ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು
(ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ)
ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಒಂದು ಉದ್ದಿಮೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಯಾರೂ ಎಂದೂ ಕಂಡರಿಯದ ಕೇಳರಿಯದ ಮಟ್ಟಕ್ಕೆ ಅತಿ ವೇಗದಲ್ಲಿ ಏರಿ ಅಷ್ಟೇ ವೇಗದಲ್ಲಿ ಕೆಳಗೆ ಕುಸಿದು ಇದೀಗ ಪುನಃ ಚೇತರಿಸಿಕೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ಎಲ್ಲ ಬೆಳವಣಿಗೆ ಮತ್ತು ಕುಸಿತಗಳಲ್ಲಿ ಬೆಂಗಳೂರು ವಿಶೇಷತಃ ಭಾಗಿಯಾಗಿದೆ.
ಮಾಹಿತಿ ತಂತ್ರಜ್ಞಾನವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಎಂದರೆ ಅತಿಶಯೋಕ್ತಿಯಲ್ಲ. ವಿಜ್ಞಾನ ತಂತ್ರಜ್ಞಾನದ ಬೇರಾವ ಪ್ರಭೇದವೂ ಮಾಹಿತಿ ತಂತ್ರಜ್ಞಾನದಷ್ಟು ವೇಗವಾಗಿ ಬೆಳೆಯಲಿಲ್ಲ. ಈ ಬೆಳವಣಿಗೆಯ ಜೊತೆಗೆ ಬೆಂಗಳೂರು ಕೂಡ ಬೆಳೆಯಿತು. ದಶಕದ ಹಿಂದೆ ಕೇವಲ ಸಾಂಪ್ರದಾಯಿಕ ಉದ್ದಿಮೆಗಳಿಂದ ತುಂಬಿದ್ದ ಬೆಂಗಳೂರು ಇಂದು ಜಾಗತಿಕ ನಕ್ಷೆಯಲ್ಲಿ ಗುರುತಿಸಲ್ಪಡುತ್ತಿರುವುದು ಈ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಯಿಂದ.
ಭಾರತದ ಒಟ್ಟು ತಂತ್ರಾಂಶ ನಿರ್ಯಾತ ಸುಮಾರು ರೂ.೪೬,೦೦೦ ಕೋಟಿಗಳಷ್ಟಿದೆ. ಇದು ದೇಶದ ಒಟ್ಟು ಉತ್ಪಾದನೆಯ ಪ್ರತಿಶತ ೨ ಆಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು ರೂ.೧೪,೦೦೦ ಕೋಟಿ. ಅಂದರೆ ರಾಷ್ಟ್ರದ ಅಂದಾಜು ಪ್ರತಿಶತ ೩೦. ಇದರಲ್ಲಿ ಬಹುತೇಕ ತಂತ್ರಾಂಶ ತಯಾರಿ ಬೆಂಗಳೂರಿನಲ್ಲೇ ಆಗುತ್ತದೆ. ಬೆಂಗಳೂರನ್ನು ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದು ಕರೆಯಲು ಆಧಾರ ಈ ಮಾಹಿತಿಯಲ್ಲಿದೆ.
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಬೆಂಗಳೂರಿಗೆ ಕಾಲಿಟ್ಟ ಮೊದಲ ಬಹುರಾಷ್ಟ್ರೀಯ ಕಂಪೆನಿ. ಐ.ಬಿ.ಎಂ, ಇಂಟೆಲ್, ಡಿಜಿಟಲ್, ಹೀಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಇದನ್ನು ಹಿಂಬಾಲಿಸಿದವು. ೯೦ರ ದಶಕದಲ್ಲಿ ಇನ್ಫೋಸಿಸ್, ವಿಪ್ರೋ, ಎಚ್.ಸಿ.ಎಲ್., ಇತ್ಯಾದಿ ಹಲವು ಭಾರತೀಯ ಕಂಪೆನಿಗಳೂ ತಮ್ಮ ಛಾಪನ್ನು ಒತ್ತಿದವು. ಕರ್ನಾಟಕ ಸರಕಾರವು ಇಲೆಕ್ಟ್ರಾನಿಕ್ಸ್ ನಗರ ಸ್ಥಾಪಿಸಿ ಇಂತಹ ಕಂಪೆನಿಗಳಿಗೆ ನೆರವಾಯಿತು.
ಬೆಂಗಳೂರು ಏಕೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ತುಂಬ ಆಕರ್ಷಣೀಯವಾಗಿದೆ? ಉತ್ತರ ಸುಲಭ. ದಶಕಗಳಿಂದ ಎಚ್.ಎಂ.ಟಿ. ಬಿ.ಇ.ಎಲ್, ಎಚ್.ಎ.ಎಲ್. ಭಾರತೀಯ ವಿಜ್ಞಾನ ಮಂದಿರ, ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆಸಿವೆ. ಇದರಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ವಾತಾವರಣ ಇಲ್ಲಿ ಸೃಷ್ಟಿಯಾಗಿತ್ತು. ಮುಂದೆ ಬರಲಿದ್ದ ಮಾಹಿತಿ ತಂತ್ರಜ್ಞಾನವೆಂಬ ಕ್ರಾಂತಿಗೆ ಇವು ಪೂರಕವಾದವು. ಇದರ ಜೊತೆಗೆ ಇಲ್ಲಿಯ ಹವಾಮಾನ ಮತ್ತು ಪರಿಸರ. ಹವಾನಿಯಂತ್ರಿತ ನಗರ ಎಂಬ ಹೆಸರು ಹೊಂದಿದ ಇಲ್ಲಿಯ ತಾಪಮಾನ ೩೭ ಡಿಗ್ರಿಗಳ ಮಿತಿಯನ್ನು ಮೀರಿ ಮೇಲೇರುವುದಿಲ್ಲ. ಅತಿ ಚಳಿಯೂ ಇಲ್ಲಿಲ್ಲ. ತೇವಾಂಶವೂ ಕಡಿಮೆ. ಇವೆಲ್ಲ ಇಲೆಕ್ಟ್ರಾನಿಕ್ ಉದ್ದಿಮೆಗಳಿಗೆ ಹೇಳಿ ಮಾಡಿಸಿದಂತಿವೆ.
