ಮಿಂಚು ಬಂತೇ ಹುಷಾರ್ ! (ಭಾಗ 2)

ಮಿಂಚು ಬಂತೇ ಹುಷಾರ್ ! (ಭಾಗ 2)

ಮಿಂಚು ಅತ್ಯಂತ ಅಪಾಯಕಾರಿ !: ಗುಡುಗು ಒಂದು ಶಬ್ಧ ಅಷ್ಟೇ. ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮಿಂಚು ಖಂಡಿತ ಅಪಾಯಕಾರಿ. ಜಗತ್ತಿನಲ್ಲಿ ಇದುವರೆಗೂ ಚಂಡಮಾರುತ, ಬಿರುಗಾಳಿ, ಸುಂಟರಗಾಳಿಗಳೇ ಹೆಚ್ಚು ಪ್ರಚಾರ ಗಿಟ್ಟಿಸಿಬಿಟ್ಟಿವೆ. ಆದರೆ ಮಿಂಚು ಮಾಡುವ ಹಾನಿ ಕಮ್ಮಿಯೇನಲ್ಲ. ‘ಮಿಂಚು' ಸರಾಸರಿ ಲೆಕ್ಕದಲ್ಲಿ ಚಂಡಮಾರುತ ಮತ್ತು ಸುಂಟರಗಾಳಿ ಇವುಗಳಿಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತದೆ. ಪ್ರಪಂಚದ ಹವಾಮಾನ ಸೇವಾಸಂಸ್ಥೆಯ ಸಮೀಕ್ಷೆಯಂತೆ ಪ್ರತೀ 300 ಜನರಲ್ಲಿ ಒಬ್ಬರಿಗೆ ಮಿಂಚಿನ ದಾಳಿಯ ಸಾಧ್ಯತೆಗಳಿವೆಯಂತೆ.

ತಪ್ಪಿಸಿಕೊಳ್ಳಲು ಏನು ಮಾಡಬೇಕು?: ಮಿಂಚು ಕಾಣಿಸುತ್ತಲೇ ನಿಮ್ಮ ಜಾಗ ಖಾಲಿ ಮಾಡಿ, ಒಂದು ದೊಡ್ಡ ಮನೆ ಸೇರಿಕೊಳ್ಳಿರಿ. ಏಕೆಂದರೆ, ಮಳೆ ಸುರಿಯಲು ಶುರುವಾಗುವ ಮೊದಲು ಕಾಣಿಸಿಕೊಳ್ಳುವ ಮಿಂಚುಗಳೇ ತುಂಬಾ ಅಪಾಯಕಾರಿ. ಮಿಂಚು-ಗುಡುಗಿನ ಶಬ್ಧ ನಿಮ್ಮ ಸನಿಹದಲ್ಲೇ ಆಗುತ್ತಿದೆಯೆಂದರೆ ನೀವು ಅಪಾಯದ ವ್ಯಾಪ್ತಿಯಲ್ಲೇ ಇದ್ದೀರಿ ಎಂದರ್ಥ. ಗುಡುಗು-ಮಿಂಚಿನ ಶಬ್ಧ ಕೇಳಿದಾಗ ತಡ ಮಾಡದೇ ಮನೆಯೊಳಕ್ಕೆ ಓದಿ ಹೋಗಿ. ಮಳೆ ನಿಂತ ಮೇಲೂ ಅಷ್ಟೇ. ತಕ್ಷಣವೇ ಹೊರಬರಬೇಡಿ. ಏಕೆಂದರೆ ಮಳೆ ನಿಂತ ಅರ್ಧ ಗಂಟೆಯವರೆಗೂ ಮಿಂಚು ಎರಗುವ ಸಾಧ್ಯತೆ ಇರುತ್ತದೆ.

