರವರ ಅದೃಷ್ಟ, ವಿಧಿಯಾಟ, ಜನ್ಮ ತಳೆದ ಮೇಲೆ ಸುಮ್ಮನೆ ಕೂರಬಾರದು. ಈ ಸಮಾಜದಲ್ಲಿ ನಾವೆಸಗಿದ ಒಳ್ಳೆಯತನ ಮಾತ್ರ ಶಾಶ್ವತವೆಂದರು. ಕೂರಬೇಡಿ,ನಿಲ್ಲಬೇಡಿ,ಇಳಿಯಬೇಡಿ, ಏರುತ್ತಾ ಇರಿ, ಇದುವೇ ಗುರಿಯಾಗಿರಲಿ. ಜೀವನ ಸಂದೇಶ ನೀಡಿದ ಮಹಾನುಭಾವರು ಡಾ ಮಾಸ್ತಿಯವರು.

ಎಲ್ಲವೂ ಅಳಿಯುವುದು ಇಹದೊಳಿಹುದೆಲ್ಲ

ಅಳಿಯದಿಹ ಹುರುಳು ಒಂದು ಜಗದೊಳಿಲ್ಲ

(ಹಿರಿಯ ಲೇಖಕರೂ,ಸಣ್ಣಕಥೆಗಳ ಜನಕರೂ,ಸಾಹಿತಿಗಳಾದ ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಜನ್ಮ ದಿನ ಹಾಗೂ ಪುಣ್ಯ ತಿಥಿಗೆ ನುಡಿನಮನ*)

-ರತ್ನಾ ಕೆ ಭಟ್,ತಲಂಜೇರಿ, ಪುತ್ತೂರು

(ಆಕರ:ಹಿರಿಯ ಸಾಹಿತಿಗಳ ವ್ಯಕ್ತಿ ಚಿತ್ರಣ)