ಕರ್ನಾಟಕ ರಾಜ್ಯದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಇಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳಿಂದ ಪ್ರತಿ ವರ್ಷ ಸಹಸ್ರಾರು ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಇವರಿಗೆಲ್ಲ ಕೆಲಸ ನೀಡಲು ರಾಜ್ಯದೆಲ್ಲೆಡೆ ಉದ್ಯೋಗಾವಕಾಶಗಳಿಲ್ಲ. ಇವರೆಲ್ಲ ಬೆಂಗಳೂರಿಗಭಿಮುಖವಾಗಿ ಸಾಗಿದರೆ ಅದು ಸಹಜ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು ಇಂಜಿನಿಯರಿಂಗ್ ಕಾಲೇಜುಗಳಿಗೇ ಹೋಗಿ ಅಲ್ಲಿಯೇ ಸಂದರ್ಶನ ನಡೆಸಿ ಪ್ರತಿಭಾವಂತರನ್ನು ತಮ್ಮ ಕಂಪೆನಿಗಳಿಗೆ ನೇಮಿಸುತ್ತಾರೆ. ನಮ್ಮ ದೇಶದಲ್ಲಿ ನಡೆಯುತ್ತಿರುವ ಬಹುಪಾಲು ತಂತ್ರಾಂಶ ತಯಾರಿಯು ಸೇವೆಗೇ ಸೀಮಿತವಾಗಿದೆ. ಇಂತಹ ತಂತ್ರಾಂಶ ತಯಾರಿಗೆ ಇಂಜಿನಿಯರಿಂಗ್ ಪದವೀಧರರೇ ಬೇಕಾಗಿಲ್ಲ. ಸ್ವಲ್ಪ ಇಂಗ್ಲಿಷ್ ಜ್ಞಾನ ಮತ್ತು ಉತ್ತಮ ತರ್ಕಶಕ್ತಿಯಿರುವ ಯಾರೂ ಆಗಬಹುದು. ಆದರೆ ಕಂಪೆನಿಗಳು ಮಾತ್ರ ಇಂಜಿನಿಯರಿಂಗ್ ಪದವಿ ಇದ್ದವರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಂಜಿನಿಯರಿಂಗ್ ಕೋರ್ಸ್ಗಳಿಗೆ ಅತೀವ ಬೇಡಿಕೆ ಬಂದಿದೆ.
ಗಣಕದ ಪ್ರಯೋಜನ ಜನಸಾಮಾನ್ಯರನ್ನು ದೊಡ್ಡ ಮಟ್ಟದಲ್ಲಿ ತಲುಪಿದ್ದು ರೈಲುಗಳ ಮುಂಗಡ ಟಿಕೇಟು ಕಾದಿರಿಸುವಿಕೆಯ ಗಣಕೀಕರಣದಿಂದ. ಹತ್ತು ವರ್ಷಗಳ ಹಿಂದೆ ರೈಲುಗಳಿಗೆ ಮೂರು ತಿಂಗಳುಗಳ ಮೊದಲೇ ಟಿಕೇಟು ಕಾದಿರಿಸಬಹುದಿತ್ತು (ಈಗ ಎರಡು ತಿಂಗಳ ಮೊದಲು ಕಾದಿರಿಸಬಹುದು). ಎಪ್ರಿಲ್ ತಿಂಗಳು ಬಂದರೆ ಮುಂಬಯಿಯಿಂದ ಭಾರತದ ಎಲ್ಲ ದಿಕ್ಕುಗಳಿಗೆ ಜನರ ಮಹಾಪೂರವೇ ಹರಿಯುವುದು. ಎಪ್ರಿಲ್ ಒಂದನೇ ದಿನಾಂಕದ ಗಾಡಿಗೆ ಜನವರಿ ಒಂದರಂದು ಟಿಕೇಟು ನೀಡುತ್ತಾರೆ. ಜನರು ಡಿಸೆಂಬರ್ ೨೮-೨೯ಕ್ಕೇ ಟಿಕೇಟಿಗಾಗಿ ಕ್ಯೂ ನಿಲ್ಲುತ್ತಿದ್ದರು. ಒಂದು ಗಾಡಿಗೆ ಒಂದು ಕೌಂಟರಿನಲ್ಲಿ ಮಾತ್ರ ಟಿಕೇಟು ನೀಡುವ ಪದ್ಧತಿ ಇತ್ತು. ಕ್ಯೂ ನಿಲ್ಲಲೆಂದೇ ಬಾಡಿಗೆ ಜನರೂ ದೊರಕುತ್ತಿದ್ದರು! ೧೯೯೩-೯೪ರಲ್ಲಿ ರೈಲು ಟಿಕೇಟು ಮುಂಗಡ ಕಾದಿರಿಸುವಿಕೆಯನ್ನು ಗಣಕೀಕರಣಗೊಳಿಸಲಾಯಿತು. ಈಗ ಯಾವ ರೈಲಿಗೆ ಯಾವ ಕೌಂಟರಿನಲ್ಲಿ ಬೇಕಾದರೂ ಕ್ಯೂ ನಿಂತು ಟಿಕೇಟು ಕೊಳ್ಳಬಹುದು. ಅಷ್ಟು ಮಾತ್ರವಲ್ಲ, ದೇಶದ ಯಾವ ಮೂಲೆಯಿಂದ ಯಾವ ಮೂಲೆಗೆ ಬೇಕಾದರೂ ಯಾವುದೇ ನಗರದಲ್ಲಿ ಟಿಕೇಟು ಕೊಳ್ಳಬಹದು. ದೇಶವ್ಯಾಪಿ ಗಣಕ ಜಾಲದಿಂದ ಇದು ಸಾಧ್ಯವಾಗಿದೆ. ಜನಸಾಮಾನ್ಯರ ಮಟ್ಟಿಗಂತೂ ಈ ಸೌಕರ್ಯ ಅತಿದೊಡ್ಡ ಕೊಡುಗೆ ಎನ್ನಬಹುದು.
