ಮಿಂಚು ಬಂತೇ ಹುಷಾರ್ ! (ಭಾಗ 1)

ಮಿಂಚು ಬಂತೇ ಹುಷಾರ್ ! (ಭಾಗ 1)

ಮುಂಗಾರು ಪೂರ್ವ ಮಳೆಗಾಲ ಶುರುವಾದಾಗ ಬರುವ ಸಿಡಿಲ ಹೊಡೆತಕ್ಕೆ ಹಲವಾರು ಜನ ಸಾಯುತ್ತಾರೆ. ಈ ಸಮಯದಲ್ಲಿ ಜರ್ರನೆ ಏರುವ ಕಪ್ಪು ಮೋಡಗಳು, ಬಿರುಗಾಳಿ, ಮಿಂಚು ಗುಡುಗುಗಳ ಆರ್ಭಟ...  ಪ್ರಕೃತಿಯ ಈ ರೌದ್ರಾವತಾರವನ್ನು ನೋಡುವುದೇ ಒಂದು ಸೊಗಸು. ಮೋಡಗಳ ನಡುವೆ ಸರಸರನೇ ಹರಿದಾಡುವ ಬಳ್ಳಿಯಂತಹ ಮಿಂಚುಗಳ ಸರಮಾಲೆ ನಿಜಕ್ಕೂ ಪ್ರಕೃತಿಯ ಮಾಣಿಕ್ಯ ಮಾಲೆ. ಇದರ ಹಿಂದೆ ಗುಡುಗಿನ ಪಕ್ಕ ವಾದ್ಯ ಬೇರೆ. ಇಷ್ಟಾದ ಮೇಲೆ ಧೋ ಎಂದು ಸುರಿಯುವ ಮಳೆರಾಯ.!

ಸಿಡಿಲು ಮೋಡಗಳು: ಎಲ್ಲಾ ಮೋಡಗಳು ಸಿಡಿಲು ಗುಡುಗುಗಳನ್ನು ಉಂಟು ಮಾಡುವುದಿಲ್ಲ. ಮಳೆಗಾಲದಲ್ಲಿ ನೀರಿನ ಪಸೆ ಹೊಂದಿರುವ ಮತ್ತು ವಿದ್ಯುತ್ ಅಂಶಗಳನ್ನು ಹೊಂದಿರುವ ಮೋಡಗಳೇ ಸಿಡಿಲು ಮೋಡಗಳು. ನಿಮಗೆ ಗೊತ್ತಿರುವ ಹಾಗೆ ಧನ ಮತ್ತು ಋಣ ಎಂಬ ಎರಡು ಬಗೆಯ ವಿದ್ಯುತ್ ಅಂಶಗಳಿವೆ. ಈ ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಪರಸ್ಪರ ಉಜ್ಜಿದಾಗ ಅವುಗಳಲ್ಲಿ ವಿದ್ಯುತ್ ಅಂಶಗಳು ಸಂಚಯ ಆಗುತ್ತವೆ. ಇಂಥ ಮೋಡಗಳಲ್ಲಿ ಎರಡು ವಿದ್ಯುತ್ ಅಂಶಗಳ ಪೈಕಿ ಯಾವುದಾದರೂ ಸಂಚಯವಾಗಬಹುದು.

ಏನಿದು ಮಿಂಚು ಮತ್ತು ಗುಡುಗು?: ಧನ ಮತ್ತು ಋಣ ವಿದ್ಯುತ್ ಅಂಶವಿರುವ ಮೋಡಗಳು ಸಾಮಾನ್ಯವಾಗಿ ಬೇರೆ ಬೇರೆ ಇರುತ್ತದೆ. ಈ ಮೋಡಗಳು ಭೂಮಿಯಿಂದ ಸುಮಾರು ಐವತ್ತು ಸಾವಿರ ಅಡಿ ಮೇಲ್ಭಾಗದಲ್ಲಿ ತೇಲುತ್ತಿರುತ್ತವೆ. ಇವೆರಡೂ ಪರಸ್ಪರ ವಿರುದ್ಧವಿರುವ ಮೋಡಗಳ ನಡುವೆ ಸಹಜವಾಗಿ ಸೆಳೆತವಿರುತ್ತದೆ. ತುಂಬಾ ಹತ್ತಿರ ಬಂದಾಗ ಋಣ ವಿದ್ಯುತ್ ಅಂಶಗಳು ಒಮ್ಮೆಗೆ ಧನ ವಿದ್ಯುತ್ ಮೋಡದ ಕಡೆಗೆ ಅಪ್ಪಳಿಸುತ್ತವೆ. ಈ ರೀತಿ ಅಪಾರ ವಿದ್ಯುತ್ ಅಂಶಗಳು ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಜಿಗಿದಾಗ ಫಳಫಳನೆ ಬೆಳ್ಳಿಯಂಥ ಪ್ರಕಾರ ಬೆಳಕಿನ ಗೆರೆಗಳು ಮಿಂಚಿ ಮಾಯವಾಗುತ್ತವೆ. ಇದೇ ಮಿಂಚು! ಕೆಲವೊಮ್ಮೆ ಈ ಮಿಂಚಿನ ಬೆಳಕು ಮೋಡಗಳಿಂದ ಭೂಮಿಗೂ ಹರಿಯುತ್ತವೆ. ಈ ಎರಡು ಮೋಡಗಳ ಮಧ್ಯ ಇರುವ ಗಾಳಿ ಈ ವಿದ್ಯುತ್ ಆಘಾತದಿಂದ ಒಮ್ಮೆಗೆ ಕಾದು ಸಿಡಿಯುತ್ತದೆ. ದೊಡ್ಡದಾದ ಶಬ್ದ ಉಂಟಾಗುತ್ತದೆ. ಇದನ್ನು ಗುಡುಗು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇಂಥ ಶಬ್ದ ಸನಿಹದ ಹಲವಾರು ಮೋಡಗಳಿಂದ ಪ್ರತಿದ್ವನಿಸಿ ಗುಡುಗಿನ ಸರಮಾಲೆಯೇ ಉಂಟಾಗುತ್ತದೆ.