ಹೊರಗಡೆ ಇದ್ದಾಗ ನೀವೇನು ಮಾಡಬೇಕು? : ಗುಡುಗು-ಮಿಂಚು ಮಳೆ ಬರುತ್ತಿರುವಾಗ ನೀವು ಹೊರಗಡೆ ಇದ್ದೀರಿ ಎಂದರೆ ಅಪಾಯ ಇನ್ನೂ ಹೆಚ್ಚು. ಮಳೆಯ ಸೂಚನೆ ಕಂಡ ಕೂಡಲೇ ಹತ್ತಿರವಿರುವ ಯಾವುದೇ ಕಟ್ಟಡದ ಒಳಗೆ ಸೇರಿಕೊಳ್ಳಿ. ಈ ವೇಳೆಯಲ್ಲಿ ನೀವು ಬಯಲಿನಲ್ಲೊ, ಹೊಲದಲ್ಲೋ, ಸಮುದ್ರದ ದಡದಲ್ಲೋ, ಈಜು ಕೊಳಗಳಲ್ಲೋ ಇದ್ದರೆ ಅಪಾಯ ಹೆಚ್ಚು. ಅಲ್ಲದೆ ದೊಡ್ಡ ಕಟ್ಟಡಗಳ ಬಳಿ, ನೀವು ಕಟ್ಟಡದ ಒಂದು ಭಾಗವಾಗಿದ್ದರೆ ಅಪಾಯಕ್ಕೆ ಸಿಲುಕುವುದು ಖಚಿತ. ಮರಗಳ ಕೆಳಗೆ ಆಶ್ರಯ ಪಡೆಯುವುದು, ಪ್ರವಾಸ ತಾಣಗಳ ಬಳಿ, ಬಸ್ ತಂಗುದಾಣಗಳಲ್ಲಿ ನಿಲ್ಲುವುದನ್ನು ಮಾಡಬೇಡಿ. ಇದರಿಂದ ನಿಮಗೆ ತೊಂದರೆ ಇನ್ನೂ ಹೆಚ್ಚು. ಲೋಹದ ಬೇಲಿ/ಕಂಬಗಳಿಂದ ಆದಷ್ಟೂ ದೂರವಿರಿ. ಒಂದು ವೇಳೆ ನೀವೇನಾದರೂ ವಾಹನದಲ್ಲಿದ್ದರೆ ಎಲ್ಲಾ ಕಿಟಕಿಗಳನ್ನು ಮುಚ್ಚಿ ಸೀಟಿನ ಮೇಲೆ ಮಲಗಿ ಬಿಡಿ. ನೀವೇನಾದರೂ ಬಯಲಿನಲ್ಲಿದ್ದರೆ ಭೂಮಿಯ ಮೇಲೆ ಅಂಗಾತ ಮಲಗುವುದೊಂದೇ ಮಾರ್ಗ !

ಮನೆಯೊಳಗಿದ್ದರೆ ಏನು ಮಾಡಬೇಕು? : ಮನೆಯೊಳಗಿದ್ದರೆ ಸಾಮಾನ್ಯವಾಗಿ ಮಿಂಚಿನ ಅಪಾಯ ತೀರಾ ಅಪರೂಪ. ಆದರೂ ಕೆಳಕಂಡ ಎಚ್ಚರಿಕೆಗಳನ್ನು ಪಾಲಿಸಿದರೆ ಒಳ್ಳೆಯದು.

* ಲ್ಯಾಂಡ್ ಫೋನ್ /ಮೊಬೈಲ್ ಫೋನ್ ಗಳನ್ನು ಬಳಸಬೇಡಿ.

* ಗುಡುಗು / ಮಿಂಚು ಇದ್ದಾಗ ಷವರ್ ಸ್ನಾನ ಬೇಡ.

* ಟಿವಿ, ರೇಡಿಯೋ, ಮಿಕ್ಸಿ, ಗ್ರೈಂಡರ್, ಕಂಪ್ಯೂಟರ್ ಇತ್ಯಾದಿಗಳ ಬಳಕೆ ಬೇಡ.

* ಕಿಟಕಿಗಳನ್ನು ತೆರೆದುಕೊಂಡು ಮಿಂಚನ್ನು ನೋಡಲು ಹೋಗಬೇಡಿ.

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