ಸುಮಾರು ೧೯೯೫-೯೬ರ ಸಮಯದಲ್ಲಿ ಮನೆಗಳಲ್ಲೂ ಗಣಕಗಳು ಕಾಲಿಡತೊಡಗಿದವು. ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳು, ಸಾರ್ವಜನಿಕ ರಂಗದ ಉದ್ದಿಮೆಗಳು, ಕೆಲವು ಖಾಸಗಿ ಕಂಪೆನಿಗಳು, ಇತ್ಯಾದಿ ತಮ್ಮ ಉದ್ಯೋಗಿಗಳಿಗೆ ವೈಯಕ್ತಿಕ ಗಣಕ ಕೊಳ್ಳಲು ಧನಸಹಾಯ ನೀಡತೊಡಗಿದವು. ಬೀದಿಬೀದಿಗಳಲ್ಲಿ ಗಣಕ ತರಬೇತಿ ಕೇಂದ್ರಗಳು ತಲೆಯೆತ್ತಿದವು. ಬಹುಪಾಲು ಬೆರಳಚ್ಚು ತರಬೇತಿ ಕೇಂದ್ರಗಳು ಡಿ.ಟಿ.ಪಿ. ಕೇಂದ್ರಗಳಾಗಿ ಪರಿವರ್ತನೆಗೊಂಡವು. ಭಾರತದ ಪ್ರತಿಯೊಬ್ಬ ನಾಗರೀಕನನ್ನೂ ಒಂದಲ್ಲ ಒಂದು ರೀತಿಯಲ್ಲಿ ಗಣಕಗಳು ಪ್ರಭಾವಿಸತೊಡಗಿದವು. ಎನ್.ಐ.ಐ.ಟಿ., ಆಪ್ಟೆಕ್, ಜೆಟ್ಕಿಂಗ್, ಇತ್ಯಾದಿ ದೊಡ್ಡ ಹೆಸರುಗಳ ಜೊತೆ ಹಲವು ಗಣಕ ತರಬೇತಿ ಕೇಂದ್ರಗಳು ಎಲ್ಲೆಂದರಲ್ಲಿ ತಲೆಯೆತ್ತಿದವು. ಇವುಗಳಲ್ಲಿ ಹಲವು ಕೇಂದ್ರಗಳು ವಿದ್ಯಾರ್ಥಿಗಳಿಂದ ಹಣ ದೋಚಿ ನಾಪತ್ತೆಯಾದವೂ ಇವೆ. ಕೋರ್ಸ್ ಮುಗಿದೊಡನೆ ಕೆಲಸ ಕೊಡಿಸುವುದಾಗಿ ನಂಬಿಸಿ ಕೈಕೊಟ್ಟ ಕೇಂದ್ರಗಳೂ ಇವೆ.
ಭಾರತದ ಮಾಹಿತಿ ತಂತ್ರಾಂಶ ಕ್ಷೇತ್ರ ಇದ್ದಕ್ಕಿದ್ದಂತೆ ಅತಿ ವೇಗವಾಗಿ ಬೆಳೆಯಲು ವೈಟೂಕೆ ಸಮಸ್ಯೆಯ ಕೊಡುಗೆ ಇದೆ. ಎರಡು ದಶಕಗಳ ಹಿಂದೆ ತಯಾರಾದ ತಂತ್ರಾಂಶಗಳಲ್ಲಿ ಯಾವುದಾದರೂ ತಾರೀಕಿನ ಇಸವಿಯನ್ನು ಸೂಚಿಸುವಾಗ ಎರಡು ಅಂಕೆಗಳನ್ನು ಮಾತ್ರ ಬಳಸುತ್ತಿದ್ದರು. ಉದಾಹರಣೆಗೆ ೧೯೫೯ ಎಂಬುದನ್ನು ಸೂಚಿಸಲು ೫೯ ಎಂದು ಬರೆದರೆ ಆಯಿತು. ಇದೇ ವಿಧಾನವನ್ನು ಬಳಸಿ ೨೦೦೩ ಎಂಬುದನ್ನು ೦೩ ಎಂದು ದಾಖಲಿಸಿದರೆ ೦೩ರಿಂದ ೫೯ನ್ನು ಕಳೆಯುವುದು ಹೇಗೆ? ಇಂತಹ ಸಮಸ್ಯೆಗಳ ಪರಿಹಾರ ಬಹು ಸುಲಭ. ಎರಡು ಅಂಕೆಗಳಲ್ಲಿದ್ದ ಇಸವಿಗಳನ್ನು ನಾಲ್ಕು ಅಂಕೆಗಳಾಗಿ ಪರಿವರ್ತಿಸಿದರೆ ಆಯಿತು. ಇದು ಮೇಲ್ನೋಟಕ್ಕೆ ಬಹಳ ಸರಳ ಕೆಲಸ. ಸಾವಿರಾರು ಸಾಲುಗಳಿರುವ ಗಣಕ ಕ್ರಮವಿಧಿಗಳಲ್ಲಿ ಇಂತಹ ಪರಿವರ್ತನೆ ಮಾಡುವುದು ತುಂಬ ಸಮಯ ಹಿಡಿಯುವ ಕೆಲಸ. ಇದನ್ನು ಮಾಡಲು ಪ್ರತಿಭಾವಂತ ಇಂಜಿನಿಯರಿಂಗ್ ಪದವೀಧರರೂ ಬೇಕಾಗಿಲ್ಲ. ತುಂಬ ಹಿಂದೆಯೇ ತಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಗಣಕಗಳನ್ನು ಅವಲಂಬಿಸಿದ್ದ ಅಮೇರಿಕದ ಕಂಪೆನಿಗಳಿಗೆ ಈ ವೈಟೂಕೆಯ ಸಮಸ್ಯೆ ಪರಿಹರಿಸಲು ಅಗ್ಗವಾಗಿ ಸಿಕ್ಕಿದ್ದು ಭಾರತದ ಯುವಕರು. ಪ್ರಪಂಚದಲ್ಲಿ ಅಗ್ಗದಲ್ಲಿ ಮಾನವಶಕ್ತಿ ದೊರೆಯುವುದು ಏಷಿಯಾ (ಜಪಾನ್ ಹೊರತುಪಡಿಸಿ) ಮತ್ತು ಆಫ್ರಿಕಾದಲ್ಲಿ. ಆಫ್ರಿಕಾದಲ್ಲಿ ಇಂಗ್ಲೀಷ್ ಬಲ್ಲವರು ವಿರಳ. ಏಷಿಯಾದಲ್ಲಿ ಉತ್ತಮ ಇಂಗ್ಲೀಷ್ ಜ್ಞಾನ ಇರುವುದು ಭಾರತೀಯರಿಗೆ. ಹೀಗಾಗಿ ಅಮೇರಿಕದ ಕಂಪೆನಿಗಳವರು ಭಾರತೀಯರನ್ನು ಇಂತಹ ಕೆಲಸಗಳಿಗೆ ನೇಮಿಸಿಕೊಂಡರು. ಸುಮಾರು ಇದೇ ಸಮಯಕ್ಕೆ ಅಮೇರಿಕದ ಕಂಪೆನಿಗಳಿಗೆ ಭಾರತೀಯ ಯುವಕರನ್ನು ಒದಗಿಸುವುದನ್ನೇ ಉದ್ಯೋಗವನ್ನಾಗಿಸಿಕೊಂಡ ಹಲವು ಕಂಪೆನಿಗಳು ತಲೆಯೆತ್ತಿಕೊಂಡವು. ಇಂತಹ ಕಂಪೆನಿಗಳ ಮೂಲಕ ಅಮೇರಿಕಾಕ್ಕೆ ಹೋದ ಯುವಕರು ಅಲ್ಲಿ ಕಂಪೆನಿ ಬದಲಿಸಿ ತಮ್ಮನ್ನು ಕಳುಹಿಸಿದ ಕಂಪೆನಿಗಳಿಗೆ ಟೋಪಿ ಹಾಕಿದ ಉದಾಹರಣೆಗೂ ಸಾಕಷ್ಟಿವೆ.