ಸಿಡಿಲು ಹೊಡೆಯಿತು ಎಂದರೇನು?: ಈ ಸಿಡಿಲು ಮೋಡಗಳು ದೊಡ್ಡ ಕಟ್ಟಡ, ಮರ ಮುಂತಾದುವುಗಳ ಮೇಲ್ಭಾಗದಲ್ಲಿ ಬಂದಾಗ ಅವುಗಳಲ್ಲಿ ವಿರೋಧ ಬಗೆಯ ವಿದ್ಯುತ್ ಅಂಶಗಳನ್ನು ಪ್ರೇರೇಪಿಸುತ್ತದೆ. ಹೀಗೆ ಮೋಡ ಮತ್ತು ಕಟ್ಟಡಗಳ ಮೇಲೆ ಅಗಾಧ ಪ್ರಮಾಣದ ವಿರೋಧ ಬಗೆಯ ವಿದ್ಯುತ್ ಅಂಶಗಳು ಪ್ರೇರೇಪಿತಗೊಂಡಾಗ ಸಹಜವಾಗಿ ಆಕರ್ಷಣೆ ಹೆಚ್ಚುತ್ತಾ ಹೋಗುತ್ತದೆ. ಇದು ಒಂದು ಮಿತಿಯನ್ನು ದಾಟಿದಾಗ ಮೋಡದಿಂದ ಕಟ್ಟಡಕ್ಕೆ ವಿದ್ಯುತ್ ಅಂಶಗಳು ಒಮ್ಮೆಲೇ ಅಪ್ಪಳಿಸಿ ಬಿಡುತ್ತವೆ. ಆಗ ಆ ಕಟ್ಟಡ ಅಗ್ನಿಗೆ ಆಹುತಿಯಾಗುತ್ತದೆ ; ಮರವಾದರೆ ಸುಟ್ಟು ಭಸ್ಮವಾಗುತ್ತದೆ. ಮನುಷ್ಯ ಮತ್ತು ಪ್ರಾಣಿಗಳಾದರೂ ಇದೇ ಗತಿ. ‘ಸಿಡಿಲು ಹೊಡೆಯಿತು’ ಎಂದರೆ ಇದೇ ನೋಡಿ.

ಮಿಂಚು ಬಂಧಕ:ಮಿಂಚು ಮತ್ತು ಸಿಡಿಲಿನ ಹೊಡೆತಗಳು 30,000 ಫ್ಯಾರನ್ ಹೀಟ್ ನಿಂದ 50,000 ಫ್ಯಾರನ್ ಹೀಟ್ ಉಷ್ಣವನ್ನು ಬಿಡುಗಡೆ ಮಾಡಬಲ್ಲವು. ಇದು ಸೂರ್ಯನ ಮೇಲ್ಮೈ ತಾಪಮಾನಕ್ಕಿಂತಲೂ ಹೆಚ್ಚು! ದೊಡ್ಡ ದೊಡ್ದ ಕಟ್ಟಡಗಳನ್ನು ಈ ಸಿಡಿಲಿನ ಹೊಡೆತದಿಂದ ರಕ್ಷಿಸಲು ತ್ರಿಶೂಲಾಕಾರದ ಲೋಹದ ಸಲಾಕೆಯನ್ನು ಕಟ್ಟಡದ ಮೇಲೆ ನೆಟ್ಟು ಅದರ ಕೆಳತುದಿಯನ್ನು ಒಂದು ವಾಹಕದ ಮೂಲಕ ಭೂಮಿಗೆ ಸೇರಿಸುತ್ತಾರೆ. ಇದೇ ಮಿಂಚು ಬಂಧಕ. ಸಿಡಿಲು ಮೋಡದಿಂದ ಪ್ರೇರೇಪಿತಗೊಂಡು ವಿದ್ಯುತ್ ಅಂಶಗಳು ಮಿಂಚು ಬಂಧಕ ಹಾಗೂ ವಾಹಕಗಳ ಮೂಲಕ ಭೂಮಿಯನ್ನು ಸೇರಿ ಸಿಡಿಲಿನ ಅಪಾಯ ತಪ್ಪುತ್ತದೆ!

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