೨೦೦೦ನೆ ಇಸವಿಯನ್ನು ಮಾಹಿತಿ ತಂತ್ರಜ್ಞಾನದ ಇತಿಹಾಸದಲ್ಲಿ ವಿಶೇಷವಾಗಿ ದಾಖಲಿಸಬೇಕಾಗುತ್ತದೆ. ಇದನ್ನು ಡಾಟ್ಕಾಂ ಕಾಲವೆನ್ನಬಹುದು. ಇದ್ದಕ್ಕಿದ್ದಂತೆ ಎಲ್ಲಾ ನಮೂನೆಯ ಡಾಟ್ಕಾಂಗಳು ಹುಟ್ಟಿಕೊಂಡಿದ್ದು ಈ ಸಮಯದಲ್ಲಿ. ಚಿಕ್ಕಪುಟ್ಟ ವಿಷಯಗಳಿಗೂ ಒಂದೊಂದು ಅಂತರಜಾಲ ತಾಣಗಳು ಹುಟ್ಟಿಕೊಂಡವು. ವಿದ್ಯುನ್ಮಾನ ವಾಣಿಜ್ಯ ಮನೆಮಾತಾಯಿತು. ಅಮೇರಿಕಾದಲ್ಲಿ ಒಬ್ಬಾತನಂತೂ ಸಂಪೂರ್ಣ ೨೦೦೦ ಇಸವಿಯನ್ನು ಮನೆಯಿಂದ ಹೊರಗೆ ಕಾಲಿಡದೆ ಕೇವಲ ವಿದ್ಯುನ್ಮಾನ ವಾಣಿಜ್ಯದ ಮೂಲಕವೇ ಜೀವಿಸಿ ದಾಖಲೆ ನಿರ್ಮಿಸಿದ. ಈ ಡಾಟ್ಕಾಂನ ಸಮೂಹ ಸನ್ನಿ ಭಾರತವನ್ನೂ ಬಿಡಲಿಲ್ಲ. ಈ ಸಮಯದಲ್ಲಿ ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಡಾಟ್ಕಾಂಗಳು ಹುಟ್ಟಿಕೊಂಡವು. ಭಾರತೀಯ ಸಾಮಗ್ರಿಗಳನ್ನು ಮಾರುವ ಅಂತರಜಾಲ ಅಂಗಡಿಗಳು ವಿದ್ಯುನ್ಮಾನ ವಾಣಿಜ್ಯದ ಮೂಲಕ ಕಾರ್ಯನಿರ್ವಹಿಸತೊಡಗಿದವು. ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರು ಅಲ್ಲಿಯ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಹುಟ್ಟೂರಿನಲ್ಲಿರುವ ತಮ್ಮ ಮನೆಯವರಿಗೆ ಮನೆಸಾಮಾನು, ಉಡುಗೊರೆ ಕಳುಹಿಸುವುದು ಸಾಧ್ಯವಾದುದು ಈ ವಿದ್ಯುನ್ಮಾನ ವಾಣಿಜ್ಯದಿಂದ. ಕನ್ನಡದ ದಿನಪತ್ರಿಕೆಗಳೂ ತಮ್ಮ ಅಂತರಜಾಲ ತಾಣ ಸ್ಥಾಪಿಸಿದವು. ಕನ್ನಡದ ಡಾಟ್ಕಾಂಗಳಂತೂ ತಾಯಿನಾಡು ಮತ್ತು ವಿದೇಶಗಳ ನಡುವೆ ಸಾಂಸ್ಕೃತಿಕ ಸೇತುವೆಯಾಗಿ ಕೆಲಸ ಮಾಡತೊಡಗಿದವು.
ಡಾಟ್ಕಾಂ ಯುಗದಲ್ಲಿ ಸಂಬಳವೂ ಗಗನಕ್ಕೇರಿತು. ಕೆಲಸಕ್ಕೆ ಸೇರುವಾಗಲೇ ತಿಂಗಳಿಗೆ ೧೨ರಿಂದ ೧೮ ಸಾವಿರ, ಆರು ತಿಂಗಳು ಅನುಭವವಿದ್ದವರಿಗೆ ೩೦,೦೦೦, ಪ್ರೋಜೆಕ್ಟ್ ಮ್ಯಾನೇಜರುಗಳಿಗೆ ಒಂದೂವರೆ ಲಕ್ಷ ಹೀಗೆ ಹುಚ್ಚುಚ್ಚಾಗಿ ವೇತನ ಏರತೊಡಗಿತು. ಬರಿಯ ವೇತನ ಮಾತ್ರವಲ್ಲ, ಈ ಡಾಟ್ಕಾಂ ಕಂಪೆನಿಗಳ ವೆಚ್ಚಗಳಿಗೂ ಅರ್ಥವಿರಲಿಲ್ಲ. ಪ್ರತಿ ಶುಕ್ರವಾರ ರಾತ್ರಿ ಉದ್ಯೋಗಿಗಳಿಗೆ ಭರ್ಜರಿ ಗುಂಡು ಪಾರ್ಟಿ, ಯಾವುದಾದರೂ ಪ್ರವಾಸಿ ತಾಣಕ್ಕೆ ಪಿಕ್ನಿಕ್, ಟೀಶರ್ಟ್, ಬ್ಯಾಗ್, ಇತ್ಯಾದಿ ಉಡುಗೊರೆಗಳು, ಹೀಗೆ ಈ ಡಾಟ್ಕಾಂ ಐಲುಪೈಲುಗಳಿಗೆ ಲೆಕ್ಕವೇ ಇರಲಿಲ್ಲ. ಎಲ್ಲ ಹಿರಿಯ ಉದ್ಯೋಗಿಗಳಿಗೆ ಕಾರು, ಬಂಗಲೆ, ರೆಸೋರ್ಟ್ಗಳಿಗೆ ಸದಸ್ಯತ್ವ, ಲಾಪ್ಟಾಪ್, ಹೀಗೆ ಈ ಪಟ್ಟಿ ಬೆಳೆಯುತ್ತಿತ್ತು. ಒಂದು ಡಾಟ್ಕಾಂ ಕಂಪೆನಿಯಂತೂ ಕಡತಗಳನ್ನು ಜೋಪಾನವಾಗಿ ಇಡಲೆಂದು ಒಂದಕ್ಕೆ ಹನ್ನೆರಡು ಲಕ್ಷ ರೂಪಾಯಿ ಬೆಲೆಯ ಎರಡು ಸುರಕ್ಷ ಕಪಾಟುಗಳನ್ನು ಕೊಂಡುಕೊಂಡು ಅವನ್ನು ಇನ್ನೂ ಸರಿಯಾಗಿ ಬಳಸಿಲ್ಲ. ಒಂದು ಡಾಟ್ಕಾಂ ಕಂಪೆನಿ ತನ್ನ ಪ್ರಾರಂಭವನ್ನು ಒಂದೇ ದಿನದಲ್ಲಿ ಎರಡೂಮುಕ್ಕಾಲು ಕೋಟಿ ರೂಪಾಯಿಗಳನ್ನು ಎಲ್ಲ ಪ್ರಮುಖ ದಿನಪತ್ರಿಕೆಗಳ ಮುಖಪುಟವನ್ನೇ ಬದಲಿಸುವ ಜಾಹೀರಾತಿಗೆ ಖರ್ಚು ಮಾಡಿದ್ದು ಬಹುಶಃ ಭಾರತೀಯ ಇತಿಹಾಸದಲ್ಲೇ ದಾಖಲೆಯಾಗಬಹುದೇನೋ? ಇದೇ ಕಂಪೆನಿ ಮುಂಬಯಿ ನಗರದ ಪ್ರತಿಶತ ೮೦ ಜಾಹೀರಾತು ಫಲಕಗಳನ್ನು ಖರೀದಿಸಿತ್ತು. ಈ ಕಂಪೆನಿಯ ಮುಖ್ಯಸ್ಥನ ಸಂಬಳ ವರ್ಷಕ್ಕೆ ಕೇವಲ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ಮತ್ತು ಮೂರು ಬಂಗಲೆ ಆಗಿತ್ತು. ಈಗ ಆ ಕಂಪೆನಿ ಹೇಳಹೆಸರಿಲ್ಲದಾಗಿದೆ.
ಮಾಹಿತಿ ತಂತ್ರಜ್ಞಾನದ ಅತೀವ ಬೇಡಿಕೆಯಿಂದಾಗಿ ಅದಕ್ಕೆ ಪೂರಕವಾದ ಉದ್ದಿಮೆಗಳೂ ಹುಟ್ಟಿಕೊಂಡವು ಅಥವಾ ಈಗಾಗಲೇ ಇದ್ದ ಉದ್ದಿಮೆಗಳು ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾದವು. ಜಾಹೀರಾತು ಕಂಪೆನಿಗಳು, ಕಾರು ಮಾರಾಟ ಏಜೆನ್ಸಿಗಳು, ಹೋಟೆಲ್ ಮತ್ತು ಪ್ರವಾಸಿ ತಾಣಗಳ ಏಜೆನ್ಸಿಗಳು, ಕೋರಿಯರ್ ಕಂಪೆನಿಗಳು, ಮಧ್ಯಾಹ್ನದ ಊಟ ಸರಬರಾಜು, ಹೀಗೆ ಹಲವು ಉದ್ದಿಮೆಗಳು ಹುಟ್ಟಿಕೊಂಡವು ಮತ್ತು ಬೆಳೆದವು. ಬೆಂಗಳೂರಿನಲ್ಲಿ ಆಸ್ತಿ, ಸೈಟು, ಮನೆಗಳ ಬೆಲೆ ಗಗನಕ್ಕೇರಿದವು. ಮನೆ ಬಾಡಿಗೆಗೆ ಕೊಡುವವರಂತೂ ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುವವರನ್ನೇ ಬಾಡಿಗೆದಾರರನ್ನಾಗಿಸಲು ಉತ್ಸುಕರಾದರು. ಜನಸಾಮಾನ್ಯರಿಗೆ ಕೋರಮಂಗಲ, ಇಂದಿರಾನಗರ, ಬಿಟಿಎಂ ಬಡಾವಣೆಗಳು ಕೈಗೆಟುಕದಂತಾದವು.
ಮದುವೆ ಮಾರುಕಟ್ಟೆಯ ಮೇಲೂ ಈ ಡಾಟ್ಕಾಂ ಮತ್ತು ಮಾಹಿತಿ ತಂತ್ರಜ್ಞಾನದ ಒಂದು ರೀತಿಯ ಸನ್ನಿ ಪ್ರಭಾವ ಬೀರಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ದೊರಕಿಸಿಕೊಳ್ಳುವುದೇ ಪ್ರತಿಯೊಬ್ಬ ಯುವಕನ ಧ್ಯೇಯವಾಯಿತು. ಬೇರೆ ಕೆಲಸದಲ್ಲಿದ್ದವರೂ ಅವಸರವಸರವಾಗಿ ಕೆಲವು ಕೋರ್ಸ್ಗಳಿಗೆ ಸೇರಿ ಡಾಟ್ಕಾಂ ಕಂಪೆನಿಗಳಿಗೆ ಧುಮುಕಿದರು. ಹಿಂದೆಲ್ಲ ಡಾಕ್ಟರ್ ಅಥವಾ ಇಂಜಿನಿಯರ್ ಹುದ್ದೆಯಲ್ಲಿರುವ ಹುಡುಗನೇ ಬೇಕು ಎನ್ನುತ್ತಿದ್ದ ಕನ್ಯಾಪಿತೃಗಳು ಸಾಫ್ಟ್ವೇರ್ ಹುಡುಗ ಬೇಕೆನ್ನತೊಡಗಿದರು. ಅಮೇರಿಕಾಕ್ಕೆ ಎಚ್೧ ವೀಸಾದಲ್ಲಿ ಹೋದ ತಂತ್ರಾಂಶ ತಜ್ಞ ಹುಡುಗರು ಒಂದು ತಿಂಗಳ ರಜೆ ಹಾಕಿ ಊರಿಗೆ ಬಂದು ಹತ್ತು ಹುಡುಗಿಯರನ್ನು ಎರಡೇ ದಿನಗಳಲ್ಲಿ ನೋಡಿ ಅವರಲ್ಲಿ ಒಬ್ಬಳನ್ನು ಆಯ್ಕೆ ಮಾಡಿ ಅವಸರದಲ್ಲಿ ಮದುವೆ ಮಾಡಿಕೊಂಡು ಹೋಗುವುದು ದಿನನಿತ್ಯದ ಮಾತಾಯಿತು. ಇಂತಹ ಹುಡುಗ ಹುಡುಗಿಯರನ್ನು ಜೋಡಿಸಲು, ಮದುವೆ ಮಾಡಿಸಲು, ಕಲ್ಯಾಣ ಮಂಟಪ ಹುಡುಕಲು, ಹೀಗೆ ಹತ್ತು ಹಲವು ಡಾಟ್ಕಾಂಗಳು ಹುಟ್ಟಿಕೊಂಡವು. ಊರಿಗೆ ಬಂದು ಹುಡುಗಿ ನೋಡುವುದರಲ್ಲಿ ಸಮಯ ವ್ಯರ್ಥವಾಗುವುದು, ಕೆಲವೊಮ್ಮೆ ಸೀಮಿತ ಸಮಯದಲ್ಲಿ ಸೂಕ್ತ ಹುಡುಗಿ ದೊರಕುವುದಿಲ್ಲ, ಇತ್ಯಾದಿ ಸಮಸ್ಯೆಗಳಿಗೆ ಮಾಹಿತಿ ತಂತ್ರಜ್ಞಾನವೇ ಪರಿಹಾರವನ್ನೂ ನೀಡಿದೆ. ಅದುವೇ ಇಮೈಲ್ ಮತ್ತು ಚಾಟ್. ಅಮೇರಿಕಾದ ಹುಡುಗ ಬೆಂಗಳೂರಿನ ಹುಡುಗಿ ಜೊತೆ ಅಂತರಜಾಲದ ಮೂಲಕ ಚಾಟ್ ಸಂದರ್ಶನ ನಡೆಸಿ ಮದುವೆಯಾದ ಉದಾಹರಣೆಗಳೂಇವೆ. ಗಣಕಕ್ಕೆ ವೆಬ್ ಕ್ಯಾಮೆರಾ ಸೇರಿಸಿದರೆ ಹುಡುಗ ಹುಡುಗಿ ಪರಸ್ಪರ ಮುಖ ನೋಡಿ ತೀರ್ಮಾನ ತೆಗೆದುಕೊಳ್ಳಬಹುದು. ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗ ಹುಡುಗಿ ಮದುವೆ ಮಾಡಿಕೊಂಡ ಉದಾಹರಣೆಗಳೂ ಇವೆ.
ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯಲ್ಲಿ ಈಗಂತೂ ಕೇವಲ ಮುದುಕರೇ ವಾಸವಾಗಿದ್ದಾರೆ ಎನ್ನಬಹುದು. ಮಕ್ಕಳೆಲ್ಲ ಅಮೇರಿಕಾ ವಾಸಿಗಳಾಗಿದ್ದಾರೆ. ಅಮೇರಿಕಾದಲ್ಲಿ ಮಗಳು ಯಾ ಸೊಸೆ ಗರ್ಭಿಣಿಯಾದಾಗ ಹೆರಿಗೆ ಸಮಯದಲ್ಲಿ ಸಹಾಯಕ್ಕೆ ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳಲು ಹೋಗುವುದೂ ನಮ್ಮ ಹೆಂಗಸರಿಗೆ ಒಂದು ಹೆಮ್ಮೆಯಾಗಿದೆ. ಇವರನ್ನು ಅಮೇರಿಕನ್ ಸೂಲಗಿತ್ತಿ ಎಂದರೆ ತಪ್ಪಾಗಲಾರದೇನೋ? ಅಮೇರಿಕಾದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಬೇಬಿ ಸಿಟ್ಟರ್ಗಳು ತುಂಬ ದುಬಾರಿ. ಸುಮಾರು ತಿಂಗಳಿಗೆ ೫೦೦ ಡಾಲರ್ ಕೊಡಬೇಕು. ಆರು ತಿಂಗಳಿಗೆ ಅಮ್ಮ ಯಾ ಅತ್ತೆಯನ್ನು ಕರೆಸಿಕೊಂಡರೆ ಉಳಿತಾಯ ೩೦೦೦ ಡಾಲರ್. ಟಿಕೇಟಿನ ಬೆಲೆ ಸುಮಾರು ಒಂದು ಸಾವಿರ ಡಾಲರ್. ಹೇಗಿದೆ ಲೆಕ್ಕಾಚಾರ? ಭಾರತೀಯರು ಖಂಡಿತವಾಗಿಯೂ ಯಾವಾಗಲೂ ಗಣಿತದಲ್ಲಿ ಮುಂದು! ಆರು ತಿಂಗಳಿಗೆ ಅಮ್ಮ ಅಥವಾ ಅತ್ತೆ ನಂತರ ಆರು ತಿಂಗಳಿಗೆ ಅಪ್ಪ ಅಥವಾ ಮಾವ, ಹೀಗೆ ಮಕ್ಕಳು ಶಾಲೆಗೆ ಹೋಗುವ ತನಕ ಸರಣಿ ನಡೆಯುತ್ತಿರುತ್ತದೆ.
ಅಮೇರಿಕಾದಲ್ಲಿ ಭಾರತೀಯರ ಸಂಖ್ಯೆ ಗಣನೀಯವಾಗಿದೆ. ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಅಂಗಡಿಗಳು ಊಟದ ಹೋಟೆಲ್ಗಳು ಹುಟ್ಟಿಕೊಂಡವು. ಅನ್ನ ಸಾರು, ಪಲಾವ್, ಬಿಸಿಬೇಳೆಹುಳಿಯನ್ನಗಳು ಸಿಲಿಕಾನ್ ವ್ಯಾಲಿಯ ಭಾರತೀಯ ಹೋಟೆಲಿನಲ್ಲಿ ದೊರೆಯುತ್ತವೆ. ಭಾರತೀಯರಿಗೆ ಬೇಕಾದ ಹಲವು ಸಾಮಗ್ರಿಗಳು ಅಮೇರಿಕಾದಲ್ಲೇ ಲಭ್ಯ. ಪೂಜಾ ಸಾಮಗ್ರಿಗಳು, ಅಡುಗೆಯ ಮಸಾಲೆ ಸಾಮಗ್ರಿಗಳು, ಸಂಗೀತ, ಚಲನಚಿತ್ರ, ಪುಸ್ತಕ, ಬಟ್ಟೆಬರೆ, ಹೀಗೆ ಅಪ್ಪ ಅಮ್ಮ ಹೊರತುಪಡಿಸಿ ಎಲ್ಲ ವಸ್ತುಗಳು ಅಮೇರಿಕಾದಲ್ಲೇ ಸಿಗುತ್ತವೆ. ಅಮೇರಿಕ ದೇಶದವರಿಗೂ ಭಾರತದ ಬಗ್ಗೆ ಸಮಗ್ರ ಮಾಹಿತಿ ದೊರೆಯಲು ಪ್ರಾರಂಭವಾಗಿದ್ದು ಈ ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದಲೇ. ಭಾರತ ಎಂದರೆ ಹಾವಾಡಿಸುವವರ ದೇಶ ಎಂದು ಅವರು ಈಗ ಭಾವಿಸಿಲ್ಲ. ಭಾರತದಲ್ಲೂ ಇಂಟರ್ನೆಟ್ ಸೌಕರ್ಯ ಇದೆ ಎಂದು ಅವರಿಗೆ ಗೊತ್ತಾಗಿದೆ.
ಮಾಹಿತಿ ತಂತ್ರಜ್ಞರಿಂದಾಗಿ ಅಮೇರಿಕಾದಲ್ಲಿ ಕನ್ನಡಿಗರ ಸಂಖ್ಯೆಯೂ ಗಣನೀಯವಾಗಿ ಏರಿದೆ. ಎಷ್ಟರ ಮಟ್ಟಿಗೆ ಎಂದರೆ ಬಸವೇಶ್ವರ ನಗರ ವಿರುದ್ಧ ವಿಜಯನಗರ ಎಂದು ಕ್ರಿಕೆಟ್ ಮ್ಯಾಚ್ ಅಮೇರಿಕಾದಲ್ಲಿ ನಡೆಯಿತು. ಇದು ಮುಂದುವರೆದು ಮಲ್ಲೇಶ್ವರ ಹನ್ನೊಂದನೆಯ ಕ್ರಾಸ್ ವಿರುದ್ಧ ಎಂಟನೆಯ ಕ್ರಾಸ್ ಎಂಬ ಕ್ರಿಕೆಟ್ ಮ್ಯಾಚ್ ಕೂಡ ಅಮೇರಿಕಾದ ನ್ಯೂಜೆರ್ಸಿ ನಗರದಲ್ಲಿ ನಡೆಯಿತು. ವಾರಾಂತ್ಯ ಕನ್ನಡ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ಪಿಕ್ನಿಕ್ಗಳು, ಹೀಗೆ ಸಾಮಾಜಿಕವಾಗಿ ಕನ್ನಡಿಗರು ತಾಯ್ನಾಡಿನಿಂದ ದೂರ ಇದ್ದೇವೆ ಎಂಬ ಕೊರತೆಯನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ.
ಡಾಟ್ಕಾಂಗಳಿಗೆ ಸರಿಯಾದ ವ್ಯವಹಾರ ಸೂತ್ರ ಇಲ್ಲದುದರಿಂದ ಅದು ಎಷ್ಟು ವೇಗವಾಗಿ ಮೇಲೇರಿತೋ ಅಷ್ಟೇ ವೇಗವಾಗಿ ಕೆಳಗುರುಳಿತು. ಈ ಕುಸಿತಕ್ಕೆ ಸಪ್ಟೆಂಬರ್-೧೧ರ ಘಟನೆ ಕೂಡ ಅಗ್ನಿಗೆ ತುಪ್ಪ ಧಾರೆ ಎರೆದಂತೆ ಸಹಾಯಕಾರಿಯಾಯಿತು. ೨೦೦೧ನೆ ಇಸವಿಯನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಟ್ಟ ಕಾಲ ಎನ್ನಬಹುದು. ಹೆಚ್ಚಿನ ಡಾಟ್ಕಾಂ ಕಂಪೆನಿಗಳು ಮುಚ್ಚಿಕೊಂಡವು. ಡಾಟ್ಕಾಂ ಕುಸಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತರೆ ವಿಭಾಗಗಳ ಮೇಲೂ ಪ್ರಭಾವ ಬೀರಿತು. ಡಾಟ್ಕಾಂ ಅಂದರೆ ಅಂತರಜಾಲ ಸಂಬಂಧಿ ಹಲವು ಕಂಪೆನಿಗಳು ದಿವಾಳಿಯಾದವು. ಸಾವಿರಾರು ತಂತ್ರಜ್ಞರು ನಿರುದ್ಯೋಗಿಗಳಾದರು. ಅಮೇರಿಕಾದಿಂದ ನಿರುದ್ಯೋಗಿಗಳು ತಾಯ್ನಾಡಿಗೆ ಮರಳಿದರು. ಗ್ರೀನ್ಕಾರ್ಡ್ ಹೊಂದಿದ ಹಲವರು ಅಲ್ಲೇ ನಿರುದ್ಯೋಗಿಗಳಾಗಿ ನಿರುದ್ಯೋಗಿ ಭತ್ತೆ ಪಡೆದುಕೊಂಡು ಹೇಗೋ ಕಾಲತಳ್ಳತೊಡಗಿದರು. ಇತರೆ ಕ್ಷೇತ್ರಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಧುಮುಕಿದವರ ಪರಿಸ್ಥಿತಿ ಶೋಚಾಯಮಾನ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುಸಿತ ಹಲವು ಪರಿಣಾಮಗಳಿಗೆ ಕಾರಣೀಭೂತವಾಯಿತು. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ ಕೋರ್ಸ್ಗಳನ್ನು ಈಗ ಕೇಳುವವರಿಲ್ಲ. ಸುಮಾರು ೨೦೦೦ ಕೋರ್ಸ್ಗಳು ಖಾಲಿಬಿದ್ದಿವೆ. ಸಂಬಳವೂ ಡಾಟ್ಕಾಂ ಕಾಲದ ಹಿಂದಿನ ಮಟ್ಟಕ್ಕೆ ಬಂದಿದೆ. ಕೆಲವು ಕಂಪೆನಿಗಳಲ್ಲಿ ಈಗಲೂ ಜನ ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಹಲವಾರು ಡಾಟ್ಕಾಂಗಳು ನಾಪತ್ತೆಯಾದವು. ದೊಡ್ಡ ಸಂಬಳ ಬರುತ್ತಿದ್ದಾಗ ವಿಪರೀತ ಖರ್ಚಿನ ಹವ್ಯಾಸ ಬೆಳೆಸಿಕೊಂಡವರಿಗೆ ತುಂಬ ಕಷ್ಟ. ಕೆಲವರಂತೂ ದುಬಾರಿ ಮನೆಗಳನ್ನು ಖರೀದಿಸಿ ಈಗ ಕಂತು ಕಟ್ಟಲು ಪೇಚಾಡುತ್ತಿದ್ದಾರೆ. ಕಾರುಗಳನ್ನು ಮಾರಿದವರು ಹಲವರು.
ಸುಮಾರು ಎರಡು ವರ್ಷಗಳ ಕಾಲ ಹೇಗೋ ಜೀವ ಹಿಡಿದುಕೊಂಡಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಈಗ ಪುನಃ ಜೀವ ಬರುತ್ತಿದೆ. ಆದರೆ ಈಗ ಸುದ್ದಿಯಲ್ಲಿರುವುದು ಬಹುಪಾಲು ಬಿ.ಪಿ.ಓ. ಎಂದರೆ ಬಿಸಿನೆಸ್ ಪ್ರೋಸೆಸ್ ಔಟ್ಸೋರ್ಸಿಂಗ್ ಮತ್ತು ತಂತ್ರಾಂಶಾಧಾರಿತ ಸೇವೆ. ಕಾಲ್ಸೆಂಟರ್ಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತವೆ. ಅಮೇರಿಕದ ಬಹುಪಾಲು ಕಂಪೆನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ದಾಟಿಸುತ್ತಿದ್ದಾರೆ. ಆದರೆ ಅವು ಯಾವುವೂ ತಾಂತ್ರಿಕವಾಗಿ ಉನ್ನತ ಮಟ್ಟದ ಕೆಲಸಗಳಲ್ಲ. ಬಹು ಸರಳವಾದ, ಹತ್ತನೇ ತರಗತಿ ಪಾಸಾದ ಯಾರು ಬೇಕಾದರೂ ಮಾಡಬಲ್ಲ ತಂತ್ರಾಂಶ ಸೇವೆಗಳು ಮತ್ತು ತಂತ್ರಾಂಶಾಧಾರಿತ ಸೇವೆಗಳು. ಭಾರತದ ಕಂಪೆನಿಗಳು ತಂತ್ರಾಂಶ ಸೇವಯಲ್ಲೇ ತೊಡಗಿಸಿಕೊಂಡಿವೆ. ತಂತ್ರಾಂಶ ಉತ್ಪನ್ನಗಳೇನಿದ್ದರೂ ಅಮೇರಿಕಾದಿಂದ ಬರುತ್ತವೆ. ಬಿಪಿಓ ವಿಭಾಗ ಅತಿ ವೇಗದಲ್ಲಿ ಬೆಳೆಯುತ್ತಿದೆ. ಒಂದು ವರ್ಷದಲ್ಲೇ ಪ್ರತಿಶತ ೨೫೦ ಬೆಳವಣಿಗೆ ಬೆಂಗಳೂರಿನಲ್ಲಿ ದಾಖಲಾಗಿದೆ. ಕರ್ನಾಟಕ ರಾಜ್ಯಕ್ಕೆ ಕಳೆದ ಹಣಕಾಸಿನ ವರ್ಷದಲ್ಲಿ ಒಟ್ಟು ೯೦೦ ಕೋಟಿ ರೂ. ಬಿಪಿಓ ಮೂಲಕ ಬಂದಿದೆ. ಕರ್ನಾಟಕ ಸರಕಾರವಂತೂ ಬಿಪಿಓ ಕಂಪೆನಿಗಳಿಗೆ ತರಬೇತಾದ ತಂತ್ರಜ್ಞರ ಸರಬರಾಜಿಗೆ ಅಂತಹ ತಂತ್ರಜ್ಞರಿಗೆ ಪರೀಕ್ಷೆ, ತಂತ್ರಜ್ಞರ ಮಾಹಿತಿ ಭಂಡಾರ, ಇತ್ಯಾದಿ ಮಾಡಲು ಹೊರಟಿದೆ. ಡಾಟ್ಕಾಂನ ಸನ್ನಿ ಇನ್ನೊಂದು ರೂಪ ತಾಳುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ.
ಈಗ ಅಮೇರಿಕಾ ಮತ್ತು ಇಂಗ್ಲೆಂಡು ದೇಶಗಳಲ್ಲಿ ತಂತ್ರಾಂಶಾಧಾರಿತ ಸೇವೆಗಳನ್ನು ಭಾರತಕ್ಕೆ ದಾಟಿಸುವುದರ ವಿರುದ್ಧ ಜನರ ಪ್ರತಿಭಟನೆ ಪ್ರಾರಂಭವಾಗಿದೆ. ಕಾಲ್ ಸೆಂಟರ್ಗಳನ್ನು ಅಮೇರಿಕಾ ದೇಶದಿಂದ ಹೊರಗಡೆ ಸ್ಥಾಪಿಸಬಾರದು ಎಂದು ಅಮೇರಿಕಾದ ನ್ಯೂಜೆರ್ಸಿ ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಇನ್ನು ಕೆಲವು ಅಮೆರಿಕನ್ ಕಂಪೆನಿಗಳು ಭಾರತಕ್ಕಿಂತ ಅಗ್ಗವಾಗಿ ಜನಸಂಪತ್ತು ದೊರೆಯಬಹುದಾದ ಮತ್ತು ಇಂಗ್ಲೀಷ್ ಭಾಷೆ ಬಲ್ಲ ಪಿಲಿಪ್ಪೈನ್ಸ್ ಕಡೆ ಹೊರಟಿದ್ದಾರೆ. ಬಿಪಿಓ ಮೇಲೆ ಅತಿಯಾಗಿ ಅವಲಂಬಿಸಲು ಹೊರಟ ಭಾರತೀಯ ಕಂಪೆನಿಗಳು ಹೊಡೆತ ತಿನ್ನುವ ಕಾಲ ದೂರವಿಲ್ಲ. ಡಾಟ್ಕಾಂ ಗುಳ್ಳೆ ಒಡೆದ ಇತಿಹಾಸದಿಂದ ಪಾಠ ಕಲಿಯದಿದ್ದರೆ ಇವರು ಅದೇ ಇತಿಹಾಸವನ್ನು ಪುನರಾವರ್ತಿಸುವ ಸಂಭವವಿದೆ. ನಮ್ಮವರು ಆದಷ್ಟು ಬೇಗ ತಾಂತ್ರಿಕ ಪ್ರಾವೀಣ್ಯದ ಅಗತ್ಯವಿರುವಂತಹ ಸೇವಾ ಕ್ಷೇತ್ರಕ್ಕೆ ಕಾಲಿಡುವುದು ಒಳಿತು. ಉತ್ಪನ್ನಗಳ ಕಡೆ ಗಮನ ಹರಿಸಿದರೆ ಇನ್ನೂ ಒಳ್ಳೆಯದು. ಜಾಗತಿಕ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತ ದೇಶವು ಸೇವೆಗೆ ಅಲ್ಲ ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗುವ ಕಾಲ ಬರಲೆಂದು ಹಾರೈಸೋಣ.
---***---
ಇದು ಜನವರಿ ೨೦೦೪ರಲ್ಲಿ ಬರೆದ ಲೇಖನ. ವಸ್ತು ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ.
ನಿಮ್ಮ ಹೊಗಳಿಕೆ, ತೆಗಳಿಕೆಗಳಿಗೆ ಸ್ವಾಗತ :)
-ಪವನಜ